ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಜ್ಯದ ರಾಜಧಾನಿ ಬೆಂಗಳೂರು ವಿಕೇಂದ್ರೀಕರಣವಾದರೆ ಕನ್ನಡಿಗರು ಕನ್ನಡನಾಡಿನಲ್ಲಿಯೇ ನಿರಾಶ್ರಿತರಾಗುವ ಸ್ಥಿತಿ ಉಂಟಾಗಬಹುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದರು.ತಾಲೂಕಿನ ಅರೂರು ಬಳಿಯ ಸರ್ಕಾರಿ ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಬೇಟಿ ನೀಡಿ, ಕಾಲೇಜಿನಲ್ಲಿನ ಕನ್ನಡದ ಅನುಷ್ಠಾನವನ್ನು ಪರಿಶೀಲನೆ ನಡೆಸಿ ನಂತರ ವೈದ್ಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು
10ನೇ ತರಗತಿ ವರೆಗೆ ಕನ್ನಡದಲ್ಲೇ ಶಿಕ್ಷಣಯಾರಿಗೆ ಆಗಲಿ ಅವರ ಮಾತೃಭಾಷೆಯಲ್ಲಿ ಕನಿಷ್ಠ ಹತ್ತನೆ ತರಗತಿಯವರೆಗೂ ಶಿಕ್ಷಣ ನೀಡಿದಲ್ಲಿ ಮುಂದೇ ಅವರಿಗೆ ಎಲ್ಲಾ ಭಾಷೆ ಕಲಿಯಲು ಮತ್ತು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಮಾತೃ ಭಾಷೆ ಮರೆತು ಅನ್ಯ ಭಾಷೆಯ ಬಗ್ಗೆ ಒಲವು ಹೆಚ್ಚಾಗುತ್ತದೆ ಎಂದು ಹೇಳಿದರು.
ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ವಿಕೇಂದ್ರೀಕರಣದ ಬಗ್ಗೆ ನಮಗೆ ಆತಂಕವಿಲ್ಲ. ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಹೆಚ್ಚಾಗಿ ಅನ್ಯಭಾಷಿಕರು ನೆಲೆಸಿದ್ದಾರೆ. ಹಲವು ಬಡವಾಣೆಗಳಲ್ಲಿ ಸ್ಥಳೀಯರೇ ನಿರಾಶ್ರಿತರಾಗಿದ್ದು, ಇಂತಹ ಸಂದರ್ಭದಲ್ಲಿ ಬೆಂಗಳೂರು ವಿಕೇಂದ್ರೀಕರಣವಾದರೆ ಅನ್ಯ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೆ ಕನ್ನಡ ಭಾಷೆ, ಕನ್ನಡಿಗರು ಮತ್ತಷ್ಟು ಸಮಸ್ಯೆಯ ಸುಳಿಯಲ್ಲಿ ಸಿಲುಕಬಹುದು ಎಂಬ ಆತಂಕ ಪ್ರಾಧಿಕಾರಕ್ಕಿದೆ ಎಂದು ಹೇಳಿದರು.ಕನ್ನಡೇತರ ಉದ್ಯೋಗಿಗಳೇ ಹೆಚ್ಚು
ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ ಪ್ರತಿನಿತ್ಯ ಬಹುರಾಷ್ಟ್ರೀಯ ಕಂಪೆನಿಗಳು ಹೆಚ್ಚಾಗುತ್ತಿವೆ. ಇಲ್ಲಿ ಕನ್ನಡೇತರರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸುತ್ತಿವೆ. ಖಾಸಗಿ ವಲಯದಲ್ಲಿ ಗ್ರೂಪ್ ''''''''ಸಿ ಮತ್ತು ಡಿ'''''''' ಹುದ್ದೆಗಳಲ್ಲಿ ಕನ್ನಡಿಗರನ್ನು ನೇಮಿಸುವಂತೆ ಮೀಸಲಾತಿ ಜಾರಿಗೆ ತಂದರೆ ಅದಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸುವುದಿಲ್ಲ. ಆ ರೀತಿಯಾಗಿ ಉದ್ಯೋಗದಲ್ಲಿ ಕನ್ನಡಿಗರಿಗೆ ಹಿನ್ನಡೆ ಉಂಟಾಗುತ್ತಿದೆ. ಇದರಿಂದಾಗಿ ಕನ್ನಡದ ಅಸ್ಮಿತೆಗೆ ಧಕ್ಕೆಯಾಗುತ್ತಿದೆ ಎಂದರು..ರಾಜ್ಯಗಳ ಅಸ್ಮಿತೆಯೇ ಭಾರತದ ಒಕ್ಕೂಟ ವ್ಯವಸ್ಥೆಯ ತಳಪಾಯ. ಆದರೆ, ರಾಜ್ಯಗಳ ಅಸ್ಮಿತೆ ಪತನಮುಖಿಯಾಗುತ್ತಿದ್ದರೆ ಒಕ್ಕೂಟ ವ್ಯವಸ್ಥೆ ಭದ್ರವಾಗಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕನ್ನಡ ಶಿಕ್ಷಕರ ನೇಮಕಕನ್ನಡೇತರರಿಗೆ ಕನ್ನಡ ಕಲಿಸಲು ಹೊಸ ಬಗೆಯ ಪ್ರಯೋಗಗಳಾಗಬೇಕು. ಮತ್ತಷ್ಟು ವಿನೂತನವಾಗಿ ಕನ್ನಡ ಕಲಿಸುವ ಕಾರ್ಯವಾಗಬೇಕು. ಕನ್ನಡ ಕಲಿಕಾ ಕೇಂದ್ರಗಳು ಶಿಕ್ಷಕ ಕೇಂದ್ರಿತವಾಗುವುದಕ್ಕಿಂತ ವಿದ್ಯಾರ್ಥಿ ಕೇಂದ್ರಿತವಾಗಬೇಕು. ಆ ನಿಟ್ಟಿನಲ್ಲಿ ಹೊಸ ತಲೆಮಾರಿನ ಕನ್ನಡ ಶಿಕ್ಷಕರು ಯೋಚಿಸಬೇಕು. ಈ ಸರ್ಕಾರಿ ನಂದಿ ವೈದ್ಯಕೀಯ ಕಾಲೇಜಿನಲ್ಲಿ ಶೇ 15 ರಷ್ಟಿರುವ ಕನ್ನಡೇತರ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಪ್ರಾಧ್ಯಾಪಕರನ್ನು ಬೇಕಾದರೆ ನೇಮಿಸಲು ಪ್ರಾಧಿಕಾರ ತಯಾರಿದೆ ಅಥವಾ ವಿದ್ಯಾರ್ಥಿಗಳೇನಾದರೂ ಕನ್ನಡ ಕಲಿಸಲು ಮುಂದೆ ಬಂದರೆ ಅವರಿಗೆ ತರಬೇತಿ ಕಾರ್ಯಾಗಾರ ನಡೆಸುವ ಬಗ್ಗೆ ಸಲಹೆ ನೀಡಿದರು.
ದೇವರಿಗೆ ಕನ್ನಡ ಕಲಿಸಿದ ನಾಡುದೇವರಿಗೆ ಕನ್ನಡ ಕಲಿಸಿದ ನಾಡು ಕರುನಾಡು. ದೇಶ- ವಿದೇಶಗಳಿಗೆ ಸಂಸ್ಕೃತಿಯನ್ನು ಸಾರಿದವರು ಕನ್ನಡಿಗರು. ಹನ್ನೊಂದನೇ ಶತಮಾನಕ್ಕೂ ಮೊದಲು ಯಾವುದೇ ದೇವಾಲಯಗಳಲ್ಲಿ ದೇವರನ್ನು ಬೇಡ ಬೇಕಾದರೆ ಪೂಜಾರಿಯ ಮೂಲಕ ಬೇಡಬೇಕಾಗಿತ್ತು. ಏಕೆಂದರೆ ದೇವ ಬಾಷೆಗಳೆಲ್ಲವೂ ಸಂಸ್ಕೃತದಲ್ಲಿತ್ತು. ಕನ್ನಡದಲ್ಲಿರಲಿಲ್ಲ, ಹನ್ನೊಂದನೆ ಶತಮಾನದಲ್ಲಿ ಬಸವಣ್ಣ, ಅಕ್ಕಮಹಾದೇವಿ ಮೊದಲುಗೊಂಡು ಎಲ್ಲ ವಚನಕಾರರು ಕನ್ನಡದಲ್ಲೇ ದೇವರ ನಾಮಗಳನ್ನು ಹೇಳುತ್ತಿದ್ದರು. ಅಂದಿನಿಂದ ದೇವರಿಗೆ ನಮ್ಮ ಕನ್ನಡಲ್ಲಿ ಪೂಜೆಗಳು ಆರಂಭವಾದವು ಎಂದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್, ಸದಸ್ಯ ರವಿಕುಮಾರ್ ನೀಹಾ, ಮೆಡಿಕಲ್ ಕಾಲೇಜಿನ ಡೀನ್ ಡಾ.ಎಂ.ಎಲ್.ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕೋಡಿ ರಂಗಪ್ಪ, ಜಿಲ್ಲಾ ಶಸ್ತ್ರ ಚಿಕ್ಕಿತ್ಸಕಿ ಡಾ.ಮಂಜುಳಾದೇವಿ. ಅಕಾಡೆಮಿಕ್ ರಿಜಿಸ್ಟ್ರಾರ್ ಡಾ.ಎಂ.ಆರ್.ಅನಿತಾ,ಎಲ್ಲಾ ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು.ಸಿಬ್ಬಂಧಿವರ್ಗ, ವಿದ್ಯಾರ್ಥಿಗಳು ಇದ್ದರು..