ಪಾಕ್‌ಗೆ ಭಾರತದ 6 ರಾಜತಾಂತ್ರಿಕ ಶಾಕ್‌ - ಸಿಂಧೂ ಸೇರಿ 6 ನದಿಗಳ ನೀರು ಕಟ್

ಸಾರಾಂಶ

25 ಭಾರತೀಯರು ಹಾಗೂ ಓರ್ವ ನೇಪಾಳಿ ಸೇರಿ 26 ಜನರ ಬಲಿ ಪಡೆದ ಜಮ್ಮು-ಕಾಶ್ಮೀರದ ಪಹಲ್ಗಾಂ ಉಗ್ರ ದಾಳಿಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಭಾರತವು ಪಾಕಿಸ್ತಾನದ ವಿರುದ್ಧ ಮೊದಲ ಪ್ರತೀಕಾರ ಕ್ರಮ ಕೈಗೊಂಡಿದೆ. ಇದರ ಭಾಗವಾಗಿ 6 ‘ರಾಜತಾಂತ್ರಿಕ ನಿರ್ಬಂಧ’ಗಳನ್ನು ಹೇರಿದೆ.

ನವದೆಹಲಿ: 25 ಭಾರತೀಯರು ಹಾಗೂ ಓರ್ವ ನೇಪಾಳಿ ಸೇರಿ 26 ಜನರ ಬಲಿ ಪಡೆದ ಜಮ್ಮು-ಕಾಶ್ಮೀರದ ಪಹಲ್ಗಾಂ ಉಗ್ರ ದಾಳಿಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಭಾರತವು ಪಾಕಿಸ್ತಾನದ ವಿರುದ್ಧ ಮೊದಲ ಪ್ರತೀಕಾರ ಕ್ರಮ ಕೈಗೊಂಡಿದೆ. ಇದರ ಭಾಗವಾಗಿ 6 ‘ರಾಜತಾಂತ್ರಿಕ ನಿರ್ಬಂಧ’ಗಳನ್ನು ಹೇರಿದೆ.

ಆ ಪೈಕಿ ಸಿಂಧೂ ನದಿ ಒಪ್ಪಂದ ತಡೆಹಿಡಿಯುವುದೂ ಸೇರಿದೆ. ಇದರಿಂದ ಪಾಕಿಸ್ತಾನಕ್ಕೆ ಹರಿಯುವ ಆರು ನದಿಗಳ ನೀರಿಗೆ ಭಾರತ ತಡೆಯೊಡ್ಡಬಹುದು. 1960ರಲ್ಲಿ ವಿಶ್ವಬ್ಯಾಂಕ್‌ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟಿರುವ ಈ ಒಪ್ಪಂದ ಪಾಕಿಸ್ತಾನದ ಅಳಿವು-ಉಳಿವಿನ ಪ್ರಶ್ನೆ. ಇದೀಗ ಆ ಒಪ್ಪಂದಕ್ಕೆ ಭಾರತ ತಡೆಯೊಡ್ಡಿರುವುದರಿಂದ ಪಾಕಿಸ್ತಾನದ 80% ಜಮೀನಿಗೆ ನೀರೇ ಸಿಗುವುದಿಲ್ಲ. ಕರಾಚಿ, ಲಾಹೋರ್‌, ಮುಲ್ತಾನ್‌ನಂತಹ ನಗರಗಳಿಗೆ ಕುಡಿಯುವ ನೀರೂ ಲಭಿಸುವುದಿಲ್ಲ. ಆಹಾರ ಉತ್ಪಾದನೆ, ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಎಲ್ಲದಕ್ಕೂ ಸಮಸ್ಯೆಯಾಗಲಿದೆ. ಆ ನದಿ ನೀರನ್ನು ಭಾರತ ಬಳಸಬಹುದಾಗಿದೆ.

ಪಹಲ್ಗಾಂ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ, ಸೌದಿ ಅರೇಬಿಯಾ ಪ್ರವಾಸ ಮೊಟಕುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ಬುಧವಾರ ಬೆಳಗ್ಗೆ ಮರಳಿದರು ಹಾಗೂ ರಕ್ಷಣಾ ವ್ಯವಹಾರಗಳ ಸಂಪುಟ ಸಮಿತಿ ಸಭೆ ಸೇರಿ 2 ಮಹತ್ವದ ಸಭೆ ನಡೆಸಿದರು. ಅಲ್ಲಿ ಅವರು ಕಾಶ್ಮೀರದಿಂದ ಮರಳಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಂದ ಕಣಿವೆ ಸ್ಥಿತಿಯ ಮಾಹಿತಿ ಪಡೆದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಜತೆ ಮಾತನಾಡಿದ ಭಾರತದ ವಿದೇಶಾಂಗ ಕಾರ್ಯರ್ಶಿ ವಿಕ್ರಂ ಮಿಸ್ರಿ, ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸುವವರೆಗೆ 6 ರಾಜತಾಂತ್ರಿಕ ನಿರ್ಬಂಧ ಹೇರಲಾಗುತ್ತದೆ ಎಂದು ಪ್ರಕಟಿಸಿದರು.

6 ನಿರ್ಬಂಧಗಳೇನು?

ಈ ಪ್ರಕಾರ, ಸಿಂಧೂ ನದಿ ನೀರು ಒಪ್ಪಂದಕ್ಕೆ ತಡೆ ನೀಡಲಾಗುತ್ತದೆ. ಪಂಜಾಬ್‌ನ ಅಟ್ಟಾರಿ ಗಡಿ ಬಂದ್‌ ಮಾಡಲಾಗುತ್ತದೆ. ಈಗಾಗಲೇ ಗಡಿಯನ್ನು ದಾಟಿ ಭಾರತಕ್ಕೆ ಬಂದವರಿಗೆ ದೇಶಕ್ಕೆ ಮರಳಲು ಮೇ1ರವರೆಗೆ ಅವಕಾಶ ನೀಡಲಾಗುತ್ತದೆ.

ಪಾಕಿಸ್ತಾನಿ ಪ್ರಜೆಗಳಿಗೆ ಸಾರ್ಕ್‌ ವೀಸಾ ರದ್ದು ಮಾಡಲಾಗುತ್ತದೆ. ಜತೆಗೆ ಪಾಕಿಸ್ತಾನಿಗಳಿಗೆ ವಿತರಿಸಲಾಗಿರುವ ಕರೆಂಟ್‌ ವೀಸಾವನ್ನೂ ತಕ್ಷಣದಿಂದ ರದ್ದು ಮಾಡಲಾಗುತ್ತದೆ.

ಪಾಕ್‌ನಲ್ಲಿನ ಭಾರತದ ಹೈಕಮಿಷನ್‌ ಕಚೇರಿಯಲ್ಲಿ ಸಿಬ್ಬಂದಿ ಸಂಖ್ಯೆಯನ್ನು 55ರಿಂದ 30ಕ್ಕೆ ಇಳಿಕೆ ಮಾಡಲಾಗುತ್ತದೆ. ಇವರಲ್ಲಿ ರಕ್ಷಣಾ ಇಲಾಖೆಯ ಸಿಬ್ಬಂದಿ ಇದ್ದಾರೆ.

ಅಲ್ಲದೆ, ಭಾರತದಲ್ಲಿನ ಪಾಕಿಸ್ತಾನ ಹೈಕಮಿಷನ್‌ನಲ್ಲಿನ ಪಾಕ್‌ ರಕ್ಷಣಾ ಇಲಾಖೆ ಸಿಬ್ಬಂದಿಯನ್ನು ಅವರ ದೇಶಕ್ಕೆ ವಾಪಸ್ ಹೋಗಲು ಸೂಚಿಸಲಾಗುತ್ತದೆ. ಅವರು ಭಾರತದಿಂದ ನಿರ್ಗಮಿಸಲು 1 ವಾರ ಅವಕಾಶ ನೀಡಲಾಗುತ್ತದೆ.

 ಭಾರತದ 6 ರಾಜತಾಂತ್ರಿಕ ಅಸ್ತ್ರಗಳು:

ಭಾರತ ಸರ್ಕಾರ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಅಷ್ಟಾಸ್ತ್ರಗಳನ್ನು ಪ್ರಯೋಗಿಸಿದೆ. ಅವು

1. ಸಿಂಧೂ ನದಿ ನೀರು ಒಪ್ಪಂದಕ್ಕೆ ತಡೆ

2. ಪಂಜಾಬ್‌ನ ಅಟ್ಟಾರಿ ಗಡಿ ಬಂದ್‌

3. ಪಾಕಿಸ್ತಾನಿ ಪ್ರಜೆಗಳಿಗೆ ಸಾರ್ಕ್‌ ವೀಸಾ ರದ್ದು

4. ಪಾಕಿಸ್ತಾನಿಗಳ ಕರೆಂಟ್‌ ವೀಸಾ ತಕ್ಷಣದಿಂದ ರದ್ದು

5. ಪಾಕ್‌ನಲ್ಲಿನ ಭಾರತದ ಹೈಕಮಿಷನ್‌ ಸಿಬ್ಬಂದಿ ಸಂಖ್ಯೆ 55ರಿಂದ 30ಕ್ಕೆ ಇಳಿಕೆ

6. ಭಾರತದಲ್ಲಿನ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಪಾಕ್‌ ರಕ್ಷಣಾ ಇಲಾಖೆ ಸಿಬ್ಬಂದಿಗೆ ಗೇಟ್‌ಪಾಸ್‌

Share this article