ಬೀದಿ ನಾಯಿಗಳನ್ನು ಶೆಡ್‌ಗೆ ಕಳುಹಿಸಲೇಬೇಡಿ ಎನ್ನುವವರು ಅವುಗಳ ಹೊಣೆ ಹೊರಲಿ: ಸುಪ್ರೀಂ

KannadaprabhaNewsNetwork |  
Published : Aug 15, 2025, 01:00 AM ISTUpdated : Aug 15, 2025, 04:28 AM IST
ಸುಪ್ರೀಂ ಕೋರ್ಟ್‌ | Kannada Prabha

ಸಾರಾಂಶ

‘ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಲು ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಳ್ಳದಿರುವುದೇ ಮೂಲ ಕಾರಣ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ.

 ನವದೆಹಲಿ :  ‘ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಲು ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಳ್ಳದಿರುವುದೇ ಮೂಲ ಕಾರಣ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ. ಬೀದಿ ನಾಯಿಗಳನ್ನು ಶೆಡ್‌ಗೆ ಕಳುಹಿಸುವುದು ಬೇಡ ಎನ್ನುವವರು ಅವುಗಳು ಉಂಟು ಮಾಡುವ ಸಮಸ್ಯೆಯ ಹೊಣೆ ಹೊತ್ತುಕೊಳ್ಳಬೇಕು ಎಂದು ಹೇಳಿದೆ. 

ಇದೇ ವೇಳೆ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಸಾಗಿಸಬೇಕೆಂಬ ಆ.11ರ ತನ್ನ ಆದೇಶಕ್ಕೆ ಮಧ್ಯಂತರ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ಕುರಿತ ಆದೇಶವನ್ನು ಕಾಯ್ದಿರಿಸಿದೆ.ಬೀದಿ ನಾಯಿಗಳನ್ನು ಶೆಡ್‌ಗಳಿಗೆ ಸ್ಥಳಾಂತರ ಮಾಡುವಂತೆ ದ್ವಿಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಾಧೀಶ ನ್ಯಾ। ಬಿ.ಆರ್. ಗಾವಾಯಿ ಅವರ ಸೂಚನೆ ಮೇರೆ ರಚಿತವಾಗಿದ್ದ ನ್ಯಾ.ವಿಕ್ರಂನಾಥ್‌ ನೇತೃತ್ವದ ತ್ರಿಸದಸ್ಯ ಪೀಠವು, ಗುರುವಾರ ಆರಂಭಿಸಿತು.

ಈ ವೇಳೆ ವಾದ ಪ್ರತಿವಾದ ಆಲಿಸಿದ ಪೀಠವು, ‘ಇಡೀ ಸಮಸ್ಯೆಗೆ ಸ್ಥಳೀಯ ಅಧಿಕಾರಿಗಳ ನಿಷ್ಕ್ರಿಯತೆಯೇ ಕಾರಣ. ನೀವು (ಸರ್ಕಾರ) ಸಂಸತ್ತಿನಲ್ಲಿ ನಿಯಮಗಳನ್ನು (ನಾಯಿಗಳ ಸಂತಾನ ನಿಯಂತ್ರಣ ನಿಯಮ) ರೂಪಿಸುತ್ತೀರಿ. ಶಾಸನ ರಚನೆ ಆಗುತ್ತದೆ. ಆದರೆ ಅವುಗಳನ್ನು ಜಾರಿ ಮಾಡುವುದೇ ಇಲ್ಲ. ಇದು ಸಮಸ್ಯೆಯನ್ನು ಸೃಷ್ಟಿಸುತ್ತದೆ’ ಎಂದಿತು.

ನಾಯಿಗಳ ರಕ್ಷಣೆ ಕೋರಿ ಕೋರ್ಟ್‌ ಮೆಟ್ಟಿಲೇರಿದ ಸ್ವಯಂಸೇವಾ ಸಂಸ್ಥೆಗಳನ್ನೂ ತರಾಟೆಗೆ ತೆಗೆದುಕೊಂಡ ಪೀಠ, ‘ಒಂದೆಡೆ ಮನುಷ್ಯರು ಬಳಲುತ್ತಿದ್ದಾರೆ. ಮತ್ತೊಂದೆಡೆ, ಪ್ರಾಣಿ ಪ್ರಿಯರು ಪ್ರಾಣಿಗಳನ್ನು ಸಹ ಘನತೆಯಿಂದ ನಡೆಸಿಕೊಳ್ಳಬೇಕೆಂದು ಬಯಸುತ್ತಾರೆ. ಪ್ರಾಣಿಪ್ರಿಯ ಎನ್‌ಜಿಒಗಳು ಬಹಳಷ್ಟು ಶಬ್ದ ಮಾಡುತ್ತವೆ. ಆದರೆ ನಿಜವಾಗಿಯೂ ಅವರಿಗೆ ಏನು ಮಾಡಬೇಕೆಂದು ತಿಳಿದೇ ತಿಳಿದಿಲ್ಲ. ಆ ನಿಯಮಗಳನ್ನು (ಪ್ರಾಣಿ ಜನನ ನಿಯಂತ್ರಣ ನಿಯಮಗಳು) ಜಾರಿಗೆ ತರಲು ಕೋರಿ ಅವರು ಮೊದಲೇ ಇಲ್ಲಿಗೆ ಬರಬೇಕಿತ್ತು. ಏನೂ ಆಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

‘ನ್ಯಾಯಾಲಯದ ಆ.11ರ ತೀರ್ಪಿಗೆ ಮಧ್ಯಂತರ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿರುವ ಎಲ್ಲರೂ ಬೀದಿನಾಯಿಗಳು ಏನೇ ಮಾಡಿದರೂ ಹೊಣೆ ಹೊತ್ತುಕೊಳ್ಳಬೇಕು’ ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು.

37 ಲಕ್ಷ ನಾಯಿ ಕಡಿತ:

ದೆಹಲಿ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ನಾಯಿ ಕಚ್ಚಿ ಉಂಟಾದ ರೇಬಿಸ್‌ನಿಂದಾಗಿ ಮಕ್ಕಳು ಸಾಯುತ್ತಿದ್ದಾರೆ. ಬೀದಿ ನಾಯಿಗಳ ಸಮಸ್ಯೆ ಪರಿಹಾರ ಮಾಡಬೇಕೇ ಹೊರತು ಅದನ್ನು ಪ್ರಶ್ನಿಸುವಂತಾಗಬಾರದು. ಹಾಗಂತ ಇಲ್ಲಿ ಯಾರೂ ಪ್ರಾಣಿ ವಿರೋಧಿಗಳಿಲ್ಲ’ ಎಂದು ಸ್ಪಷ್ಟಪಡಿಸಿದರು.

ಇದಲ್ಲದೆ, ‘ಪ್ರಜಾಪ್ರಭುತ್ವದಲ್ಲಿ ಒಬ್ಬರು ಬಹುಮತದವರಿರುತ್ತಾರೆ ಮತ್ತು ಒಬ್ಬರು ಮೌನವಾಗಿ ಬಳಲುತ್ತಿರುತ್ತಾರೆ. ಕೋಳಿ ಹಾಗೂ ಮೊಟ್ಟೆ ತಿಂದು ನಂತರ ತಮ್ಮನ್ನು ತಾವು ಪ್ರಾಣಿ ಪ್ರಿಯರು ಎಂದು ಹೇಳಿಕೊಳ್ಳುತ್ತಾರೆ. ಇಂಥ ವೀಡಿಯೊಗಳನ್ನು ನಾವು ನೋಡಿದ್ದೇವೆ. ಸಂತಾನಹರಣ ಚಿಕಿತ್ಸೆಯ ಆಯ್ಕೆಯೂ ನಮ್ಮ ಮುಂದಿದೆ. ಆದರೆ ಅದು ರೇಬೀಸ್ ಅನ್ನು ನಿಲ್ಲಿಸುವುದಿಲ್ಲ. ಇದು ಪರಿಹರಿಸಲೇಬೇಕಾದ ಸಮಸ್ಯೆ. 

ನಾಯಿ ದಾಳಿಗೆ ಒಳಗಾಗಿ ಮಕ್ಕಳು ಸಾಯುತ್ತಿದ್ದಾರೆ. ಇಡೀ ದೇಶದಲ್ಲಿ ಒಂದು ವರ್ಷದಲ್ಲಿ 37 ಲಕ್ಷ ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಇದು ದಿನಕ್ಕೆ 1000 ನಾಯಿ ಕಡಿತಕ್ಕೆ ಸಮ. 305 ಜನ ಸಾವನ್ನಪ್ಪಿದ್ದಾರೆ. ಇವರಲ್ಲಿ 15 ವರ್ಷಕ್ಕಿಂತ ಕೆಳಗಿನ ಮಕ್ಕಳೇ ಹೆಚ್ಚು. 100 ನಾಯಿಗಳಲ್ಲಿ 4 ನಾಯಿ ವಿಷಕಾರಿ ಆಗಿರುತ್ತವೆ. ಇವನ್ನು ಮನೆಯಲ್ಲಿ ಇಟ್ಟುಕೊಳ್ಳಲು ಆಗದು. ಅವನ್ನು ಪ್ರತ್ಯೇಕವಾಗಿಯೇ ಇಡಬೇಕು. ಬೀದಿ ನಾಯಿಗಳ ಕಾರಣ ಮಕ್ಕಳು ಹೊರಗೆ ಆಟ ಕೂಡ ಆಡಲು ಆಗುತ್ತಿಲ್ಲ. ಹೀಗಾಗಿ ಮಾತನಾಡುತ್ತಿರುವವರಿಗಿಂತ ಮೌನವಾಗಿ ಬಳಲುತ್ತಿರುವವರ ಸಂಖ್ಯೆ ಹೆಚ್ಚು. ಇದನ್ನು ಆಲಿಸಿ ಕೋರ್ಟು ನ್ಯಾಯ ಒದಗಿಸಬೇಕು. ಇಲ್ಲಿ ನಿಯಮಗಳನ್ನು ನೋಡುತ್ತ ಕೂರಬಾರದು’ ಎಂದು ಪ್ರಖರ ವಾದ ಮಂಡಿಸಿದರು.

ಇದಕ್ಕೆ ತಿರುಗೇಟು ನೀಡಿದ ಎನ್‌ಜಿಒ ಪರ ವಕೀಲರಾದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಹಾಗೂ ಅಭಿಷೇಕ್‌ ಸಿಂಘ್ವಿ ಅ‍ವರು, ‘ಈ ವಿಚಾರ ಕುರಿತು ಗಂಭೀರ ಚರ್ಚೆಯ ಅಗತ್ಯವಿದೆ. ಸಮುದಾಯವು ನಾಯಿಗಳಿಗೆ ಆಹಾರವನ್ನು ನೀಡುತ್ತದೆ. ಅಂಥದ್ದರಲ್ಲಿ ಅವುಗಳನ್ನು ಹೊರಗೆ ತೆಗೆದುಕೊಂಡು ಹೋಗಿ ಶೆಡ್‌ನಲ್ಲಿ ಇರಿಸಿ ಎಂದು ನೀವು ಹೇಳುತ್ತೀರಿ. ದಿಲ್ಲಿಯಲ್ಲಿ ಆಶ್ರಯ ತಾಣಗಳೇ ಇಲ್ಲ. ಸರ್ಕಾರವು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿ ಅವುಗಳಿಗೆ ಸಾಕಷ್ಟು ಆಶ್ರಯ ತಾಣ ನಿರ್ಮಾಣವನ್ನೇ ಮಾಡಿಲ್ಲ’ ಎಂದು ದೂರಿದರು.

ಆಗ ಪ್ರತಿಕ್ರಿಯೆ ನೀಡಿದ ಪೀಠ, ‘ಈ ಸಮಸ್ಯೆಗೆ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳದ್ದೇ ಕಾರಣ’ ಎಂದು ಹೇಳಿ ದ್ವಿಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕೇ ಬೇಡವೇ ಎಂಬ ತೀರ್ಪು ಕಾಯ್ದಿರಿಸಿತು.

ಖಡಕ್ಕಾಗಿ ನುಡಿದಿದ್ದ ದ್ವಿಸದಸ್ಯ ಪೀಠ:

ಆ.11ರಂದು ತೀರ್ಪು ನೀಡಿದ್ದ ದ್ವಿಸದಸ್ಯ ಪೀಠ, ‘ಬೀದಿ ನಾಯಿಗಳನ್ನು ಸರ್ಕಾರ ಶೀಘ್ರ ಶೆಡ್‌ಗೆ ಸ್ಥಳಾಂತರಿಸಬೇಕು. 8 ವಾರದಲ್ಲಿ ತಲಾ 5000 ನಾಯಿ ಇರಬಲ್ಲ ಶೆಡ್‌ಗಳು ನಿರ್ಮಾಣ ಆಗಬೇಕು. ಬೀದಿ ನಾಯಿಗಳ ಬಗ್ಗೆ ಅಷ್ಟು ಕಾಳಜಿ ಇದ್ದರೆ ಮನೆಗೆ ಒಯ್ದು ಸಾಕಿಕೊಳ್ಳಿ. ನಮ್ಮ ಆದೇಶಕ್ಕೆ ಅಡ್ಡ ಬಂದರೆ ಕ್ರಮ ಕೈಗೊಳ್ಳುತ್ತೇವೆ’ ಎಂದಿತ್ತು.

ಎನ್‌ಜಿಗಳು ಜಾಸ್ತಿಶಬ್ದ ಮಾಡುತ್ತಿವೆ ಒಂದೆಡೆ ಮನುಷ್ಯರು ಬಳಲುತ್ತಿದ್ದಾರೆ. ಮತ್ತೊಂದೆಡೆ ಪ್ರಾಣಿಗಳನ್ನೂ ಘನತೆಯಿಂದ ನಡೆಸಿಕೊಳ್ಳಬೇಕು ಎಂದು ಪ್ರಾಣಿಪ್ರಿಯರು ಬಯಸುತ್ತಿದ್ದಾರೆ. ಪ್ರಾಣಿ ಪ್ರಿಯ ಎನ್‌ಜಿಒಗಳು ಬಹಳಷ್ಟು ಶಬ್ದ ಮಾಡುತ್ತಿವೆ. ಆದರೆ ಏನು ಮಾಡಬೇಕು ಎಂದು ಅವಕ್ಕೆ ತಿಳಿದೇ ಇಲ್ಲ.

- ಸುಪ್ರೀಂಕೋರ್ಟ್‌

ಸರ್ಕಾರದ ವಾದ ಏನು? - ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಬಹುದು. ಆದರೆ ಅದು ರೇಬೀಸ್‌ ಅನ್ನು ನಿಲ್ಲಿಸುವುದಿಲ್ಲ

- ನಾಯಿ ದಾಳಿಗೆ ಒಳಗಾಗಿ ಮಕ್ಕಳು ಸಾಯುತ್ತದ್ದಾರೆ. ಒಂದೇ ವರ್ಷದಲ್ಲಿ 37 ಲಕ್ಷ ನಾಯಿ ಕಡಿತ ಕೇಸ್‌ ದಾಖಲಾಗಿವೆ

- 305 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 15 ವರ್ಷಕ್ಕಿಂತ ಕೆಳಗಿನ ಮಕ್ಕಳೇ ಹೆಚ್ಚು. 100 ನಾಯಿಗಳಲ್ಲಿ 4 ವಿಷಕಾರಿ

- ಬೀದಿ ನಾಯಿಗಳ ಕಾರಣದಿಂದಾಗಿ ಮಕ್ಕಳು ಮನೆಯಿಂದ ಹೊರಗೆ ಹೋಗಿ ಆಟವಾಡಲು ಕೂಡ ಆಗುತ್ತಿಲ್ಲ

- ನಾಯಿಗಳ ವಿಷಯದಲ್ಲಿ ಮಾತನಾಡುವವರು ಬಹುಸಂಖ್ಯಾತರಂತೆ ಆಡುತ್ತಿದ್ದಾರೆ. ಮೌನವಾಗಿರುವವರೇ ಬಹುಸಂಖ್ಯಾತರು

- ಇಲ್ಲಿ ಯಾರೂ ಪ್ರಾಣಿ ವಿರೋಧಿಗಳಲ್ಲ. ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರ ಬೇಕು: ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ

PREV
Read more Articles on

Recommended Stories

65 ಲಕ್ಷ ಬಿಹಾರ ಮತದಾರರ ಕೈಬಿಟ್ಟಿದ್ದೇಕೆ? : ಸುಪ್ರೀಂ ಪ್ರಶ್ನೆ
ಶುಭಾಂಶು ಶುಕ್ಲಾ ವಾರಾಂತ್ಯಕ್ಕೆ ಭಾರತಕ್ಕೆ