ದೇಶದಲ್ಲಿ 1,000ಕ್ಕೂ ಹೆಚ್ಚು ಸಕ್ರಿಯ ಕೋವಿಡ್‌ ಪ್ರಕರಣ

KannadaprabhaNewsNetwork |  
Published : May 27, 2025, 12:58 AM ISTUpdated : May 27, 2025, 04:27 AM IST
ಕೊರೋನಾ | Kannada Prabha

ಸಾರಾಂಶ

 ಕೊರೋನಾ ಮಹಾಮಾರಿ ಮತ್ತೆ ಮುನ್ನೆಲೆಗೆ ಬಂದಿದೆ. ದೇಶದಲ್ಲಿ 1000ಕ್ಕೂ ಅಧಿಕ ಸಕ್ರಿಯ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ಕೇರಳ, ಮಹಾರಾಷ್ಟ್ರ ಮತ್ತು ದೆಹಲಿ ಮುಂಚೂಣಿಯಲ್ಲಿವೆ.

ನವದೆಹಲಿ: ಕಳೆದೆರಡು ವರ್ಷಗಳಲ್ಲಿ ತೆರೆಮರೆಗೆ ಸರಿದಿದ್ದ ಕೊರೋನಾ ಮಹಾಮಾರಿ ಮತ್ತೆ ಮುನ್ನೆಲೆಗೆ ಬಂದಿದೆ. ದೇಶದಲ್ಲಿ 1000ಕ್ಕೂ ಅಧಿಕ ಸಕ್ರಿಯ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ಕೇರಳ, ಮಹಾರಾಷ್ಟ್ರ ಮತ್ತು ದೆಹಲಿ ಮುಂಚೂಣಿಯಲ್ಲಿವೆ. ವಿಶೇಷವೆಂದರೆ ಈ ಹಿಂದೆ ಕೋವಿಡ್‌ ದೇಶವನ್ನು ಆವರಿಸಿದ್ದ ವೇಳೆಯೂ ಈ ರಾಜ್ಯಗಳೇ ಸೋಂಕಿತರ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದ್ದವು.

ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ತನ್ನ ಪೋರ್ಟಲ್‌ನಲ್ಲಿ ಮಾಹಿತಿ ನೀಡಿದ್ದು, ‘ದೇಶದಲ್ಲಿ ಒಟ್ಟು 1009 ಸಕ್ರಿಯ ಕೋವಿಡ್‌ ಸೋಂಕಿರತರಿದ್ದು, ಇದರಲ್ಲಿ 752 ಪ್ರಕರಣಗಳು ಇತ್ತೀಚಿನದ್ದಾಗಿವೆ. ಕೇರಳದಲ್ಲಿ ಅತಿಹೆಚ್ಚು 430 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ಮಹಾರಾಷ್ಟ್ರದಲ್ಲಿ 209, ದೆಹಲಿಯಲ್ಲಿ 104, ಕರ್ನಾಟಕದಲ್ಲಿ 47 ಸೋಂಕಿತರಿದ್ದಾರೆ. 

ಅಂಡಮಾನ್ ನಿಕೋಬಾರ್, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರಗಳಲ್ಲಿ ಪ್ರಸ್ತುತ ಯಾವುದೇ ಸಕ್ರಿಯ ಪ್ರಕರಣಗಳು ವರದಿಯಾಗಿಲ್ಲ’ ಎಂದು ತಿಳಿಸಿದೆ.

ದೇಶಕ್ಕೆ 2020ರಲ್ಲಿ ಕೋವಿಡ್‌ ಪ್ರವೇಶ ಮಾಡಿ ಸುಮಾರು 2 ವರ್ಷ ಕಾಡಿದ್ದ ವೇಳೆ 4,45,11,545 ಜನರಲ್ಲಿ ಸೋಂಕು ಕಾಣಿಸಿಕೊಂಡು ಅವರು ಗುಣಮುಖರಾಗಿದ್ದರು. 5,33,673 ಜನ ಸಾವನ್ನಪ್ಪಿದ್ದರು.

2 ವರ್ಷ ಬಳಿಕ 1000 ದಾಟಿದ ಸಕ್ರಿಯ ಕೇಸ್‌

ನವದೆಹಲಿ: ದೇಶದಲ್ಲಿನ ಕೋವಿಡ್ ಸಕ್ರಿಯ ಪ್ರಕರಣಗಳು ಸೋಮವಾರ 1 ಸಾವಿರ ದಾಟಿದೆ. ಸಕ್ರಿಯ ಕೇಸು ಹೀಗೆ 1000ದ ಗಡಿ ದಾಟುತ್ತಿರುವುದು 2 ವರ್ಷದ ಬಳಿಕ. ಕೋವಿಡ್‌ 3ನೇ ಅಲೆ ಇದ್ದಾಗ 2023ರ ಏಪ್ರಿಲ್‌ನಲ್ಲಿ ಇಷ್ಟು ಪ್ರಮಾಣದ ಪ್ರಕರಣಗಳು ದಾಖಲಾಗಿದ್ದವು. ಬಳಿಕ ಕ್ರಮೇಣ ಇಳಿಮುಖ ಕಂಡ ಕೋವಿಡ್‌ ತೀರಾ ವಿರಳವಾಗಿತ್ತು. ಈಗ ಮತ್ತೆ ಏರುಗತಿ ಹಿಡಿದಿದೆ.

ಕೋವಿಡ್ ಬಗ್ಗೆ ಆತಂಕ ಬೇಡ, ಎಚ್ಚರಿಕೆ ಇರಲಿ: ಐಸಿಎಂಆರ್

ನವದೆಹಲಿ: ದೇಶದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವ ನಡುವೆ, ‘ಸದ್ಯಕ್ಕೆ ಸೋಂಕಿನ ತೀವ್ರತೆ ಕಡಿಮೆಯಿದ್ದು, ಆತಂಕ ಪಡುವ ಅಗತ್ಯವಿಲ್ಲ. ಆದರೆ ನಾವು ಜಾಗರೂಕರಾಗಿದ್ದು, ಯಾವಾಗಲೂ ಸಿದ್ಧರಾಗಿರಬೇಕು’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಹಾನಿರ್ದೇಶಕ ಡಾ. ರಾಜೀವ್ ಬೆಹ್ಲ್ ತಿಳಿಸಿದ್ದಾರೆ.

ಹೊಸದಾಗಿ ಪತ್ತೆಯಾಗುತ್ತಿರುವ ಕೋವಿಡ್ ರೂಪಾಂತರಿಗಳ ಕುರಿತು ಮಾಹಿತಿ ನೀಡಿದ ಅವರು, ‘ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿನ ಜೀನೋಮ್ ಮಾದರಿಗಳನ್ನು ಪರೀಕ್ಷಿಸಿದಾಗ ಎಲ್‌ಎಫ್.7, ಎಕ್ಸ್‌ಎಫ್‌ಜಿ, ಜೆಎನ್.1 ಮತ್ತು ಎನ್‌ಬಿ.1.8.1 ಎಂಬ ಹೊಸ ರೂಪಾಂತರಿಗಳು ಕಂಡುಬಂದಿವೆ. ಇವು ಒಮಿಕ್ರಾನ್‌ನ ಉಪರೂಪಾಂತರಿಗಳಾಗಿದ್ದು, ಹೆಚ್ಚಿನ ತೀವ್ರತೆಯನ್ನು ಹೊಂದಿಲ್ಲ. ಇತರ ಪ್ರದೇಶಗಳ ಮಾದರಿಗಳನ್ನು ಸಹ ಪರೀಕ್ಷಿಸಲಾಗುತ್ತಿದೆ. 

ಇನ್ನೂ ಹೆಚ್ಚಿನ ರೂಪಾಂತರಿಗಳು ಇವೆಯೇ ಎಂಬುದನ್ನು ಇನ್ನು 2 ದಿನಗಳಲ್ಲಿ ತಿಳಿಯಲಾಗುವುದು’ ಎಂದರು.‘ಈ ಬಾರಿ ಕೋವಿಡ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿಲ್ಲ. ಹೊಸ ರೂಪಾಂತರಿಗಳು ನಮ್ಮ ಹಿಂದಿನ ರೋಗನಿರೋಧಕ ಶಕ್ತಿಯನ್ನು ತಪ್ಪಿಸುತ್ತಿವ ಸಾಧ್ಯತೆಯಿರುತ್ತದೆ. ಆದರೆ ಈ ಬಾರಿ ಹಾಗೆ ಚಿಂತಿಸುವ ಅಗತ್ಯವೂ ಇಲ್ಲ. ಗಂಭೀರ ಪ್ರಕರಣಗಳ ಶೇಕಡಾವಾರು ಪ್ರಮಾಣವೂ ಈ ಬಾರಿ ಕಡಿಮೆಯಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸಾರ್ವಜನಿಕರು ಜಾಗರೂಕರಾಗಿರಬೇಕು. ಆದರೆ ಚಿಂತಿಸುವ ಅಗತ್ಯವಿಲ್ಲ’ ಎಂದರು.

ಲಸಿಕೆ ಪಡೆಯುವ ಅಗತ್ಯವಿಲ್ಲ:ಕಳೆದ ಬಾರಿಯಂತೆ ಈ ಬಾರಿಯೂ ಕೋವಿಡ್ ಬೂಸ್ಟರ್ ಡೋಸ್ ಪಡೆಯುವ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬೆಹ್ಲ್, ‘ಲಸಿಕೆ ಪಡೆಯುವ ಅಗತ್ಯವಿಲ್ಲ. ಭಾರತ ಲಸಿಕೆ ತಯಾರಿಸುವ ಸಾಮರ್ಥ್ಯ ಹೊಂದಿದೆ. ಅಗತ್ಯಬಿದ್ದರೆ ತಕ್ಷಣದಲ್ಲಿ ನಾವು ಲಸಿಕೆಯನ್ನು ಸಿದ್ಧಪಡಿಸಬಲ್ಲೆವು’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ