ಅಪರಾಧ ಪ್ರಕರಣಗಳಲ್ಲಿ ಬಂಧಿತರಿಗೆ ನಕಲಿ ದಾಖಲೆ ಸೃಷ್ಟಿಸಿ ಶ್ಯೂರಿಟಿ ನೀಡುತ್ತಿದ್ದ 13 ಮಂದಿ ಬಂಧನ

KannadaprabhaNewsNetwork | Updated : Dec 14 2024, 04:34 AM IST

ಸಾರಾಂಶ

ಅಪರಾಧ ಪ್ರಕರಣಗಳಲ್ಲಿ ಬಂಧಿತರಿಗೆ ನಕಲಿ ದಾಖಲೆ ಸೃಷ್ಟಿಸಿ ಶ್ಯೂರಿಟಿ ನೀಡುತ್ತಿದ್ದ 13 ಮಂದಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಅಪರಾಧ ಪ್ರಕರಣಗಳಲ್ಲಿ ಬಂಧಿತರಿಗೆ ನಕಲಿ ದಾಖಲೆ ಸೃಷ್ಟಿಸಿ ಶ್ಯೂರಿಟಿ ನೀಡುತ್ತಿದ್ದ 13 ಮಂದಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊಣಪ್ಪನ ಅಗ್ರಹಾರದ ದಾದಾ ಹಯಾತ್ ಖಲಂದರ್‌, ಕೆರೆಚೊಳಹಳ್ಳಿಯ ಸ್ವರೂಪ್‌, ರಾಯಚೂರು ಜಿಲ್ಲೆ ಶಿರವಾರ ತಾಲೂಕಿನ ಚಂದ್ರಶೇಖರ್‌, ಹಲಸೂರಿನ ಕುಮಾರ್ ವೇಲು, ಹಾಸನ ತಾಲೂಕಿನ ಹೆರಗು ಗ್ರಾಮದ ಸಂತೋಷ್‌ ಕುಮಾರ್‌, ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದ ದೊಡ್ಡಯ್ಯ, ಯಲಹಂಕದ ಕೆ.ಮನೋಜ್‌, ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಎನ್‌.ಆನಂದ್‌, ರಾಮಮೂರ್ತಿನಗರದ ಎನ್‌.ಇಂದ್ರೇಶ್‌, ಮೆಜೆಸ್ಟಿಕ್‌ನ ಆನಂದ್ ಕುಮಾರ್‌, ಚಿಕ್ಕಕಲ್ಲಸಂದ್ರದ ಮಂಜುನಾಥ್‌, ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಕೆಂಪೇಗೌಡ ಹಾಗೂ ಬೆಳಗಾವಿ ಜಿಲ್ಲೆ ಕಾಗವಾಡದ ವಿನಾಯಕ ಕದ್ರೋಳಿ ಬಂಧಿತರು.

ಆರೋಪಿಗಳಿಂದ 129 ವಿವಿಧ ಹೆಸರಿನ ಆಧಾರ್ ಕಾರ್ಡ್‌ಗಳು, 43 ಪಡಿತರ ಚೀಟಿಗಳು, 16 ಪಾನ್ ಕಾರ್ಡ್‌ಗಳು, ವಿವಿಧ ಹೆಸರಿನ 35 ಪಹಣಿ, ಮ್ಯುೂಟೇಷನ್ ಹಾಗೂ 13 ಮೊಬೈಲ್‌ಗಳನ್ನು ಜಪ್ತಿಯಾಗಿವೆ. ಇನ್ನು ಇದೇ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪ್ರವೀಣ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ನಕಲಿ ಶ್ಯೂರಿಟಿ ಬಗ್ಗೆ ಹಲವು ಪ್ರಕರಣಗಳು ದಾಖಲಾಗಿದ್ದವು. ಈ ಬಗ್ಗೆ ತನಿಖೆಗಿಳಿದಾಗ ಮಂಜುನಾಥ್ ಹಾಗೂ ಪ್ರವೀಣ್ ತಂಡ ಸಿಕ್ಕಿಬಿದ್ದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

40 ಮಂದಿ ಆರೋಪಿಗಳಿಗೆ ಬೇಲ್‌:

ಕೆಲ ದಿನಗಳ ಹಿಂದೆ ನಗರದ ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆಯ ರಸ್ತೆಬದಿ ನಕಲಿ ದಾಖಲೆ ಇಟ್ಟುಕೊಂಡು ಶ್ಯೂರಿಟಿ ನೀಡಲು ಸಜ್ಜಾಗಿದ್ದರು. ಈ ಬಗ್ಗೆ ಬಾತ್ಮೀದಾರರಿಂದ ಲಭ್ಯವಾದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಹಲಸೂರು ಗೇಟ್ ಪೊಲೀಸರು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ನಕಲಿ ಶ್ಯೂರಿಟಿ ಜಾಲ ಬಯಲಾಗಿದೆ. ಈ ದಂಧೆಯಲ್ಲಿ ಹಲವು ವರ್ಷಗಳಿಂದ ಮಂಜುನಾಥ್ ಹಾಗೂ ಆತನ ಸಹಚರರು ಸಕ್ರಿಯವಾಗಿದ್ದು, ಇದುವರೆಗೆ 40ಕ್ಕೂ ಅಧಿಕ ಆರೋಪಗಳ ಜಾಮೀನು ಪಡೆಯಲು ಈ ಜಾಲ ಸಹಕರಿಸಿದೆ. ಬೆಂಗಳೂರು ಮಾತ್ರವಲ್ಲದೆ ದೇವನಹಳ್ಳಿ, ಮಾಗಡಿ, ಮಂಡ್ಯ ಹಾಗೂ ತುಮಕೂರು ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಸಹ ಈ ತಂಡವು ನಕಲಿ ಶ್ಯೂರಿಟಿ ನೀಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭೂಮಿ ಜಾಲತಾಣ ದುರ್ಬಳಕೆ

ರಾಜ್ಯ ಕಂದಾಯ ಇಲಾಖೆಯ ಭೂಮಿ ಜಾಲತಾಣದಲ್ಲಿ ಭೂ ಮಾಲಿಕರ ವಿವರವನ್ನು ಚಿಕ್ಕಕಲ್ಲಸಂದ್ರದ ಮಂಜುನಾಥ್ ಹಾಗೂ ಪ್ರವೀಣ್ ಸಂಗ್ರಹಿಸುತ್ತಿದ್ದರು. ಆನಂತರ ಆ ಸರ್ವೇ ನಂಬರ್, ಮನೆ ವಿಳಾಸ ಸೇರಿದಂತೆ ಅಗತ್ಯ ಮಾಹಿತಿಯನ್ನು ಬಳಸಿಕೊಂಡು ನಕಲಿ ದಾಖಲೆಗಳನ್ನು ಆರೋಪಿಗಳು ಸೃಷ್ಟಿಸುತ್ತಿದ್ದರು. ಈ ಮೂಲ ಭೂ ದಾಖಲೆಗಳಿಗೆ ನಕಲಿ ಆಧಾರ್‌ನಲ್ಲಿ ತಮ್ಮ ಜಾಲದ ಸದಸ್ಯನ ಭಾವಚಿತ್ರ, ನಕಲಿ ಸಂಖ್ಯೆ ಹಾಗೂ ಆಸಲಿ ಮಾಲಿಕರ ವಿಳಾಸ ಹಾಕುತ್ತಿದ್ದರು. ಇದೇ ಮಾದರಿಯಲ್ಲಿ ಪಹಣಿ ನಕಲು ಮಾಡುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ. ಈ ಕೃತ್ಯಗಳಿಗೆ ಬ್ಯಾಂಕ್ ಸಾಲ ಪಡೆಯದ ಭೂಮಿ ಮಾಲಿಕರನ್ನೇ ಆರೋಪಿಗಳು ಗುರಿಯಾಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬೇಲ್‌ಗೆ 5 ರಿಂದ 10 ಸಾವಿರ ರು.

ತಾವು ಜಾಮೀನಿಗೆ ಶ್ಯೂರಿಟಿ ಕೊಡಲು ತಲಾ ಒಬ್ಬರಿಗೆ 5 ರಿಂದ 10 ಸಾವಿರ ರು.ವರೆಗೆ ಆರೋಪಿಗಳು ಹಣ ಪಡೆಯುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗೆ ಹಣ ಸಂದಾಯವಾದ ಬಳಿಕ ಅಪರಾಧ ಪ್ರಕರಣಗಳಲ್ಲಿ ಬಂಧಿತರಾಗಿ ಜೈಲು ಸೇರಿದ್ದ ಆರೋಪಿಗಳಿಗೆ ಜಾಮೀನಿಗೆ ನಕಲಿ ಶ್ಯೂರಿಟಿದಾರರು ನೆರವಾಗುತ್ತಿದ್ದರು. ಅಪರಾಧ ಪ್ರಕರಣಗಳಲ್ಲಿ ಬಂಧಿತರಾದ ಕೆಲವರ ಜಾಮೀನಿಗೆ ಶ್ಯೂರಿಟಿ ಪಡೆಯಲು ಕಷ್ಟಕರವಾಗುತ್ತಿತ್ತು. ಹೀಗಾಗಿ ಈ ನಕಲಿ ಶ್ಯೂರಿಟಿ ಜಾಲವನ್ನು ಕೆಲವರು ಬಳಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article