ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಬಹುತೇಕ ಕೆರೆ- ಕಟ್ಟೆಗಳು ಭರ್ತಿಯಾಗಿ ಕೋಡಿಬಿದ್ದಿರುವ ಪರಿಣಾಮ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ವಿವಿಧ ಬೆಳೆಗಳು ಜಲಾವೃತಗೊಂಡಿದ್ದರೆ, ಕೆಲವು ಗ್ರಾಮಗಳ ಕೆರೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ಸಣ್ಣ ಪ್ರಮಾಣದ ಬಿರುಕು ಕಾಣಿಸಿಕೊಂಡಿದೆ.ಮತ್ತೊಂದೆಡೆ ಹೇಮಾವತಿ ಜಲಾಶಯದಿಂದ ನದಿಗೆ 75 ಸಾವಿರ ಕ್ಯುಸೆಕ್ ನೀರನ್ನು ಹರಿಬಿಟ್ಟಿರುವ ಪರಿಣಾಮ ಹೊಳೆನರಸೀಪುರ- ಗೊರೂರು ನಡುವಿನ ಗ್ರಾಮಗಳ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿದೆ. ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. ಇದನ್ನು ಕಂಡಿರುವ ರೈತರು ಹೈರಾಣಾಗಿದ್ದಾರೆ.
ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಮಳೆ ಗಾಳಿಗೆ ತಾಲೂಕಿನಲ್ಲಿ ಸುಮಾರು 130ಕ್ಕೂ ಅಧಿಕ ಮನೆಗಳಿಗೆ ಹಾನಿ ಸಂಭವಿಸಿದೆ.ಆದರೆ ಇದುವರೆಗೂ ಸರ್ಕಾರದಿಂದ ಯಾವುದೇ ಪರಿಹಾರ ಮನೆಗಳನ್ನು ಕಳೆದುಕೊಂಡಿರುವ ನಿವಾಸಿಗಳಿಗೆ ಸಿಕ್ಕಿಲ್ಲ. ಕೇವಲ ದಾಖಲೆ ಪ್ರಕಾರ ಮನೆಗಳ ಹಾನಿ ಕುರಿತ ವರದಿ ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಿದೆ.ತಾಲೂಕಿನಲ್ಲಿ ಕಾವೇರಿ ಮತ್ತು ಹೇಮಾವತಿ ನದಿಗಳು ಮೈದುಂಬಿ ಪ್ರವಾಹ ಉಂಟುಮಾಡುವ ನಿಟ್ಟಿನಲ್ಲಿ ಹರಿಯುತ್ತಿದ್ದು, ನದಿ ಪಾತ್ರದ ಕೃಷಿ ಭೂಮಿಯಲ್ಲಿ ಕೈಗೊಳ್ಳಲಾಗಿರುವ ಅಡಿಕೆ, ತೆಂಗು, ಬಾಳೆ, ತಂಬಾಕು, ಮೆಕ್ಕೆಜೋಳ, ಶುಂಠಿ, ದ್ವಿದಳ ಧಾನ್ಯ ಬೆಳೆಗಳು ಜಲಾವೃತಗೊಂಡಿವೆ. ಇದರಿಂದ ಕೋಟ್ಯಾಂತರ ರು. ಹಾನಿ ಸಂಭವಿಸಿದೆ. ಮತ್ತೊಂದೆಡೆ ಅಧಿಕ ಮಳೆಯಿಂದ ಕೈಗೊಳ್ಳಲಾಗಿರುವ ಆಲೂಗಡ್ಡೆ, ರಾಗಿ ಮುಂತಾದ ತರಕಾರಿ ಬೆಳೆಗಳು ಸಂಪೂರ್ಣವಾಗಿ ನಾಶಹೊಂದಿರುವುದು ಕಂಡುಬಂದಿದೆ.
ಶನಿವಾರ ಬೆಳಗ್ಗೆ ತಾಲೂಕಿನ ಅಡಿಕೆ ಬೊಮ್ಮನಹಳ್ಳಿ ಸಮೀಪ ಹಾದುಹೋಗಿರುವ ಅರಕಲಗೂಡು- ಮಲ್ಲಿಪಟ್ಟಣ ನಡುವಿನ ರಸ್ತೆಯ ಬದಿಯಲ್ಲಿದ್ದ ಭಾರೀ ಗಾತ್ರದ ಆಲದ ಮರವೊಂದು ರಸ್ತೆಗೆ ಮಳೆಗಾಳಿಯಿಂದ ಬಿದ್ದಿದ್ದ ಪರಿಣಾಮ ಒಂದು ಗಂಟೆಗೂ ಅಧಿಕ ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿ ಶಂಕರ್ ಮತ್ತು ಸಿಬ್ಬಂದಿ ಮರ ತೆರವಿಗೆ ಶ್ರಮಿಸಿದರು. ಸಾರ್ವಜನಿಕರ ಸಹಕಾರದಿಂದ ರಸ್ತೆಗೆ ಬಿದ್ದಿದ್ದ ಮರದ ಕೊಂಬೆಗಳನ್ನು ಕಡಿದು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಇದೇ ರಸ್ತೆಯಲ್ಲಿ ಹತ್ತಾರು ಭಾರೀ ಗಾತ್ರದ ಹಳೆಯ ಮರಗಳು ಇದ್ದು, ಮಳೆ ಗಾಳಿಗೆ ಬೀಳುವ ಸಾಧ್ಯತೆ ಹೆಚ್ಚಿದೆ. ಇಂದು ರಸ್ತೆಗೆ ಬಿದ್ದ ಮರದಿಂದ ಭಾರೀ ಅನಾಹುತ ಸಂಭವಿಸುತಿತ್ತು. ಕ್ಷಣಾರ್ಧದಲ್ಲಿ ಸಾರಿಗೆ ಬಸ್ ಮುಂದೆ ಸಾಗಿದೆ. ಮಳೆ ಹಿನ್ನೆಲೆ ಬೈಕ್ ಸವಾರರು ಬಿದ್ದ ಮರದ ಸಮೀಪದ ಇತರೆ ಮರಗಳ ಆಶ್ರಯದಲ್ಲಿ ನಿಂತಿದ್ದರು. ಮರ ಕಣ್ಣುಮುಂದೆಯೇ ರಸ್ತೆಗೆ ಬಿದ್ದಿದ್ದನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ. ಕೂಡಲೇ ಹಳೆಯ ಮರಗಳನ್ನು ತೆರವುಗೊಳಿಸಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.