ಗಲ್ಲು ಭೀತಿಯಿಂದ ಸದ್ಯ ಕೇರಳ ನರ್ಸ್‌ ಪಾರು

KannadaprabhaNewsNetwork |  
Published : Jul 16, 2025, 12:45 AM ISTUpdated : Jul 16, 2025, 03:38 AM IST
Nimisha Priya

ಸಾರಾಂಶ

ಮಹತ್ವದ ಬೆಳವಣಿಗೆಯೊಂದರಲ್ಲಿ ಯೆಮೆನ್‌ನಲ್ಲಿ ಸ್ಥಳೀಯ ವ್ಯಕ್ತಿಯ ಹತ್ಯೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್‌ ನಿಮಿಷ ಪ್ರಿಯಾರಿಗೆ ಗಲ್ಲುಶಿಕ್ಷೆಯಿಂದ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ.

 ನವದೆಹಲಿ :  ಮಹತ್ವದ ಬೆಳವಣಿಗೆಯೊಂದರಲ್ಲಿ ಯೆಮೆನ್‌ನಲ್ಲಿ ಸ್ಥಳೀಯ ವ್ಯಕ್ತಿಯ ಹತ್ಯೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್‌ ನಿಮಿಷ ಪ್ರಿಯಾರಿಗೆ ಗಲ್ಲುಶಿಕ್ಷೆಯಿಂದ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ.

ನಿಮಿಷ ಪ್ರಿಯಾರನ್ನು ಈ ಹಿಂದೆ ನಿರ್ಧರಿಸಿದಂತೆ ಜು.16ರಂದು ಅಂದರೆ ಬುಧವಾರ ಗಲ್ಲಿಗೇರಿಸಲು ನಿರ್ಧರಿಸಲಾಗಿತ್ತು. ಆದರೆ, ಇದೀಗ ಅಲ್ಲಿನ ಸ್ಥಳೀಯ ಅಧಿಕಾರಿಗಳು ಗಲ್ಲು ಶಿಕ್ಷೆಯನ್ನು ಕೊನೇ ಕ್ಷಣದಲ್ಲಿ ಮುಂದೂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಯಾಕಾಗಿ ಮತ್ತು ಎಷ್ಟು ದಿನಗಳ ವರೆಗೆ ಗಲ್ಲು ಶಿಕ್ಷೆ ಜಾರಿಯನ್ನು ಮುಂದೂಡಲಾಗಿದೆ ಎಂಬ ಮಾಹಿತಿ ಇಲ್ಲದಿದ್ದರೂ ಸದ್ಯಕ್ಕಂತು ನಿಮಿಷಾ ಪ್ರಿಯಾಗೆ ಜೀವದಾನ ಸಿಕ್ಕಂತಾಗಿದೆ.

ಭಾರತದ ಯತ್ನ:

ನಿಮಿಷ ಪ್ರಿಯಾಳನ್ನು ಮರಣದಂಡನೆಯಿಂದ ಪಾರು ಮಾಡಲು ಕೇಂದ್ರ ಸರ್ಕಾರ ಮತ್ತು ಆಕೆಯ ಕುಟುಂಬ ಸಾಧ್ಯವಾದ ಎಲ್ಲಾ ಪ್ರಯತ್ನ ನಡೆಸುತ್ತಾ ಬಂದಿದೆ. ಸನಾ ನಗರವು ಯೆಮೆನ್‌ನ ಹೌತಿ ಬಂಡುಕೋರರ ಹಿಡಿತದಲ್ಲಿದ್ದು, ಅವರ ಜತೆಗೆ ಭಾರತವು ಯಾವುದೇ ರಾಜತಾಂತ್ರಿಕ ಸಂಬಂಧ ಹೊಂದಿರದ ಹಿನ್ನೆಲೆಯಲ್ಲಿ ನಿಮಿಷ ಪ್ರಿಯಾಳ ಬಿಡುಗಡೆಗೆ ಸಮಸ್ಯೆಯಾಗುತ್ತಿದೆ. ಬ್ಲಡ್‌ ಮನಿ ಅಂದರೆ ಸಂತ್ರಸ್ತ ಕುಟುಂಬಕ್ಕೆ ಹಣ ನೀಡಿ ನಿಮಿಷಾ ಪ್ರಿಯಾಗೆ ಕ್ಷಮಾದಾನ ಕೊಡಿಸುವ ಸಂಬಂಧ ಆಕೆಯ ಕುಟುಂಬ ಮಾತುಕತೆ ನಡೆಸುತ್ತಿದೆ. ಆದರೆ ಯಾವುದೂ ಅಂತಿಮವಾಗಿಲ್ಲ.

ಮುಂದೂಡಿಕೆ ಹಿಂದೆ ಖಮೇನಿ ಪಾತ್ರ?:

ಯೆಮೆನ್‌ ರಾಜಧಾನಿ ಸನಾ ಸರ್ಕಾರದ ಬದಲು ಹೌತಿ ಉಗ್ರರ ಹಿಡಿತದಲ್ಲಿದೆ. ಹೀಗಾಗಿ ಭಾರತ ಸರ್ಕಾರವು ಹೌತಿ ಉಗ್ರರಿಗೆ ಆಪ್ತರಾಗಿರುವ ಇರಾನ್ ಪರಮೋಚ್ಚ ನಾಯಕ ಅಯತೋಲ್ಲಾ ಅಲಿ ಖಮೇನಿಗೆ ನಿಮಿಷಪ್ರಿಯಾ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ. ಖಮೇನಿ ಮೂಲಕ ಹೌತಿ ಉಗ್ರರ ಮನವೊಲಿಸಿ ನಿಮಿಷಪ್ರಿಯಾಗೆ ಕ್ಷಮಾದಾನ ಕೊಡಿಸುವಂತೆ ಕೋರಿದೆ. ಇದರ ಫಲವೇ ಈಗ ಗಲ್ಲು ಮುಂದೂಡಿಕೆ ಎನ್ನಲಾಗಿದೆ.

ಇದರ ನಡುವೆ ಮರಣದಂಡನೆಯನ್ನು ನಿಲ್ಲಿಸಲು ಕೇರಳದ ಮುಖ್ಯ ಮೌಲ್ವಿ ಅಬೂಬಕರ್ ಮುಸ್ಲಿಯಾರ್ ಅವರ ಸೂಚನೆ ಮೇರೆಗೆ ಯೆಮೆನ್‌ನಲ್ಲಿನ ಕೆಲವು ಸೂಫಿ ಸಂತರು ಮಾತುಕತೆ ಮೂಲಕ ಕ್ಷಣದ ಪ್ರಯತ್ನಗಳು ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಕರಣವೇನು?:

2017ರಲ್ಲಿ ತನಗೆ ಕಿರುಕುಳ ನೀಡುತ್ತಿದ್ದ ಯೆಮೆನ್‌ ಪ್ರಜೆಯನ್ನು ಹತ್ಯೆ ಮಾಡಿದ ಆರೋಪದಲ್ಲಿ 2020ರಲ್ಲಿ ಅಲ್ಲಿನ ನ್ಯಾಯಾಲಯವು ನಿಮಿಷಾ ಪ್ರಿಯಾಗೆ ಮರಣದಂಡನೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ನಿಮಿಷ ಪ್ರಿಯಾ ಕುಟುಂಬದವರು ಸಲ್ಲಿಸಿದ್ದ ಅರ್ಜಿಯನ್ನು ನ.23ರಂದು ಅಲ್ಲಿನ ಸುಪ್ರೀಂ ನ್ಯಾಯಾಂಗ ಸಮಿತಿ ತಿರಸ್ಕರಿಸಿತ್ತು.

PREV
Read more Articles on

Latest Stories

ನಿಮಿಷಪ್ರಿಯಾಗೆ ಕ್ಷಮಾದಾನ ಬೇಡ, ಗಲ್ಲಾಗಲಿ
ಅಕ್ಬರ್‌ ಕ್ರೂರ, ಆದರೆ ಸಹಿಷ್ಣು, ಬಾಬರ್‌ ನಿರ್ದಯಿ: ಕೇಂದ್ರೀಯ ಪಠ್ಯ
ದೇಶದಲ್ಲಿ 9 ಲಕ್ಷ ಮಕ್ಕಳು ಒಂದೂ ಲಸಿಕೆ ಪಡೆದಿಲ್ಲ: ವರದಿ