ಬಜೆಟ್‌ಗೆ ಜುಲೈವರೆಗೆ ಕಾಯಿರಿ: ಚುನಾವಣೆಗೂ ಮುನ್ನ ಉಚಿತ ಕೊಡುಗೆ ಘೋಷಿಸುವ ಸಂಪ್ರದಾಯಕ್ಕೆ ಎಳ್ಳುನೀರು!

KannadaprabhaNewsNetwork | Updated : Feb 02 2024, 07:25 AM IST

ಸಾರಾಂಶ

ಲೋಕಸಭೆ ಚುನಾವಣೆ ಮುನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗುರುವಾರ ಮಧ್ಯಂತರ ಬಜೆಟ್‌ ಮಂಡಿಸಿದೆ. ಈ ಬಜೆಟ್‌ ಕೇವಲ ಚುನಾವಣೆ ಪೂರ್ವದ್ದಾಗಿದ್ದು, ಜುಲೈನಲ್ಲಿ ಪೂರ್ಣಪ್ರಮಾಣದ ಆಯವ್ಯಯ ಪತ್ರ ಮಂಡನೆ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ಬಜೆಟ್‌ ಎಕ್ಸ್‌ಪರ್ಟ್‌

ಲೋಕಸಭೆ ಚುನಾವಣೆ ಮುನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗುರುವಾರ ಮಧ್ಯಂತರ ಬಜೆಟ್‌ ಮಂಡಿಸಿದೆ. ಈ ಬಜೆಟ್‌ ಕೇವಲ ಚುನಾವಣೆ ಪೂರ್ವದ್ದಾಗಿದ್ದು, ಜುಲೈನಲ್ಲಿ ಪೂರ್ಣಪ್ರಮಾಣದ ಆಯವ್ಯಯ ಪತ್ರ ಮಂಡನೆ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಹಾಗಾಗಿ ಈ ಆಯವ್ಯಯ ಪತ್ರದಲ್ಲಿ ಯಾವುದೇ ಹೊಸ ಯೋಜನೆಗಳನ್ನು ಘೋಷಿಸದೆ ಕೇವಲ ಹಳೆ ಯೋಜನೆಗಳನ್ನು ಕೊಂಚ ಪರಿಷ್ಕರಿಸಿ ಮಂಡಿಸಿದ್ದಾರೆ. ಇಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಮುಂಗಡ ಪತ್ರದ ಸಂಕ್ಷಿಪ್ತ ವರದಿ ಇದೆ.

56 ನಿಮಿಷದ ಬಜೆಟ್‌:2020ರಲ್ಲಿ ಬರೋಬ್ಬರಿ 2.42 ಗಂಟೆ ಬಜೆಟ್‌ ಮಂಡಿಸುವ ಮೂಲಕ ಅತ್ಯಂತ ಸುದೀರ್ಘ ಅವಧಿಯ ಬಜೆಟ್ ಮಂಡಿಸಿದ ದಾಖಲೆ ಹೊಂದಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಗುರುವಾರ ಕೇವಲ 56 ನಿಮಿಷದಲ್ಲಿ ಬಜೆಟ್‌ ಭಾಷಣ ಮುಗಿಸಿದರು.

ಜುಲೈನಲ್ಲಿ ಪೂರ್ಣಾವಧಿ ಬಜೆಟ್ ಮಂಡನೆ ಶಪಥ:ವಿಕಸಿತ ಭಾರತ ಗುರಿಯ ಸಾಕಾರಕ್ಕೆ ಬೇಕಾದ ವಿಸ್ತೃತವಾದ ಮಾರ್ಗಸೂಚಿಯನ್ನು ಜುಲೈನಲ್ಲಿ ಮಂಡನೆ ಮಾಡುವ ಪೂರ್ಣಾವಧಿ ಬಜೆಟ್‌ನಲ್ಲಿ ತೆರೆದಿಡುತ್ತೇವೆ ಎನ್ನುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಪ್ರಬಲ ವಿಶ್ವಾಸ ವ್ಯಕ್ತಪಡಿಸಿದ ನಿರ್ಮಲಾ.

ಮಾಡಿದ್ದೇನು?

80 ಕೋಟಿ ಜನಕ್ಕೆ ರೇಷನ್‌ ಸಿಗ್ತಿದೆ: ಆಹಾರ ಚಿಂತೆ ಇಲ್ಲಆಹಾರ ಕುರಿತು ಜನರಿಗೆ ಇದ್ದ ಚಿಂತೆಗಳನ್ನೇ ಹೋಗಲಾಡಿಸಿದ್ದೇವೆ. 80 ಕೋಟಿ ಜನರಿಗೆ ಉಚಿತವಾಗಿ ಪಡಿತರ ನೀಡಲಾಗುತ್ತಿದೆ. ಅನ್ನದಾತನ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಲಕಾಲಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಆದಾಯ ಹೆಚ್ಚಾಗಿದೆ.

ಹಳ್ಳಿಗಷ್ಟೇ ಅಲ್ಲ, ಪ್ರತಿ ಮನೆ ಪ್ರತಿ ವ್ಯಕ್ತಿಗೂ ಅಭಿವೃದ್ಧಿ:ಈ ಮೊದಲು ಗ್ರಾಮದವರೆಗಿನ ಅಭಿವೃದ್ಧಿ ಕಲ್ಪನೆ ಇತ್ತು. ಅದರಿಂದ ನಿರ್ಗಮಿಸಿದ್ದೇವೆ. ಎಲ್ಲರಿಗೂ ವಸತಿ, ಪ್ರತಿ ಮನೆಗೂ ನೀರು, ಎಲ್ಲರಿಗೂ ವಿದ್ಯುತ್‌, ಅಡುಗೆ ಅನಿಲ, ಬ್ಯಾಂಕ್‌ ಖಾತೆ, ಹಣಕಾಸು ಸೇವೆಗಳನ್ನು ದಾಖಲೆ ಅವಧಿಯಲ್ಲಿ ಒದಗಿಸುವ ಮೂಲಕ ಪ್ರತಿ ಕುಟುಂಬ, ವ್ಯಕ್ತಿಗೂ ಅಭಿವೃದ್ಧಿ ತಲುಪಿದೆ.

3000 ಐಟಿಐ, 7 ಐಐಟಿ, 15 ಏಮ್ಸ್‌, 390 ವಿವಿ:ಸ್ಕಿಲ್‌ ಇಂಡಿಯಾ ಮಿಷನ್‌ ಅಡಿ 1.4 ಕೋಟಿ ಯುವಕರಿಗೆ ಕೌಶಲ್ಯ. 54 ಲಕ್ಷ ಯುವಕರಿಗೆ ಮರುಕೌಶಲ್ಯ. 3000 ಹೊಸ ಐಟಿಐಗಳ ಸ್ಥಾಪನೆ. 7 ಐಐಟಿ, 16 ಐಐಐಟಿ, 7 ಐಐಎಂ, 15 ಏಮ್ಸ್‌, 390 ವಿಶ್ವವಿದ್ಯಾಲಯಗಳ ಸ್ಥಾಪನೆ

ಈಗ 7 ಲಕ್ಷ ರು.ವರೆಗೆ ಆದಾಯ ತೆರಿಗೆ ಇಲ್ಲ:ಹೊಸ ತೆರಿಗೆ ವ್ಯವಸ್ಥೆಯಡಿ 7 ಲಕ್ಷ ರು.ವರೆಗಿನ ವಾರ್ಷಿಕ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. 2013-14ರಲ್ಲಿ 2.2 ಲಕ್ಷ ರು. ಆದಾಯಕ್ಕೂ ತೆರಿಗೆ ಇತ್ತು. ಕಾರ್ಪೋರೆಟ್‌ ತೆರಿಗೆ ಶೇ.30ರಿಂದ ಶೇ.22ಕ್ಕೆ ಇಳಿಕೆ.

93 ದಿನ ಕಾಯಬೇಕಿಲ್ಲ, ಹತ್ತೇ ದಿನಕ್ಕೆ ರೀಫಂಡ್‌:ತೆರಿಗೆ ರೀಫಂಡ್ ಕೋರಿಕೆ ವಿಲೇವಾರಿ ಮಾಡುವ ಸರಾಸರಿ ಅವಧಿ 2013-14ರಲ್ಲಿ 93 ದಿನಗಳಷ್ಟಿತ್ತು. ಈ ವರ್ಷ 10 ಕೇವಲ ಹತ್ತು ದಿನಕ್ಕೆ ಇಳಿದಿದೆ. ಹೀಗಾಗಿ ತ್ವರಿತಗತಿಯಲ್ಲಿ ತೆರಿಗೆದಾರರಿಗೆ ರೀಫಂಡ್‌ ಆಗುತ್ತಿದೆ.

ಬಡತನದ ಕೂಪದಿಂದ 25 ಕೋಟಿ ಜನ ಹೊರಕ್ಕೆ:ಮೋದಿ ಸರ್ಕಾರದ 10 ವರ್ಷಗಳ ಅವಧಿಯಲ್ಲಿ 25 ಕೋಟಿ ಜನರು ಬಡತನದಿಂದ ಮುಕ್ತ. ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಬಡವರು ಈಗ ಸಬಲೀಕರಣದ ಪಾಲುದಾರರಾಗಿ ರೂಪಾಂತರ.

ನಾರಿಶಕ್ತಿಗೆ ಬಲ- ಶಾಸನ ಸಭೆಗಳಲ್ಲಿ ಮೀಸಲಾತಿ: ಮುದ್ರಾ ಯೋಜನೆಯಡಿ 30 ಕೋಟಿ ಮಹಿಳೆಯರಿಗೆ ಸಾಲ. ಉನ್ನತ ಶಿಕ್ಷಣದಲ್ಲಿ ಮಹಿಳೆಯರ ನೋಂದಣಿ ಶೇ.28ರಷ್ಟು ಹೆಚ್ಚಳ. ತ್ರಿವಳಿ ತಲಾಖ್‌ ಈಗ ಅಕ್ರಮ. ಲೋಕಸಭೆ, ವಿಧಾನಸಭೆಯಲ್ಲಿ ಮೂರನೇ 1ರಷ್ಟು ಸೀಟು ಮಹಿಳೆಯರಿಗೆ. ಪಿಎಂ ಆವಾಸ್‌ ಯೋಜನೆಯಡಿ 75% ಮನೆ ಮಹಿಳೆಯರಿಗೆ.

ಡಿಬಿಟಿಯಿಂದ 2.7 ಲಕ್ಷ ಕೋಟಿ ರು. ಉಳಿತಾಯ:ಜನಧನ ಖಾತೆ ಬಳಸಿ ಈವರೆಗೆ ಫಲಾನುಭವಿಗಳಿಗೆ 34 ಲಕ್ಷ ಕೋಟಿ ರು. ವರ್ಗಾವಣೆ. ಸೋರಿಕೆ ತಪ್ಪಿದ್ದರಿಂದ ಸರ್ಕಾರಕ್ಕೆ 2.7 ಲಕ್ಷ ಕೋಟಿ ರು. ಉಳಿತಾಯ. ಇದರಿಂದ ಬಡವರಿಗೆ ಇನ್ನಷ್ಟು ಹಣ.

11.8 ಕೋಟಿ ರೈತರಿಗೆ ವರ್ಷಕ್ಕೆ ₹6000 ವರ್ಗ:ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಸಣ್ಣ, ಅತಿ ಸಣ್ಣ ರೈತರು ಸೇರಿ ಎಲ್ಲ ಅನ್ನದಾತರಿಗೂ ಪ್ರತಿ ವರ್ಷ 6000 ರು. ನೆರವು. 4 ಕೋಟಿ ರೈತರಿಗೆ ಫಸಲ್‌ ಬಿಮಾ ಯೋಜನೆಯಡಿ ಬೆಳೆ ವಿಮೆ.

ಶ್ರೀಸಾಮಾನ್ಯರ ಸರಾಸರಿ ಆದಾಯ ಶೇ.50ರಷ್ಟು ಏರಿಕೆ:ಜನರು ಉತ್ತಮವಾಗಿ ಜೀವನ ಸಾಗಿಸುತ್ತಿದ್ದಾರೆ. ಉತ್ತಮವಾಗಿ ಗಳಿಸುತ್ತಿದ್ದಾರೆ. ಸರಾಸರಿ ನೈಜ ಆದಾಯ ಶೇ.50ರಷ್ಟು ಹೆಚ್ಚಾಗಿದೆ. ಜನರು ಸಬಲೀಕರಣರಾಗುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ ನಿರ್ಮಲಾ.

ದೇಶದಲ್ಲೀಗ 1 ಲಕ್ಷ ಸ್ತ್ರೀಯರು ಲಕ್ಷಾಧಿಪತಿ:83 ಲಕ್ಷ ಸ್ವಸಹಾಯ ಸಂಘಗಳ 9 ಕೋಟಿ ಮಹಿಳೆಯರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಸಬಲೀಕರಣ ಹಾಗೂ ಸ್ವಾವಲಂಬನೆ. ಇದರಿಂದ ಈಗಾಗಲೇ 1 ಲಕ್ಷ ಮಹಿಳೆಯರು ಲಕ್ಷಾಧಿಪತಿ (ಲಾಖ್‌ಪತಿ ದೀದಿ). ಈ ಸಂಖ್ಯೆ 2ರಿಂದ 3 ಕೋಟಿಗೆ ಹೆಚ್ಚಳ ಗುರಿ.

ಜಿಎಸ್‌ಟಿ ವ್ಯಾಪ್ತಿ, ಸಂಗ್ರಹ ಡಬಲ್‌: ಜನರಿಗೆ ಲಾಭ:ಜಿಎಸ್‌ಟಿ ತೆರಿಗೆ ವ್ಯಾಪ್ತಿ ಡಬಲ್‌ ಆಗಿದೆ. ಸರಾಸರಿ ಮಾಸಿಕ ಜಿಎಸ್‌ಟಿ ಸಂಗ್ರಹ ಕೂಡ ದ್ವಿಗುಣವಾಗಿದ್ದು, ಈ ವರ್ಷ 1.66 ಲಕ್ಷ ಕೋಟಿ ರು. ಸಂಗ್ರಹವಾಗಿದೆ. ಜಿಎಸ್‌ಟಿಯಿಂದ ರಾಜ್ಯಗಳಿಗೂ ಲಾಭವಾಗಿದೆ. ಜಿಎಸ್‌ಟಿಯಿಂದ ಬಹುತೇಕ ಸರಕು, ಸೇವೆಗಳು ಅಗ್ಗವಾಗಿದ್ದು ಬಳಕೆದಾರರಿಗೆ ಅನುಕೂಲವಾಗಿದೆ ಎಂದ ನಿರ್ಮಲಾ.

ಸಾಮಾಜಿಕ ನ್ಯಾಯ ನಮಗೆ ಘೋಷಣೆ ಅಲ್ಲ:ಈ ಹಿಂದೆ ಸಾಮಾಜಿಕ ನ್ಯಾಯ ಎಂಬುದು ರಾಜಕೀಯ ಘೋಷಣೆಯಾಗಿತ್ತು. ಆದರೆ ನಮಗೆ ಸಾಮಾಜಿಕ ನ್ಯಾಯ ಎಂಬುದು ಪರಿಣಾಮಕಾರಿ ಹಾಗೂ ಅತ್ಯಂತ ಅವಶ್ಯಕ ಆಡಳಿತದ ಮಾದರಿ. ಎಲ್ಲ ಅರ್ಹ ಫಲಾನುಭವಿಗಳಿಗೂ ತಲುಪುವುದು ಸಾಮಾಜಿಕ ನ್ಯಾಯ. ಇದೇ ಜಾತ್ಯತೀತತೆ.

ದೇಶದಲ್ಲಿ ನಾಲ್ಕೇ ಜಾತಿ ಆ ಎಲ್ಲವುಗಳ ಅಭಿವೃದ್ಧಿ:ಬಡವರು, ಮಹಿಳೆಯರು, ಯುವಕರು ಹಾಗೂ ಅನ್ನದಾತರು ಎಂಬ ನಾಲ್ಕು ಪ್ರಮುಖ ಜಾತಿಗಳು ದೇಶದಲ್ಲಿವೆ. ಅವರ ಅವಶ್ಯಕತೆ, ಆಶೋತ್ತರ ಹಾಗೂ ಕಲ್ಯಾಣವೇ ಸರ್ಕಾರ ಅತ್ಯುನ್ನತ ಆದ್ಯತೆ. ದೇಶ ಅಭಿವೃದ್ಧಿಯಾದರೆ ಅವರೂ ಅಭಿವೃದ್ಧಿ ಹೊಂದುತ್ತಾರೆ ಎಂದ ವಿತ್ತ ಸಚಿವೆ.

78 ಲಕ್ಷ ಬೀದಿ ವ್ಯಾಪಾರಿಗಳಿಗೆ ಸ್ವನಿಧಿಯಡಿ ಸಾಲ ಸೌಲಭ್ಯ:ಪಿಎಂ-ಸ್ವನಿಧಿ ಯೋಜನೆಯಡಿ 78 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಸಾಲದ ನೆರವು. 2.3 ಲಕ್ಷ ವ್ಯಾಪಾರಿಗಳು ಮೂರನೇ ಬಾರಿಗೆ ಸಾಲ ಪಡೆದುಕೊಂಡಿದ್ದಾರೆ.

ಪಿಎಂ- ವಿಶ್ವಕರ್ಮದಡಿ ಕಸುಬುದಾರರಿಗೆ ನೆರವು: ಅಭಿವೃದ್ಧಿಯಿಂದ ಹೊರಗುಳಿದಿರುವ ದುರ್ಬಲ ಬುಡಕಟ್ಟು ವರ್ಗಗಳನ್ನು ತಲುಪಲು ಪಿಎಂ-ಜನಮಾನ್‌ ಯೋಜನೆ ತಂದಿದ್ದೇವೆ. ಕಲಾವಿದರು, ಶಿಲ್ಪಿಗಳು, ಕರಕುಶಲ ಕಲೆಯನ್ನು ನಂಬಿರುವವರಿಗೆ ಪಿಎಂ-ವಿಶ್ವಕರ್ಮ ಯೋಜನೆಯಡಿ ನೆರವು ನೀಡಲಾಗಿದೆ. ದಿವ್ಯಾಂಗರು, ತೃತೀಯ ಲಿಂಗಿಗಳಿಗೂ ಅನುಕೂಲವಾಗಿದೆ.

1361 ಮಂಡಿಗಳಲ್ಲಿ 3 ಲಕ್ಷ ಕೋಟಿ ರು. ವಹಿವಾಟು:ಎಲೆಕ್ಟ್ರಾನಿಕ್‌ ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಮೂಲಕ 1361 ಮಂಡಿಗಳ ಸಂಪರ್ಕ. 1.8 ಕೋಟಿ ರೈತರಿಗೆ ಸೇವೆ. 3 ಲಕ್ಷ ಕೋಟಿ ರು. ವಹಿವಾಟು.

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ರೂಪಾಂತರಕಾರಿ ಸುಧಾರಣೆ:ರಾಷ್ಟ್ರೀಯ ಶಿಕ್ಷಣ ನೀತಿ-2020ರಿಂದ ರೂಪಾಂತರಕಾರಿ ಸುಧಾರಣೆ. ‘ಪಿಎಂ ಸ್ಕೂಲ್ಸ್‌ ಫಾರ್‌ ರೈಸಿಂಗ್‌ ಇಂಡಿಯಾ’ (ಪಿಎಂ ಶ್ರೀ) ಯೋಜನೆಯಡಿ ಗುಣಮಟ್ಟದ ಬೋಧನೆ.

ಮುದ್ರಾ ಯೋಜನೆಯಡಿ 22.5 ಲಕ್ಷ ಕೋಟಿ ಸಾಲ: ಪಿಎಂ-ಮುದ್ರಾ ಯೋಜನೆಯಡಿ 22.5 ಲಕ್ಷ ಕೋಟಿ ರು. ಮೌಲ್ಯದ 43 ಕೋಟಿ ಸಾಲಗಳ ಮಂಜೂರಾತಿ. ತನ್ಮೂಲಕ ಯುವಕರ ಉದ್ಯಮಶೀಲತಾ ಆಶೋತ್ತರಕ್ಕೆ ಸ್ಪಂದನೆ. ಇದರ ಜತೆಗೆ ಫಂಡ್ಸ್‌ ಆಫ್‌ ಫಂಡ್ಸ್‌, ಸ್ಟಾರ್ಟಪ್‌ ಇಂಡಿಯಾ, ಸ್ಟಾರ್ಟ್ ಅಪ್‌ ಕ್ರೆಡಿಟ್‌ ಗ್ಯಾರಂಟಿ ಯೋಜನೆಗಳನ್ನು ಸ್ಥಾಪಿಸಿ ಯುವಕರಿಗೆ ನೆರವು. ಅವರು ಉದ್ಯೋಗದಾತರಾಗಿ ಪರಿವರ್ತನೆ.

ಜಿಡಿಪಿ ಎಂದರೆ ಆಡಳಿತ, ಅಭಿವೃದ್ಧಿ, ಸಾಧನೆ:ಜಿಡಿಪಿ ಹೆಚ್ಚಳ ಜತೆಗೆ ಸರ್ಕಾರದ ಗಮನ ಮತ್ತೊಂದು ಜಿಡಿಪಿ ಮೇಲೆ ಕೇಂದ್ರೀಕೃತ. ಅದೆಂದರೆ, ಜಿ(ಗವರ್ನನ್ಸ್‌- ಆಡಳಿತ), ಡಿ(ಡೆವಲಪ್‌ಮೆಂಟ್‌- ಅಭಿವೃದ್ಧಿ) ಹಾಗೂ ಪಿ (ಪರ್ಫಾರ್ಮೆನ್ಸ್‌- ಸಾಧನೆ)

ನಮ್ಮದು ಪಾರದರ್ಶಕ, ಜನ ಕೇಂದ್ರಿತ ಆಡಳಿತ: ಪಾರದರ್ಶಕ, ಹೊಣೆಗಾರಿಕೆಯ, ಜನಕೇಂದ್ರಿತ, ತ್ವರಿತ ವಿಶ್ವಾಸಾರ್ಹ ಆಧರಿತ ಆಡಳಿತವನ್ನು ನಾಗರಿಕರೇ ಮೊದಲು, ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ಕಲ್ಪನೆಯ ಮೂಲಕ ನೀಡಲಾಗಿದೆ.

ದೇಶದಲ್ಲಿ ವಿಮಾನ ನಿಲ್ದಾಣಗಳು ಡಬಲ್‌: ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಏರ್‌ಪೋರ್ಟ್‌ಗಳ ಸಂಖ್ಯೆ ಡಬಲ್‌. ದೇಶದಲ್ಲೀಗ 149 ವಿಮಾನ ನಿಲ್ದಾಣ. 517 ಮಾರ್ಗಗಳಲ್ಲಿ 1.3 ಕೋಟಿ ಜನರ ಪ್ರಯಾಣ. ಭಾರತೀಯ ಕಂಪನಿಗಳಿಂದ 1000 ಹೊಸ ವಿಮಾನಗಳಿಗೆ ಆರ್ಡರ್‌. ಹಾಲಿ ಏರ್‌ಪೋರ್ಟ್‌ಗಳ ವಿಸ್ತರಣೆ. ಹೊಸ ಏರ್‌ಪೋರ್ಟ್‌ ಅಭಿವೃದ್ಧಿ.

ನೇರ ತೆರಿಗೆ ಸಂಗ್ರಹ ಮೂರು ಪಟ್ಟು ಹೆಚ್ಚಳ: ಕಳೆದ 10 ವರ್ಷಗಳಲ್ಲಿ ನೇರ ತೆರಿಗೆ ಸಂಗ್ರಹ 3 ಪಟ್ಟು ಹೆಚ್ಚಳ. ರಿಟರ್ನ್‌ ಸಲ್ಲಿಕೆ ಪ್ರಮಾಣ 2.4 ಪಟ್ಟು ಏರಿಕೆ. ತೆರಿಗೆದಾರರ ಹಣ ದೇಶಾಭಿವೃದ್ಧಿ ಹಾಗೂ ಜನರ ಹಿತರಕ್ಷಣೆಗೆ ವಿವೇಕಯುತವಾಗಿ ಬಳಕೆ ಎಂದ ಸಚಿವೆ.

ಜಿಎಸ್‌ಟಿ ಬಗ್ಗೆ ಉದ್ಯಮ ವಲಯದ 95% ಮೆಚ್ಚುಗೆ: ಛಿದ್ರವಾಗಿದ್ದ ಪರೋಕ್ಷ ತೆರಿಗೆ ವ್ಯವಸ್ಥೆ ಜಿಎಸ್‌ಟಿಯಿಂದಾಗಿ ಒಗ್ಗೂಡಿದೆ. ಪರೋಕ್ಷ ತೆರಿಗೆಯಲ್ಲಿ ಜಿಎಸ್‌ಟಿ ಅಳವಡಿಕೆಗೆ ಉದ್ಯಮ ವಲಯದ ಶೇ.94ರಷ್ಟು ಮಂದಿ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ ಎಂದ ಸಚಿವೆ

ಮಾಡೋದೇನು?

1 ಕೋಟಿ ಮನೆಗಳಿಗೆ ಉಚಿತ ಸೌರ ವಿದ್ಯುತ್: 1ಕೋಟಿ ಮನೆಗಳ ಸೂರಿಗೆ ಸೌರಫಲಕ ಅಳವಡಿಸಿ ವಿದ್ಯುತ್‌ ಉತ್ಪಾದನೆ. ಪ್ರತಿ ತಿಂಗಳೂ ಆ ಮನೆಗಳಿಗೆ 300 ಯುನಿಟ್‌ ಉಚಿತ ವಿದ್ಯುತ್‌. ಇದರಿಂದ ಮನೆಗಳಿಗೆ ವಾರ್ಷಿಕ 15ರಿಂದ 18 ಸಾವಿರ ರು. ಉಳಿತಾಯ. ಹೆಚ್ಚುವರಿ ವಿದ್ಯುತ್‌ ವಿತರಣಾ ಕಂಪನಿಗಳಿಗೆ.

ಬಾಡಿಗೆ ಮನೆಯಲ್ಲಿರುವವರ ಸ್ವಂತ ಮನೆಯಾಸೆಗೆ ನೆರವು: ಬಾಡಿಗೆ ಮನೆ ಅಥವಾ ಕೊಳಗೇರಿ ಅಥವಾ ವಠಾರ ಮತ್ತು ಅನಧಿಕೃತ ಕಾಲೋನಿಗಳಲ್ಲಿ ವಾಸಿಸುತ್ತಿರುವ ಅರ್ಹ ಮಧ್ಯಮವರ್ಗದ ಜನರು ಮನೆ ಖರೀದಿ ಅಥವಾ ನಿರ್ಮಾಣ ಮಾಡಿಕೊಳ್ಳಲು ಹೊಸ ಯೋಜನೆ ಜಾರಿ.

ಆಶಾ, ಅಂಗನವಾಡಿ ಸಿಬ್ಬಂದಿಗೂ ಆಯುಷ್ಮಾನ್‌ ಭಾರತ್‌ ವಿಸ್ತರಣೆ: ಆಶಾ, ಅಂಗನವಾಡಿ ಕಾಯಕರ್ತೆಯರು ಹಾಗೂ ಸಹಾಯಕರಿಗೂ ಆಯುಷ್ಮಾನ್‌ ಭಾರತ ಯೋಜನೆ ವಿಸ್ತರಣೆ. 5 ಲಕ್ಷ ರು.ವರೆಗೆ ಉಚಿತ ಆರೋಗ್ಯ ವಿಮೆ ಕಲ್ಪಿಸುವ ಯೋಜನೆ ಇದು.

40000 ಜನರಲ್‌ ಬೋಗಿ ವಂದೇ ಭಾರತ್‌ ದರ್ಜೆಗೆ: ಪ್ರಯಾಣಿಕರ ಸುರಕ್ಷತೆ, ಸೌಕರ್ಯ ಹಾಗೂ ಆರಾಮದಾಯಕ ಪ್ರಯಾಣಕ್ಕಾಗಿ 40 ಸಾವಿರ ಸಾಮಾನ್ಯ ರೈಲು ಬೋಗಿಗಳು ವಂದೇ ಭಾರತ್‌ ರೈಲಿನ ರೀತಿ ಮೇಲ್ದರ್ಜೆಗೆ

ಮಾಲ್ಡೀವ್ಸ್‌ಗೆ ಅಧಿಕೃತ ಸಡ್ಡು, ಲಕ್ಷದ್ವೀಪ ಅಭಿವೃದ್ಧಿ: ಮಾಲ್ಡೀವ್ಸ್‌ಗೆ ಈಗ ಅಧಿಕೃತವಾಗಿ ಸರ್ಕಾರ ಸಡ್ಡು. ಲಕ್ಷದ್ವೀಪ ಸೇರಿದಂತೆ ವಿವಿಧ ದ್ವೀಪ ಪ್ರದೇಶಗಳಲ್ಲಿ ಬಂದರು ಸಂಪರ್ಕ, ಪ್ರವಾಸಿ ಮೂಲಸೌಕರ್ಯ ಹಾಗೂ ಸೌಲಭ್ಯ ಕಲ್ಪಿಸಲು ಯೋಜನೆ ಜಾರಿಗೊಳಿಸುವುದಾಗಿ ಘೋಷಣೆ.

ಸಂಶೋಧನೆಗಾಗಿ 1 ಲಕ್ಷ ಕೋಟಿ ರು. ಮೂಲನಿಧಿ: ಅಭಿವೃದ್ಧಿಗೆ ನಾವೀನ್ಯತೆಯೇ ಬುನಾದಿ. ತಂತ್ರಜ್ಞಾನ ಕೌಶಲ್ಯವುಳ್ಳ ಯುವಕರಿಗಾಗಿ 50 ವರ್ಷ ಬಡ್ಡಿರಹಿತವಾಗಿರುವ 1 ಲಕ್ಷ ಕೋಟಿ ರು. ಮೂಲನಿಧಿ ಸ್ಥಾಪನೆ. ಈ ಮೂಲಕ ಖಾಸಗಿ ವಲಯ ಸಂಶೋಧನೆ ಕೈಗೊಳ್ಳಲು ಉತ್ತೇಜನ.

ಕ್ಯಾನ್ಸರ್‌ ತಡೆಯಲು ಹೆಣ್ಣು ಮಕ್ಕಳಿಗೆ ಲಸಿಕೆ ಅಭಿಯಾನ: ಸರ್ವೈಕಲ್‌ (ಗರ್ಭಕಂಠ) ಕ್ಯಾನ್ಸರ್‌ ತಡೆಯಲು 9ರಿಂದ 14 ವರ್ಷದೊಳಗಿನ ಹೆಣ್ಣು ಮಕ್ಕಳು ಲಸಿಕೆ ಪಡೆಯಲು ಕೇಂದ್ರ ಸರ್ಕಾರದಿಂದ ಉತ್ತೇಜನ

ಇನ್ನಷ್ಟು ಮೆಡಿಕಲ್‌ ಕಾಲೇಜು: ಹಾಲಿ ಇರುವ ಆಸ್ಪತ್ರೆ ಮೂಲಸೌಕರ್ಯ ಬಳಸಿಕೊಂಡು ಮತ್ತಷ್ಟು ವೈದ್ಯ ಕಾಲೇಜು ಸ್ಥಾಪನೆ. ಈ ಬಗ್ಗೆ ಪರಿಶೀಲಿಸಿ, ಸೂಕ್ತ ಶಿಫಾರಸುಗಳನ್ನು ಮಾಡಲು ಸಮಿತಿ ರಚನೆ.

ಐದು ವರ್ಷದಲ್ಲಿ 2 ಕೋಟಿ ಮನೆಗಳು: ದೇಶದಲ್ಲಿ ಹೆಚ್ಚುತ್ತಿರುವ ಕುಟುಂಬಗಳ ಸಂಖ್ಯೆಗೆ ಅನುಗುಣವಾಗಿ ಮುಂದಿನ 5 ವರ್ಷಗಳಲ್ಲಿ 2 ಕೋಟಿ ಮನೆ ನಿರ್ಮಾಣ. ಕೋವಿಡ್‌ ಸವಾಲಿನ ನಡುವೆಯೂ ಪ್ರಧಾನಿ ಆವಾಸ್‌ ಯೋಜನೆ ಮುಂದುವರಿಸಿ 3 ಕೋಟಿ ಮನೆ ಗುರಿ ಸಾಧಿಸಿದ್ದೇವೆ ಎಂದ ಸಚಿವೆ.

ರಾಜ್ಯಗಳಿಗೆ ₹75000 ಕೋಟಿ ಬಡ್ಡಿರಹಿತ ಸಾಲ: ವಿಕಸಿತ ಭಾರತ ಪರಿಕಲ್ಪನೆ ಸಾಕಾರಕ್ಕೆ ರಾಜ್ಯಗಳಲ್ಲೂ ಸುಧಾರಣೆಯಾಗಬೇಕು. ಇದಕ್ಕಾಗಿ ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ವಿನಾಯಿತಿ ಹೊಂದಿರುವ 75000 ಕೋಟಿ ರು. ಸಾಲ ಹಂಚಿಕೆ. ಮೈಲಿಗಲ್ಲಿನಂತಹ ಸುಧಾರಣೆಗೆ ಸಾಲದ ಮೂಲಕ ನೆರವು ಎಂದ ಸರ್ಕಾರ.

ದೇಶಿ ಪ್ರವಾಸಿ ತಾಣಗಳಿಗೆ ಜಾಗತಿಕ ಬ್ರಾಂಡಿಂಗ್‌: ಹೆಗ್ಗುರುತಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ, ಬ್ರ್ಯಾಂಡ್‌ ಮಾಡಿ, ಜಾಗತಿಕ ಮಟ್ಟದಲ್ಲಿ ಮಾರಕಟ್ಟೆ ಮಾಡಲು ರಾಜ್ಯಗಳಿಗೆ ಉತ್ತೇಜನ. ಸೌಲಭ್ಯ ಹಾಗೂ ಸೇವೆಗಳನ್ನು ಆಧರಿಸಿ ಪ್ರವಾಸಿ ತಾಣಗಳಿಗೆ ರೇಟಿಂಗ್‌ ನೀಡಲು ರೂಪರೇಷೆ. ಪ್ರವಾಸಿ ತಾಣ ಅಭಿವೃದ್ಧಿಗೆ ರಾಜ್ಯಗಳಿಗೆ ಬಡ್ಡಿ ರಹಿತ ದೀರ್ಘಾವಧಿ ಸಾಲ

.3 ಬೃಹತ್‌ ರೈಲ್ವೆ ಕಾರಿಡಾರ್‌:ಮೂರು ಪ್ರಮುಖ ಆರ್ಥಿಕ ರೈಲ್ವೆ ಕಾರಿಡಾರ್‌ ಯೋಜನೆ ಜಾರಿ. 1. ಇಂಧನ, ಖನಿಜ, ಸಿಮೆಂಟ್‌ ಕಾರಿಡಾರ್‌ 2. ಬಂದರು ಸಂಪರ್ಕ ಕಾರಿಡಾರ್‌ 3. ಅತ್ಯಂತ ಸಂಚಾರ ದಟ್ಟಣೆಯ ಮಾರ್ಗಗಳಲ್ಲಿ ಕಾರಿಡಾರ್‌

ಮೆಟ್ರೋ, ನಮೋ ಭಾರತ್‌ ವಿಸ್ತರಣೆ: ಸಾರಿಗೆ ಆಧರಿತ ಅಭಿವೃದ್ಧಿಗೆ ಉತ್ತೇಜನ. ಇದರ ಭಾಗವಾಗಿ ದೊಡ್ಡ ನಗರಗಳಲ್ಲಿ ಮೆಟ್ರೋ ಹಾಗೂ ನಮೋ ಭಾರತ್‌ ರೈಲು ವಿಸ್ತರಣೆ. ನಗರಗಳ ರೂಪಾಂತರಕ್ಕೆ ಮೆಟ್ರೋ, ನಮೋ ಭಾರತ್ ಅವಶ್ಯ ಎಂದ ಸರ್ಕಾರ.

ಜನಸಂಖ್ಯೆ ಸವಾಲು ಅಧ್ಯಯನಕ್ಕೆ ಸಮಿತಿ: ಜನಸಂಖ್ಯೆ ತ್ವರಿತ ಏರಿಕೆ ಹಾಗೂ ಜನಸಂಖ್ಯಾ ಬದಲಾವಣೆಯಿಂದ ಎದುರಾಗುವ ಸವಾಲುಗಳ ಕುರಿತು ಅಧ್ಯಯನ ನಡೆಸಿ, ಶಿಫಾರಸು ಮಾಡಲು ಉನ್ನತ ಮಟ್ಟದ ಸಮಿತಿ ರಚನೆ

ಯುವಕರಿಗೆ ಉದ್ಯಮಶೀಲತೆ ಉದ್ಯೋಗವಕಾಶಗಳ ಸೃಷ್ಟಿ: ಪೂರೈಕೆ ಹಾಗೂ ಅಳವಡಿಕೆ ಕ್ಷೇತ್ರದಲ್ಲಿರುವ ಭಾರಿ ಪ್ರಮಾಣದ ವ್ಯಾಪಾರಿಗಳಿಗೆ ಉದ್ಯಮಶೀಲತಾ ಅವಕಾಶ. ಉತ್ಪಾದನೆ, ಅಳವಡಿಕೆ ಹಾಗೂ ನಿರ್ವಹಣೆಯಂತಹ ತಾಂತ್ರಿಕ ಕೌಶಲ್ಯ ಹೊಂದಿರುವ ಯುವಕರಿಗೆ ಉದ್ಯೋಗವಕಾಶ.

ಅಂಗನವಾಡಿ ಕೇಂದ್ರಗಳ ಮೇಲ್ದರ್ಜೆಗೇರಿಸಲು ಒತ್ತು: ತಾಯಿ ಮತ್ತು ಮಕ್ಕಳ ಕಾಳಜಿಗೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಒಂದೇ ಸಮಗ್ರ ಕಾರ್ಯಕ್ರಮದ ವ್ಯಾಪ್ತಿಗೆ ತಂದು ಪರಿಣಾಮಕಾರಿಯಾಗಿ ಜಾರಿ. ಸಕ್ಷಮ ಅಂಗನವಾಡಿ ಹಾಗೂ ಪೋಷಣ್‌ 2.0 ಯೋಜನೆಯಡಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಒತ್ತು.

ಲಸಿಕಾಕರಣ ನಿರ್ವಹಣೆಗೆ ವೆಬ್‌: ಲಸಿಕಾಕರಣ ಹಾಗೂ ಇಂದ್ರಧನುಷ್‌ ಮಿಷನ್‌ ನಿರ್ವಹಣೆಗೆ ಹೊಸ ವಿನ್ಯಾಸದ ಯು-ವಿನ್‌ ಪ್ಲಾಟ್‌ಫಾರ್ಮ್‌ ದೇಶಾದ್ಯಂತ ತ್ವರಿತಗತಿಯಲ್ಲಿ ಅನುಷ್ಠಾನ.

ರೈತರ ಆದಾಯ ಹೆಚ್ಚಳ ಗುರಿ: ಕೃಷಿ ಕ್ಷೇತ್ರದಲ್ಲಿ ಮೌಲ್ಯವರ್ಧನೆ ಮಾಡಿ, ರೈತರ ಆದಾಯವನ್ನು ಹೆಚ್ಚಿಸಲು ಮತ್ತಷ್ಟು ಪ್ರಯತ್ನ. ಪ್ರಧಾನಮಂತ್ರಿ ಕಿಸಾನ್‌ ಸಂಪದ ಯೋಜನೆಯಡಿ 38 ಲಕ್ಷ ರೈತರಿಗೆ ಅನುಕೂಲ. 10 ಲಕ್ಷ ಉದ್ಯೋಗ ಸೃಷ್ಟಿ.

ಕೊಯ್ಲೋತ್ತರ ಚಟುವಟಿಕೆಗೆ ಹೂಡಿಕೆ: ಆಧುನಿಕ ಸಂಗ್ರಹಾಗಾರ, ಪರಿಣಾಮಕಾರಿ ಪೂರೈಕೆ ವ್ಯವಸ್ಥೆ, ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಸ್ಕರಣೆ ಮತ್ತು ಮಾರುಕಟ್ಟೆ, ಬ್ರ್ಯಾಂಡಿಂಗ್‌ ಸೇರಿದಂತೆ ಕೊಯ್ಲೋತ್ತರ ಚಟುವಟಿಕೆಯಲ್ಲಿ ಖಾಸಗಿ ಹಾಗೂ ಸಾರ್ವಜನಿಕ ಹೂಡಿಕೆಗೆ ಉತ್ತೇಜನ.

ಬರಲಿದೆ ನ್ಯಾನೋ ಡಿಎಪಿ:ನ್ಯಾನೋ ಯೂರಿಯಾ ಯೋಜನೆ ಯಶಸ್ವಿಯಾಗಿ ಅಳವಡಿಕೆ. ಇನ್ನು ನ್ಯಾನೋ ಡಿಎಪಿ ಬಳಕೆ ಎಲ್ಲ ಕೃಷಿ ವಾತಾವರಣ ವಲಯದ ವಿವಿಧ ಬೆಳೆಗಳಿಗೆ ವಿಸ್ತರಣೆ.

ತೈಲ ಬೀಜಗಳ ಆತ್ಮನಿರ್ಭರತೆ: ಸಾಸಿವೆ, ಕಡಲೆ, ಎಳ್ಳು, ಸೋಯಾಬೀನ್‌ ಹಾಗೂ ಸೂರ್ಯಕಾಂತಿಯಂತಹ ಎಣ್ಣೆ ಬೀಜಗಳಲ್ಲಿ ಆತ್ಮನಿರ್ಭರತೆ ಸಾಧಿಸಲು ಹೊಸ ತಂತ್ರಗಾರಿಕೆ ಜಾರಿ.

ಡೈರಿ ರೈತರ ಬೆಂಬಲಕ್ಕೆ ಯೋಜನೆ: ರಾಸುಗಳನ್ನು ಕಾಡುವ ಕಾಲು-ಬಾಯಿ ರೋಗ ನಿಯಂತ್ರಿಸಲು ಹಲವು ಕ್ರಮ. ಡೈರಿ ರೈತರಿಗೆ ಬೆಂಬಲ ನೀಡಲು ಸಮಗ್ರ ಯೋಜನೆ ರೂಪಿಸಿ ಅನುಷ್ಠಾನ.

5 ಇಂಟಿಗ್ರೇಟೆಡ್‌ ಅಕ್ವಾಪಾರ್ಕ್‌:ಪ್ರತ್ಯೇಕ ಮೀನುಗಾರಿಕೆ ಸಚಿವಾಲಯ ಸ್ಥಾಪನೆ ಬಳಿಕ ದೇಶದಲ್ಲಿ ಮೀನುಗಾರಿಕೆ ಡಬಲ್‌. ಸೀಫುಡ್‌ ರಫ್ತು ಕೂಡ ದ್ವಿಗುಣ. ಭವಿಷ್ಯದಲ್ಲಿ 55 ಲಕ್ಷ ಉದ್ಯೋಗ ಅವಕಾಶ ಸೃಷ್ಟಿಸುವ ಗುರಿ. ಇದರ ಜತೆಗೆ 5 ಇಂಟಿಗ್ರೇಟೆಡ್‌ ಅಕ್ವಾ ಪಾರ್ಕ್‌ಗಳ ಸ್ಥಾಪನೆ

ರಕ್ಷಣಾ ವಲಯದಲ್ಲಿ ಡೀಪ್‌ ಟೆಕ್‌:ರಕ್ಷಣಾ ಉದ್ದೇಶಕ್ಕಾಗಿ ಡೀಪ್‌ ಟೆಕ್‌ ತಂತ್ರಜ್ಞಾನವನ್ನು ಬಲಪಡಿಸಲು ಹಾಗೂ ಆತ್ಮನಿರ್ಭರತೆಗೆ ವೇಗ ನೀಡಲು ಹೊಸ ಯೋಜನೆ ಪ್ರಾರಂಭಿಸುವ ಘೋಷಣೆ.

ಸಿಎನ್‌ಜಿಗೆ ಜೈವಿಕ ಅನಿಲ ಮಿಶ್ರಣ ಕಡ್ಡಾಯ:ಸಾರಿಗೆ ವಲಯದಲ್ಲಿ ಬಳಕೆಯಾಗುವ ಸಿಎನ್‌ಜಿ ಹಾಗೂ ಗೃಹ ಬಳಕೆಯ ಪಿಎನ್‌ಜಿಗೆ ಕಂಪ್ರೆಸ್ಡ್‌ ಜೈವಿಕ ಅನಿಲ ಮಿಶ್ರಣ ಮಾಡುವುದನ್ನು ಕಡ್ಡಾಯಗೊಳಿಸುವುದಾಗಿ ಸರ್ಕಾರ ಘೋಷಣೆ

ನಗರಗಳಿಗೆ ಮತ್ತಷ್ಟು ಇ-ಬಸ್‌: ಸಾರ್ವಜನಿಕ ಸಾರಿಗೆಯಲ್ಲಿ ಎಲೆಕ್ಟ್ರಿಕ್‌ ಬಸ್‌ ಅಳವಡಿಸಿಕೊಳ್ಳಲು ಮತ್ತಷ್ಟು ಉತ್ತೇಜನ. ಎಲೆಕ್ಟ್ರಿಕ್‌ ವಾಹನಗಳ ತ್ಪಾದನೆ ಹಾಗೂ ಚಾರ್ಜಿಂಗ್‌ ಮೂಲಸೌಕರ್ಯಕ್ಕೆ ಒತ್ತು ನೀಡುವ ಮೂಲಕ ಆ ಕ್ಷೇತ್ರದ ವಿಸ್ತರಣೆ ಹಾಗೂ ಸಬಲೀಕರಣ.

ಎಫ್‌ಡಿಐ ಅಂದರೆ ಫಸ್ಟ್‌ ಡೆವಲಪ್‌ ಇಂಡಿಯಾ:ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) 2014-23ರ ಅವಧಿಯಲ್ಲಿ 596 ಬಿಲಿಯನ್‌ ಡಾಲರ್‌ಗೆ ಏರಿಕೆ. 2005-14ಕ್ಕೆ ಹೋಲಿಸಿದರೆ ಇದು ಡಬಲ್‌. ವಿದೇಶಿ ಹೂಡಿಕೆಗೆ ಉತ್ತೇಜನ. ಫಸ್ಟ್‌ ಡೆವಲಪ್‌ ಇಂಡಿಯಾ (ಮೊದಲು ಭಾರತ ಅಭಿವೃದ್ಧಿ) ಉತ್ಸಾಹದೊಂದಿಗೆ ಹೂಡಿಕೆ ಒಪ್ಪಂದ

ತೆರಿಗೆ ದರದಲ್ಲಿ ಬದಲಾವಣೆ ಇಲ್ಲ:ನೇರ, ಪರೋಕ್ಷ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆಮದು ಸುಂಕದಲ್ಲೂ ಪರಿಷ್ಕರಣೆ ಇಲ್ಲ. ಹೀಗಾಗಿ ಕಳೆದ ಸಾಲಿನ ತೆರಿಗೆ ದರಗಳೇ ಈ ಬಜೆಟ್‌ನಲ್ಲೂ ಮುಂದುವರಿಕೆ

1 ಕೋಟಿ ತೆರಿಗೆದಾರರಿಗೆ ನೀಡಿದ್ದ ನೋಟಿಸ್‌ ವಾಪಸ್‌: 1962ರಿಂದಲೂ ಇತ್ಯರ್ಥವಾಗದೆ ಉಳಿದಿರುವ ಸಣ್ಣ ಮೊತ್ತದ ತೆರಿಗೆ ನೋಟಿಸ್‌ಗಳಿಗೆ ಮೋಕ್ಷ. 2009-10ನೇ ಸಾಲಿನವರೆಗಿನ 25000 ರು. ಮೌಲ್ಯದ ತೆರಿಗೆ ವಸೂಲಾತಿ ನೋಟಿಸ್‌ ವಾಪಸ್‌. 2010-11ರಿಂದ 2014-15ನೇ ಸಾಲಿನವರೆಗೆ 10 ಸಾವಿರ ರು. ಮೌಲ್ಯದ ನೋಟಿಸ್‌ ಕೂಡ ಹಿಂದಕ್ಕೆ. 1 ಕೋಟಿ ತೆರಿಗೆದಾರರಿಗೆ ಪ್ರಯೋಜನ

ಶ್ವೇತಪತ್ರ ಮಂಡನೆ ಮಾಡಲು ಸರ್ಕಾರ ರೆಡಿ: 2014ರಲ್ಲಿ ಇದ್ದ ಸವಾಲು ಗೆದ್ದಿದ್ದೇವೆ. ಆರ್ಥಿಕತೆ ಅತ್ಯಂತ ಸುಸ್ಥಿರ ಪ್ರಗತಿ ಹಾದಿಯಲ್ಲಿದೆ. ಕೆಟ್ಟ ನಿರ್ವಹಣೆಯಿಂದ ಪಾಠ ಕಲಿಯಲು 2014ರಲ್ಲಿ ಎಲ್ಲಿದ್ದೆವು, ಈಗ ಎಲ್ಲಿದ್ದೇವೆ ಎಂಬುದನ್ನು ನೋಡುವುದು ಸೂಕ್ತ. ಸರ್ಕಾರ ಶ್ವೇತಪತ್ರ ಹೊರಡಿಸಲೂ ಸಿದ್ಧವಿದೆ.

ಜನರಿಂದ ಮತ್ತೊಮ್ಮೆ ಬಹುಮತದ ನಿರೀಕ್ಷೆ: 2014ರಲ್ಲಿ ಇದ್ದ ಸವಾಲುಗಳನ್ನು ಗೆದ್ದಿದ್ದೇವೆ. ಶತಮಾನಕ್ಕೊಮ್ಮೆ ಬರುವ ಕೋವಿಡ್‌ ಸವಾಲಿನಿಂದಲೂ ಹೊರಬಂದಿದ್ದೇವೆ. ಆತ್ಮನಿರ್ಭರ ಭಾರತದತ್ತ ಹೆಜ್ಜೆ ಇಡುತ್ತಿದ್ದೇವೆ. ಅಮೃತ ಕಾಲಕ್ಕೆ ಬುನಾದಿ ಹಾಕಿದ್ದೇವೆ. ಸರ್ಕಾರದ ಕೆಲಸ ನೋಡಿ ಜನರು ಮತ್ತೊಮ್ಮೆ ಭರ್ಜರಿ ಬಹುಮತ ನೀಡಲಿ ಎಂಬ ನಿರೀಕ್ಷೆ ಹೊಂದಿದ್ದೇವೆ.

Share this article