- ಅಧಿಕಾರ ಸ್ವೀಕರಿಸಿದ ನಂತರ ಪ್ರತಿಕ್ರಿಯಿಸುವೆ: ಶಾಸಕ ಬೇಳೂರು ಗೋಪಾಲಕೃಷ್ಣ
ಕನ್ನಡಪ್ರಭವಾರ್ತೆ ಸಾಗರಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ರಾಜ್ಯ ಸರ್ಕಾರ ಅರಣ್ಯ, ಕೈಗಾರಿಕಾ ನಿಗಮದ ಅಧ್ಯಕ್ಷ ಸ್ಥಾನ ಘೋಷಿಸಿದೆ. ಈ ಮೂಲಕ ಪಕ್ಷದ ಹೈಕಮಾಂಡ್ ಗೋಪಾಲಕೃಷ್ಣ ಬೇಳೂರು ಅವರನ್ನು ಸಮಾಧಾನಿಸಿದೆ ಎನ್ನಲಾಗುತ್ತಿದೆ.
ಹಾಗೆ ನೋಡಿದೆ ಬೇಳೂರು ತಾವು ಸಚಿವರಾಗಬೇಕೆಂದು ಅಪೇಕ್ಷಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಬಿಜೆಪಿಯಿಂದ ಎರಡು ಬಾರಿ ಶಾಸಕರಾದಾಗಲೂ ತಮಗೆ ಸಚಿವ ಸ್ಥಾನ ಬೇಕು ಎಂದು ಕೆಲವೊಮ್ಮೆ ಪ್ರತ್ಯಕ್ಷವಾಗಿ, ಕೆಲವೊಮ್ಮೆ ಪರೋಕ್ಷವಾಗಿ ಹೇಳಿದ್ದರು. ಆದರೆ ಸಿಕ್ಕಿರಲಿಲ್ಲ. ಹಾಗಾಗಿ ಸಚಿವ ಸ್ಥಾನದಿಂದ ವಂಚಿತರಾಗಿರುವುದು ಸೇರಿದಂತೆ ಬೇರೆ ಬೇರೆ ಕಾರಣಕ್ಕೆ ಅವರು ಬಿಜೆಪಿ ತೊರೆದು ಮತ್ತೆ ಬಿಜೆಪಿಗೆ ಮರಳಿದ್ದು ಈಗ ಇತಿಹಾಸ. ಬಿಜೆಪಿಯಿಂದ ಎರಡನೆ ಬಾರಿ ಗೆದ್ದಾಗ ನಿಗಮ ಮಂಡಳಿಯಲ್ಲಿ ಸ್ಥಾನ ಸಿಗುತ್ತದೆ ಎನ್ನಲಾಗುತ್ತಿತ್ತು. ಆದರೆ ಅದೂ ಕೂಡ ಸಾಧ್ಯವಾಗಿರಲಿಲ್ಲ.ಈಗ ಮೂರನೇ ಬಾರಿ ಕಾಂಗ್ರೆಸ್ಸಿನಿಂದ ಶಾಸಕರಾಗಿ ಆಯ್ಕೆಯಾದಾಗ ಬೇಳೂರಿಗೆ ಮಂತ್ರಿ ಸ್ಥಾನ ಗ್ಯಾರಂಟಿ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಹೈಕಮಾಂಡ್ ಮಧು ಬಂಗಾರಪ್ಪನವರಿಗೆ ಮಂತ್ರಿ ಸ್ಥಾನ ನೀಡಿತು. ಈ ಬಗ್ಗೆ ಬೇಳೂರು ಮೇಲ್ನೋಟಕ್ಕೆ ಅಸಮಾಧಾನ ತೋರಿಸಿಕೊಳ್ಳದಿದ್ದರೂ ಆಂತರ್ಯದಲ್ಲಿ ಅಸಮಾಧಾನ ಇದ್ದೇ ಇತ್ತು. ಮುಂದೆ ಮಧು ಬಂಗಾರಪ್ಪನವರಿಗೆ ಜಿಲ್ಲಾ ಉಸ್ತುವಾರಿಯ ಹೊಣೆಗಾರಿಕೆಯನ್ನೂ ನೀಡಲಾಯಿತು. ಹಾಗಾಗಿ ಇಡೀ ಜಿಲ್ಲೆಯಲ್ಲಿ ಮಧು ಅವರ ಹಿಡಿತ ಬಿಗಿಯಾಯಿತು. ಈ ಕಾರಣಕ್ಕಾಗಿ ಯೇ ಆರಂಭದಲ್ಲಿ ಮಧು ಹಾಗೂ ಬೇಳೂರು ಅವರ ಸಂಬಂಧ ಚೆನ್ನಾಗಿದ್ದರೂ ನಂತರ ಹಳಸಿದ್ದು ತಿಳಿದ ವಿಷಯ. ಇದನ್ನು ಬಹಿರಂಗವಾಗಿಯೇ (ಜಿಲ್ಲಾ ಉಸ್ತುವಾರಿ ಸಚಿವರು ಯಾರೆಂದು ನನಗೆ ಗೊತ್ತಿಲ್ಲವೆಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದು) ವ್ಯಕ್ತಪಡಿಸಿದ್ದರು.
ಈಗ್ಗೆ ಎರಡು ತಿಂಗಳ ಹಿಂದೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ತಾವೇ ಸರಿಯಾದ ಅಭ್ಯರ್ಥಿ, ಹೈಕಮಾಂಡ್ ಸಮ್ಮತಿಸಿದರೆ ನಾನೇ ಸ್ಪರ್ಧಿಸುತ್ತೇನೆ ಎಂದು ಬೇಳೂರು ಬಹಿರಂಗವಾಗಿ ಹೇಳಿದ್ದರು. ಆದರೆ ಇವೆಲ್ಲವೂ ತಮಗೆ ಸಚಿವ ಸ್ಥಾನ ಸಿಗದ ಅಸಮಾಧಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಮ್ಮನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದಿರುವ ಬಗೆಗಿನ ಪ್ರತಿಕ್ರಿಯೆಯಾಗಿತ್ತು.ಸಮಾಧಾನವಿದೆ ಎಂದ ಬೇಳೂರು: ಇದೀಗ ಪಕ್ಷದ ಹೈಕಮಾಂಡ್ ಬೇಳೂರು ಅವರಿಗೆ ಅರಣ್ಯ, ಕೈಗಾರಿಕಾ ನಿಗಮದ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಿದೆ. ನಿಗಮದ ಅಧ್ಯಕ್ಷ ಸ್ಥಾನ ದೊರಕಿರುವ ಬಗ್ಗೆ ಪ್ರತಿಕ್ರಿಯೆಗೆ ‘ಕನ್ನಡಪ್ರಭ’ ಸಂಪರ್ಕಿಸಿದಾಗ, ಈ ಬಗ್ಗೆ ಸಮಾಧಾನವಿದೆ. ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ. ಅಧಿಕಾರ ಸ್ವೀಕರಿಸಿದ ನಂತರ ಪ್ರತಿಕ್ರಿಯಿಸುತ್ತೇನೆ ಎಂದಷ್ಟೆ ಉತ್ತರಿಸಿದರು. ಮುಂದಿನ ಬೆಳವಣಿಗೆ ಬಗ್ಗೆ ಕಾದು ನೋಡಬೇಕು.