ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕರ್ನಾಟಕ ಶಿಕ್ಷಣ ವ್ಯೆವಸ್ಥೆಯಲ್ಲಿ ದ್ವಿಭಾಷಾ ನೀತಿ ಜಾರಿಗೆ ತರುವಂತೆ ಒತ್ತಾಯಿಸಿ ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಕಾರ್ಯಕರ್ತರು ನಗರ ಹೊರವಲಯದ ಜಿಲ್ಲಾಡಳಿತ ಭವನದ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಎಂ.ಆರ್.ಲೋಕೇಶ್ ಮಾತನಾಡಿ, ಕರ್ನಾಟಕ ರಾಜ್ಯದ ಪಠ್ಯಕ್ರಮದಲ್ಲಿ ಸಾಧಾರಣವಾಗಿ ಪ್ರಥಮ ಭಾಷೆಯಾಗಿ ಕನ್ನಡ, ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಮತ್ತು ತೃತೀಯ ಭಾಷೆಯಾಗಿ ಹಿಂದಿಯನ್ನು ಕಲಿಸಲಾಗುತ್ತಿದೆ ಎಂದರು. ತೃತೀಯ ಭಾಷೆ ಹಿಂದಿ ಹೊರೆ
ತೃತೀಯ ಭಾಷೆ ಹಿಂದಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನಗತ್ಯ ಒತ್ತಡ ಹೇರುತ್ತಿದೆ. 2024ರ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 90,794 ವಿದ್ಯಾರ್ಥಿಗಳು ತೃತೀಯ ಭಾಷೆಯಾದ ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದಾರೆ. ಇದು ಹಿಂದಿ ಕಡ್ಡಾಯ ಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಶೈಕ್ಷಣಿಕ ಹೊರೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದರು.ತ್ರಿಭಾಷಾ ಸೂತ್ರದ ಕುರಿತು ರಾಷ್ಟ್ರ ಕವಿ ಕುವೆಂಪು ಅವರು ವಿರೋಧಿಸಿದ್ದರು. ಕರ್ನಾಟಕದ ಸಾಂಸ್ಕೃತಿಕ ಮತ್ತು ಭಾಷಿಕ ಆಸ್ಮಿತೆಯಲ್ಲಿ ಈ ನೆಲದ ನುಡಿಯಾದ ಕನ್ನಡವು ಕೇಂದ್ರ ಸ್ಥಾನವನ್ನು ಹೊಂದಿದೆ. ಬದಲಾದ ಕಾಲಘಟ್ಟದಲ್ಲಿ ಇಂಗ್ಲಿಷ್ ಭಾಷೆಯು ಜಾಗತಿಕ ವ್ಯವಹಾರಗಳಿಗೆ, ಉನ್ನತ ಶಿಕ್ಷಣ ಮತ್ತು ವೃತ್ತಿ ನಿರ್ವಹಣೆಗೆ ಅಗತ್ಯವಾಗಿದ್ದು, ಇದನ್ನು ಕಲಿಯುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿದೆ. ಆದರೆ, ಹಿಂದಿ ಓದಿಸುವುದರಿಂದ ಯಾವುದೇ ಲಾಭವಿಲ್ಲ ಎಂದರು.
ತ.ನಾಡಲ್ಲಿ ದ್ವಿಭಾಷಾ ನೀತಿತಮಿಳುನಾಡು 1968ರಿಂದಲೇ ತ್ರಿಭಾಷಾ ನೀತಿಯನ್ನು ತಿರಸ್ಕರಿಸಿ, ತಮಿಳು ಮತ್ತು ಇಂಗ್ಲಿಷ್ ಭಾಷೆಗಳನ್ನು ಒಳಗೊಂಡ ದ್ವಿಭಾಷಾ ನೀತಿಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಇತ್ತೀಚೆಗೆ, ಮಹಾರಾಷ್ಟ್ರ ಸರ್ಕಾರವು ಸಹ ತ್ರಿಭಾಷಾ ನೀತಿಯನ್ನು ರದ್ದುಗೊಳಿಸಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ. ಕರ್ನಾಟಕವೂ ಮಾತೃಭಾಷೆ ಕನ್ನಡ ಹಾಗೂ ಜಾಗತಿಕ ಸಂವಹನ ಭಾಷೆಯಾಗಿ ಆಂಗ್ಲ ಭಾಷೆ ಬಳಸುವ ಮೂಲಕ ದ್ವಿಭಾಷಾ ನೀತಿಗೆ ಆದ್ಯತೆ ನೀಡಬೇಕು ಎಂದರು.
ಪ್ರತಿಭಟನೆಯಲ್ಲಿ ಕರವೇ ಯುವ ಜಿಲ್ಲಾಘಟಕದ ಅಧ್ಯಕ್ಷ ಎಬಿಕೆ ಬಾಲು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಜಾತಮ್ಮ, ಪದಾಧಿಕಾರಿಗಳಾದ ಹರೀಶ್, ನಂದಿವಿನೋದ್, ವೆಂಕಟರೋಣಪ್ಪ, ಮುನಿರಾಜು, ಮಧುಲತಾ, ಲಕ್ಷ್ಮೀ,ಶಾರದಮ್ಮ, ಶ್ರೀನಿವಾಸಯಾದವ್, ಚಿಕ್ಕನಹಳ್ಳಿದೇವರಾಜ್, ಆರ್.ನಾಗರಾಜ್, ಮಂಜುನಾಥ್,ಚೇತನ್ ಕುಮಾರ್, ಜಿಯಾಉಲ್ಲಾ, ಶಬ್ಬೀರ್ ಅಹಮದ್, ಮತ್ತಿತರರು ಇದ್ದರು.