ಕನ್ನಡಪ್ರಭ ವಾರ್ತೆ ಅಥಣಿರಾಜ್ಯ ಸರ್ಕಾರಿ ನೌಕರರ 7ನೇ ವೇತನ ಆಯೋಗದ ವರದಿ ರಚಿಸಿ ಆದೇಶ ಹೊರಡಿಸಿ ಈಗಾಗಲೇ 18 ತಿಂಗಳು ಕಳೆದಿವೆ. ಆದರೆ, ಇನ್ನೂ ವರದಿ ಅನುಷ್ಠಾನ ಆಗಿಲ್ಲ. ಇದರಿಂದ ನೌಕರರಿಗೆ ತೊಂದರೆಯಾಗುತ್ತಿದೆ. ಸರ್ಕಾರ ಆಯೋಗದ ವರದಿಯನ್ನು ತ್ವರಿತವಾಗಿ ಜಾರಿ ಮಾಡಬೇಕು ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಮಗೊಂಡ ಪಾಟೀಲ ಆಗ್ರಹಿಸಿದರು.
ಸೋಮವಾರ ಶಾಸಕ ಲಕ್ಷ್ಮಣ ಸವದಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ರಾಜ್ಯಗಳಲ್ಲಿ ಈಗಾಗಲೇ 8ನೇ ವೇತನ ಆಯೋಗದ ವರದಿ ಜಾರಿಯಲ್ಲಿದ್ದು, ಅವರ ಸಂಬಳಕ್ಕೂ ನಮ್ಮ ಸಂಬಳಕ್ಕೂ ಭಾರಿ ಅಂತರವಿದೆ. ದುಬಾರಿಯಾಗುತ್ತಿರುವ ಜೀವನ ಶೈಲಿಯಿಂದ ನಮ್ಮ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತಿದ್ದು, ಆದಷ್ಟು ಬೇಗ ರಾಜ್ಯ ಸರ್ಕಾರ ವರದಿ ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ ಹಿರೇಮಠ ಮಾತನಾಡಿ, ಅಥಣಿ ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಇಲ್ಲದಿರುವುದರಿಂದ ಬಡ ಹಾಗೂ ಮಧ್ಯಮ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ದೊರಕುತ್ತಿಲ್ಲ. ಇಲ್ಲಿ ಒಂದು ಸರ್ಕಾರಿ ಪ್ರೌಢ ಶಾಲೆ ಮಂಜೂರು ಮಾಡಬೇಕು. ಇದಲ್ಲದೆ ತಾಲೂಕಿನಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಪಿಎಸ್‌ಟಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಜಿಪಿಟಿ ಹುದ್ದೆಗೆ ಪದೋನ್ನತಿ ನೀಡಲು ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಶಿಕ್ಷಕರ ಬೇಡಿಕೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕೆಂದು ಮನವಿ ಮಾಡಿದರು.ಶಾಸಕ ಲಕ್ಷ್ಮಣ ಸವದಿ ಮನವಿ ಸ್ವೀಕರಿಸಿ ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಶೀಘ್ರದಲ್ಲೇ ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅಲ್ಲದೆ ಸರ್ಕಾರವು 7ನೇ ವೇತನ ಆಯೋಗ ರಚಿಸಿ ಆದೇಶ ಹೊರಡಿಸಿ ಈಗಾಗಲೇ ಒಂದು ವರ್ಷದ ಮೇಲಾಗಿದೆ. ಆದಷ್ಟು ಬೇಗ ಆಯೋಗದ ವರದಿಯನ್ನು ತ್ವರಿತವಾಗಿ ಪಡೆದು ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು. ಸರ್ಕಾರಿ ಪ್ರೌಢಶಾಲೆಯ ಬಗ್ಗೆ ಈಗಾಗಲೇ ಎರಡು ಬಾರಿ ಮನವಿ ಮಾಡಿದ್ದೇನೆ. ಪಟ್ಟಣದಲ್ಲಿ ಅನುದಾನಿತ ಶಾಲೆಗಳು ಇರುವುದರಿಂದ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಿಲ್ಲ. ಆದರೂ ಕೂಡ ವಿಶೇಷ ಆದ್ಯತೆ ಮೇರೆಗೆ ಇಲ್ಲಿ ಒಂದು ಸರ್ಕಾರಿ ಪ್ರೌಢಶಾಲೆ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಈ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ರಾಮನಗೌಡ ಪಾಟೀಲ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಅಥಣಿ ಘಟಕದ ಅಧ್ಯಕ್ಷ ವಿಶ್ವನಾಥ ಸೂರ್ಯವಂಶಿ ಉಪಾಧ್ಯಕ್ಷ ಎ.ಎಚ್. ಮುಲ್ಲಾ, ಖಜಾಂಚಿ ಅನಿಲ ಗಸ್ತಿ, ಸುರೇಶ್, ನಾಗಪ್ಪ ಹೂಗಾರ, ರಾಜೇಶ ಪಾಟೀಲ, ಪಿ.ಎ ಮರನೂರ, ಸುನೀಲ ದಾದಾಗೋಳ, ಜಿ.ಎಂ ಹಿರೇಮಠ, ರೇಣುಕಾ ಬಡಕಂಬಿ, ಅಕ್ಬರ ಮುಜಾವರ, ಸುದರ್ಶನ ದಡಕೆ, ವಿಷ್ಣು ಪೂಜಾರಿ, ಪ್ರಭು ಜಂಬಗಿ, ರವಿ ಹೆಗಡೆ, ಎಂ.ಎಸ್ ಮಗದುಮ, ಸಂತೊಷ ನಿಡೋಣಿ, ಅಸೀಪ್ ಖಿಲ್ಲೆದಾರ ಸೇರಿ ಅನೇಕರು ಇದ್ದರು.