ಎಲ್ಲಾ ಸಾಹಿತ್ಯಗಳ ಮೂಲ ಬೇರು ಜಾನಪದ: ತಿಪ್ಪೇರುದ್ರಪ್ಪ

KannadaprabhaNewsNetwork |  
Published : Feb 26, 2024, 01:34 AM IST
ಚಿಕ್ಕಮಗಳೂರು ತಾಲೂಕಿನ ರಾಮದೇವರಹಳ್ಳಿಯಲ್ಲಿ ಏರ್ಪಡಿಸಿದ್ದ ಜಾನಪದ ಹುಣ್ಣಿಮೆ ಸಂಭ್ರಮ ಕಾರ್ಯಕ್ರಮವನ್ನು ಬಿ. ತಿಪ್ಪೇರುದ್ರಪ್ಪ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಎಲ್ಲಾ ಸಾಹಿತ್ಯಗಳ ಮೂಲ ಬೇರು ಜಾನಪದ ಸಾಹಿತ್ಯ, ಎಲ್ಲಾ ಸಾಮಾಜಿಕ ನಾಗರಿಕತೆಗಳ ಸಂಸ್ಕೃತಿಗಳ ತಾಯಿ ಬೇರು ಗ್ರಾಮೀಣ ಸಂಸ್ಕೃತಿ ಎಂದು ಸಾಹಿತಿ ಬಿ. ತಿಪ್ಪೇರುದ್ರಪ್ಪ ಹೇಳಿದ್ದಾರೆ.

ರಾಮದೇವರಹಳ್ಳಿಯಲ್ಲಿ ಜಾನಪದ ಹುಣ್ಣಿಮೆ ಸಂಭ್ರಮ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಎಲ್ಲಾ ಸಾಹಿತ್ಯಗಳ ಮೂಲ ಬೇರು ಜಾನಪದ ಸಾಹಿತ್ಯ, ಎಲ್ಲಾ ಸಾಮಾಜಿಕ ನಾಗರಿಕತೆಗಳ ಸಂಸ್ಕೃತಿಗಳ ತಾಯಿ ಬೇರು ಗ್ರಾಮೀಣ ಸಂಸ್ಕೃತಿ ಎಂದು ಸಾಹಿತಿ ಬಿ. ತಿಪ್ಪೇರುದ್ರಪ್ಪ ಹೇಳಿದ್ದಾರೆ.ಕರ್ನಾಟಕ ಜಾನಪದ ಪರಿಷತ್ತು ಹಾಗೂ ರಾಮೇಶ್ವರ ವೀರಗಾಸೆ ಕಲಾ ಸೇವಾ ಸಂಘ ರಾಮದೇವರಹಳ್ಳಿಯಲ್ಲಿ ಏರ್ಪಡಿಸಿದ್ದ ಜಾನಪದ ಹುಣ್ಣಿಮೆ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಸಂಸ್ಕೃತಿಯ ತಾಯಿ ಬೇರು ಜಾನಪದ ಸಂಸ್ಕೃತಿ, ಹಾಗಾಗಿ ಒಂದು ಬಿಟ್ಟು ಮತ್ತೊಂದು ಇರಲಾರವು ಇವುಗಳ ನಡುವೆ ಬಿಡಿಸಲಾರದ ಸಂಬಂಧವಿದೆ. ಇವು ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೆ ಎಂದು ಹೇಳಿದರು.ಜಾನಪದ ಸಂಸ್ಕೃತಿ, ಕಲೆ, ಸಂಗೀತ, ಸಾಹಿತ್ಯದ ಮೂಲ ಹೇಳಲು ಹೊರಟರೆ, ಹಿಂದಿನ ಕಾಲದಲ್ಲಿ ನಮ್ಮ ಜನಪದರು ತಮ್ಮ ಬದುಕಿನ ಸೂತ್ರ, ಶ್ರಮದ ದುಡಿಮೆಯೇ ಎಂದು ತಿಳಿದಿದ್ದರು. ಶ್ರಮ ಮತ್ತು ದಣಿವು ನಿವಾರಿಸಿಕೊಳ್ಳಲು ಜನಪದ ಹಾಡು, ನೃತ್ಯ, ಗಾದೆ, ಒಗಟು, ಸೋಬಾನೆ, ಲಾವಣಿ ಮುಂತಾದ ಕಲಾ ಪ್ರಕಾರಗಳನ್ನು ಗದ್ದೆ ನಾಟಿ ಮಾಡುವಾಗ, ಒಕ್ಕಣೆ, ಕಳೆ ಕೀಳುವಾಗ, ಬಿತ್ತುವಾಗ, ಬೀಸುವಾಗ ಹೀಗೆ ನಾನಾ ತರದ ಕೆಲಸ ಮಾಡುವಾಗ ಮನೋರಂಜನೆಗಾಗಿ ಬಳಸಿಕೊಂಡರು ಎಂದರು. ಈ ಎಲ್ಲಾ ಕಲೆಗಳ ಹಿಂದೆ ಮೌಖಿಕ ರೂಪದಲ್ಲಿ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ, ನೈತಿಕವಾಗಿ ಬದುಕಲು ಮೌಲ್ಯಧಾರಿತ ಅರ್ಥ ಕೊಟ್ಟರು. ಈ ಸಾಮಾಜಿಕ ಮೌಲ್ಯಗಳೇ ಜನಪದ ಸಾಹಿತ್ಯದಲ್ಲಿ ಬಹಳಷ್ಟು ಅಡಗಿವೆ. ಕಾಯಕವೇ ಕೈಲಾಸ, ಹಾಸಿಗೆ ಇದ್ದಷ್ಟು ಕಾಲು ಚಾಚು, ಆಳಾಗಿ ದುಡಿ ಅರಸನಾಗಿ ಉಣ್ಣು, ಕೂತು ತಿಂದರೆ ಕುಡಿಕೆ ಹೊನ್ನು ಸಾಲದು, ಬದುಕು ಇತರರನ್ನು ಬದುಕಲು ಬಿಡು, ಎನ್ನುವಂತಹ ಜನಪದ ಸಾಹಿತ್ಯದ ಗಾದೆ ಮಾತುಗಳು ಸ್ವಾಸ್ಥ್ಯ ಸಮಾಜ ನಿರ್ಮಾಣದ ಉದಾಹರಣೆಗಳು ಎಂದು ಹೇಳಿದರು.ಪ್ರೀತಿ, ವಿಶ್ವಾಸ, ಸಹನೆ, ಅಂತಃಕರಣ, ಹೊಂದಾಣಿಕೆ ಧಾರ್ಮಿಕ ಸಹಿಷ್ಣತೆ, ಸಹಕಾರ ಮನೋಭಾವ ಮೂಲಕ ಬದುಕಿ ಗೊಂದು ಅರ್ಥ ಕೊಡಲು ಮೊದಲು ಪ್ರಯತ್ನಿಸಿದ್ದು ಜಾನಪದ ಸಾಹಿತ್ಯ. ಸಾಮಾನ್ಯವಾಗಿ ಎಲ್ಲಾ ಕವಿಗಳು, ಸಾಹಿತಿ ಗಳು, ಲೇಖಕರು ಜನಪದ ಸಾಹಿತ್ಯ ತಳಹದಿ ಮೇಲೆಯೇ ಶಿಷ್ಟ ಸಾಹಿತ್ಯದ ರೂಪ ಕೊಟ್ಟರು ಎಂದು ಹೇಳಬಹುದು ಹಾಗಾಗಿ ಜನಪದ ಸಾಹಿತ್ಯ ಸಂಗೀತ ಸಂಸ್ಕೃತಿ ಎಂದೆಂದಿಗೂ ನಾವು ಮರೆಯಬಾರದು ಎಂದು ತಿಳಿಸಿದರು.ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಮಾತನಾಡಿ, ಹಳೇಬೀರು ಹೊಸ ಚಿಗುರು ಕೂಡಿರಲು ಮರಸೊಬಗು ಎನ್ನುವಂತೆ ಇಂದು ನಮ್ಮ ಭಾರತೀಯ ಸಂಸ್ಕೃತಿ ಹೆಮ್ಮರವಾಗಿ ಬೆಳೆದು ಜಗತ್ಪ್ರಸಿದ್ಧಿ ಆಗಲು ಹಳೇ ಬೇರಾದ ನಮ್ಮ ಜನಪದ ಸಂಸ್ಕೃತಿಯೇ ಮೂಲ ಕಾರಣ. ಜಾನಪದ ಮತ್ತು ಭಾರತೀಯ ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳು ಇದ್ದ ಹಾಗೆ ಇವು ಒಂದು ಬಿಟ್ಟು ಮತ್ತೊಂದು ಇರಲಾರವು, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕವಾಗಿ ವಿವಿಧತೆಯಲ್ಲಿ ಏಕತೆ ಸಾಧಿಸಲು ಜನಪದ ಸಾಹಿತ್ಯವೇ ಮೂಲ ಪ್ರೇರಣೆ ಎಂದರು.ಪಾಶ್ಚಿಮತ್ಯ ಸಂಸ್ಕೃತಿ ಗುಂಗಿಗೆ ಒಳಗಾಗಿ ಯಾಂತ್ರಿಕ ಬದುಕು ಸಾಗಿಸಲು ಹೊರಟಿರುವ ಇಂದಿನ ಯುವ ಪೀಳಿಗೆಗೆ ಜನಪದ ಸಂಸ್ಕೃತಿ ಸಾಹಿತ್ಯ ಸಂಗೀತದ ಪ್ರಾಮುಖ್ಯತೆ ತಿಳಿಸಲು ಪ್ರತಿ ಪಟ್ಟಣ, ಊರುಗಳಲ್ಲಿ ಇಂತಹ ಜಾನಪದ ಸಾಹಿತ್ಯ ಹುಣ್ಣಿಮೆ ಸಂಭ್ರಮ ದಂತಹ ಅರ್ಥಗರ್ಭಿತ ಕಾರ್ಯಕ್ರಮ ನಡೆಯಬೇಕಾಗಿದೆ ಎಂದು ಹೇಳಿದರು.ಈ ಸಮಾರಂಭದ ಅಧ್ಯಕ್ಷತೆವಹಿಸಿದ್ದ ರಾಮೇಶ್ವರ ವೀರಗಾಸೆ ಕಲಾ ಸೇವಾ ಸಂಘದ ಅಧ್ಯಕ್ಷ ಆರ್.ಎಂ. ರುದ್ರಪ್ಪ ಮಾತನಾಡಿ, ಜಾನಪದ ಪ್ರಮುಖ ಕಲೆಗಳಲ್ಲಿ ಒಂದಾದ ವೀರಗಾಸೆಯನ್ನು ಈ ರಾಮೇದೇವರಹಳ್ಳಿಯಲ್ಲಿ ಸುಮಾರು 25 ವರ್ಷಗಳಿಂದ ಅಳವಡಿಸಿಕೊಂಡು ರಾಜ್ಯ, ಹೊರ ರಾಜ್ಯಗಳಲ್ಲಿ ರಾಜ್ಯಮಟ್ಟದ ಅನೇಕ ಕಾರ್ಯಕ್ರಮ ನೀಡಿ ನಮ್ಮ ಗ್ರಾಮಕ್ಕೆ ಹಾಗೂ ಜಿಲ್ಲೆಗೆ ಹೆಸರು ತಂದ ತಂಡ ನಮ್ಮದಾಗಿದೆ. ಮುಂದಿನ ದಿನಗಳಲ್ಲಿ ಯುವಕರ ಇನ್ನೊಂದು ವೀರಗಾಸೆ ತಂಡ ಕಟ್ಟಿ, ಮಹಿಳಾ ಭಜನಾ ಸಂಘ ಕಟ್ಟುವ ಮೂಲಕ ಜಾನಪದ ಕಲೆ ಸಾಹಿತ್ಯಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುತ್ತೇವೆ. ಜಿಲ್ಲೆಯ ಪ್ರತಿ ಗ್ರಾಮದವರು ಒಂದಲ್ಲ ಒಂದು ಜನಪದ ಕಲೆ ಸಂಗೀತ ಕಾರ್ಯಕ್ರಮ ಅಳವಡಿಸಿಕೊಂಡರೆ ಊರಿಗೊಂದು ಕಳಸ ವಿಟ್ಟಂತಾಗುತ್ತದೆ ನಮ್ಮ ಗ್ರಾಮೀಣ ಸಂಸ್ಕೃತಿಗೆ ಅರ್ಥ ಬಂದಂತಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹಿರಿಯ ವೀರಗಾಸೆ ಕಲಾವಿದ ಆರ್.ಎಚ್. ಅನಂತಗೌಡ, ಶಿಕ್ಷಕ ವಿಶ್ವನಾಥ್, ಆರ್‌.ಬಿ. ಚಂದ್ರೇಗೌಡ, ಚಿಕ್ಕೇಗೌಡ, ಮಲ್ಲೇಶಪ್ಪ, ದಯಾನಂದ ಗ್ರಾಮಸ್ಥರು ಉಪಸ್ಥಿತರಿದ್ದರು.

25 ಕೆಸಿಕೆಎಂ 4ಚಿಕ್ಕಮಗಳೂರು ತಾಲೂಕಿನ ರಾಮದೇವರಹಳ್ಳಿಯಲ್ಲಿ ಏರ್ಪಡಿಸಿದ್ದ ಜಾನಪದ ಹುಣ್ಣಿಮೆ ಸಂಭ್ರಮ ಕಾರ್ಯಕ್ರಮವನ್ನು ಬಿ. ತಿಪ್ಪೇರುದ್ರಪ್ಪ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮ ಡ್ರಗ್ಸ್‌ ವಾಸನೆ ತಡೆಗೆ ನಾಯಿಗಳ ಮಲಮೂತ್ರ!
ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಭರದ ಸಿದ್ಧತೆ