ಕರ್ಣ ಮಹಾಪ್ರತಿಭಾಶಕ್ತಿಯಾಗಿ ದುರ್ಯೋಧನನ ಜೊತೆ ನಿಂತವನು. ಇದರಿಂದಾಗಿ ಪಂಪ ನೆನೆಯುವುದಾದರೆ ಕರ್ಣನನ್ನು ನೆನೆ ಎಂದಿದ್ದಾರೆ
ಫೋಟೋ 21 ಎಂವೈಎಸ್ 4
ಎಚ್.ಎಲ್. ಶಿವಬಸಪ್ಪ ಹೊರೆಯಾಲ ಅವರ ಕರ್ಣ ಚರಿತಾಮೃತ ಅಥವಾ ಕರ್ಣ ಪುನರುತ್ಥಾನ ಮಹಾಕಾವ್ಯವನ್ನು ಸಾಹಿತಿ ಡಾ.ಸಿ. ನಾಗಣ್ಣ ಬಿಡುಗಡೆ ಮಾಡಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ಸಿಪಿಕೆ, ಡಾ.ಪ್ರದೀಪ್ ಕುಮಾರ್ ಹೆಬ್ರಿ, ಅಂಶಿ ಪ್ರಸನ್ನಕುಮಾರ್, ಜೆ.ಬಿ. ರಂಗಸ್ವಾಮಿ, ಮಡ್ಡೀಕೆರೆ ಗೋಪಾಲ್, ಎಂ. ಚಂದ್ರಶೇಖರ್, ಡಿ.ಎನ್. ಲೋಕಪ್ಪ, ಬೆಸೂರು ಮೋಹನ್ ಪಾಳೇಗಾರ್, ಯಶೋದಮ್ಮ ಇದ್ದಾರೆ.---ಕನ್ನಡಪ್ರಭ ವಾರ್ತೆ ಮೈಸೂರುಕುರುಕ್ಷೇತ್ರದಲ್ಲಿ ಕರ್ಣ ಪ್ರವೇಶಿಸದಿದ್ದರೆ ಮಹಾಭಾರತದ ಬಹಳಷ್ಟು ಯುದ್ಧ ಪ್ರಸಂಗಗಳೇ ನಡೆಯುತ್ತಿರಲಿಲ್ಲ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟ, ಸಂವಹನ ಪ್ರಕಾಶನವು ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಎಚ್.ಎಲ್. ಶಿವಬಸಪ್ಪ ಹೊರೆಯಾಲ ಅವರ ಕರ್ಣ ಚರಿತಾಮೃತ ಅಥವಾ ಕರ್ಣ ಪುನರುತ್ಥಾನ ಮಹಾಕಾವ್ಯ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಮಹಾಭಾರತದ ಪ್ರಮುಖ ಪಾತ್ರ ಕರ್ಣ ಎಂದರು.ಕರ್ಣ ಮಹಾಪ್ರತಿಭಾಶಕ್ತಿಯಾಗಿ ದುರ್ಯೋಧನನ ಜೊತೆ ನಿಂತವನು. ಇದರಿಂದಾಗಿ ಪಂಪ ನೆನೆಯುವುದಾದರೆ ಕರ್ಣನನ್ನು ನೆನೆ ಎಂದಿದ್ದಾರೆ ಎಂದರು.ಎಚ್.ಎಲ್. ಶಿವಬಸಪ್ಪ ಅವರು ಸರಳ, ಸುಲಭ, ಆಡುಭಾಷೆಯಲ್ಲಿ ಈ ಮಹಾಕಾವ್ಯವನ್ನು ರಚಿಸಿದ್ದು, ಅವರಿಂದ ಇನ್ನಷ್ಟು ಮಹಾಕಾವ್ಯಗಳು ಬರಲಿ ಎಂದು ಅವರು ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಡಾ.ಸಿಪಿಕೆ ಮಾತನಾಡಿ, ಮಹಾಭಾರತ ಕರ್ಣನ ಪಾತ್ರವೇ ಈ ಕೃತಿಯ ಕಣ್ಮಣಿ. ಭಾಷೆ ಹಾಗೂ ಆಂತರಿಕವಾಗಿ ಇದನ್ನು ನೋಡಬೇಕು. ಶಿವಬಸಪ್ಪ ಅವರು ಕರ್ಣನನ್ನು ಇಲ್ಲಿ ಶಿಷ್ಟ ಪಾತ್ರವಾಗಿ ಪರಿವರ್ತಿಸಿದ್ದಾರೆ. ಕಾವ್ಯಕ್ಕೆ ಮುಖ್ಯವಾದುದು ಪರಿವರ್ತನಾ ಶಕ್ತಿ ಎಂದರು.ಕರ್ಣನದು ಅಲಕ್ಷಿತ ಪಾತ್ರ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಇಡೀ ಲಕ್ಷ್ಯ ಆತನ ಮೇಲೆಯೇ ಇದೆ ಎಂದ ಅವರು, ಇದೊಂದು ಜನಪದ ಮಹಾಕಾವ್ಯವಾಗಿದೆ ಎಂದರು.. ಕೃತಿ ಕುರಿತು ಮಾತನಾಡಿದ ಮಂಡ್ಯದ ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ, ಬದುಕುವ ಅರಳಿಸುವುದೇ ಕವಿತೆ. ಕುಮಾರವ್ಯಾಸ, ಪಂಪ, ರಾಘವಾಂಕನ ಕರ್ಣ ಬೇರೆ, ಶಿವಬಸಪ್ಪ ಅವರು ಚಿತ್ರಿಸಿರುವ ಕರ್ಣ ಬೇರೆ ಎಂದು ಗೋಚರಿಸುತ್ತದೆ. ಕರ್ಣ ಮನಸ್ಸು ಮಾಡಿದ್ದರೆ, ಯುದ್ಧ ಬೇಡವೆಂದು ದುರ್ಯೋಧನನಿಗೆ ಬುದ್ಧ ಹೇಳಿದ್ದರೆ ಇತಿಹಾಸವೇ ಬದಲಾಗಿ ಬಿಡುತ್ತಿತ್ತು ಎಂದರು.ಕವಿ ಎಚ್.ಎಲ್. ಶಿವಬಸಪ್ಪ ಹೊರೆಯಾಲ ಮಾತನಾಡಿ, ಈ ಕೃತಿಯನ್ನು ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳಿಗೆ ಅರ್ಪಿಸಿದ್ದೇನೆ. ನನಗೆ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಸಿದ ದಿವಂಗತ ದೇಜಗೌ, ಮಳಲಿ ವಸಂತಕುಮಾರ್ ಅವರನ್ನು ಸ್ಮರಿಸುತ್ತೇನೆ. ಹಲವಾರು ಮಂದಿ ಮಹಾಕಾವ್ಯ ರಚನೆಗೆ ನೆರವಾಗಿದ್ದು, ಅವರಿಗೆಲ್ಲಾ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಸಾಹಿತಿ ಡಾ. ಸಿ. ನಾಗಣ್ಣ ಕೃತಿ ಬಿಡುಗಡೆ ಮಾಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಂವಹನ ಪ್ರಕಾಶನದ ಡಿ.ಎನ್. ಲೋಕಪ್ಪ ಇದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ. ರಂಗಸ್ವಾಮಿ ಪ್ರಾಸ್ತಾವಿಕ ಭಾಷಣ ಮಾಡಿದರು. ಬೆಸೂರು ಮೋಹನ್ ಪಾಳೇಗಾರ್ ನಿರೂಪಿಸಿದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಸ್ವಾಗತಿಸಿದರು.-- ಬಾಕ್ಸ್,....ಈಗ ಅಲಕ್ಷಿತ ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿ - ಡಾ.ಸಿ. ನಾಗಣ್ಣಈಗ ಅಲಕ್ಷಿತ ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ಎಂದು ವಿದ್ವಾಂಸ ಡಾ.,ಸಿ. ನಾಗಣ್ಣ ಹೇಳಿದರು.ಎಚ್.ಎಲ್. ಶಿವಬಸಪ್ಪ ಅವರ ಕರ್ಣ ಚರಿತಾಮೃತ ಅಥವಾ ಕರ್ಣ ಪುನರುತ್ಥಾನ ಮಹಾಕಾವ್ಯ ಬಿಡುಗಡೆ ಮಾಡಿ ಮಾತನಾಡಿದ ಅವರು, ಕನ್ನಡ ಸಾಹಿತ್ಯದಲ್ಲಿ ಈಗ ಕರ್ಣ ಪರ್ವ ಎನ್ನಬಹುದು. ಕಳೆದ ಐವತ್ತು ವರ್ಷಗಳಲ್ಲಿ ಅಲಕ್ಷಿತರ ಚರಿತ್ರೆಯನ್ನು ಮುನ್ನಲೆಗೆ ತರುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.