ಸಮೂಹ ಡ್ರೋನ್‌ ದಾಳಿ ತಡೆಗೆ ಭಾರತದ ಹೊಸ ‘ಭಾರ್ಗವಾಸ್ತ್ರ’

Published : May 15, 2025, 05:42 AM IST
'Bhargavastra' counter swarm drone system (Photo/SDAL)

ಸಾರಾಂಶ

ಇತ್ತೀಚೆಗೆ ಭಾರತದ ಮೇಲೆ ಪಾಕಿಸ್ತಾನ ನಡೆಸಿದ್ದ ಸಮೂಹ ಡ್ರೋನ್‌ಗಳ ರೀತಿಯ ದಾಳಿಯನ್ನು ಯಶಸ್ವಿಯಾಗಿ ತಡೆಯುವ ಮತ್ತೊಂದು ದೇಶೀಯ ವಾಯುದಾಳಿ ಪತ್ತೆ ಹಾಗೂ ದಾಳಿ ವ್ಯವಸ್ಥೆಯನ್ನು ಬುಧವಾರ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

 ಭುವನೇಶ್ವರ: ಇತ್ತೀಚೆಗೆ ಭಾರತದ ಮೇಲೆ ಪಾಕಿಸ್ತಾನ ನಡೆಸಿದ್ದ ಸಮೂಹ ಡ್ರೋನ್‌ಗಳ ರೀತಿಯ ದಾಳಿಯನ್ನು ಯಶಸ್ವಿಯಾಗಿ ತಡೆಯುವ ಮತ್ತೊಂದು ದೇಶೀಯ ವಾಯುದಾಳಿ ಪತ್ತೆ ಹಾಗೂ ದಾಳಿ ವ್ಯವಸ್ಥೆಯನ್ನು ಬುಧವಾರ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಇದರೊಂದಿಗೆ ಭಾರತದ ಬತ್ತಳಿಕೆಗೆ ಮತ್ತೊಂದು ಅಸ್ತ್ರ ಸೇರುವ ಕ್ಷಣ ಸನ್ನಿಹಿತವಾದಂತಾಗಿದೆ.

ಸೋಲಾರ್‌ ಡಿಫೆನ್ಸ್‌ ಆ್ಯಂಡ್‌ ಏರೋಸ್ಪೇಸ್‌ ಲಿ. ಅಭಿವೃದ್ಧಿಪಡಿಸಿರುವ ‘ಭಾರ್ಗವಾಸ್ತ್ರ’ ಎಂಬ ಡ್ರೋನ್‌ ವ್ಯವಸ್ಥೆಯು, 6-10 ಕಿ.ಮೀ ದೂರದಿಂದಲೇ ತನ್ನತ್ತ ಸಾಗಿಬರುತ್ತಿರುವ ಸಣ್ಣ ಸಣ್ಣ ಡ್ರೋನ್‌ಗಳನ್ನು ಪತ್ತೆ ಮಾಡಿ, 2.5 ಕಿ.ಮೀ ದೂರದಲ್ಲೇ ಅದನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.

ಬುಧವಾರ ಒಡಿಶಾದ ಕರಾವಳಿ ತೀರದಲ್ಲಿ ಈ ಭಾರ್ಗವಾಸ್ತ್ರವನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಬುಧವಾರದ ಪ್ರಯೋಗದ ವೇಳೆ ಎರಡು ಬಾರಿ ತಲಾ ಒಂದೊಂದು ರಾಕೆಟ್‌ ಮತ್ತು ಎರಡು ಬಾರಿ ತಲಾ 2 ರಾಕೆಟ್‌ಗಳನ್ನು ಹಾರಿಸಿ ಅದನ್ನು ಭಾರ್ಗವಾಸ್ತ್ರದ ಮೂಲಕ ಧ್ವಂಸ ಮಾಡಲಾಯಿತು. ಈ ವೇಳೆ ಅಸ್ತ್ರದ ಎಲ್ಲಾ ವ್ಯವಸ್ಥೆಯು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ಈ ಅಸ್ತ್ರವನ್ನು ದೇಶದ ಯಾವುದೇ ಪ್ರದೇಶದಲ್ಲಿ ಅತ್ಯಂತ ಸರಳವಾಗಿ, ಬೇಡಿಗೆ ಅನುಗುಣವಾಗಿ ನಿಯೋಜಿಸಿ ಶತ್ರು ದಾಳಿ ತಡೆಬಹುದಾಗಿದೆ. ಇದು ರಡಾರ್‌, ಇಒ ಮತ್ತು ಆರ್‌ಎಫ್‌ ರಿಸೀವರ್‌ಗಳನ್ನು ಒಳಗೊಂಡಿದೆ. ಹಾಲಿ ಇರುವ ದೇಶೀಯ ಯುದ್ಧ ಮೂಲಸೌಕರ್ಯಗಳಲ್ಲೂ ಇದನ್ನು ಅಳವಡಿಸಬಹುದು ಎಂದು ಕಂಪನಿ ಹೇಳಿದೆ.

ಇತ್ತೀಚೆಗೆ ಭಾರತದ ಮೇಲೆ ಪಾಕಿಸ್ತಾನ ನಡೆಸಿದ ಸಮೂಹ ಡ್ರೋನ್‌ ದಾಳಿಯನ್ನು ಭಾರತದ ಮತ್ತೊಂದು ದೇಶೀಯ ಏರ್‌ಡಿಫೆನ್ಸ್‌ ವ್ಯವಸ್ಥೆಯಾದ ಆಕಾಶ್‌ ಯಶಸ್ವಿಯಾಗಿ ತಡೆದಿತ್ತು.

ಇಂದು ಎಲ್‌ಒಸಿಗೆ ಸಚಿವ

ರಾಜನಾಥ್‌ ಸಿಂಗ್‌ ಭೇಟಿ

ನವದೆಹಲಿ: ಭಾರತ-ಪಾಕ್‌ ನಡುವೆ ಕದನವಿರಾಮ ಘೋಷಣೆಯಾಗಿದ್ದರೂ ಉಭಯ ದೇಶಗಳ ನಡುವಿನ ಗಡಿಯಲ್ಲಿ ಉದ್ವಿಗ್ನತೆ ಬೂದಿ ಮುಚ್ಚಿದ ಕೆಂಡದಂತಿರುವ ಹೊತ್ತಿನಲ್ಲಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಗುರುವಾರ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಗೆ ಭೇಟಿ ನೀಡಲಿದ್ದಾರೆ.

ಈ ವೇಳೆ ಸಿಂಗ್‌ ಅವರು ಜಮ್ಮುವಿನ ಯಾವುದಾದರೂ ಒಂದು ವಾಯುನೆಲೆ ಮತ್ತು ಅಲ್ಲಿರುವ ಮುಂಚೂಣಿ ನೆಲೆಗಳಿಗೆ ತೆರಳುವ ನಿರೀಕ್ಷೆಯಿದೆ.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ ಗಡಿಯ ಸಮೀಪವಿರುವ ಆದಂಪುರ ವಾಯುನೆಲೆಗೆ ಭೇಟಿ ಕೊಟ್ಟು ವಾಯುಪಡೆಯ ಯೋಧರನ್ನುದ್ದೇಶಿಸಿ ಮಾತನಾಡಿದ್ದರು. ಜತೆಗೆ, ಪಾಕ್‌ ತಾನು ನಾಶಪಡಿಸಿರುವುದಾಗಿ ಹೇಳಿಕೊಂಡಿದ್ದ ಎಸ್‌-400 ವಾಯುರಕ್ಷಣಾ ವ್ಯವಸ್ಥೆ ಮತ್ತು ಮಿಗ್‌-29 ಯುದ್ಧವಿಮಾನದ ಎದುರೇ ನಿಂತು ಭಾಷಣ ಮಾಡಿದ್ದರು.

ಭಾರ್ಗವಾಸ್ತ್ರದ ಕೆಲಸ ಹೇಗೆ?

6-10 ಕಿ.ಮೀ ದೂರದಿಂದಲೇ ತೂರಿ ಬರುತ್ತಿರುವ ಡ್ರೋನ್‌ ಪತ್ತೆ

ಪತ್ತೆಯಾದ ತತ್‌ಕ್ಷಣ 2.5 ಕಿ.ಮೀ ದೂರದಲ್ಲೇ ಧ್ವಂಸದ ಸಾಮರ್ಥ್ಯ

ದೇಶದ ಯಾವುದೇ ಪ್ರದೇಶದಲ್ಲಿ ಯಶಸ್ವಿಯಾಗಿ ಬಳಕೆ ಅವಕಾಶ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಉತ್ತರದ ಮಹಿಳೆಯರು ಬರೀ ಮನೆಗೆಲಸಕ್ಕೆ ಸೀಮಿತ: ದಯಾನಿಧಿ
ಶೀಘ್ರ ಇರಾನ್‌ ತೊರೆಯಿರಿ : ಭಾರತೀಯರಿಗೆ ಸೂಚನೆ