ಚನ್ನರಾಯಪಟ್ಟಣದಲ್ಲಿ ವ್ಯಾಪಕಗೊಂಡ ಡ್ರಗ್ಸ್‌ ಜಾಲ

KannadaprabhaNewsNetwork | Published : Jul 8, 2024 12:35 AM

ಸಾರಾಂಶ

ಚನ್ನರಾಯಪಟ್ಟಣದಲ್ಲಿ ಮೆಡಿಕಲ್ ಸ್ಟೋರ್‌ಗಳಲ್ಲಿ ಒಂದು ಮಾತ್ರೆಗೆ ೩೦೦ ರು. ತೆಗೆದುಕೊಳ್ಳುವ ಕೆಲ ಮೆಡಿಕಲ್ ಸ್ಟೋರ್ ಮಾಲೀಕರು ವೈದ್ಯರ ಯಾವುದೇ ಚೀಟಿ ಇಲ್ಲದೆ ಮತ್ತು ಅಪ್ರಾಪ್ತ ಬಾಲಕರಿಗೆ ಹಣದ ಆಸೆಗೆ ಹೆಚ್ಚಿನ ದರಕ್ಕೆ ಮಾರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ರೈಲ್ವೆನಿಲ್ದಾಣದ ರಸ್ತೆ, ಡಾ. ಸಿ. ಎನ್. ಮಂಜುನಾಥ್ ರಸ್ತೆ, ಚಾನಲ್ ರಸ್ತೆ, ಕ್ರೀಡಾಂಗಣ ಸುತ್ತಮುತ್ತ ಬಾಗೂರು ರಸ್ತೆ, ಗೂರನಹಳ್ಳಿಮಂಟಿ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಯುವಕರ ಮೂರ್‍ನಾಲ್ಕು ಗುಂಪು ಕಟ್ಟಿಕೊಂಡು ಎಣ್ಣೆ, ಗಾಂಜಾ, ಡ್ರಗ್ಸ್‌ಗಳ ಮತ್ತಿನಲ್ಲಿ ತೇಲಾಡುತ್ತಿದ್ದಾರೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನಲ್ಲಿ ಎಗ್ಗಿಲ್ಲದೆ ಹಾಡಹಗಲೇ ಡ್ರಗ್ಸ್‌ ಹಾಗೂ ಗಾಂಜಾ ಮಾರಾಟ ಜಾಲ ನಡೆಯುತ್ತಿರುವುದನ್ನು ಅಧಿಕಾರಿಗಳು ಕಂಡೂ ಕಾಣದಂತೆ ಕಣ್ಣುಮುಚ್ಚಿ ಕುಳಿತಿದ್ದಾರೆ.

ಪಟ್ಟಣದ ಬಾಗೂರು ರಸ್ತೆ, ವಳಗೇರಮ್ಮ ದೇವಸ್ಥಾನದ ಹತ್ತಿರ, ಅಮಾನಿಕೆರೆ ಹೀಗೆ ಅನೇಕ ಜನರು ಓಡಾಟದ ಪ್ರದೇಶಗಳಲ್ಲಿ ಇನ್ನೂ ಮೀಸೆ ಬಾರದ ಹುಡುಗರಿಗೆ ಗಾಂಜಾ, ಡ್ರಗ್ಸ್‌ಗಳು ಸಿಗುತ್ತಿದ್ದು ಓದುವ ವಯಸ್ಸಿನಲ್ಲಿ ನಶೆಗೆ ಅಂಟಿಕೊಂಡು ಜೀವನ ಹಾಳು ಮಾಡಿಕೊಳ್ಳುತ್ತಿರುವ ಯುವಕರನ್ನು ಕೆಲ ದಲ್ಲಾಳಿಗಳು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.ಇನ್ನು ಮೆಡಿಕಲ್ ಸ್ಟೋರ್‌ಗಳಲ್ಲಿ ಸಿಗುವ ಹೈಡೋಸ್‌ಗಳ ಮಾತ್ರೆಗಳನ್ನು ತೆಗೆದುಕೊಂಡು ಹೋಗಿ ನೀರಿನ ಬಾಟಲ್‌ನಲ್ಲಿ ಕರಗಿಸಿ ಸಿರಂಜ್ ಮೂಲಕ ಸೇವಿಸಿದರೆ ಮೂರ್ಛೆಗೆ ತೆರಳಿ ಒಂದು ದಿನ ಪೂರ್ತಿ ಮತ್ತಿನ ನಶೆಯಲ್ಲೇ ತೇಲಾಡಿ ನಾನು ಏನು ಮಾಡುತ್ತಿದ್ದೇನೆ ಎಂಬ ಪರಿಜ್ಞಾನವಿರುವುದಿಲ್ಲ. ಒಂದು ಮಾತ್ರೆಗೆ ೩೦೦ ರು. ತೆಗೆದುಕೊಳ್ಳುವ ಕೆಲ ಮೆಡಿಕಲ್ ಸ್ಟೋರ್ ಮಾಲೀಕರು ವೈದ್ಯರ ಯಾವುದೇ ಚೀಟಿ ಇಲ್ಲದೆ ಮತ್ತು ಅಪ್ರಾಪ್ತ ಬಾಲಕರಿಗೆ ಹಣದ ಆಸೆಗೆ ಹೆಚ್ಚಿನ ದರಕ್ಕೆ ಮಾರುತ್ತಿದ್ದು ಮೆಡಿಕಲ್ ಸ್ಟೋರ್‌ಗಳ ಮೇಲೆ ಡ್ರಕ್ಸ್ ಕಂಟ್ರೋಲ್ ತಂಡ ಭೇಟಿ ನೀಡಿ ಪರಿಶೀಲಿಸುವುದನ್ನು ಬಿಟ್ಟು ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ. ಇನ್ನು ಗಾಂಜಾ ಮಾರಾಟದ ಜಾಲದ ಬಗ್ಗೆ ಅಬಕಾರಿಯವರು ಕಾರ್ಯಾಚರಣೆ ನಡೆಸದೆ ಬಾರ್‌ಗಳ ಮಾಲೀಕನ್ನ ಶ್ರೀಮಂತರಾಗಿಸುವ ಕಡೆ ಬ್ಯುಸಿಯಾಗಿದ್ದಾರೆ.

ಪಟ್ಟಣದ ಕೆಲ ರಸ್ತೆಗಳಲ್ಲಿ ಸಂಜೆ ಹೊತ್ತು ಹೆಂಗಸರು, ಸಂಸಾರಸ್ಥರು ಓಡಾಡಲು ಭಯಭೀತರಾಗಿದ್ದು, ರೈಲ್ವೆನಿಲ್ದಾಣದ ರಸ್ತೆ, ಡಾ. ಸಿ. ಎನ್. ಮಂಜುನಾಥ್ ರಸ್ತೆ, ಚಾನಲ್ ರಸ್ತೆ, ಕ್ರೀಡಾಂಗಣ ಸುತ್ತಮುತ್ತ ಬಾಗೂರು ರಸ್ತೆ, ಗೂರನಹಳ್ಳಿಮಂಟಿ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಯುವಕರ ಮೂರ್‍ನಾಲ್ಕು ಗುಂಪು ಕಟ್ಟಿಕೊಂಡು ಎಣ್ಣೆ, ಗಾಂಜಾ, ಡ್ರಗ್ಸ್‌ಗಳ ಮತ್ತಿನಲ್ಲಿ ತೇಲಾಡುತ್ತಿದ್ದಾರೆ.

ಡ್ರಗ್ಸ್ ಖರೀದಿಸಲು ಕಳ್ಳಮಾರ್ಗ: ಇನ್ನು ಓದುವ ವಯಸ್ಸಿನಲ್ಲಿ ದುಷ್ಟಟಕ್ಕೆ ಬೀಳುವ ಯುವಕರು ಡ್ರಗ್ಸ್ ಸೇವಿಸಲು ಹಣ ಇಲ್ಲದ ಸಂದರ್ಭದಲ್ಲಿ ಹಾಡಹಗಲೇ ಪಾಳುಬಿದ್ದ ಮನೆಗಳಿಗೆ ಹೋಗಿ ನೀರು ಕಾಯಿಸುವ ಹಂಡೆ, ಹಳೇ ಕಬ್ಬಿಣಗಳನ್ನು ಕದ್ದು ಮಾರಾಟ ಮಾಡಿ ಬಂದ ಹಣದಲ್ಲಿ ಮೆಡಿಕಲ್ ಸ್ಟೋರ್‌ಗಳಲ್ಲಿ ಮಾತ್ರೆ ಖರೀದಿಸುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಇಂತಹ ಪ್ರಕರಣಗಳ ಬಗ್ಗೆ ತಾಲೂಕು ಆಡಳಿತ ಹೆಚ್ಚುನಿಗಾ ವಹಿಸಿ ಸಂಬಂಧಪಟ್ಟ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಅಬಕಾರಿ ಇಲಾಖೆ, ಡ್ರಗ್ ಕಂಟ್ರೋಲರ್‌ ಘಟಕ ಸೇರಿದಂತೆ ಜನಪ್ರತಿನಿಧಿಗಳನ್ನು ಸಭೆ ಕರೆದು ಕಡಿವಾಣ ಹಾಕದಿದ್ದರೆ ಯುವ ಸಮುದಾಯ ಹಾಳಾಗಲು ನೇರವಾಗಿ ಹೊಣೆಯಾದಂತೆ ಕಾಣುತ್ತಿದೆ.

ಇಬ್ಬರು ಯುವಕರು ಪಾಳು ಬಿದ್ದ ಮನೆಯೊಂದರಲ್ಲಿ ಸಿರಂಜ್ ಮೂಲಕ ಮತ್ತು ಬರುವ ಡ್ರಗ್ಸ್ ತೆಗೆದುಕೊಳ್ಳುತ್ತಿರುವುದು.

* ಹೇಳಿಕೆಗಳು:

* ಹೇಳಿಕೆ-1 ಶಾಲೆಗಳಲ್ಲಿ ಮಕ್ಕಳಿಗೆ ದುಶ್ಚಟಗಳ ಬಗ್ಗೆ ಅರಿವು ಮೂಡಿಸಿ ಜಾಗೃತಿ ಜಾಥ ಮೂಲಕ ಶಿಕ್ಷಣ ಇಲಾಖೆ ಇದರ ಬಗ್ಗೆ ಹಚ್ಚು ಗಮನಹರಿಸಬೇಕು

- ಕುಮಾರಸ್ವಾಮಿ, ಸಮಾಜ ಸೇವಕ.* ಹೇಳಿಕೆ-2

ಪಟ್ಟಣದ ನಾನಾ ಕಡೆ ಗುಂಪು ಗುಂಪಾಗಿ ಯುವಕರು ಪಾರ್ಟಿ, ಮೋಜು ಮಸ್ತಿ ಕಡೆ ಗಮನ ಕೊಟ್ಟು ಹಾಳಾಗುತ್ತಿದ್ದಾರೆ, ಈ ಬಗ್ಗೆ ಪೊಲೀಸ್ ಇಲಾಖೆ ರಾತ್ರಿಹೊತ್ತು ಬೀಟ್ಸ್ ಹಾಕಿ ಕಾನೂನು ಕ್ರಮ ತೆಗೆದುಕೊಳ್ಳಬೇಕು.

- ಜಬೀಉಲ್ಲಾ ಬೇಗ್, ತಾ.ಸಂಘಟನಾ ಕಾರ್ಯದರ್ಶಿ, ಕಸಾಪ* ಬಾಕ್ಸ್‌ನ್ಯೂಸ್‌: ಹಾಲು ಸಿಗುವ ಮೊದಲೇ ಆಲ್ಕೋಹಾಲ್‌! ಇನ್ನು ಪಟ್ಟಣದಲ್ಲಿ ಬೆಳಗಿನ ಜಾವ ೫ ಗಂಟೆಗೆ ಹಾಲು ಸಿಗುವ ಮೊದಲೇ ಮದ್ಯಪ್ರಿಯರು ಬಾರ್‌ಗಳ ಮುಂದೆ ನಿಲ್ಲುವುದು ಸಹಜವಾಗಿದ್ದು ಸರ್ಕಾರದ ನಿಮಯದ ಸಮಯಕ್ಕೆ ಬಾರ್‌ಗಳನ್ನು ತೆರೆಯುವ ಬದಲು ಹೆಚ್ಚಿನ ದರಕ್ಕೆ ಬೆಳಗಿನ ಜಾವ ಮದ್ಯ ಮಾರಾಟ ಮಾಡುವುದು ಅಧಿಕಾರಿಗಳ ದೌರ್ಬಲ್ಯಕ್ಕೆ ಕಾರಣವಾಗಿದೆ.

Share this article