ಕನ್ನಡಪ್ರಭ ವಾರ್ತೆ ಬೆಳಗಾವಿ
ಕನ್ನಡ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಾಗೂ ಗೂಂಡಾ ಕಾಯ್ದೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಕರುನಾಡು ವಿಜಯ ಸೇನೆಯ ರಾಜ್ಯಾಧ್ಯಕ್ಷ ದೀಪಕ ನೀಲಕಂಠಯ್ಯ ಒತ್ತಾಯಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡು, ನುಡಿ, ನೆಲ ಜಲ ಭಾಷೆಯ ವಿಚಾರದಲ್ಲಿ ಕನ್ನಡಿಗರನ್ನು ಕೆಣಕುತ್ತಿರುವ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆತರುವವರ ವಿರುದ್ಧ ಹೋರಾಟ ಮಾಡುವ ಕನ್ನಡಿಗರ ಮೇಲೆ ಅಧಿಕಾರದ ಆಸೆಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಪ್ರಕರಣಗಳನ್ನು ಸಂಪೂರ್ಣವಾಗಿ ಪರಿಗಣಿಸದೆ ಈ ನಾಡಿಗಾಗಿ ತಮ್ಮ ಬದುಕನ್ನು ಪಣಕ್ಕಿಟ್ಟು ಹೋರಾಡುವವರ ಮೇಲೆ ಗುಂಡಾ ಕಾಯ್ದೆ ಕೊಲೆಯತ್ನ ಕಾನೂನು ಉಲ್ಲಂಘನೆ ಇಂತಹ ಅನೇಕ ಪ್ರಕರಣಗಳನ್ನು ದಾಖಲು ಮಾಡುತ್ತಿರುವುದು ಖಂಡನೀಯ ಎಂದರು.
ಪೊಲೀಸರು ನಮ್ಮನ್ನು ಆಳುವ ಸರ್ಕಾರಗಳು ಪ್ರಕರಣಗಳ ಹೆಸರಿನಲ್ಲಿ ಕನ್ನಡಪರ ಹೋರಾಟಗಾರರ ಕೈಗೆ ಕೋಳ ತೊಡಿಸುತ್ತಿದ್ದಾರೆ, ಹೋರಾಟಗಳನ್ನು ಹತ್ತಿಕ್ಕಲು ಯತ್ನಿಸುವುದು ನಾಚಿಕೆಗೇಡಿನ ಸಂಗತಿ. ನಾಡ ರಕ್ಷಣೆಗೆ ಧ್ವನಿ ಎತ್ತುವರ ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ಈ ನಾಡಿಗೆ ಕುತ್ತು ಬಂದಾಗ ಬೀದಿಗಿಳಿದು ಈ ನಾಡನ್ನು ರಕ್ಷಣೆ ಮಾಡಿಕೊಳ್ಳುವರು ಯಾರು ಎಂದು ಪ್ರಶ್ನಿಸಿದ ಅವರು, ನಾಡದ್ರೋಹಿಗಳು ಹವಾನಿಯಂತ್ರಿತ ರೂಮಿನಲ್ಲಿದ್ದರೆ, ನಾಡ ರಕ್ಷಕರು ಜೈಲಿನಲ್ಲಿರುವುದು ದುರಂತ. ಪುಸ್ತುತ ಸರ್ಕಾರ ಈ ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕನ್ನಡಪರ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.ಕನ್ನಡಿಗರ ಪರವಾಗಿ ಸರ್ಕಾರ ನಿಲ್ಲಬೇಕು ರಾಜ್ಯದಲ್ಲಿ ಮುಂದಿನ ದಿನಮಾನಗಳಲ್ಲಿ ಹೋರಾಟಗಾರರ ಮೇಲೆ ಹಾಕುವ ಮೊಕ್ಕದಮ್ಮೆಗಳನ್ನು ತಡೆಯಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಒಂದು ವೇಳೆ ಈ ನಮ್ಮ ಮನವಿಯನ್ನು ನಿರ್ಲಕ್ಷಿಸಿದ್ದೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೊಷ್ಠಿಯಲ್ಲಿ ಮಹೇಶ ಆರ್.ಎಸ್, ಶಿವಪುತ್ರಪ್ಪ ಗುಣಧಾಳ, ಸಂಪತಕುಮಾರ ದೇಸಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.