ಸಾಲ ತೀರಿಸಲು ರೈಲಿನಲ್ಲಿ ಸರಗಳವು: ಇಬ್ಬರ ಬಂಧನ

KannadaprabhaNewsNetwork |  
Published : Feb 16, 2024, 01:46 AM ISTUpdated : Feb 16, 2024, 03:11 PM IST
thief

ಸಾರಾಂಶ

ಸಾಲ ತೀರಿಸಲು ರೈಲಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನು ದಂಡು ರೈಲ್ವೆ ವೃತ್ತದ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಲಿಸುವ ರೈಲಿನಲ್ಲಿ ಮಹಿಳೆಯರ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಖತರ್ನಾಕ್‌ ಕಳ್ಳರನ್ನು ನಗರದ ದಂಡು ರೈಲ್ವೆ ಪೊಲೀಸ್‌ ವೃತ್ತದ ಪೊಲೀಸರು ಬಂಧಿಸಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆಯ ದೇಶಿಹಳ್ಳಿ ನಿವಾಸಿ ಕೆ.ಬಾಲಾಜಿ(24) ಮತ್ತು ಕಮಲನಾಥನ್‌(42) ಬಂಧಿತರು. ಆರೋಪಿಗಳಿಂದ ₹4.34 ಲಕ್ಷ ಮೌಲ್ಯದ 79 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಜ.18ರಂದು ಕುಪ್ಪಂ ನಿವಾಸಿ ಸುಮಿತ್ರಾ ಅವರು ಬಂಗಾರಪೇಟೆ ರೈಲು ನಿಲ್ದಾಣದಿಂದ ಕುಪ್ಪಂಗೆ ಬೆಂಗಳೂರು-ಜೋಲಾರಪೇಟೆ ಪುಷ್ಪುಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. 

ಬಸಾನತ್ತಂ ರೈಲು ನಿಲ್ದಾಣದಲ್ಲಿ ರೈಲು ನಿಂತು ಬಳಿಕ ಮತ್ತೆ ನಿಧಾನಗತಿಯಲ್ಲಿ ಚಲಿಸಲು ಪ್ರಾರಂಭಿಸಿದಾಗ ಅಪರಿಚಿತ ವ್ಯಕ್ತಿ ಸುಮಿತ್ರಾ ಅವರ ಕುತ್ತಿಗೆ ಕೈ ಹಾಕಿ 29 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ರೈಲುನಿಂದ ಜಿಗಿದು ಪರಾರಿಯಾಗಿದ್ದ. 

ಈ ಸಂಬಂಧ ಬಂಗಾರಪೇಟೆ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಲ ತೀರಿಸಲು ಸರ ಕಳ್ಳತನ: ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ತನಿಖೆಗೆ ಇಳಿದಿದ್ದರು. ಫೆ.13ರಂದು ಬಂಗಾರಪೇಟೆ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಾಲಾಜಿ ಮತ್ತು ಕಮಲನಾಥನ್‌ನನ್ನು ವಶಕ್ಕೆ ಪಡೆದಿದ್ದರು. 

ಆರೋಪಿಗಳಿಬ್ಬರೂ ಕೇಟರಿಂಗ್‌ನಲ್ಲಿ ಅಡುಗೆ ಭಟ್ಟರಾಗಿದ್ದರು. ಆರೋಪಿ ಕಮಲನಾಥನ್‌ ಕೈ ತುಂಬಾ ಸಾಲ ಮಾಡಿಕೊಂಡಿದ್ದ. ಈ ಸಾಲ ತೀರಿಸಲು ಕಳ್ಳತನ ಮಾಡಲು ನಿರ್ಧರಿಸಿದ್ದ. 

ಈ ವಿಚಾರವನ್ನು ಸ್ನೇಹಿತ ಬಾಲಾಜಿಗೆ ತಿಳಿಸಿ ಇಬ್ಬರು ರೈಲಿನಲ್ಲಿ ಕಳ್ಳತನಕ್ಕೆ ಯೋಜನೆ ರೂಪಿಸಿದ್ದರು. ಅದರಂತೆ ಇಬ್ಬರೂ ರೈಲುಗಳಲ್ಲಿ ಹೊಂಚು ಹಾಕಿ ಮಹಿಳಾ ಪ್ರಯಾಣಿಕರ ಸರಗಳವು ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಗಳ ಬಂಧನದಿಂದ ಬಂಗಾರಪೇಟೆ ಹಾಗೂ ಚಿತ್ತೂರು ರೈಲ್ವೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎರಡು ಸರಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸರ ಕಿತ್ತುಕೊಂಡು ಪರಾರಿ

ಆರೋಪಿಗಳಿಬ್ಬರು ಪ್ರಯಾಣಿಕರ ಸೋಗಿನಲ್ಲಿ ಮಹಿಳಾ ಪ್ರಯಾಣಿಕರು ಹೆಚ್ಚಿರುವ ರೈಲು ಬೋಗಿ ಏರುತ್ತಿದ್ದರು. ಕಮಲನಾಥನ್‌ ಮೊದಲಿಗೆ ಯಾವ ಮಹಿಳೆಯ ಸರ ಕಿತ್ತುಕೊಳ್ಳಬೇಕು ಎಂದು ಗುರುತಿಸುತ್ತಿದ್ದ. 

ಬಳಿಕ ಆ ಮಹಿಳೆಯ ಬಗ್ಗೆ ಸಹಚರ ಬಾಲಾಜಿಗೆ ಸಿಗ್ನಲ್‌ ಕೊಡುತ್ತಿದ್ದ. ರೈಲು ನಿಧಾನಗತಿಯಲ್ಲಿ ಚಲಿಸುವಾಗ ಆರೋಪಿ ಬಾಲಾಜಿ ಏಕಾಏಕಿ ಆ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ರೈಲಿನಿಂದ ಜಿಗಿದು ಪರಾರಿಯಾಗುತ್ತಿದ್ದ. 

ಮತ್ತೊಂದೆಡೆ ಕಮಲನಾಥನ್‌ ಸಹ ರೈಲಿನಿಂದ ಜಿಗಿದು ತಪ್ಪಿಸಿಕೊಳ್ಳುತ್ತಿದ್ದ. ಬಳಿಕ ಇಬ್ಬರು ಕದ್ದ ಮಾಂಗಲ್ಯ ಸರವನ್ನು ಮಾರಾಟ ಮಾಡಿ ಬಂದ ಹಣವನ್ನು ಹಂಚಿಕೊಳ್ಳುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

PREV

Recommended Stories

ತಾಯಿಗೆ ಕ್ಷಮೆ ಕೋರಿ ಪತ್ರ ಬರೆದಿಟ್ಟು ನೇ*ಗೆ ಶರಣಾದ ಕನ್ನಡ ಗಾಯಕಿ ಸವಿತಾ ಮಗ
ಐಎಸ್‌ಡಿ ಕರೆಗಳ ಗೋಲ್‌ಮಾಲ್‌ : ಕೋಟ್ಯಂತರ ರು. ವಂಚಿಸಿದ್ದ ಇಬ್ಬರ ಬಂಧನ