ನಿವೃತ್ತ ಕಾನೂರು ಗ್ರಾಪಂ ಪಿಡಿಒ ಶ್ರೀನಿವಾಸ್ ಗೆ ತಾಲೂಕು ಪಂಚಾಯಿತಿಯಲ್ಲಿ ಬೀಳ್ಕೊಡುಗೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಗ್ರಾಮಸ್ಥರಿಗೆ ಬಹಳ ಹತ್ತಿರದಿಂದ ಸೇವೆ ಸಲ್ಲಿಸುವ ಅವಕಾಶ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಸಿಗುತ್ತಿದೆ. ಅಂತಹ ಅವಕಾಶ ಪಡೆದ ಕಾನೂರು ಗ್ರಾಪಂ ಪಿಡಿಒ ಶ್ರೀನಿವಾಸ್ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ ಎಂದು ತಾಪಂ ಇಒ ಎಚ್.ಡಿ. ನವೀನ್‌ಕುಮಾರ್ ಹೇಳಿದರು.
ಶನಿವಾರ ತಾಪಂ ಸಾಮರ್ಥ್ಯಸೌಧದಲ್ಲಿ ತಾಪಂ ಹಾಗೂ ಆರ್.ಡಿಪಿಆರ್ ಸಂಘದಿಂದ ಕಾನೂರು ಗ್ರಾಮ ಪಂಚಾಯಿತಿ ವೃತ್ತ ಪಿಡಿಒ ಎಸ್.ಶ್ರೀನಿವಾಸ್ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಕರ್ತವ್ಯದಲ್ಲಿ ಒತ್ತಡ ಸಹಜವಾಗಿರುತ್ತದೆ. ಆದರೆ, ಅದನ್ನು ನಾವು ಹೇಗೆ ನಿಭಾಯಿಸುತ್ತೇವೆ ಎನ್ನುವುದೇ ಮುಖ್ಯವಾಗಿರುತ್ತದೆ. ಅಂತಹ ಸೇವೆಯನ್ನು ಪ್ರಾಮಾಣಿಕವಾಗಿ ಸಲ್ಲಿಸಿ ನಿವೃತ್ತಿಯಾಗುತ್ತಿರುವ ಎಸ್.ಶ್ರೀನಿವಾಸ್ ನಮಗೆಲ್ಲರಿಗೂ ಮಾದರಿ. ಅವರು 38 ವರ್ಷಗಳ ಕಾಲ ಸುಧೀರ್ಘ ಸರ್ಕಾರಿ ಸೇವೆ ಸಲ್ಲಿಸಿ, ಒಂದೇ ಗ್ರಾಪಂನಲ್ಲಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಅಧಿಕಾರಿಗಳು ನಿವೃತ್ತಿಯಾಗುವುದು ಸಹಜ. ಆದರೆ, ಅವರ ಸೇವಾ ಅವಧಿಯಲ್ಲಿ ಸರ್ಕಾರದ ಸವಲತ್ತು ಗಳನ್ನು ಹೇಗೆ ಸಮಾಜದ ಕಟ್ಟ ಕಡೆ ವ್ಯಕ್ತಿಗೂ ತಲುಪಿಸಿದ್ದಾರೆ ಎಂಬುದು ಮುಖ್ಯ. ಕಳೆದ 10 ವರ್ಷಗಳಲ್ಲಿ ಆಡಳಿತ ವ್ಯವಸ್ಥೆ ಯಲ್ಲಿ ಬಹಳಷ್ಟು ಬದಲಾವಣೆಗಳು, ತಂತ್ರಜ್ಞಾನಗಳ ಅಭಿವೃದ್ಧಿಗಳಾಗಿವೆ. ಅದೆಲ್ಲದಕ್ಕೂ ಹೊಂದಿಕೊಂಡು ತಮ್ಮ ಸೇವೆ ಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದರು.ಆರ್.ಡಿ.ಪಿ.ಆರ್ ಸಂಘದ ಅಧ್ಯಕ್ಷ ಕೆ.ಡಿ.ಜೋಸೆಫ್ ಮಾತನಾಡಿ, ಕಳಂಕ ರಹಿತವಾಗಿ, ಪ್ರಾಮಾಣಿಕ ಸೇವೆ ಸಲ್ಲಿಸಿ, ನಿವೃತ್ತರಾಗುವುದೇ ಒಂದು ಹೆಮ್ಮೆಯಾಗಿದೆ. ಶ್ರೀನಿವಾಸ್ ತಮ್ಮ ಸೇವೆಯಲ್ಲಿ ತೋರಿಸಿದ ಪ್ರಾಮಾಣಿಕತೆ, ದಕ್ಷತೆಯನ್ನು ಕಾಪಾಡಿಕೊಂಡು ಬಂದಿರುವುದರಿಂದ ಇಂದು ಜನಮನದಲ್ಲಿದ್ದಾರೆ. ಅವರ ಮಾರ್ಗದರ್ಶನ ಉಳಿದ ಅಧಿಕಾರಿಗಳಿಗೆ ಅವಶ್ಯಕ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾನೂರು ಗ್ರಾಪಂ ನಿವೃತ್ತ ಪಿಡಿಒ ಎಸ್.ಶ್ರೀನಿವಾಸ್ ಮಾತನಾಡಿ, ಯಾವ ಅಧಿಕಾರಿಯೂ ದುಡುಕಿ ನಿರ್ಧಾರ ತೆಗೆದುಕೊಳ್ಳಬಾರದು. ಜನಪ್ರತಿನಿಧಿಗಳು, ಗ್ರಾಪಂ ಸಿಬ್ಬಂದಿ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯನಿರ್ವಹಿಸಬೇಕು. ನಮ್ಮ ಸ್ವಂತ ದುಡ್ಡಿನಿಂದ ಜನರಿಗೆ ಸವಲತ್ತುಗಳನ್ನು ನೀಡಲು ಸಾಧ್ಯವಿಲ್ಲ ಎಂದರು.ತಾಪಂ ಹಾಗೂ ಆರ್.ಡಿ.ಪಿ.ಆರ್. ಸಂಘದವತಿಯಿಂದ ನಿವೃತ್ತ ಪಿಡಿಓ ಎಸ್.ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.
ಕೊಪ್ಪ ತಾಪಂ ಸಹಾಯಕ ನಿರ್ದೇಶಕ ಚೇತನ್, ನರಸಿಂಹರಾಜಪುರ ತಾಪಂ ಉದ್ಯೋಗಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಮನೀಶ್, ಕೊಪ್ಪ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಪ್ರಮೋದ್, ಪಿಡಿಒ ಪ್ರೇಮಕುಮಾರ್, ಕಾರ್ಯದರ್ಶಿ ಲೋಕೇಶ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ತಾಪಂ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಸಂತೋಷ್‌ಕುಮಾರ್, ತಾಪಂ ಅಧೀಕ್ಷಕಿ ಕೆ.ಆರ್.ಮಧು, ಗ್ರಾಪಂ ಪಿಡಿಒ, ಕಾರ್ಯದರ್ಶಿ ಹಾಗೂ ತಾಪಂ , ಗ್ರಾಪಂಗಳ ಸಿಬ್ಬಂದಿ ಉಪಸ್ಥಿತರಿದ್ದರು.