ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನೇಕಾರರ ಮೂರು ನಿಗಮಗಳಾದ ತೀವ್ರ ಕೈ ಮಗ್ಗ ಅಭಿವೃದ್ಧಿ ನಿಗಮ, ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮ ಹಾಗೂ ಪಾವರ್ ಲೂಮ್ ಅಭಿವೃದ್ಧಿ ನಿಗಮಗಳನ್ನು ಒಗ್ಗೂಡಿಸುವ ಕೆಲಸ ಸರ್ಕಾರ ಮಾಡಲಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.ನಗರದ ಕಲಾಭವನದಲ್ಲಿ ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟ ಹಾಗೂ ಒಕ್ಕೂಟದ ಜಿಲ್ಲಾ ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜವಳಿ ಸಚಿವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಸತ್ಕಾರ ಸ್ವೀಕರಿಸಿ ಮಾತನಾಡಿದರು. 5 ಗ್ಯಾರಂಟಿಗಳಿಂದ ರಾಜ್ಯದಲ್ಲಿ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ ಎಂದು ವಿರೋಧ ಪಕ್ಷದವರು ಆಡಿಕೊಂಡರು. ಆದರೆ, ಸಿಎಂ ಸಿದ್ದರಾಮಯ್ಯನವರು ಎಲ್ಲ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನದ ಜತೆಗೆ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನೇಕಾರರಿಗೆ ನೀಡಿದ್ದ ಭರವಸೆಯಂತೆ ಸರ್ಕಾರದಿಂದ 10 ಎಚ್‌ಪಿವರೆಗೆ ಉಚಿತ ವಿದ್ಯುತ್ ನೀಡುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂದು ಹೇಳಿದರು.
ನೇಕಾರರು ತಮ್ಮ ನೇಕಾರಿಕೆ ವೃತ್ತಿ ಮುಂದುವರಿಸುತ್ತ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು. ಇಂದಿನ ಎಐ ಕಾಲದಲ್ಲೂ ಮೂಲ ಕಸುಬಿಗೆ ಮಾನ್ಯತೆ ನೀಡಬೇಕು. ಜೀವನ ನಡೆಸಲು ಎಲ್ಲರಿಗೂ ಎಲ್ಲ ಸಮಾಜಗಳ ಅವಶ್ಯಕತೆ ಇದೆ. ಎಲ್ಲರೊಂದಿಗೆ ಸಹಕಾರದಿಂದ ಇದ್ದಾಗ ಮಾತ್ರ ಜೀವನ ನಡೆಸಲು ಸಾಧ್ಯ ಎಂದರು.ರಾಮಕೃಷ್ಣ ಹೆಗಡೆ ಅವರು ಜವಳಿ ಇಲಾಖೆಯನ್ನು ಬೇರೆ ಮಾಡಿದ ಬಳಿಕ ಇಲಾಖೆಯಿಂದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು. ಆದರೆ, ಈಚೆಗೆ ಕೆ.ಎಚ್.ಡಿ.ಸಿಗೆ ನೀಡಲಾಗಿದ್ದ ಸಮವಸ್ತ್ರ ಶಾಲೆ ವಿತರಿಸುವಂತೆ ಆದೇಶ ನೀಡಿದರೂ ಕೆಲವೊಬ್ಬ ವ್ಯಕ್ತಿಗಳು ಸೂರತ್‌ನಿಂದ ಸಮವಸ್ತ್ರ ವಿತರಿಸಿದರು. ಯಾರೋ ಮಾಡಿದ ತಪ್ಪಿಗೆ ಸಮಾಜವನ್ನು ದೂಷಿಸುವುದು ಸರಿಯಲ್ಲ. ದೊರಕುವ ಸೌಲಭ್ಯಗಳಿಂದ ವಂಚಿರಾಗುವವರು ವೃತ್ತಿ ಬಿಟ್ಟು ಹೋಗುವ ಬದಲು ಕೈ ಮಗ್ಗದೊಂದಿಗೆ ಪಾವರ್ ಲೂಮ್ ಪ್ರಾರಂಭಿಸಬೇಕು. ಇದಕ್ಕಾಗಿ ಅರ್ಧ ಎಚ್.ಪಿ ಮೋಟರ್ ನೀಡುವ ಪ್ರಯತ್ನ ನಡೆದಿದೆ. ಇದರಿಂದ ನೇಕಾರರ ಶ್ರಮ ಉಳಿಸಲು ಯೋಚನೆಯನ್ನು ಸರ್ಕಾರ ಹೊಂದಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಕೆ.ಎಚ್.ಡಿ.ಸಿಯಿಂದ ಸಮವಸ್ತ್ರ ವಿತರಿಸುವುದನ್ನು ಬಿಟ್ಟರೆ ನೇಕಾರರ ಸ್ಥಿತಿ ಹೇಳತೀರದು. ಸಮವಸ್ತ್ರ ವಿತರಿಸುವ ಹಾಗೆ ಸಾರಿಗೆ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಅನುಕೂಲ ಇದ್ದಲ್ಲಿ ಆ ಇಲಾಖೆ ಸಿಬ್ಬಂದಿಗೆ ಕೆ.ಎಚ್.ಡಿ.ಸಿಯಿಂದ ಬಟ್ಟೆ ವಿತರಿಸುವ ವ್ಯವಸ್ಥೆ ಮಾಡಬೇಕು ಎಂದರು.ಈ ವೇಳೆ ಶೂನ್ಯ ಬಡ್ಡಿರದಲ್ಲಿ ಸಾಲ ಮಂಜೂರಾತಿ ಪತ್ರವನ್ನು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ವಿತರಿಸಿದರು. ಶಾಸಕ ಎಚ್.ವೈ.ಮೇಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಸೋಮಶೇಖರ, ಕೆಎಚ್‌ಡಿಸಿ ಮಾಜಿ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಜವಳಿ ಅಭಿವೃದ್ಧಿ ಆಯುಕ್ತ ಸಿ.ಎನ್.ಶ್ರೀಧರ, ಜವಳಿ ಇಲಾಖೆ ಜಂಟಿ ನಿರ್ದೇಶಕ ಎನ್.ಐ.ನೆಗಳೂರು, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ ಜಿಲ್ಲಾಧ್ಯಕ್ಷ ಚಂದ್ರಕಾಂತ ಶೇಖಾ, ಪ್ರಕಾಶ ಎಂ.ಬಿ, ಹೇಮಲತಾ ಇಂದಿರೇಶ, ಮಲ್ಲಣ್ಣ ಕೂನ್ನೂರ, ಮನೋಹರ ರಕ್ಕಸಗಿ ಸೇರಿದಂತೆ ಹಲವರು ಇದ್ದರು.
ಬೇಡಿಕೆ ಈಡೇರಿಸಲು ಪ್ರಯತ್ನ: ಘೋಷಣೆಯಾಗಿದ್ದ ನೇಕಾರರ ಅಭಿವೃದ್ಧಿ ನಿಗಮ ಕಾರ್ಯರೂಪಕ್ಕೆ ತಂದು, ಅದಕ್ಕೆ ಅನುದಾನ ನೀಡುವುದು, ಒಂದು ಎಚ್.ಪಿಯಿಂದ 20 ಎಚ್.ಪಿ ವರೆಗೆ ಉಚಿತ ವಿದ್ಯುತ್ ನೀಡುವುದು, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನೀಡುವ ಸವಲತ್ತನ್ನು ಕಾರ್ಮಿಕ ಇಲಾಖೆ ಮೂಲಕ ನೇಕಾರರಿಗೆ ನೀಡಬೇಕು ಹಾಗೂ ನೇಕಾರರು ತಯಾರಿಸುವ ಬಟ್ಟೆಗಳನ್ನು ಸರ್ಕಾರದ ವಿವಿಧ ಇಲಾಖೆಯ ಸಿಬ್ಬಂದಿಗೆ ನೀಡುವುದು ಸೇರಿದಂತೆ ನೇಕಾರ ಒಕ್ಕೂಟ ನೀಡಿದ ಎಲ್ಲ ಬೇಡಿಕೆಗಳನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಈಡೇರಿಸಲು ಪ್ರಯತ್ನಿಸಲಾಗುತ್ತದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.--
ಕೋಟ್ಪಂಚ ಗ್ಯಾರಂಟಿಗಳ ಭಾರ ಸರ್ಕಾರ ಮೇಲಿದ್ದರೂ ನೇಕಾರರಿಗೆ 10 ಎಚ್.ಪಿ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ₹132 ಕೋಟಿ ಹೊರೆಯಾಗಿದೆ.
ಶಿವಾನಂದ ಪಾಟೀಲ, ಜವಳಿ ಸಚಿವ