ಕೊಲೆ ಆರೋಪಿಗೆ ಶ್ಯೂರಿಟಿ: ದುನಿಯಾ ವಿಜಿಗೆ ನೋಟಿಸ್‌? - ಜೈಲಿಂದ ಬಂದು ಜೋಡಿ ಕೊಲೆ ಮಾಡಿದ ಆರೋಪಿ

Published : Nov 17, 2024, 11:06 AM IST
Vedha, Shivarajkumar, Duniya Vijay

ಸಾರಾಂಶ

 ಖಾಸಗಿ ಬಸ್‌ ವರ್ಕ್ ಶಾಪ್‌ನಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿಗೆ ಈ ಹಿಂದಿನ ಪ್ರಕರಣದಲ್ಲಿ ಮಾನವೀಯತೆಯಿಂದ ಶ್ಯೂರಿಟಿ ನೀಡಿ ದಂಡದ ಹಣ ಪಾವತಿಸಿ ಬಿಡುಗಡೆಗೆ ಸಹಕರಿಸಿದ್ದ ನಟ ದುನಿಯಾ ವಿಜಯ್‌ ಅವರಿಗೆ ಬಾಗಲೂರು ಠಾಣೆ ಪೊಲೀಸರು ನೋಟಿಸ್‌ ಜಾರಿಗೊಳಿಸಿ ಹೇಳಿಕೆ ದಾಖಲಿಸುವ ಸಾಧ್ಯತೆಯಿದೆ.

ಬೆಂಗಳೂರು : ಇತ್ತೀಚೆಗೆ ನಗರದ ಖಾಸಗಿ ಬಸ್‌ ವರ್ಕ್ ಶಾಪ್‌ನಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿಗೆ ಈ ಹಿಂದಿನ ಪ್ರಕರಣದಲ್ಲಿ ಮಾನವೀಯತೆಯಿಂದ ಶ್ಯೂರಿಟಿ ನೀಡಿ ದಂಡದ ಹಣ ಪಾವತಿಸಿ ಬಿಡುಗಡೆಗೆ ಸಹಕರಿಸಿದ್ದ ನಟ ದುನಿಯಾ ವಿಜಯ್‌ ಅವರಿಗೆ ಬಾಗಲೂರು ಠಾಣೆ ಪೊಲೀಸರು ನೋಟಿಸ್‌ ಜಾರಿಗೊಳಿಸಿ ಹೇಳಿಕೆ ದಾಖಲಿಸುವ ಸಾಧ್ಯತೆಯಿದೆ.

ಆರೋಪಿ ಸುರೇಶ್‌ 2010ರಲ್ಲಿ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, 12 ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿದ್ದ. ಈ ನಡುವೆ ನಟ ದುನಿಯಾ ವಿಜಯ್‌ ಅವರು ಮಾನವೀಯತೆ ದೃಷ್ಟಿಯಿಂದ ಕಳೆದ ಜನವರಿಯಲ್ಲಿ ಶ್ಯೂರಿಟಿ ನೀಡಿ ನ್ಯಾಯಾಲಯಕ್ಕೆ ದಂಡ ಪಾವತಿಸಿ 10 ಮಂದಿಯ ಬಿಡುಗಡೆಗೆ ಸಹಕರಿಸಿದ್ದರು. ಬಿಡುಗಡೆಗೊಂಡವರ ಪೈಕಿ ಈ ಜೋಡಿ ಕೊಲೆ ಪ್ರಕರಣದ ಆರೋಪಿ ಸುರೇಶ್‌ ಕೂಡ ಒಬ್ಬ ಎಂದು ತಿಳಿದು ಬಂದಿದೆ.

ಆರೋಪಿ ಸುರೇಶ್‌ ಸಿಂಗಹಳ್ಳಿ ಕೆಐಎಡಿಬಿ ಕೈಗಾರಿಕಾ ಪ್ರದೇಶದ ಎಸ್‌ಆರ್‌ಎಸ್‌ ಟ್ರಾವೆಲ್ಸ್‌ ಕಂಪನಿಗೆ ಸೇರಿದ ವರ್ಕ್‌ಶಾಪ್‌ನಲ್ಲಿ ಬಸ್‌ಗಳ ಸ್ವಚ್ಚತಾ ಕೆಲಸಕ್ಕೆ ಸೇರಿಕೊಂಡಿದ್ದ. ನ.8ರಂದು ರಾತ್ರಿ ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ವರ್ಕ್‌ ಶಾಪ್‌ನಲ್ಲಿ ಸಹ ಕೆಲಸಗಾರರಾದ ರಾಮನಗರ ಮೂಲದ ನಾಗೇಶ್‌ ಮತ್ತು ಮಂಡ್ಯ ಮೂಲದ ಮಂಜೇಗೌಡ ಎಂಬುವರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆಗೈದು ಕೊಲೆ ಮಾಡಿದ್ದ. ಈ ಸಂಬಂಧ ಬಾಗಲೂರು ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಬಿಡುಗಡೆಗೆ ಸಹಕರಿಸಿದವರು ನನಗೆ ಗೊತ್ತಿಲ್ಲ!: ಆರೋಪಿ

ವಿಚಾರಣೆ ವೇಳೆ ಆರೋಪಿಯು ಈ ಹಿಂದೆ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ವಿಚಾರ ಗೊತ್ತಾಗಿದೆ. ಆರೋಪಿಗೆ ನಟ ದುನಿಯಾ ವಿಜಯ್‌ ದಂಡ ಪಾವತಿಸಿ ಜೈಲಿನಿಂದ ಬಿಡುಗಡೆಗೊಳಿಸಿರುವ ವಿಚಾರವೂ ಬೆಳಕಿಗೆ ಬಂದಿದೆ. ಆದರೆ, ತನ್ನನ್ನು ಜೈಲಿನಿಂದ ಬಿಡುಗಡೆಗೊಳಿಸಿದವರು ಯಾರೆಂಬುದೇ ಗೊತ್ತಿಲ್ಲ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ. ಹೀಗಾಗಿ ಬಾಗಲೂರು ಠಾಣೆ ಪೊಲೀಸರು ನಟ ದುನಿಯಾ ವಿಜಯ್‌ ಹೇಳಿಕೆ ದಾಖಲಿಸುವ ಸಲುವಾಗಿ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆಗೆ ಚರ್ಚಿಸಿ ಶೀಘ್ರದಲ್ಲೇ ನೋಟಿಸ್‌ ಜಾರಿಗೊಳಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!