ರಾಜ್ಯದಲ್ಲಿ ‘ಡೆಂಘೀ ಹರಡಿದ ಢೋಂಗಿ ಸರ್ಕಾರ’: ಬಿಜೆಪಿ ಆರೋಪ

KannadaprabhaNewsNetwork | Updated : Jul 10 2024, 12:35 AM IST

ಸಾರಾಂಶ

ಈಗಾಗಲೇ ರಾಜ್ಯಾದ್ಯಂತ ಅಧಿಕೃತವಾಗಿ ೮ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅನಧಿಕೃತವಾಗಿ ೧೫ ಸಾವಿರಕ್ಕೂ ಹೆಚ್ಚು ಮಂದಿ ಡೆಂಘೀ ರೋಗದಿಂದ ಸಾವು-ಬದುಕಿನ ನಡುವೆ ನರಳಾಡುತ್ತಿದ್ದಾರೆ. ಬೆಂಗಳೂರು ಒಂದರಲ್ಲೇ ೧೮೦೦ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ನಿತ್ಯ ೨೫೦ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದಲ್ಲಿ ಡೆಂಘೀ ವ್ಯಾಪಕವಾಗಿ ಹರಡುತ್ತಿದ್ದು, ಡೆಂಘೀ ರೋಗಿಗಳಿಗೆ ಉತ್ತಮ ರೀತಿಯ ಚಿಕಿತ್ಸೆ, ಸೌಲಭ್ಯ ಒದಗಿಸುವಲ್ಲಿ ರಾಜ್ಯ ಕಾಂಗ್ರೆಸ್‌ನ ಢೋಂಗಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ನೇತೃತ್ವದಲ್ಲಿ ನಗರಸಭೆ ಎದುರು ಸೇರಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸೊಳ್ಳೆಪರದೆಯನ್ನು ಹೊದ್ದು ಕುಳಿತು ಡೆಂಘೀಯಿಂದ ರಕ್ಷಣೆ ಪಡೆಯುವ ಅಣಕು ಪ್ರದರ್ಶಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಡಾ.ಎನ್.ಎಸ್.ಇಂದ್ರೇಶ್ ಮಾತನಾಡಿ, ಈಗಾಗಲೇ ರಾಜ್ಯಾದ್ಯಂತ ಅಧಿಕೃತವಾಗಿ ೮ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅನಧಿಕೃತವಾಗಿ ೧೫ ಸಾವಿರಕ್ಕೂ ಹೆಚ್ಚು ಮಂದಿ ಡೆಂಘೀ ರೋಗದಿಂದ ಸಾವು-ಬದುಕಿನ ನಡುವೆ ನರಳಾಡುತ್ತಿದ್ದಾರೆ. ಬೆಂಗಳೂರು ಒಂದರಲ್ಲೇ ೧೮೦೦ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ನಿತ್ಯ ೨೫೦ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗಾಗಲೇ ೧೦ಕ್ಕೂ ಹೆಚ್ಚು ಮಂದಿ ಡೆಂಘೀ ರೋಗದಿಂದ ಮೃತಪಟ್ಟಿರುವುದಾಗಿ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಬೇರೆ ಯಾವ ರಾಜ್ಯಗಳಲ್ಲಿಯೂ ಈ ರೀತಿಯ ದುರಂತ ನಡೆದಿಲ್ಲ. ಸರ್ಕಾರ ಐದು ಸುಳ್ಳು ಗ್ಯಾರಂಟಿಗಳ ನಡುವೆ ಜನರ ಸಾವಿನ ಗ್ಯಾರಂಟಿಯನ್ನು ಅವರು ಘೋಷಿಸದೆ ಜಾರಿಗೆ ತಂದಿದ್ದಾರೆ. ಆರೋಗ್ಯ ಇಲಾಖೆ ಮಾಹಿತಿಯಂತೆ ಕಳೆದ ೬ ತಿಂಗಳ ಹಿಂದೆಯೇ ರಾಜ್ಯದಲ್ಲಿ ಡೆಂಘೀ ಕಾಣಿಸಿಕೊಂಡಿದೆ. ಅದಕ್ಕೆ ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳು ಸರಿಯಾದ ಕ್ರಮ ಕೈಗೊಳ್ಳದೆ ಭ್ರಷ್ಟಾಚಾಠರದಲ್ಲಿ ನಿರತವಾಗಿದ್ದ ಸರ್ಕಾರ ಈಗಲೂ ಎಚ್ಚೆತ್ತುಕೊಳ್ಳದಿರುವುದರಿಂದ ಮಕ್ಕಳು ಮತ್ತು ವೃದ್ಧರು ಬಲಿಯಾಗುತ್ತಿದ್ದಾರೆ ಎಂದು ದೂರಿದರು.

ಇದೇ ಸಮಯವನ್ನು ಬಳಸಿಕೊಳ್ಳುತ್ತಿರುವ ಖಾಸಗಿ ಆಸ್ಪತ್ರೆಗಳು ಮತ್ತು ಔಷಧ ಅಂಗಡಿಯವರು ಡೆಂಘೀ ಪರೀಕ್ಷೆ ಹಾಗೂ ಡೆಂಘೀಗೆ ಸಂಬಂಧಿಸಿದ ಔಷಧಗಳನ್ನು ಹೆಚ್ಚಿನ ಹಣಕ್ಕೆ ಬ್ಲಾಕ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಇವರ ವಿರುದ್ಧವೂ ಕ್ರಮ ಜರುಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ಭ್ರಷ್ಟ ಸರ್ಕಾರ ಮುಂದಿನ ದಿನಗಳಲ್ಲೂ ಇದೇ ರೀತಿ ಮುಂದುವರೆದರೆ ರಾಜ್ಯದ ಜನರು ಡೆಂಘೀಯಿಂದ ನರಳಿ ಇದೊಂದು ರೋಗಗ್ರಸ್ಥ ರಾಜ್ಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿ, ಡೆಂಘೀ ರೋಗಿಗಳಿಗೆ ಉತ್ತಮ ರೀತಿಯ ಚಿಕಿತ್ಸೆ ಮತ್ತು ಸೌಲಭ್ಯ ಒದಗಿಸುವಲ್ಲಿ ರಾಜ್ಯ ಕಾಂಗ್ರೆಸ್‌ನ ಢೋಂಗಿ ಸರ್ಕಾರ ವಿಫಲವಾಗಿದೆ. ಡೆಂಘೀ ಪೀಡಿತ ಸರ್ಕಾರಕ್ಕೂ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ನಂಬಿರುವ ಮುಗ್ಧ ಜನತೆಗೂ ಅರಿವು ಮೂಡಿಸಲು ಬಿಜೆಪಿ ಹೋರಾಟ ಕೈಗೆತ್ತಿಕೊಂಡಿದೆ ಎಂದರು.

ಡೆಂಘೀ ಪ್ರಕರಣಗಳು ಹೆಚ್ಚುತ್ತಿದ್ದರೂ ಸರ್ಕಾರದ ಆರೋಗ್ಯ ಇಲಾಖೆ ಮಂತ್ರಿಯನ್ನು ಶೀಘ್ರವೇ ರಾಜೀನಾಮೆ ನೀಡಲು ಶಿಫಾರಸು ಮಾಡುವಂತೆ ರಾಜ್ಯಪಾಲರಲ್ಲಿ ಮನವಿ ಮಾಡಿದರಲ್ಲದೇ, ವೈದ್ಯಕೀಯ ತುರ್ತುಪರಿಸ್ಥಿತಿಯನ್ನು ರಾಜ್ಯದಲ್ಲಿ ಜಾರಿಗೊಳಿಸುವಂತೆಯೂ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತಕುಮಾರ, ಮುಖಂಡರಾದ ಎಚ್.ಆರ್.ಅರವಿಂದ್, ಡಾ.ಸದಾನಂದ, ಶ್ರೀಧರ್, ಬಿ.ವಿವೇಕ, ಸಿ.ಟಿ.ಮಂಜುನಾಥ, ಎಸ್.ಶಿವಕುಮಾರ ಆರಾಧ್ಯ, ನಿತ್ಯಾನಂದ, ದೇವಿರಮ್ಮ, ವಿದ್ಯಾನಾಗೇಂದ್‌ರ, ಡಿ.ಕೆ.ಶಿವಕುಮಾರ್, ಹೊಸಹಳ್ಳಿ ಶಿವು, ಎಸ್.ಸಿ.ಯೋಗೇಶ್, ನಾಗಾನಂದ್, ಬಿ.ಕೃಷ್ಣ, ಡಿ.ಹೆಚ್.ಹೇಮಂತ್, ಚಾಮರಾಜು, ಮಾದರಾಜ ಅರಸು, ಇತರರಿದ್ದರು.

Share this article