ಕಾರು ಹಾಗೂ ಬಸ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಕಾರು ಸಂಪೂರ್ಣ ಜಖಂಗೊಂಡು, ಬಸ್ ಉರುಳಿ ಬಿದ್ದು ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ ಹೊಸಹಳ್ಳಿ ಗೇಟ್‌ನ ಶ್ರೀರಂಗಪಟ್ಟಣ- ಕೆಆರ್‌ಎಸ್ ಹೆದ್ದಾರಿಯಲ್ಲಿ ನಡೆದಿದೆ.
ಶ್ರೀರಂಗಪಟ್ಟಣ : ಕಾರು ಹಾಗೂ ಬಸ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಕಾರು ಸಂಪೂರ್ಣ ಜಖಂಗೊಂಡು, ಬಸ್ ಉರುಳಿ ಬಿದ್ದು ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ ಹೊಸಹಳ್ಳಿ ಗೇಟ್‌ನ ಶ್ರೀರಂಗಪಟ್ಟಣ- ಕೆಆರ್‌ಎಸ್ ಹೆದ್ದಾರಿಯಲ್ಲಿ ನಡೆದಿದೆ.
ಘಟನೆಯಿಂದ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡು ಪ್ರವಾಸಿಗರಿದ್ದ ಬಸ್ ರಸ್ತೆ ಬದಿಯಲ್ಲಿ ಉರುಳಿ ಬಿದ್ದಿದೆ. ಕೆಆರ್‌ಎಸ್ ಕಡೆಯಿಂದ ಪಾಲಹಳ್ಳಿ ಕಡೆಗೆ ಕಾರು ಚಲಿಸುತ್ತಿದ್ದು ಹಾಗೂ ಪಾಲಹಳ್ಳಿ ಕಡೆಯಿಂದ ಕೆಆರ್‌ಎಸ್ ಕಡೆಗೆ ಬಸ್ ಸಂಚರಿಸುತ್ತಿದ್ದ ವೇಳೆ ಹೊಸಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿದೆ.
ಆರಾಧನಾ ಕಾಲೇಜಿಗೆ ಸೇರಿದ್ದ ಕಾರು ಎಂದು ತಿಳಿದು ಬಂದಿದೆ. ಘಟನೆ ವೇಳೆ ಕಾರಿನಲ್ಲಿ ಚಾಲಕ, ಪ್ರಾಂಶುಪಾಲರು ಸೇರಿದಂತೆ ಒಟ್ಟು ನಾಲ್ವರು ಮಂದಿ ಪ್ರಯಾಣಿಸುತ್ತಿದ್ದು, ಚಾಲಕ ಗಂಭೀರ ಗಾಯಗೊಂಡಿದ್ದಾನೆ. ಚಾಲಕನನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಬೆಂಗಳೂರು ಕಡೆಯಿಂದ ಸುಮಾರು 50-60 ಮಂದಿ ಪ್ರವಾಸಿಗರು ಬಸ್‌ನಲ್ಲಿ ಕೆಆರ್‌ಎಸ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ವೀಕ್ಷಣೆಗೆ ಆಗಮಿಸಿದ್ದಾರೆ. ಘಟನೆಯಿಂದ ಬಸ್ ತನ್ನ ಎಡಭಾಗಕ್ಕೆ ಉಳಿದು ಬಿದ್ದಿದ್ದು, ಬಸ್ಸಿನಲ್ಲಿದ್ದ ಪ್ರವಾಸಿಗರು ಹೊರ ಬರಲು ಸಾಧ್ಯವಾಗಿಲ್ಲ.
ಸ್ಥಳೀಯರು ಏಣಿ ತಂದು ಬಸ್ಸಿನಲ್ಲಿದ್ದವರನ್ನು ಮೇಲೆತ್ತಿ ಹೊರಗೆ ಕರೆದುಕೊಂಡಿದ್ದಾರೆ. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯಿಂದ ಶ್ರೀರಂಗಪಟ್ಟಣ-ಕೆಆರ್‌ಎಸ್ ಹೆದ್ದಾರಿ ಸುಮಾರು 1 ಗಂಟೆಗಳ ಕಾಲ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿತ್ತು. ವಾಹನ ಸವಾರರು ಸುಗಮ ಸಂಚಾರಕ್ಕೆ ಹರಸಾಹಸ ಪಡುವಂತಾಯಿತು.
ಸ್ಥಳಕ್ಕೆ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಹಾಗೂ ಟೌನ್, ಕೆಆರ್‌ಎಸ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.