ದತ್ತಿ ಉಪನ್ಯಾಸ ಕಾರ್ಯಕ್ರಮಗಳಿಂದ ಕನ್ನಡ ಸಾಹಿತ್ಯದ ಪರಿಚಯ: ಸಿದ್ದಲಿಂಗಪ್ಪ

KannadaprabhaNewsNetwork |  
Published : Jan 28, 2024, 01:16 AM IST
ದತ್ತಿ ಉಪನ್ಯಾಸ | Kannada Prabha

ಸಾರಾಂಶ

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು, ಸಭೆ ಸಮ್ಮೇಳನಗಳಲ್ಲದೆ ದತ್ತಿ ಕಾರ್ಯಕ್ರಮಗಳ ಮೂಲಕವೂ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು, ಸಭೆ ಸಮ್ಮೇಳನಗಳಲ್ಲದೆ ದತ್ತಿ ಕಾರ್ಯಕ್ರಮಗಳ ಮೂಲಕವೂ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ತಿಳಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಶಾಖೆ ಕೋರಾದ ಶ್ರೀ ಮಹಾಲಿಂಗೇಶ್ವರ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ಪ್ರೊ. ಬಿ. ವೀರಭದ್ರಯ್ಯ ದತ್ತಿ, ಪ್ರೊ. ಸಿ.ಎಚ್. ಮರಿದೇವರು ದತ್ತಿ ಹಾಗೂ ಗೂಳೂರು ಚನ್ನವೀರಸ್ವಾಮಿ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾತೃಭಾಷೆಯ ಮೂಲಕ ಗ್ರಹಿಸುವ ವಿಷಯ ಎಷ್ಟೇ ಕಠಿಣವಾಗಿದ್ದರೂ ಸಹ ಸುಲಭವಾಗಿ ಅರ್ಥೈಸಿಕೊಳ್ಳುವುದರ ಜೊತೆಗೆ ವಿಮರ್ಶಿಸಲು ಸಾಧ್ಯವಾಗುವುದಲ್ಲದೆ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದು ತಿಳಿಸಿದರು.

ಶೂನ್ಯ ಸಂಪಾದನೆ ಕುರಿತು ಉಪನ್ಯಾಸ ನೀಡಿದ ಎಂ. ಸುರೇಶ್ ವಿದ್ಯೆ ವಿನಯವನ್ನು, ಗೌರವವನ್ನು, ಧನವನ್ನು ಕೊಡುತ್ತದೆ. ಅದರ ಸದ್ವಿನಿಯೋಗದಿಂದ ಜೀವನದಲ್ಲಿ ಉನ್ನತ ಗುರಿಯನ್ನು ಸಾಧಿಸುವಂತೆ ಏನೂ ಇಲ್ಲ ಹಾಗೂ ಎಲ್ಲವೂ ಇದೆ ಎಂಬುದರ ಸಾಧನೆಯ ಸಾರವೇ ಶೂನ್ಯ ಸಂಪಾದನೆ ಎಂದು ತಿಳಿಸಿದರು.

ವಚನ ಸಾಹಿತ್ಯದ ಸಮಕಾಲೀನತೆಯನ್ನು ಕುರಿತು ನಿವೃತ್ತ ಮುಖ್ಯೋಪಾಧ್ಯಾಯ ಎಂ. ನಂಜಯ್ಯ ಮಾತನಾಡಿ, ವಚನ ಸಾಹಿತ್ಯ ಜನಸಾಮಾನ್ಯರ ಬದುಕಿಗೆ ದಾರಿದೀಪ. ಶರಣರ ಒಂದೊಂದು ವಚನಗಳನ್ನೂ ಚೆನ್ನಾಗಿ ಅರ್ಥ ಮಾಡಿಕೊಂಡ, ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಯಶಸ್ಸನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.

ತುಮಕೂರು ಜಿಲ್ಲೆಯ ಕವಿಗಳ ಸಾಹಿತ್ಯ ಕುರಿತು ಡಾ. ಡಿ.ಎನ್. ಯೋಗೀಶ್ವರಪ್ಪ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಉತ್ತರ ಕರ್ನಾಟಕದ ಕಲ್ಯಾಣದಲ್ಲಿ ರಚನೆಯಾಗಿದ್ದ ವಚನ ಸಾಹಿತ್ಯ ಕಣ್ಮರೆಯಾಗಿದ್ದ ಸಂದರ್ಭದಲ್ಲಿ ಹದಿನೈದನೆಯ ಶತಮಾನದಲ್ಲಿ ತುಮಕೂರು ಜಿಲ್ಲೆಯ ಮೂಲಕ ಪುನರುತ್ಥಾನ ಕಂಡಿತು. ಇದಕ್ಕೆ ತುಮಕೂರಿನ ಅನೇಕ ಪ್ರಾಂತ್ಯಗಳನ್ನಾಳಿದ ಮಹಾನಾಡಪ್ರಭುಗಳ ಕಾಣಿಕೆ ಅಮೂಲ್ಯವಾದುದು ಎಂದು ತಿಳಿಸಿದರು.

ಜಿಲ್ಲಾ ಕಸಾಪ ಸಂಚಾಲಕ ಕೆ.ಎಸ್. ಉಮಾಮಹೇಶ್ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಮುಖ್ಯ ಶಿಕ್ಷಕ ಜಿ.ಎಚ್. ಕೆಂಪರಾಜು ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್. ಜಗದೀಶ್, ಬಿ. ವಜ್ರಪ್ಪ ಹಾಜರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌