ವಕ್ಫ್ ದಾನವೇ ಹೊರತು ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ: ಕೇಂದ್ರ ವಾದ

KannadaprabhaNewsNetwork | Updated : May 22 2025, 11:32 AM IST
: ವಕ್ಫ್‌ ಎನ್ನುವುದು ದಾನವೇ ಹೊರತು, ಇಸ್ಲಾಂನ ಅವಿಭಾಗ್ಯ ಅಂಗ ಅಲ್ಲ. ವಕ್ಫ್‌ ಬೋರ್ಡ್‌ಗಳು ಕೇವಲ ಜಾತ್ಯತೀತ ಸ್ವರೂಪದ ಕಾರ್ಯಗಳನ್ನಷ್ಟೇ ಮಾಡುತ್ತವೆ.
Follow Us

 ನವದೆಹಲಿ : ವಕ್ಫ್‌ ಎನ್ನುವುದು ದಾನವೇ ಹೊರತು, ಇಸ್ಲಾಂನ ಅವಿಭಾಗ್ಯ ಅಂಗ ಅಲ್ಲ. ವಕ್ಫ್‌ ಬೋರ್ಡ್‌ಗಳು ಕೇವಲ ಜಾತ್ಯತೀತ ಸ್ವರೂಪದ ಕಾರ್ಯಗಳನ್ನಷ್ಟೇ ಮಾಡುತ್ತವೆ. ಆದರೆ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ನಿರ್ವಹಣೆಯು ಸಂಪೂರ್ಣವಾಗಿ ಧಾರ್ಮಿಕತೆಗೆ ಸಂಬಂಧಿಸಿದ್ದಾಗಿದೆ ಎಂದು ಸುಪ್ರೀಂ ಕೋರ್ಟ್‌ ಮುಂದೆ ಕೇಂದ್ರ ಸರ್ಕಾರ ವಾದಿಸಿದೆ.

ನ್ಯಾ.ಬಿ.ಆರ್‌.ಗವಾಯಿ ಮತ್ತು ನ್ಯಾ.ಆಗಸ್ಟಿನ್‌ ಜಾರ್ಜ್‌ ಮಸಿಹ ಅವರ ಮುಂದೆ ಕೇಂದ್ರ ಸರ್ಕಾರದ ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ಬುಧವಾರ ಬಲವಾಗಿ ಸಮರ್ಥಿಸಿಕೊಂಡಿರುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ವಕ್ಫ್‌ ಎನ್ನುವುದು ಇಸ್ಲಾಮಿಕ್‌ ಪರಿಕಲ್ಪನೆ. ಆದರೆ ಅದು ಇಸ್ಲಾಮಿನ ಅವಿಭಾಜ್ಯ ಆಚರಣೆ ಅಲ್ಲ. ದಾನದ ಭಾಗ ಅಷ್ಟೆ. ದಾನದ ಪರಿಕಲ್ಪನೆ ಕ್ರಿಶ್ಚಿಯನ್‌, ಹಿಂದೂ, ಸಿಖ್ಖರ್‌ ಹೀಗೆ ಎಲ್ಲಾ ಧರ್ಮದಲ್ಲೂ ಇದೆ ಎಂದು ನ್ಯಾಯಾಲಯದ ತೀರ್ಪುಗಳು ಹೇಳುತ್ತವೆ ಎಂದು ಮೆಹ್ತಾ ವಾದಿಸಿದರು.

ಹಿಂದೂ ಧಾರ್ಮಿಕ ಎಂಡೋಮೆಂಟ್‌ಗಳು ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗಿವೆ. ಆದರೆ, ವಕ್ಫ್‌ ಎಂಬುದು ಶಾಲೆಗಳು, ಮದ್ರಸಾಗಳು, ಧರ್ಮಶಾಲೆಗಳಂಥ ಜಾತ್ಯತೀತ ಸಂಸ್ಥೆಗಳ ಸ್ವರೂಪ ಹೊಂದಿದೆ ಎಂದು ತಿಳಿಸಿದರು.

ಇನ್ನು ವಕ್ಫ್‌ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರರನ್ನು ನೇಮಿಸುವ ಕ್ರಮದ ಕುರಿತೂ ಸ್ಪಷ್ಟನೆ ನೀಡಿದ ಮೆಹ್ತಾ ಅವರು, ಇಬ್ಬರು ಮುಸ್ಲಿಮರೇತರರಿದ್ದರೆ ಏನಾದರೂ ಬದಲಾವಣೆ ಆಗುತ್ತದೆಯೇ? ವಕ್ಫ್‌ ಮಂಡಳಿ ಯಾವುದೇ ಧಾರ್ಮಿಕ ಚಟುವಟಿಕೆ ನೋಡಿಕೊಳ್ಳುವುದಿಲ್ಲ. ಹೀಗಾಗಿ ವಕ್ಫ್‌ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರರ ನೇಮಕ ಧರ್ಮದ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದಂತಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಸರ್ಕಾರಿ ಜಾಗದ ಮೇಲೆ ಯಾರೂ ಅಧಿಕಾರ ಸ್ಥಾಪಿಸಲು ಸಾಧ್ಯವಿಲ್ಲ. ವಕ್ಫ್‌ ಬೈ ಯೂಸರ್‌(ವಕ್ಫ್‌ ಹಲವು ವರ್ಷಗಳಿಂದ ಸರ್ಕಾರಿ ಜಮೀನನ್ನು ನಿರ್ವಹಿಸುತ್ತಿದ್ದರೆ ಆ ಜಾಗ ವಕ್ಫ್‌ ಪಾಲಾಗುತ್ತದೆ ಎಂಬ ನಿಯಮ)ನಡಿ ಘೋಷಿತ ಜಾಗಗಳನ್ನು ಸರ್ಕಾರ ವಾಪಸ್‌ ಪಡೆಯಬಹುದಾಗಿದೆ ಎಂದರು.

Read more Articles on