ಧಾರವಾಡ:
ಕವಿಯಲ್ಲಿ ವಿಮರ್ಶಕನಿರಬೇಕು. ವಿಮರ್ಶಕನಲ್ಲಿ ಕವಿ ಮನೋಭಾವ ಇರಬೇಕು. ಕವಿಯು ಕೂಡ ವಿಮರ್ಶಕನೇ ಆಗಿರುತ್ತಾನೆ ಎಂದು ವಿಮರ್ಶಕ ಪ್ರೊ. ಸಿ.ಆರ್. ಯರವಿನತೆಲಿಮಠ ಎಂದರು.ಕರ್ನಾಟಕ ವಿದ್ಯಾವರ್ಧಕ ಸಂಘವು ಶತಾಯುಷಿ ದಿ. ಸಂಗಮ್ಮ ಇಮ್ರಾಪೂರ ದತ್ತಿ ನಿಮಿತ್ತ ಪ್ರೊ. ಸೋಮಶೇಖರ ಇಮ್ರಾಪೂರ ಅವರ ಸಮಗ್ರ ಕಾವ್ಯ ಸಂಪುಟ ‘ಬಿಸಿಲ ಹೂ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.ಇಮ್ರಾಪೂರ ಅವರಲ್ಲಿ ಬಾಲ್ಯದಲ್ಲಿಯೇ ಕಾವ್ಯ ರಚನಾ ಶಕ್ತಿ ತುಂಬಿತ್ತು. ಕಷ್ಟದ ಜೀವನ, ಬದುಕಿನ ಕಹಿ ಘಟನೆಗಳು ಅವರಿಗೆ ಕಾವ್ಯ ರಚನೆಗೆ ಪ್ರೇರಣೆ ನೀಡಿದವು. ರಸ, ವಿರಸ, ಸರಸದ ಚಿತ್ರಣಗಳನ್ನು ಇಮ್ರಾಪೂರ ಅವರ ಕಾವ್ಯಗಳಲ್ಲಿ ಕಾಣುತ್ತೇವೆ. ಅವರ ವ್ಯಕ್ತಿ ಚಿತ್ರದ ಕವನಗಳನ್ನು ಅವಲೋಕಿಸಿದಾಗ ಕಲ್ಲಿನಲ್ಲಿ ಕೆತ್ತಿದ ಪಾರದರ್ಶಕ ಮೂರ್ತಿಯಂತೆ ಕೆತ್ತಿಕೊಟ್ಟಿದ್ದಾರೆ. ಅವರ ಕಾವ್ಯದಲ್ಲಿ ನಾದ ಮಾಧುರ್ಯವಿದೆ. ಸಾಮಾಜಿಕ ಪ್ರಜ್ಞೆ ಇದೆ ಎಂದರು.
ವಿಶ್ರಾಂತ ಪ್ರಾಧ್ಯಾಪಕ ಡಾ. ಅರವಿಂದ ಮಾಲಗತ್ತಿ ಮಾತನಾಡಿ, ನನಗೆ ಸಾಹಿತ್ಯಿಕ ದೀಕ್ಷೆ ಕೊಟ್ಟಿದ್ದು ಧಾರವಾಡ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘ. ಇಮ್ರಾಪೂರ ಅವರು ಸೀಮಾತೀತ ಕವಿ. ‘ಆ ಬಾಲೆ’ ಕವನದಿಂದ ಪ್ರಾರಂಭವಾದ ಸಾಹಿತ್ಯ ಕೃಷಿ ಎಲ್ಲಾ ಪಂತಗಳ ಕ್ರಿಯೆ, ಪ್ರಕ್ರಿಯೆಗಳನ್ನು ದಾಟಿ ಬಂದಿರುವಂಥದ್ದು. ಸಮನ್ವಯ ಕವಿ ಎಂಬ ಹೆಸರಿಗೆ ಪಾತ್ರರಾದವರು ಎಂದರು.ಆಧುನಿಕ ಸಂಗತಿಗಳು ಅವರ ಕಾವ್ಯದಲ್ಲಿ ಅಡಕವಾಗಿವೆ. ತಂತ್ರಜ್ಞಾನ ಭಾರತದ ಜತೆ ಒಡನಾಡುತ್ತಿರುವುದಕ್ಕೆ ಅವರ ಕಾವ್ಯಗಳು ಸಾಕ್ಷಿಯಾಗಿವೆ. ಕಾವ್ಯದ ಸೆಲೆ ಬತ್ತಿಲ್ಲ ಎನ್ನುವುದು ಅವರ ಕಾವ್ಯಗಳಿಂದ ಗೋಚರವಾಗುತ್ತದೆ. ಅಡಿಗರ ನಂತರ ನವೋತ್ತರ ಕವಿ ಯಾರು? ಎಂಬ ಪ್ರಶ್ನೆ ಬಂದಾಗ ಡಾ. ದ.ರಾ. ಬೇಂದ್ರೆ, ಇಮ್ರಾಪೂರ ಅವರ ಹೆಸರು ಕೇಳಿ ಬಂದದ್ದುಂಟು. ಬೇಂದ್ರೆಯವರು ಒಂದು ಮರದ ಸೌಂದರ್ಯವನ್ನೂ ಅದ್ಭುತವಾಗಿ ಕಣ್ಮಿಗೆ ಕಟ್ಟುವ ಹಾಗೆ ವರ್ಣಿಸಿದರೆ, ಇಮ್ರಾಪೂರರು ಮರದೊಂದಿಗೆ ಮರದ ಬೇರುಗಳನ್ನೂ ಒಳಗೊಂಡು ವರ್ಣಿಸುವ ಕವಿ. ಸಿದ್ಧಲಿಂಗಯ್ಯನವರ ಬೈಗುಳಗಳಿಂದ ಕಾವ್ಯಗಳನ್ನು ನೋಡುತ್ತೇವೆ. ಅದಕ್ಕೂ ಮಿಗಿಲಾಗಿ ಭಿನ್ನವಾದ ರೀತಿಯಲ್ಲಿ ಬೈಗುಳಗಳ ಮುಖಾಂತರ ಕಾವ್ಯವನ್ನು ಕಟ್ಟಿಕೊಟ್ಟಿದ್ದು ಇಮ್ರಾಪೂರರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಧ್ವನಿಪೂರ್ಣ ಶೀರ್ಷಿಕೆ, ಪ್ರತಿಯೊಬ್ಬ ಕವಿಯೂ ಹೂವಿನಂತ ಮನಸ್ಸುಳ್ಳವನು. ಬದುಕಿನ ಸೌಂದರ್ಯವನ್ನು ಕವಿ ಕಾವ್ಯದ ಮೂಲಕ ಕಟ್ಟಿಕೊಡುತ್ತಾನೆ. ಸ್ತ್ರೀ ಪರವಾದ ಪ್ರಜ್ಞೆ ಕವಿಯಲ್ಲಿದೆ ಎಂದರು.ಪ್ರೊ. ಸೋಮಶೇಖರ ಇಮ್ರಾಪೂರ, ಪ್ರೊ. ಶಾಂತಾ ಇಮ್ರಾಪೂರ ಇದ್ದರು. ಸುಜಾತ ಗುರವ ಸುಗಮ ಸಂಗೀತ ಪ್ರಸ್ತುತಪಡಿಸಿದರು. ಹಾರ‍್ಮೋನಿಯಂ ಪರಶುರಾಮ ಕಟ್ಟಿಸಂಗಾವಿ ಹಾಗೂ ಅಲ್ಲಮಪ್ರಭು ಕಡಕೋಳ ತಬಲಾ ಸಾಥ್ ನೀಡಿದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಮಹೇಶ ಧ. ಹೊರಕೇರಿ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು.