ಕನ್ನಡಪ್ರಭ ವಾರ್ತೆ ಕೋಲಾರಮಕ್ಕಳ ಖಾಯಿಲೆಗಳು ಮತ್ತು ಕುಂಠಿತ ಬೆಳವಣಿಗೆಯ ತೊಂದರೆ ಬಗ್ಗೆ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ ಅಂಗವಾಗಿ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.ಮಕ್ಕಳ ಮರಣ ತಪ್ಪಿಸಲು ಪ್ರಯತ್ನ
ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ತಾಯಂದಿರ ಮತ್ತು ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹುಟ್ಟುವ ಮಕ್ಕಳಲ್ಲಿ ಆಜನ್ಮ ನ್ಯೂನತೆಯು ಸುಮಾರು ೧೦೦ಕ್ಕೆ ೬ ರಿಂದ ೭ ಮಕ್ಕಳಲ್ಲಿದ್ದು, ಶೇ.೧೦ರಷ್ಟು ಮಕ್ಕಳಲ್ಲಿ ಕುಠಿತ ಬೆಳವಣಿಗೆ ಇರುತ್ತದೆ. ಪೌಷ್ಟಿಕ ಆಹಾರದ ಕೊರತೆ ಮತ್ತು ಇತರೆ ಖಾಯಿಲೆಗಳು ಬಂದು ಮಕ್ಕಳ ಮರಣ ಸಂಭವಿಸುವ ಸಾಧ್ಯತೆಯಿದೆ, ಇದನ್ನು ತಪ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಬಾಲಾ ಸ್ವಾಸ್ಥ್ಯ ಕಾರ್ಯಕ್ರಮ ಆರಂಭವಾಗಿದೆ ಎಂದರು.ಹುಟ್ಟಿದ ಮಗುವಿನಿಂದ ಹಿಡಿದು ೧೮ ವರ್ಷದ ವರೆಗಿನ ಮಕ್ಕಳಿಗೆ ಆಜನ್ಮ ನ್ಯೂನತೆ, ಮಕ್ಕಳ ಖಾಯಿಲೆಯಗಳು ಮತ್ತು ಕುಠಿತ ಬೆಳವಣಿಗೆಯ ತೊಂದರೆಗಳ ಬಗ್ಗೆ ತಪಾಸಣೆ ಮತ್ತು ಚಿಕಿತ್ಸೆಗಳನ್ನು ಒದಗಿಸಲು ವೈದ್ಯಕೀಯ ಶಾಲಾ ಆರೋಗ್ಯ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ನಡೆಸುವಂತಾಗಬೇಕು ಎಂದರು. ಆಜನ್ಮ ನ್ಯೂನತೆ ಖಾಯಿಲೆಗಳುಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಎಂ.ಎ.ಚಾರಣಿ ಮಾತನಾಡಿ, ಆಜನ್ಮ ನ್ಯೂನತೆಯಲ್ಲಿ ನರದೋಷ ಡೌನ್‌ಸಿಂಡ್ರೋಮ್, ಸೀಳುತುಟಿ, ವಕ್ರಪಾದ, ಜನ್ಮಜಾತ ಕಣ್ಣಿನ ಪೊರೆ, ಕಿವುಡು, ಹೃದಯ ಖಾಯಿಲೆ ಸಮಸ್ಯೆಗಳು ಒಳಗೊಂಡಿವೆ. ಕುಂಠಿತ ಬೆಳವಣಿಗೆಯಲ್ಲಿ ದೃಷ್ಠಿ, ಶ್ರವಣ, ಜ್ಞಾನ ಗ್ರಹಣ, ಭಾಷೆ ಗ್ರಹಣ, ಕಲಿಕೆ ಇತ್ಯಾದಿ, ಪೌಷ್ಠಿಕಾಂಶದ ಕೊರತೆಯಿಂದ ಆಪೌಷ್ಟಿಕತೆ ಎ ಮತ್ತು ಡಿ ಅನ್ನಾಂಗದ ಕೊರತೆಯಿಂದ ಕಣ್ಣಿನ ತೊಂದರೆ ಚರ್ಮದ ಖಾಯಿಲೆಗಳು, ಅಯೋಡಿನ್ ಕೊರತೆಯಿಂದ ಗಳಗಂಡ ರೋಗ ಬರಬಹುದು ಎಂದರು.
ಮಕ್ಕಳಲ್ಲಿ ಕಿವಿ ಸೊರುವುದು, ಹಲ್ಲಿನ ಸಮಸ್ಯೆ, ಸಾಮಾನ್ಯ ಜ್ವರ, ಶ್ವಾಸಕೋಶದ ಸೋಂಕು, ಚರ್ಮದ ಸೋಂಕುಗಳು ಮುಂತಾದ ಸಮಸ್ಯೆ ಕಾಣಿಸಿಕೊಂಡರೆ, ಈ ಕಾರ್ಯಕ್ರಮದಡಿ ತಪಾಸಣೆ ಪತ್ತೆ ಹಚ್ಚುವಿಕೆ ಚಿಕಿತ್ಸೆ, ರೆಪರಲ್ ಹಾಗೂ ಅನುಸರಣೆ ಉಚಿತವಾಗಿ ಎಪಿಎಲ್ ಮತ್ತು ಬಿಪಿಎಲ್ ಕುಟುಂಬಗಳಿಗೆ ಒದಗಿಸಲಾಗುವುದು ಎಂದು ತಿಳಿಸದರು. ರಕ್ತನಿಧಿಯಲ್ಲಿ ರಕ್ತ ಸಂಗ್ರಹರಕ್ತನಿಧಿ ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಆರು ರಕ್ತನಿಧಿಗಳಿದ್ದು, ಸಾಕಷ್ಟು ರಕ್ತ ಶೇಖರಣೆಯಾಗಿದ್ದು, ಯಾವುದೇ ಕೊರತೆಯಿಲ್ಲ, ಖಾಸಗಿ ಆಸ್ಪತ್ರೆಗಳ ಸಹಭಾಗೀತ್ವದಲ್ಲಿ ನಿಯಮಿತವಾಗಿ ಬ್ಲಡ್ ಕ್ಯಾಂಪ್‌ಗಳನ್ನು ಆಯೋಜಿಸಲಾಗುವುದು ಎಂದರು.ಜಿಲ್ಲಾ ಕ್ಷಯರೋಗ ಅಧಿಕಾರಿ ಪ್ರಸನ್ನ ಕುಮಾರ್ ಕ್ಷಯರೋಗದ ಕುರಿತು ಮಾತನಾಡಿ, ಆಧುನಿಕ ತಂತ್ರಜ್ಞಾನ ಸಹಾಯದಿಂದ ಕ್ಷಯರೋಗವನ್ನು ಪ್ರಾರಂಭ ಅಂತದಲ್ಲಿಯೇ ಕಂಡುಹಿಡಿಯಬಹುದಾಗಿದೆ. ಕ್ಷಯರೋಗ ಬರುವುದಕ್ಕೆ ನಿರ್ಧಿಷ್ಠ ಕಾರಣ ಇರುವುದಿಲ್ಲ, ಬೇರೆ-ಬೇರೆ ಕಾರಣಗಳಿಂದ ಕ್ಷಯರೋಗ ಬರುವ ಸಾಧ್ಯತೆಯಿದೆ. ದುಶ್ಚಟಗಳಿಂದ ಈ ರೋಗವು ಹೆಚ್ಚಾಗುತ್ತದೆ. ನಿರ್ಲಕ್ಷತೆಯಿಂದ ಉಲ್ಬಾಣವಾಗುತ್ತದೆ ಎಂದರು.
೧೩೧೬ ಕ್ಷಯ ರೋಗಿಗಳುಜಿಲ್ಲೆಯಲ್ಲಿ ಪ್ರಸ್ತುತ ೧೩೧೬ ಸಕ್ರಿಯ ಕ್ಷಯರೋಗ ಪ್ರಕರಣಗಳಿದ್ದು, ಶೇ.೭ರಷ್ಟು ಮರಣ ಪ್ರಕರಣಗಳನ್ನು ಗುರುತಿಸಲಾಗಿದೆ. ಈ ರೋಗವನ್ನು ಆರಂಭಿಕ ಹಂತದಲ್ಲಿ ಗುರುತಿಸುವ ಪ್ರಕ್ರಿಯೆ ಆದಲ್ಲಿ ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದಾಗಿದೆ, ಸರ್ಕಾರದ ಆದೇಶದಂತೆ ಟಿ.ಬಿ ಮುಕ್ತ ಗ್ರಾಪಂ ಕಾರ್ಯಕ್ರಮ ಹಮ್ಮಿಕೊಂಡಿದೆ, ಸದರಿ ಕಾರ್ಯಕ್ರಮದಲ್ಲಿ ಆರು ಗ್ರಾಪಂಗಳು ಸಕ್ರಿಯವಾಗಿ ಪಾಲ್ಗೊಂಡಿದ್ದವು, ಅವುಗಳಲ್ಲಿ ನಾಲ್ಕು ಗ್ರಾಪಂಗಳನ್ನು ಆಯ್ಕೆ ಮಾಡಿಕೊಂಡಿದೆ. ಕ್ಷಯರೋಗಗಳಿಗೆ ಮಾಹೆಯಾನ ನೀಡುತ್ತಿದ್ದ, ರೂ.೫೦೦ಗಳ ಮೊತ್ತವನ್ನು ಪ್ರಸ್ತುತ ೧೦೦೦ಕ್ಕೆ ಏರಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಡಿಹೆಚ್‌ಓ ಡಾ.ಶ್ರೀನಿವಾಸ್, ಕುಟುಂಬ ಕಲ್ಯಾಣಾಧಿಕಾರಿ ಚಂದನ್ ಕುಮಾರ್, ಸಿ.ಡಿ.ಪಿ.ಒ ವಂಶಿಕೃಷ್ಣ ಇದ್ದರು.