ತೀವ್ರವಾಗಿ ಕಾಡುವ ಕ್ರೈಮ್ ಥ್ರಿಲ್ಲರ್‌

KannadaprabhaNewsNetwork | Published : Jan 28, 2024 1:24 AM

ಸಾರಾಂಶ

ಒಂದು ರಾತ್ರಿ ವಿಲ್ಸನ್ ಬದುಕಿನಲ್ಲಿ ನಡೆಯುವ ಘಟನಾವಳಿಗಳೇ ಸಿನಿಮಾದ ತಿರುಳು. ನಗರದಲ್ಲಿ ನಡೆಯುವ ಸರಣಿ ಕೊಲೆಗಳು, ಪಾತಕಿಗಳಿಗಾಗಿ ಎಸಿಪಿ ಲಕ್ಷ್ಮಿಯ ತೀವ್ರ ಶೋಧ, ಕ್ರಿಮಿನಲ್‌ಗಳ ಆಟಾಟೋಪ, ತಬ್ಬಲಿಗಳ ಕಣ್ಣೀರಿನ ಕಥೆಯ ಎಳೆಗಳೂ ಸೇರಿ ಚಿತ್ರದ ತೀವ್ರತೆ ಪ್ರೇಕ್ಷಕನನ್ನು ಕುರ್ಚಿಯ ತುದಿಯಲ್ಲಿ ಕೂರಿಸುತ್ತದೆ.

ಚಿತ್ರ: ಕೇಸ್‌ ಆಫ್‌ ಕೊಂಡಾಣ

ತಾರಾಗಣ: ವಿಜಯ ರಾಘವೇಂದ್ರ, ಭಾವನಾ ಮೆನನ್‌, ಖುಷಿ ರವಿ, ರಂಗಾಯಣ ರಘುನಿರ್ದೇಶಕ: ದೇವಿಪ್ರಸಾದ್‌ ಶೆಟ್ಟಿರೇಟಿಂಗ್‌: 3- ಪ್ರಿಯಾ ಕೆರ್ವಾಶೆ ಒಂದು ಮರದ ಕೆಳಗೆ ಪಾನಿಪೂರಿ ಗಾಡಿ. ಇದ್ದಕ್ಕಿದ್ದಂತೆ ಜೋರಾಗಿ ಬೀಸುವ ಗಾಳಿ. ಉತ್ತರ ಭಾರತದ ಹೆಂಗಸೊಬ್ಬಳು ತನ್ನ ಪುಟ್ಟ ಮಗಳೊಂದಿಗೆ ಗಾಡಿಯ ಮೇಲೆ ಟರ್ಪಲ್‌ ಎಳೆಯಲು ಪ್ರಯಾಸ ಪಡುತ್ತಿದ್ದಾಳೆ. ಆ ಇಬ್ಬರ ಪ್ರಯತ್ನವನ್ನು ಸೋಲಿಸಲು ಪಣತೊಟ್ಟಂತೆ ಬಿರುಗಾಳಿ ಬೀಸುತ್ತಿದೆ. ಪ್ರಬಲ ಪ್ರತಿರೋಧ ತೋರುವ ಶಕ್ತಿ ಇಲ್ಲದಿದ್ದರೂ ಇಬ್ಬರೂ ಕೈಲಾದ ಪ್ರಯತ್ನ ಮಾಡುತ್ತಲೇ ಇದ್ದಾರೆ..ಸಿನಿಮಾ ಮುಗಿದ ಮೇಲೂ ಮನಸ್ಸಲ್ಲಿ ಉಳಿಯುವ ಸನ್ನಿವೇಶವಿದು. ಇದು ನಿರ್ದೇಶಕ ದೇವಿಪ್ರಸಾದ್‌ ಶೆಟ್ಟಿ ಸೂಕ್ಷ್ಮತೆ ನಿದರ್ಶನವಾಗಿಯೂ ನಿಲ್ಲುತ್ತದೆ. ಕೇಸ್‌ ಆಫ್‌ ಕೊಂಡಾಣ ಭಿನ್ನ ಬಗೆಯ ಕ್ರೈಮ್‌ ಥ್ರಿಲ್ಲರ್‌. ಕಾಲವನ್ನೇ ಪ್ರೇಕ್ಷಕನೆದುರು ಅಪರಾಧಿಯಂತೆ ಕಟ ಕಟೆಯಲ್ಲಿ ನಿಲ್ಲಿಸಿಬಿಡುವುದು, ಪರಮ ವೇಗದ ಸ್ಕ್ರೀನ್‌ಪ್ಲೇ ಈ ಸಿನಿಮಾದ ಹೆಚ್ಚುಗಾರಿಕೆ ಎನ್ನಬಹುದು. ತಂದೆಯ ಕನಸು, ಕಟ್ಟಬೇಕಾದ ಸಾಲ, ಪ್ರಿಯತಮೆಯ ಮನೆಯಲ್ಲಿ ಮದುವೆ ಬಗ್ಗೆ ಮಾತನಾಡಬೇಕಾದ ಒತ್ತಡ ಈ ಎಲ್ಲದರ ನಡುವೆ ಪೊಲೀಸ್‌ ಇಲಾಖೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಆಗಿ ಕೆಲಸಕ್ಕೆ ಸೇರುತ್ತಾನೆ ವಿಲ್ಸನ್‌. ಆ ದಿನ ರಾತ್ರಿ ಆತನ ಬದುಕಿನಲ್ಲಿ ನಡೆಯುವ ಘಟನಾವಳಿಗಳೇ ಸಿನಿಮಾದ ತಿರುಳು. ನಗರದಲ್ಲಿ ನಡೆಯುವ ಸರಣಿ ಕೊಲೆಗಳು, ಪಾತಕಿಗಳಿಗಾಗಿ ಎಸಿಪಿ ಲಕ್ಷ್ಮಿಯ ತೀವ್ರ ಶೋಧ, ಕ್ರಿಮಿನಲ್‌ಗಳ ಆಟಾಟೋಪ, ತಬ್ಬಲಿಗಳ ಕಣ್ಣೀರಿನ ಕಥೆಯ ಎಳೆಗಳೂ ಇವೆ. ಮೂಲಕಥೆಯ ಜೊತೆ ಜೊತೆಯಾಗಿ ಅದೇ ವೇಗದಲ್ಲಿ ಈ ಎಳೆಗಳೂ ಮುನ್ನಡೆಯುತ್ತವೆ. ಈ ತೀವ್ರತೆ ಪ್ರೇಕ್ಷಕನನ್ನು ಕುರ್ಚಿಯ ತುದಿಯಲ್ಲಿ ಕೂರಿಸುತ್ತದೆ. ಕಾಲನ ನಿರ್ದಯತೆಯಲ್ಲಿ ಸಂಭವಿಸುವ ಕೆಲವು ಆಕಸ್ಮಿಕಗಳು ಬದುಕುಗಳನ್ನು ಹೇಗೆ ಅಡಿಮೇಲು ಮಾಡುತ್ತವೆ ಎಂಬುದಿಲ್ಲಿ ಪರಿಣಾಮಕಾರಿಯಾಗಿ ಬಿಂಬಿತವಾಗಿದೆ. ಜೊತೆಗೆ ಡೀಟೇಲಿಂಗ್‌ಅನ್ನು ತೀವ್ರವಾಗಿ ಕಟ್ಟಿಕೊಡಲಾಗಿದೆ. ವಿಜಯ ರಾಘವೇಂದ್ರ ಭಯ, ಉದ್ವೇಗವನ್ನು ನಟನೆಯಲ್ಲಿ ತಂದ ರೀತಿಯೇ ಅವರೆಂಥಾ ಕಲಾವಿದ ಎಂಬುದನ್ನು ಹೇಳುತ್ತದೆ. ಭಾವನಾ ಮೆನನ್‌ ಬಹಳ ತೀವ್ರವಾಗಿ ಅಭಿನಯಿಸಿದ್ದಾರೆ. ಖುಷಿ ರವಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಂಭಾಷಣೆ ಚುರುಕಾಗಿದೆ. ಛಾಯಾಗ್ರಹಣ ಚೆನ್ನಾಗಿದೆ. ಇದರ ಹೊರತಾಗಿ ಕಥೆಯ ಕೇಂದ್ರ ವಿಲ್ಸನ್‌ ಪಾತ್ರಕ್ಕೆ ಗಟ್ಟಿ ಹಿನ್ನೆಲೆ ಇರಬೇಕಿತ್ತು, ವಿಲ್ಸನ್‌ ಪ್ರೇಯಸಿ ಸಹನಾಳನ್ನು ಕ್ರೈಮ್‌ ಕಥೆಗೆ ಲಿಂಕ್‌ ಮಾಡಬಹುದಿತ್ತು, ಕೊನೆಯಲ್ಲಿ ಸ್ವಲ್ಪ ವೈಡ್‌ ಶಾಟ್‌ಗಳು ಹೆಚ್ಚಿದ್ದರೆ ಕ್ಲೈಮ್ಯಾಕ್ಸ್‌ ನೆಕ್ಸ್ಟ್‌ ಲೆವೆಲ್‌ಗೇ ಹೋಗುತ್ತಿತ್ತು ಎಂಬಿತ್ಯಾದಿ ಸಾಧ್ಯತೆಗಳು ಜಾಣ ಪ್ರೇಕ್ಷಕನಿಗೆ ಕಾಣುತ್ತವೆ. ಇಂಥಾ ಸಣ್ಣಪುಟ್ಟ ಕೊರತೆಗಳ ನಡುವೆಯೂ ಇದೊಂದು ಯಶಸ್ವಿ ಕ್ರೈಮ್‌ ಥ್ರಿಲ್ಲರ್‌ ಎಂಬುದರಲ್ಲಿ ಎರಡು ಮಾತಿಲ್ಲ.

Share this article