ದರ್ಶನ್‌ ಸಿಗರೆಟ್‌ ಫೋಟೋ ಎಫೆಕ್ಟ್‌-ಬೆಳಗಾವಿಯಲ್ಲಿ ಕೈದಿಗಳಿಂದ ಬೀಡಿ, ತಂಬಾಕಿಗಾಗಿ ಧರಣಿ!

ಸಾರಾಂಶ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣಾಧೀನ ಬಂಧಿ, ನಟ ದರ್ಶನ್ ಸಿಗರೇಟ್ ಸೇದಿದ ಫೊಟೋ ವೈರಲ್ ಆದ ಬೆನ್ನಲ್ಲೇ ತಮಗೂ ಬೀಡಿ, ಸಿಗರೇಟ್‌ ಹಾಗೂ ತಂಬಾಕು ನೀಡುವಂತೆ ನಗರದ ಹಿಂಡಲಗಾ ಕಾರಾಗೃಹದಲ್ಲಿ ಭಾನುವಾರ ಕೈದಿಗಳು ಪ್ರತಿಭಟನೆ ನಡೆಸಿದರು.

ಬೆಳಗಾವಿ : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣಾಧೀನ ಬಂಧಿ, ನಟ ದರ್ಶನ್ ಸಿಗರೇಟ್ ಸೇದಿದ ಫೊಟೋ ವೈರಲ್ ಆದ ಬೆನ್ನಲ್ಲೇ ತಮಗೂ ಬೀಡಿ, ಸಿಗರೇಟ್‌ ಹಾಗೂ ತಂಬಾಕು ನೀಡುವಂತೆ ನಗರದ ಹಿಂಡಲಗಾ ಕಾರಾಗೃಹದಲ್ಲಿ ಭಾನುವಾರ ಕೈದಿಗಳು ಪ್ರತಿಭಟನೆ ನಡೆಸಿದರು.

ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗರೇಟ್ ಸೇದಲು ಅವಕಾಶ ನೀಡಿದ್ದೀರಿ, ನಮಗೂ ಬೀಡಿ, ಸಿಗರೇಟ್‌ ಮತ್ತು ತಂಬಾಕು ನೀಡಿ ಎಂದು ಆಗ್ರಹಿಸಿದರು. ನಮ್ಮ ಬೇಡಿಕೆಯನ್ನು ಈಡೇರಿಸುವವರೆಗೂ ನಾವು ಉಪಾಹಾರವನ್ನು ಸೇವಿಸುವುದಿಲ್ಲ ಎಂದು ಪಟ್ಟು ಹಿಡಿದರು ಎಂದು ಮೂಲಗಳು ತಿಳಿಸಿವೆ.

ಕೈದಿಗಳ ಈ ಬೇಡಿಕೆಯಿಂದ ಜೈಲಿನ ಅಧಿಕಾರಿಗಳು, ಸಿಬ್ಬಂದಿ ಕಂಗಾಲಾದರು. ವಿಷಯ ತಿಳಿದು, ಉನ್ನತ ಅಧಿಕಾರಿಗಳು ಆಗಮಿಸಿ, ಪರಿಸ್ಥಿತಿ ತಿಳಿಗೊಳಿಸಿದರು. ಬೀಡಿ, ಸಿಗರೇಟ್‌ ನೀಡದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿಯೂ ಕೈದಿಗಳು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ದರ್ಶನ್‌ನ ಆಪ್ತ ಸ್ನೇಹಿತ ಪ್ರದೂಷ್‌ನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈ ಮಧ್ಯೆ, ಬೆಂಗಳೂರಿನ ಪರಪ್ಪನ ಅಗ್ರಹಾರದ ಅವಾಂತರ ಬೆಳಕಿಗೆ ಬಂದ ಬೆನ್ನಲ್ಲೇ ಹಿಂಡಲಗಾ ಜೈಲು ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ಜೈಲಿನೊಳಗೆ ಬೀಡಿ, ಸಿಗರೇಟ್, ತಂಬಾಕು ಸೇರಿದಂತೆ ಎಲ್ಲ ಧೂಮಪಾನ ಮತ್ತು ಗುಟ್ಕಾ ವಸ್ತುಗಳನ್ನು ನಿಷೇಧಿಸಲಾಗಿದೆ. ಇದರಿಂದ ಕಂಗೆಟ್ಟ ಕೆಲ ಕೈದಿಗಳು, ನಾವು ಹಣ ಕೊಟ್ಟು ಮನೆಯವರಿಂದ ಗುಟ್ಕಾ, ಸಿಗರೇಟ್, ಬೀಡಿ ತರಿಸಿಕೊಳ್ಳುತ್ತೇವೆ. ಇದನ್ನು ನಿಯಂತ್ರಣ ಮಾಡುವುದು ಬೇಡ. ನಮ್ಮ ಚಟಗಳನ್ನು ನಾವು ಬಿಟ್ಟಿರಲು ಸಾಧ್ಯವಿಲ್ಲ ಎಂದಿದ್ದಾರೆ ಎನ್ನಲಾಗಿದೆ.

Share this article