‘ಕಂದೀಲು’ ಚಿತ್ರದ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಗೆ ಸನ್ಮಾನ

KannadaprabhaNewsNetwork |  
Published : Oct 29, 2025, 11:00 PM IST
ಚಿತ್ರ : 29ಎಂಡಿಕೆ2 : ‘ಕಂದೀಲು’ ಚಿತ್ರದ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಗೆ ಸನ್ಮಾನ. | Kannada Prabha

ಸಾರಾಂಶ

ಕಂದೀಲು ಕನ್ನಡ ಚಲನಚಿತ್ರದ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್‌ ಅವರನ್ನು ಸಂಸ್ಕೃತಿ ಸಿರಿ ಬಳಗ ಟ್ರಸ್ಟ್‌ ಸನ್ಮಾನಿಸಿ ಗೌರವಿಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಷ್ಟ್ರ ಪ್ರಶಸ್ತಿ ವಿಜೇತ ‘ಕಂದೀಲು’ ಕನ್ನಡ ಚಲನಚಿತ್ರದ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರನ್ನು ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿತು.ಮೇಕೇರಿಯ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಯಶೋಧ ಪ್ರಕಾಶ್ ಅವರು ನನ್ನ ನಿರ್ದೇಶನದ ‘ಕಂದೀಲು’ ಕನ್ನಡ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿರುವುದು ಸಂತೋಷ ಮತ್ತು ಹೆಮ್ಮೆ ಎನಿಸಿದೆ. ಈ ಪ್ರಶಸ್ತಿ ಸಿನಿರಂಗದಲ್ಲಿ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.ಒಂದು ಕುಟುಂಬದಂತೆ ಕಾರ್ಯನಿರ್ವಹಿಸುತ್ತಿರುವ ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಕಲಾವಿದರನ್ನು ಸನ್ಮಾನಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲೂ ಟ್ರಸ್ಟ್ ಉತ್ತಮ ಕಾರ್ಯಚಟುವಟಿಕೆಗಳೊಂದಿಗೆ ಮತ್ತಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.

ಚಿತ್ರ ನಿರ್ಮಾಣ ಕಷ್ಟದ ಕೆಲಸ: ಟ್ರಸ್ಟ್ ನ ಗೌರವಾಧ್ಯಕ್ಷ ಹಾಗೂ ಸರ್ಕಾರಿ ಆಸ್ಪತ್ರೆಯ ತುರ್ತು ಘಟಕದ ಮುಖ್ಯಸ್ಥ ಡಾ.ಕೋಲೆಯಂಡ ಮೋಹನ್ ಅಪ್ಪಾಜಿ ಅವರು ಮಾತನಾಡಿ, ಏಳುಬೀಳಿನ ಸಿನಿಮಾರಂಗದಲ್ಲಿ ಚಿತ್ರ ನಿರ್ಮಾಣ ಕಷ್ಟದ ಕೆಲಸವಾಗಿದೆ. ಆದರೆ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ಕೊಡಗು ಜಿಲ್ಲೆಯ ಗ್ರಾಮ ಮಟ್ಟದಿಂದ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯವರೆಗೂ ಬೆಳೆದು ನಿಂತಿರುವುದು ಮಹಾ ಸಾಧನೆಯೇ ಆಗಿದೆ ಎಂದು ಬಣ್ಣಿಸಿದರು.ಹಲವು ಸಿನಿಮಾಗಳನ್ನು ನಿರ್ಮಿಸಿ ನಿರ್ದೇಶಿಸಿರುವ ಯಶೋಧ ಅವರು ‘ಕಂದೀಲು’ ಕನ್ನಡ ಸಿನಿಮಾಕ್ಕೆ ರಾಷ್ಟ್ರಪತಿಗಳಿಂದ ರಾಷ್ಟ್ರ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಕೊಡಗಿಗೂ ಹೆಮ್ಮೆ ಎಂದರು.

ಉತ್ತಮ ಕಾರ್ಯಕ್ರಮ ಶ್ಲಾಘನೀಯಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸರ್ಕಾರಿ ಅಭಿಯೋಜಕ ಶ್ರೀಧರನ್ ನಾಯರ್ ಅವರು ಸಂಘ ಸಂಸ್ಥೆಗಳು ಸಾಧಕರನ್ನು ಸನ್ಮಾನಿಸಿ ಉತ್ತೇಜಿಸುವ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಸಮಾಜಮುಖಿವಾಗಿ ಕಾರ್ಯ ನಿರ್ವಹಿಸುತ್ತಿರುವ ಟ್ರಸ್ಟ್ ಈ ರೀತಿಯ ಉತ್ತಮ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಶ್ಲಾಘನೀಯವೆಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ನ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಅವರು ಯಾವುದೇ ಕಾರ್ಯವನ್ನು ಶ್ರದ್ಧೆ ಮತ್ತು ಕಠಿಣ ಪರಿಶ್ರಮದಿಂದ ಮಾಡಿದರೆ ಅರ್ಹತೆ ತಾನಾಗಿಯೇ ಬರುತ್ತದೆ ಎನ್ನುವುದಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಯಶೋಧ ಪ್ರಕಾಶ್ ಅವರೇ ಉತ್ತಮ ಸಾಕ್ಷಿಯಾಗಿದ್ದಾರೆ ಮತ್ತು ಎಲ್ಲರಿಗೂ ಮಾದರಿ ಮಹಿಳೆಯಾಗಿದ್ದಾರೆ ಎಂದು ಬಣ್ಣಿಸಿದರು. ತಮ್ಮ ವೃತ್ತಿ ಜೀವನದ ಜೊತೆಯಲ್ಲಿ ಸಿನಿಮಾ ತಯಾರಿಕೆಯಲ್ಲಿ ಯಶೋಧ ಪ್ರಕಾಶ್ ಅವರು ತೋರುವ ದಕ್ಷತೆ ಮತ್ತು ಕಾರ್ಯವೈಖರಿಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ರಾಷ್ಟ್ರ ಪ್ರಶಸ್ತಿಯನ್ನು ಪಡೆಯಲು ಇವರು ಅರ್ಹ ನಿರ್ದೇಶಕರು ಎಂದು ಹರ್ಷ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿ ಯಶಸ್ಸಿನ ಉತ್ತುಂಗಕ್ಕೆ ಏರಲಿ ಎಂದು ಶುಭ ಹಾರೈಸಿದರು. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಯಶೋಧ ಪ್ರಕಾಶ್ ಅವರನ್ನು ಈರಮಂಡ ಹರಿಣಿ ವಿಜಯ್, ಡಾ.ಕೋಲೆಯಂಡ ಮೋಹನ್ ಅಪ್ಪಾಜಿ ಹಾಗೂ ಶ್ರೀಧರನ್ ನಾಯರ್ ಅವರು ಸನ್ಮಾನಿಸಿ ಗೌರವಿಸಿದರು.ಇದೇ ಸಂದರ್ಭ ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ)ಯ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಡಾ.ಮೋಹನ್ ಅಪ್ಪಾಜಿ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಂಡ್ಯದಲ್ಲಿ ನಡೆದ ವೈದ್ಯಕೀಯ ರಾಜ್ಯ ಸಮಾವೇಶದಲ್ಲಿ ಆಕರ್ಷಕ ಮತ್ತು ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮ ನೀಡಿದ ಟ್ರಸ್ಟ್ ನ ಸದಸ್ಯರಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಗಳನ್ನು ನೀಡಲಾಯಿತು.ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಉಪಾಧ್ಯಕ್ಷರಾದ ನಿಶಾ ಮೋಹನ್, ಟ್ರಸ್ಟಿ ಕೆ.ಎಂ.ಗಣೇಶ್, ಖಜಾಂಚಿ ಕೂಡಂಡ ದೀಪ ಕಾವೇರಪ್ಪ, ಸದಸ್ಯರಾದ ಎಂ.ಪಿ.ಕೃಷ್ಣರಾಜು, ಡೆನ್ನಿ ಮೋರಸ್, ಅನಿಲ್ ಕೃಷ್ಣಾನಿ, ಪ್ರಮಿತ, ಮಂಜುಳಾ ಶಿವಕುಮಾರ್, ರಾಧಾ, ಸುಚಿತ ಕಾವೇರಪ್ಪ, ಮೈನಾ, ಸ್ವೀಟಿ ಹಾಗೂ ನೃತ್ಯ ಬಳಗದ ಸದಸ್ಯರು ಉಪಸ್ಥಿತರಿದ್ದರು. ಅಪ್ಪಚಂಡ ಸುಚಿತ ಪ್ರಾರ್ಥಿಸಿ, ಈರಮಂಡ ವಿಜಯ್ ಸ್ವಾಗತಿಸಿ, ಕೂಡಂಡ ದೀಪ ಕಾವೇರಪ್ಪ ವಂದಿಸಿ, ಕೋಲೆಯಂಡ ನಿಶಾ ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಮಂಜುಳಾ ತಂಡದಿಂದ ನಡೆದ ಭಜನೆ ಹಾಡು ಹಾಗೂ ಮಕ್ಕಳ ನೃತ್ಯಗಳು ಗಮನ ಸೆಳೆದವು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು