ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಶಂಕಿತ ಭ್ರೂಣಲಿಂಗ ಪತ್ತೆ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಜ್ಞ ವೈದ್ಯರು ಹಾಗೂ ಸಿಬ್ಬಂದಿಯ ಚಲನವಲನಗಳ ಮೇಲೆ ನಿಗಾ ಇಡುವಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ನ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರುವಾರ ಪ್ರಸವ ಪೂರ್ವ ಮತ್ತು ಗರ್ಭ ಪೂರ್ವ ಲಿಂಗ ಪತ್ತೆ ತಂತ್ರಗಳ ಕುರಿತ ಕಾರ್ಯಾಗಾರ (ಪಿ.ಸಿ.ಮತ್ತು ಪಿ.ಎನ್.ಡಿ.ಟಿ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 43 ಭ್ರೂಣ ಪತ್ತೆ ಕೇಂದ್ರಜಿಲ್ಲೆಯಲ್ಲಿ 9 ಸರ್ಕಾರಿ ಹಾಗೂ 34 ಖಾಸಗಿ ಸೇರಿದಂತೆ ಒಟ್ಟು 43 ಭ್ರೂಣ ಪತ್ತೆ ಕೇಂದ್ರಗಳು ನೋಂದಣಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಕೇಂದ್ರಗಳ ಮಾಲೀಕರು, ಮುಖ್ಯಸ್ಥರು, ವೈದ್ಯರು, ರೆಡಿಯೋಲಜಿಸ್ಟ್ ಗಳು, ಸಿಬ್ಬಂದಿಗಳು ಬಹಳ ಎಚ್ಚರಿಕೆಯಿಂದ ಕೆಲಸವನ್ನು ನಿರ್ವಹಿಸಬೇಕು. ನಿಯಮಬಾಹಿರವಾಗಿ ಭ್ರೂಣಲಿಂಗ ಪತ್ತೆ ಮಾಡುವುದನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ತಾವು ಮಾಡುವ ಸ್ಕ್ಯಾನಿಂಗ್ ಗಳ ವಿವರವನ್ನು ದಾಖಲೆ ಸಮೇತ ಕ್ರಮವಾಗಿ ಇಟ್ಟಿರಬೇಕು ಎಂದು ಹೇಳಿದರು.
ಅನಿರೀಕ್ಷಿತ ದಾಳಿವೇಳೆ ಅಥವಾ ಯಾವುದೇ ಸಂದರ್ಭದಲ್ಲಿ ಮೇಲಿನ ಅಧಿಕಾರಿಗಳು (ಪಿ.ಸಿ.ಮತ್ತು ಪಿ.ಎನ್.ಡಿ.ಟಿ) ತಂಡದವರು ಕೇಳುವ ಎಲ್ಲಾ ದಾಖಲೆಗಳನ್ನು ಹಾಗೂ ಮಾಹಿತಿಯನ್ನು ಸಮರ್ಪಕವಾಗಿ ನೀಡಬೇಕು. ಗರ್ಭಿಣಿಯರು ಲಿಂಗ ಪತ್ತೆ ಮಾಡಿ ಮಾಹಿತಿ ತಿಳಿಸುವಂತೆ ಯಾರಾದರೂ ಒತ್ತಾಯಪಡಿಸಿದರೆ ಅಥವಾ ಪ್ರೆರೇಪಿಸಿದರೆ ಕೂಡಲೆ ಮೇಲಾಧಿಕಾರಿಗಳಿಗೆ, ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಅಂತಹವರ ಮಾಹಿತಿ ನೀಡಿ ಶಿಸ್ತು ಕ್ರಮಕ್ಕೆ ಒಳಪಡಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ, ರೆಡಿಯಾಲಜಿಸ್ಟ್ ಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.ಮಹಿಳಾ ಮತದಾರರ ಸಂಖ್ಯೆ ಹೆಚ್ಚು ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಪ್ರಸ್ತುತ 1000 ಪುರುಷರಿಗೆ 1026 ಮಹಿಳಾ ಮತದಾರರು ಇದ್ದಾರೆ ಅದೇ ರೀತಿ ಲಿಂಗಾನುಪಾತದ ಪ್ರಮಾಣವು ಕೂಡ ಹೆಚ್ಚಳವಾಗಬೇಕು. ಆ ನಿಟ್ಟಿನಲ್ಲಿ ನಾಗರೀಕರು ಹಾಗೂ ಈ ಕ್ಷೇತ್ರದಲ್ಲಿ ದುಡಿಯುವ ವೈದ್ಯರು, ಸಿಬ್ಬಂದಿಯು ಸಹಕರಿಸಬೇಕು ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಸ್.ಮಹೇಶ್ ಕುಮಾರ್, ಆರ್.ಸಿ.ಹೆಚ್ ಅಧಿಕಾರಿ ಡಾ. ಸಂತೋಷ್ ಬಾಬು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ ರೆಡ್ಡಿ, ಸ್ಕ್ಯಾನಿಂಗ್ ಕೇಂದ್ರಗಳ ಮುಖ್ಯಸ್ಥರು, ಸಿಬ್ಬಂದಿ ಇದ್ದರು.