ಈಶ್ವರ ಶೆಟ್ಟರ್
ಕನ್ನಡಪ್ರಭ ವಾರ್ತೆ ಬಾಗಲಕೋಟೆ1962ನೇ ಇಸವಿ. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಭಾರತ ಮೂರನೇ ಲೋಕಸಭೆ ಚುನಾವಣೆಗೆ ಅಣಿಯಾಗಿತ್ತು. ಗೆಲುವು ಕಾಂಗ್ರೆಸ್ ಪಕ್ಷದ್ದೇ ಎಂದು ಕೂಡ ಖಚಿತವಾಗಿತ್ತು. ಹೀಗಾಗಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. ಆದರೆ, ಅಂದಿನ ಹೈಮಾಂಡ್ ಪ್ರಾಮಾಣಿಕ ಹಾಗೂ ಸಮಾಜ ಸೇವೆಯ ಮನೋಭಾವ ಹೊಂದಿದ್ದ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿತ್ತು. ಆಗ ವಿಜಯಪುರ ದಕ್ಷಿಣ ಲೋಕಸಭಾ (ಪ್ರಸ್ತುತ ಬಾಗಲಕೋಟೆ) ಕ್ಷೇತ್ರಕ್ಕೆ ಹೈಕಮಾಂಡ್ ಕಣ್ಣಿಗೆ ಬಿದ್ದಿದ್ದೆ ಎಸ್.ಬಿ.ಪಾಟೀಲ ಅವರು.
ಹೌದು, ಮೊದಲ ಹಾಗೂ ಎರಡನೇ ಅವಧಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ವಿಜಯಪುರ ದಕ್ಷಿಣ ಲೋಕಸಭಾದಲ್ಲಿ ಗೆಲುವು ಪಡೆದಿತ್ತು. ಕಾಂಗ್ರೆಸ್‌ನ ಬಿದರಿ ಅವರು ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ, ಮೂರನೇ ಅವಧಿಯ ಚುನಾವಣೆಗೆ ಕಾಂಗ್ರೆಸ್‌ನಿಂದ ಸುನಗದ ಎಸ್.ಬಿ.ಪಾಟೀಲ ಅವರಿಗೆ ಟಿಕೆಟ್ ನೀಡಲಾಗಿತ್ತು. ಇವರಿಗೆ ಎದುರಾಳಿಯಾಗಿ ಜನಸಂಘದಿಂದ ಎನ್.ಕೆ.ಧರ್ಶಿ ಸ್ಪರ್ಧಿಸಿದ್ದರು.1962ರಲ್ಲಿ ವಿಜಯಪುರ ದಕ್ಷಿಣ ಲೋಕಸಭಾ (ಪ್ರಸ್ತುತ ಬಾಗಲಕೋಟೆ) ನಡೆದ ಚುನಾವಣೆಯಲ್ಲಿ ಎಂದಿನಂತೆ ಕಾಂಗ್ರೆಸ್ ಪಕ್ಷವೇ ಗೆಲುವಿನ ನಗೆ ಬೀರಿತ್ತು. ಎದುರಾಳಿಗಳ ಪ್ರಬಲ ಪೈಪೋಟಿ ಇಲ್ಲದ್ದರಿಂದ ಕಾಂಗ್ರೆಸ್‌ದಿಂದ ಸ್ಪರ್ಧಿಸಿದ್ದ ಬೀಳಗಿ ತಾಲೂಕಿನ ಸುನಗದ ಎಸ್.ಬಿ.ಪಾಟೀಲ ಅವರು ನಿರಾಯಾಸವಾಗಿ ಗೆಲವು ಕಂಡಿದ್ದರು. ಸ್ವಾತಂತ್ರ್ಯ ಚಳವಳಿಯ ಭಾಗವಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಜನತೆಯ ಅಭೂತ ಪೂರ್ಣ ಬೆಂಬಲ ಮುಂದುವರಿದ ಕಾಲವದು. ಹೀಗಾಗಿ ಆ ಪಕ್ಷಕ್ಕೆ ನಿಲ್ಲುವ ಅಭ್ಯರ್ಥಿಗಳ ಗೆಲವು ಖಚಿತ ಎಂಬ ಭಾವನೆ ಇದ್ದಿದ್ದರಿಂದ ಸಹಜವಾಗಿ ಆ ಪಕ್ಷದಿಂದ ಸ್ಪರ್ಧಿಸಲು ಇನ್ನಿಲ್ಲದ ಪೈಪೋಟಿ ಕಾಣುತ್ತಿತ್ತು.
ಬಡತನ, ಬರಗಾಲದಂತಹ ಪರಸ್ಥಿತಿಯ ಸಂದರ್ಭದಲ್ಲೂ ಪ್ರಾದೇಶಿಕ ಅಸಮತೋಲನದ ಆರಂಭದ ದಿನಗಳಲ್ಲಿ ನಡೆದ ಚುನಾವಣೆ ಅದಾಗಿತ್ತು. ಇಂತಹ ಸಂದರ್ಭದಲ್ಲಿ ಹೆಚ್ಚಿನ ಪ್ರಚಾರದ ಅಗತ್ಯತೆ ಇಲ್ಲದೆ, ಚುನಾವಣೆ ನಡೆದರು ಸಹ ಅನಾಯಾಸವಾಗಿ ಕಾಂಗ್ರೆಸ್ ಪಕ್ಷ ಆಯ್ಕೆಯಾಗಿರುತ್ತಿತ್ತು.ವಿಜಯಪುರ ದಕ್ಷಿಣ ಲೋಕಸಭೆಗೆ ಬಾಗಲಕೋಟೆ, ಬೀಳಗಿ, ಮುಧೋಳ, ಜಮಖಂಡಿ, ಬಾದಾಮಿ, ಹುನಗುಂದ, ಗುಳೇದಗುಡ್ಡ ಅಂದಿನ ಧಾರವಾಡ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರಗಳು ಸೇರಿ ಎಂಟು ವಿಧಾನಸಭಾ ಕ್ಷೇತ್ರಗಳು ವಿಜಯಪುರ ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತಿದ್ದವು.
1962ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಸುನಗದ ಎಸ್.ಬಿ.ಪಾಟೀಲ ಅವರು 1,88,849 ಮತಗಳನ್ನು ಪಡೆದು ಆಯ್ಕೆಯಾದರು. ಇವರ ವಿರುದ್ಧ ಜನಸಂಘದಿಂದ ಸ್ಪರ್ಧಿಸಿದ್ದ ಎನ್.ಕೆ.ಧರ್ಶಿ ಎಂಬುವರು 67,820 ಮತಗಳನ್ನು ಮಾತ್ರ ಪಡೆದು ಪರಾಭವಗೊಂಡಿದ್ದರು.2,68,395 ಮತಗಳ ಒಟ್ಟು ಚಲಾವಣೆಯಾಗಿದ್ದು, ಶೇಕಡಾ (62.38)ರಷ್ಟು ಮತದಾನವಾಗಿತ್ತು. ಗೆಲವಿನ ಅಂತರ 1,21,029 ಮತಗಳಷ್ಟಿತ್ತು.
-----------ಬಾಕ್ಸ್
ಅಂದು ಉತ್ತುಂಗದ ಸ್ಥಿತಿಯಲ್ಲಿತ್ತು ಕಾಂಗ್ರೆಸ್ಅದು ಕಾಂಗ್ರೆಸ್ ಪಕ್ಷದ ಜನಪ್ರಿಯತೆಯಲ್ಲಿ ಅತ್ಯಂತ ಉತ್ತುಂಗದ ಸಮಯ. ಈ ಪಕ್ಷದಿಂದ ಯಾರೇ ಸ್ಪರ್ಧಿಸಿದರೂ ಗೆಲುವು ಕಟ್ಟಿಟ್ಟಬುತ್ತಿಯಾಗಿತ್ತು. ಹೀಗಾಗಿ ಪಕ್ಷದ ಅಭ್ಯರ್ಥಿಯಾಗಲೂ ಪೈಪೋಟಿ ಸಹ ಇರುತ್ತಿತ್ತು. ಆದರೆ, ಅಂದಿನ ಕಾಂಗ್ರೆಸ್ ವರಿಷ್ಟರು ಪ್ರಾಮಾಣಿಕ ರಾಜಕಾರಣಿಗಳನ್ನು ಹುಡುಕಿ ಅಂತವರಿಗೆ ಟಿಕೆಟ್ ನೀಡುತ್ತಿತ್ತು. ಅಂದು ಅಖಂಡ ವಿಜಯಪುರ ಜಿಲ್ಲೆಯ ದಕ್ಷಿಣ ಲೋಕಸಭಾ (ಸದ್ಯ ಬಾಗಲಕೋಟೆ) ಕ್ಷೇತ್ರಕ್ಕೆ ಬೀಳಗಿ ತಾಲೂಕಿನ ಪ್ರಾಮಾಣಿಕ ವ್ಯಕ್ತಿಯಾಗಿದ್ದ ಸುನಗದ ಎಸ್.ಬಿ.ಪಾಟೀಲ ಅವರನ್ನು ಕಾಂಗ್ರೆಸ್ ಪಕ್ಷ ಗುರುತಿಸಿ ಸಂಸದರಾಗಲೂ ಅವಕಾಶ ನೀಡಿತ್ತು.