ಯುದ್ಧದ ಕಾರಣ ಪ್ರಾದೇಶಿಕ ಸೇನೆ ನಿಯೋಜನೆಗೆ ನಿರ್ಧಾರ

KannadaprabhaNewsNetwork | Updated : May 10 2025, 04:15 AM IST

ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ನಡುವೆಯೇ ಮಹತ್ವದ ಬೆಳವಣಿಗೆಯೊಂದರಲ್ಲಿ ರಕ್ಷಣಾ ಸಚಿವಾಲಯವು ಪ್ರಾದೇಶಿಕ ಸೇನೆಯ ಸಿಬ್ಬಂದಿ, ಅಧಿಕಾರಿಗಳನ್ನು ಸೇನೆಯ ನೆರವಿಗೆ ನಿಯೋಜಿಸುವ ಅಧಿಕಾರವನ್ನು ಸೇನಾ ಸಿಬ್ಬಂದಿ ಮುಖ್ಯಸ್ಥರಿಗೆ ನೀಡಿದೆ.

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ನಡುವೆಯೇ ಮಹತ್ವದ ಬೆಳವಣಿಗೆಯೊಂದರಲ್ಲಿ ರಕ್ಷಣಾ ಸಚಿವಾಲಯವು ಪ್ರಾದೇಶಿಕ ಸೇನೆಯ ಸಿಬ್ಬಂದಿ, ಅಧಿಕಾರಿಗಳನ್ನು ಸೇನೆಯ ನೆರವಿಗೆ ನಿಯೋಜಿಸುವ ಅಧಿಕಾರವನ್ನು ಸೇನಾ ಸಿಬ್ಬಂದಿ ಮುಖ್ಯಸ್ಥರಿಗೆ ನೀಡಿದೆ.

ಭಾರತದ ಸಹಾಯಕ ಸೇನಾ ಪಡೆ ಎಂದೇ ಖ್ಯಾತಿ ಪಡೆದಿರುವ ಟೆರಿಟೋರಿಯಲ್ ಆರ್ಮಿಯ 32 ಪದಾತಿ ದಳಗಳಲ್ಲಿ 14 ಬೆಟಾಲಿಯನ್‌ಗಳನ್ನು 2028ರವರೆಗೆ ದೇಶಾದ್ಯಂತ ನಿಯೋಜಿಸಲು ರಕ್ಷಣಾ ಸಚಿವಾಲಯ ನಿರ್ಧಸಿಸಿದೆ.

ಮೇ 6ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಪ್ರಾದೇಶಿಕ ಸೇನೆಯ 33ನೇ ನಿಯಮದದಂತೆ ಸೇನಾ ಮುಖ್ಯಸ್ಥರಿಗೆ ಪ್ರಾದೇಶಿಕ ಸೇನೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಯನ್ನು ಅನುಕೂಲಕ್ಕೆ ತಕ್ಕಂತೆ ನಿಯೋಜಿಸುವ ಅಧಿಕಾರ ನೀಡಿದೆ. ಪ್ರಾದೇಶಿಕ ಸೇನಾ ಸಿಬ್ಬಂದಿಗಳನ್ನು ಸೇನೆಯ ನೆರವಿಗೆ ನಿಯೋಜಿಸುವುದು ಸೇರಿದಂತೆ ಯಾವುದೇ ಇನ್ನಿತರ ಯಾವುದೇ ಸೇನಾ ಕಾರ್ಯಗಳಿಗೆ ನಿಯೋಜಿಸಬಹುದಾಗಿದೆ.

ಸದ್ಯ , ಭಾರತದಲ್ಲಿ ಸುಮಾರು 14.75 ಲಕ್ಷ ಸಕ್ರಿಯ ಮಿಲಿಟರಿ ಸಿಬ್ಬಂದಿ ಮತ್ತು 16 ಲಕ್ಷಕ್ಕೂ ಹೆಚ್ಚು ಅರೆಸೈನಿಕ ಸಿಬ್ಬಂದಿ ಇದ್ದಾರೆ.. ಏತನ್ಮಧ್ಯೆ, ಪಾಕಿಸ್ತಾನದಲ್ಲಿ 7 ಲಕ್ಷ ಸಕ್ರಿಯ ಸೇಣಾ ಸಿಬ್ಬಂದಿ ಮತ್ತು 2.9 ಲಕ್ಷ ಪ್ಯಾರಾಮಿಲಿಟರಿ ಸಿಬ್ಬಂದಿ ಇದ್ದದಾರೆ.

ಏನಿದು ಪ್ರಾದೇಶಿಕ ಸೇನೆ?:

ಸೈನಿಕ ತರಬೇತಿ ಪಡೆದ ಸಾಮಾನ್ಯ ನಾಗರಿಕರು ಪ್ರಾದೇಶಿಕ ಸೇನೆಯ ಭಾಗವಾಗಿರುತ್ತಾರೆ. ಅಗತ್ಯಬಿದ್ದರೆ ಇವರು ದೇಶ ರಕ್ಷಣೆಗೆ ಸೇನೆಗೆ ನೆರವು ನೀಡುತ್ತಾರೆ. ಪ್ರಾದೇಶಿಕ ಸೈನ್ಯವು ಅರೆಕಾಲಿಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸ್ವಯಂಸೇವಕರು ಪ್ರತಿ ವರ್ಷ 2 ತಿಂಗಳ ತರಬೇತಿಗೆ ಒಳಗಾಗಬೇಕಾಗುತ್ತದೆ. ವೈದ್ಯರು, ಉದ್ಯಮಿಗಳು ಎಂಜಿನಿಯರ್‌ಗಳಂಥ ವೃತ್ತಿಪರರು ಹೆಚ್ಚಾಗಿ ಪ್ರಾದೇಶಿಕ ಸೇನೆ ಸೇರುತ್ತಾರೆ.

ಪ್ರಾದೇಶಿಕ ಸೇನೆಯಲ್ಲಿನ ಪ್ರಮುಖರು:

1. ಎಂ.ಎಸ್. ಧೋನಿ, ಹುದ್ದೆ: ಲೆಫ್ಟಿನೆಂಟ್ ಕರ್ನಲ್ (ಗೌರವ), , ಪ್ಯಾರಾಚೂಟ್ ರೆಜಿಮೆಂಟ್‌

2. ಕಪಿಲ್ ದೇವ್, ಲೆಫ್ಟಿನೆಂಟ್ ಕರ್ನಲ್ (ಗೌರವ), ಪಂಜಾಬ್ ರೆಜಿಮೆಂಟ್‌

3. ಸಚಿನ್ ಪೈಲಟ್, ಲೆಫ್ಟಿನೆಂಟ್ (ನಿಯೋಜಿತ ಅಧಿಕಾರಿ), ಪ್ರಾದೇಶಿಕ ಸೇನೆ ಸೇರಿದ್ದ ಮೊದಲ ಸಂಸತ್ ಸದಸ್ಯ

.4. ಅನುರಾಗ್ ಠಾಕೂರ್, ಕ್ಯಾಪ್ಟನ್

5. ಸಚಿನ್‌ ತೆಂಡುಲ್ಕರ್‌, ಗ್ರೂಪ್ ಕ್ಯಾಪ್ಟನ್