ಸು ಫ್ರಂ ಸೋ
ನಿರ್ದೇಶನ: ಜೆಪಿ ತುಮಿನಾಡು
ತಾರಾಗಣ: ಶಾನೀಲ್ ಗೌತಮ್, ಜೆಪಿ ತುಮಿನಾಡು, ರಾಜ್ ಬಿ ಶೆಟ್ಟಿ, ಪ್ರಕಾಶ್ ತುಮಿನಾಡು, ದೀಪಕ್ ರೈ, ಸಂಧ್ಯಾ ಅರಕೆರೆ
ರೇಟಿಂಗ್: 4
- ಜೋಗಿ
ಒಂದು ಕತೆ ಎಲ್ಲಿಂದ ಶುರುವಾಗುತ್ತದೆ, ಹೇಗೆ ಮುಕ್ತಾಯವಾಗುತ್ತದೆ ಅಂತ ಮೊದಲೇ ಗೊತ್ತಾಗಿಬಿಟ್ಟರೆ ಅಂಥ ಕತೆಯನ್ನು ಕೇಳುವುದರಿಂದಲೋ ನೋಡುವುದರಿಂದಲೋ ಯಾವ ಪ್ರಯೋಜನವೂ ಇಲ್ಲ. ಅದು ಸಂತೋಷವನ್ನೂ ಕೊಡುವುದಿಲ್ಲ, ಬೆರಗನ್ನೂ ನೀಡುವುದಿಲ್ಲ. ಆದರೆ ಅಂತ್ಯದ ಪೂರ್ವಸೂಚನೆಯಿಲ್ಲದ ಕತೆಗಳನ್ನು ಹೇಳುವುದಕ್ಕೆ ಅಗಾಧವಾದ ಆತ್ಮವಿಶ್ವಾಸ ಮತ್ತು ತನ್ನ ಕತೆಯ ಬಗ್ಗೆ ನಂಬಿಕೆ ಇರಬೇಕಾಗುತ್ತದೆ. ತನ್ನ ಕತೆಯನ್ನು ಕೊನೆಯ ತನಕ ಕೇಳಿಸಿಕೊಳ್ಳುವಂತೆ ಹೇಳಬಲ್ಲೆ ಅನ್ನುವ ಧೈರ್ಯ ಬೇಕಾಗುತ್ತದೆ.
ಜೆಪಿ ತುಮಿನಾಡು ಮೊದಲ ಚಿತ್ರದಲ್ಲೇ ಅಂಥ ದಿಟ್ಟತನದಿಂದ ಕತೆ ಹೇಳಿದ್ದಾರೆ. ಅದು ಒಬ್ಬ ವ್ಯಕ್ತಿಯ ಕತೆಯಾಗದೇ, ಒಂದು ಹಳ್ಳಿಯ ಕತೆಯಾಗುವಂತೆ ಹೇಳಿದ್ದಾರೆ. ಇದು ಅವರೊಬ್ಬರ ಸಮಸ್ಯೆ ಮಾತ್ರವಲ್ಲ, ಇಡೀ ಹಳ್ಳಿಯ ಸಮಸ್ಯೆ ಅನ್ನುವ ಮಾತೊಂದು ಚಿತ್ರದಲ್ಲಿ ಪ್ರಾಸಂಗಿಕವಾಗಿ ಬರುತ್ತದೆ. ಅದನ್ನು ಈ ಚಿತ್ರದ ಕತೆಗೂ ಅನ್ವಯಿಸಬಹುದು. ಇದು ಒಂದಿಡೀ ಹಳ್ಳಿಯ ಕತೆ. ಹೀಗಾಗಿ ಅಲ್ಲಿ ಪ್ರತಿಯೊಂದು ಪಾತ್ರವೂ ಪ್ರಧಾನ. ಪ್ರತಿಯೊಂದು ಮಾತೂ ಮುಖ್ಯ.
ಒಂದು ಸುಳ್ಳು ನಿಜವಾಗುತ್ತಾ ಹೋಗುವುದನ್ನು ಜೆಪಿ ತುಮಿನಾಡು ತಮಾಷೆಯಾಗಿಯೇ ಹೇಳುತ್ತಾ ಹೋಗುತ್ತಾರೆ. ಆದರೆ ಸುಳ್ಳು ನಿಜವಾದ ನಂತರ ಎದುರಾಗುವ ಪರಿಣಾಮ ಮಾತ್ರ ಭೀಕರವಾಗಿರುತ್ತದೆ ಅನ್ನುವುದನ್ನೂ ಚಿತ್ರ ಸೂಚಿಸುತ್ತದೆ. ತನ್ನ ಮೈಮೇಲೆ ಪ್ರೇತ ಬಂದಿದೆ ಅಂತ ತೋರಿಸುವ ಪೇಂಟರ್ ಅಶೋಕನ ಸುಳ್ಳಿನ ಸುತ್ತಲೂ ಕಟ್ಟಿಕೊಳ್ಳುವ ಪ್ರಸಂಗಗಳು ಕ್ರಮೇಣ ಇಡೀ ಹಳ್ಳಿಯನ್ನೇ ಆವರಿಸಿಕೊಳ್ಳುತ್ತದೆ.
ಈ ಕತೆಗೆ ಇಬ್ಬರು ನಾಯಕರು. ಇಡೀ ಊರೇ ಗೌರವಿಸುವ ರವಿಯಣ್ಣ ಮತ್ತು ಯಾರಿಗೂ ಅಷ್ಟಾಗಿ ಪರಿಚಯವಿರದ ಪೇಂಟರ್ ಅಶೋಕ. ಇವರಿಬ್ಬರು ಸಕಲ ದೌರ್ಬಲ್ಯಗಳನ್ನು ಒಳಗೊಂಡ ಸಾಮಾನ್ಯ ಮನುಷ್ಯರು. ಈ ಸರಳ ಸೀದಾ ವ್ಯಕ್ತಿಗಳನ್ನು ಅವರ ಎಲ್ಲಾ ಎಡವಟ್ಟುಗಳ ಜತೆಗೇ ಕೊಂಡೊಯ್ಯುವ ಕತೆ, ಪ್ರೇಕ್ಷಕ ಕುತೂಹಲದಿಂದ ಅವರಿಬ್ಬರನ್ನು ಹಿಂಬಾಲಿಸುವಂತೆ ಮಾಡುತ್ತದೆ.
ಇಲ್ಲಿ ಪ್ರತಿಯೊಬ್ಬ ಪಾತ್ರಧಾರಿ ಕೂಡ ತನ್ನ ಪಾತ್ರದ ಒಳಕ್ಕೆ ಸೇರಿಹೋಗಿದ್ದಾನೆ. ಒಂದು ಊರನ್ನು ನಿರ್ದೇಶಕರು ಅಲ್ಲಿಯ ಆಚರಣೆ, ಸ್ನೇಹ. ಹೊಟ್ಟೆಕಿಚ್ಚು, ಭಯ, ಮೂಢನಂಬಿಕೆ, ಹುಂಬತನದ ಸಮೇತ ಕತೆಯೊಳಗೆ ಎಳೆದುಕೊಂಡಿದ್ದಾರೆ. ಯಾರನ್ನೂ ವೈಭವೀಕರಿಸುವ ಯಾವ ಪ್ರಯತ್ನವೂ ಇಲ್ಲಿಲ್ಲ. ಮಾತು ಮಾತಿಗೆ ಒಂದು ನಗೆ ಹುಟ್ಟಿದರೆ ಅದು ಪಾತ್ರಗಳ ತಪ್ಪಲ್ಲ, ಸಂಭಾಷಣಾಕಾರನ ಕೈಚಳಕವೂ ಅಲ್ಲ. ಆ ಊರು ಅಲ್ಲಿಯ ಹತ್ತು ಸಮಸ್ತರು ಇರುವುದೇ ಹಾಗೆ. ಅವರು ಬದುಕುವುದೂ ಹಾಗೆಯೇ. ಅದರಲ್ಲಿ ಯಾವ ನಾಟಕೀಯತೆಯೂ ಇಲ್ಲ.
ಸು ಫ್ರಮ್ ಸೋ ನೋಡುತ್ತಾ ನೋಡುತ್ತಾ ಅನುಭವವೇ ಆಗಿಬಿಡುವ ಸಿನಿಮಾ. ಚಿತ್ರದೊಳಗೆ ಸೇರಿಹೋಗಲು ಹತ್ತರಿಂದ ಹದಿನೈದು ನಿಮಿಷ ಬೇಕಾಗುತ್ತದೆ. ನಂತರ ಚಿತ್ರವೇ ದೇಶ-ಕಾಲಗಳನ್ನು ಮರೆಸುತ್ತದೆ.