ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿಯ ಮದ್ಯದಂಗಡಿ ಲೈಸನ್ಸ್ ಹಂಚಿಕೆ ಪ್ರಕರಣ ಸಂಬಂಧ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
ಇದರೊಂದಿಗೆ, ಇದೇ ಪ್ರಕರಣದಲ್ಲಿ ದೆಹಲಿ ಸರ್ಕಾರದಲ್ಲಿ ಸಚಿವರಾಗಿದ್ದ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ, ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ತೆಲಂಗಾಣದ ಬಿಆರ್‌ಎಸ್ ಪಕ್ಷದ ಶಾಸಕಿ ಕೆ.ಕವಿತಾ ಬಳಿಕ ಮತ್ತೊಬ್ಬ ದೊಡ್ಡ ರಾಜಕೀಯ ನಾಯಕ ಕೇಂದ್ರದ ತನಿಖಾ ಸಂಸ್ಥೆಗಳ ಬಲೆಗೆ ಬಿದ್ದಂತಾಗಿದೆ.
ಕೇಜ್ರಿವಾಲ್ ಬಂಧನವನ್ನು ಆಮ್‌ಆದ್ಮಿ ಸೇರಿದಂತೆ ವಿಪಕ್ಷಗಳ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ ಬಂಧನ ಖಂಡಿಸಿ ಆಪ್ ಕಾರ್ಯಕರ್ತರು ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ನೈತಿಕ ಹೊಣೆ ಹೊತ್ತು ಕೇಜ್ರಿವಾಲ್ ರಾಜೀನಾಮೆ ನೀಡಲಿ ಎಂದು ಬಿಜೆಪಿ ಆಗ್ರಹಿಸಿದೆ.
ಮೋದಿಯ ಕಟುಟೀಕಾಕಾರಲ್ಲಿ ಒಬ್ಬರಾದ ಕೇಜ್ರಿವಾಲ್ ಬಂಧನದೊಂದಿಗೆ ಕಳೆದೊಂದು ದಶಕದಿಂದ ಬಿಜೆಪಿ ಮತ್ತು ಆಮ್‌ಆದ್ಮಿ ಪಕ್ಷದ ನಡುವೆ ನಡೆಯುತ್ತಿದ್ದ ಬಹಿರಂಗ ಸಮರ ಮತ್ತೊಂದು ಹಂತಕ್ಕೆ ತಲುಪಿದಂತಾಗಿದೆ.
ಕೋರ್ಟ್‌ನಲ್ಲಿ ಹಿನ್ನಡೆ: ದೆಹಲಿ ಲಿಕ್ಕರ್ ಹಗರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ 9 ಬಾರಿ ಕೇಜ್ರಿವಾಲ್‌ಗೆ ಸಮನ್ಸ್ ನೀಡಿತ್ತು. ಆದರೆ ಇದು ರಾಜಕೀಯ ಸೇಡಿಗಾಗಿ ಕೈಗೊಂಡ ಕ್ರಮ ಎಂದು ಆರೋಪಿಸಿ ವಿಚಾರಣೆಗೆ ದೆಹಲಿ ಸಿಎಂ ಗೈರಾಗುತ್ತಲೇ ಬಂದಿದ್ದರು.
ಈ ನಡುವೆ ಮದ್ಯ ಲೈಸನ್ಸ್ ಪ್ರಕರಣದಲ್ಲಿ ತಮ್ಮ ವಿರುದ್ಧ ಕ್ರಮ ಕೈಗೊಳ್ಳದಂತೆ ರಕ್ಷಣೆ ನೀಡಬೇಕು ಎಂದು ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ತಳ್ಳಿಹಾಕಿತ್ತು.
ಮನೆ ಮೇಲೆ ದಾಳಿ: ಹೈಕೋರ್ಟ್‌ನಿಂದ ರಕ್ಷಣೆ ನಿರಾಕರಿಸಲ್ಪಟ್ಟ ಬೆನ್ನಲ್ಲೇ ಇ.ಡಿ. ಅಧಿಕಾರಿಗಳ ತಂಡ ಗುರುವಾರ ರಾತ್ರಿ ಕೇಜ್ರಿವಾಲ್ ಮನೆ ಮೆಲೆ ದಾಳಿ ನಡೆಸಿತು.
ಈ ವೇಳೆ ಅವರನ್ನು 2 ಗಂಟೆಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು ಬಳಿಕ ಬಂಧಿಸಿದರು. ಅವರನ್ನು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ತನ್ನ ವಶಕ್ಕೆ ಪಡೆಯಲು ಇ.ಡಿ. ನಿರ್ಧರಿಸಿದೆ.
ರಾಜೀನಾಮೆ ಇಲ್ಲ, ಜೈಲಿಂದಲೇ ಆಡಳಿತ: ಬಂಧನಕ್ಕೊಳಗಾದರೂ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಅವರು ತಮ್ಮೆಲ್ಲಾ ಖಾತೆಗಳನ್ನು ತ್ಯಜಿಸಲಿದ್ದಾರೆ. ಒಂದು ವೇಳೆ ಅಗತ್ಯಬಿದ್ದರೆ ಅಲ್ಲಿಂದಲೇ ಸರ್ಕಾರ ಚಲಾಯಿಸಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.