ಕನ್ನಡಪ್ರಭ ವಾರ್ತೆ ಬೆಂಗಳೂರು
ಕುವೆಂಪು ಅವರ ಹೊಸ ವೈಚಾರಿಕ ವಿಚಾರಗಳನ್ನು ಕ್ರಿಯಾಶೀಲ ಬರಹಗಳ ಮೂಲಕ ಪಿ.ಲಂಕೇಶ್ ಅವರು ಜನ ಮಾನಸಕ್ಕೆ ತಲುಪಿಸುವ ಕೆಲಸ ಮಾಡಿದರು. ಡಾ। ಯು.ಆರ್.ಅನಂತ ಮೂರ್ತಿ ಮತ್ತು ಪೂರ್ಣಚಂದ್ರ ತೇಜಸ್ವಿ ಸಹ ಇದಕ್ಕೆ ಕೈಜೋಡಿಸಿದ್ದರು ಎಂದು ಚಿಂತಕ ಡಾ। ಕೆ.ಮರುಳಸಿದ್ದಪ್ಪ ಸ್ಮರಿಸಿದರು.‘ಭಾಗವತರು’ ಸಾಂಸ್ಕೃತಿಕ ಸಂಘಟನೆ, ನಯನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಲಂಕೇಶ್-90’ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ನಾಡಿನ ಸಾಂಸ್ಕೃತಿಕ ಬದುಕಿನಲ್ಲಿ 70ರ ದಶಕ ವಿಶಿಷ್ಟವಾಗಿತ್ತು. ವೈದಿಕ ಪ್ರಜ್ಞೆಗೆ ವಿರುದ್ಧವಾಗಿ ಶೂದ್ರ ಪ್ರಜ್ಞೆ ಹುಟ್ಟಿಕೊಂಡಿತು. ಕುವೆಂಪು ಮತ್ತು ಲಂಕೇಶ್, ಮಲೆನಾಡಿನವರಾಗಿದ್ದು ಜಾತಿ ವ್ಯವಸ್ಥೆಯ ವಿರೋಧಿಗಳಾಗಿದ್ದರು. ಮೂಢನಂಬಿಕೆಗಳನ್ನು ವಿರೋಧಿಸುತ್ತಿದ್ದರು. ಕುವೆಂಪು ಅವರ ವಿಚಾರಗಳನ್ನು ‘ಲಂಕೇಶ್ ಪತ್ರಿಕೆ’ಯ ಮೂಲಕ ಲಂಕೇಶ್ ಅವರು ಜನರಿಗೆ ಮುಟ್ಟಿಸುವಲ್ಲಿ ಸಫಲರಾದರು. ಸಾಹಿತಿಗಳಾದ ಅನಂತಮೂರ್ತಿ ಮತ್ತು ತೇಜಸ್ವಿ ಇದಕ್ಕೆ ಕೈಜೋಡಿಸಿದರು ಎಂದು ಹೇಳಿದರು.ಅಧ್ಯಾಪಕನಾಗಿ ವೃತ್ತಿ ಬದುಕನ್ನು ಆರಂಭಿಸಿದಾಗ, ಅಧ್ಯಾಪಕ ಕೆಲಸ ಹೊರತು ಪಡಿಸಿದರೆ ತಮಗೆ ಬೆಂಗಳೂರಿನಲ್ಲಿ ಯಾರೂ ಪರಿಚಯವಿರಲಿಲ್ಲ. ಕಾಲೇಜಿನಲ್ಲೇ ಇಂಗ್ಲಿಷ್ ಅಧ್ಯಾಪಕರಾಗಿದ್ದ ಲಂಕೇಶ್ ಅವರ ಸ್ನೇಹ ತಮಗೆ ಹೊಸ ಉತ್ಸಾಹ ತುಂಬಿತು. ಲಂಕೇಶ್ ಅವರು ಶಾಸ್ತ್ರೋಕ್ತವಾಗಿ ದೇವರನ್ನು ನಂಬದಿದ್ದರೂ ದೇವರು, ಧರ್ಮದ ಕಡು ವಿರೋಧಿಯಾಗಿರಲಿಲ್ಲ ಎಂದು ನೆನಪಿಸಿಕೊಂಡರು.
ಶೋಷಿತರ ಧ್ವನಿರಾಜ್ಯಸಭಾ ಸದಸ್ಯ ಡಾ। ಎಲ್.ಹನುಮಂತಯ್ಯ ಮಾತನಾಡಿ, ಲಂಕೇಶ್ ಅವರು ತಮ್ಮ ಬರಹಗಳ ಮೂಲಕ ಸಾಮಾಜಿಕ ಪ್ರಜ್ಞೆ ಮೂಡಿಸುತ್ತಿದ್ದರು. 70ರ ದಶಕದಲ್ಲಿ ದಲಿತರು, ಶೂದ್ರರು, ಹಿಂದುಳಿದವರು ದೊಡ್ಡ ಪ್ರಮಾಣದಲ್ಲಿ ಅಕ್ಷರ ಜ್ಞಾನ ಪಡೆದರು. ಈ ಕಾಲಘಟ್ಟದಲ್ಲಿ ಲಂಕೇಶ್ ಅವರು ವಿಭಿನ್ನ ಬರವಣಿಗೆಗಳ ಮೂಲಕ ಶೋಷಿತರ ದನಿಯಾದರು ಎಂದು ಸ್ಮರಿಸಿಕೊಂಡರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ। ಸಿ.ಎಸ್.ದ್ವಾರಕನಾಥ್ ಮಾತನಾಡಿ, ಜಾತಿಯತೆ ಮತ್ತು ಕೋಮುವಾದವನ್ನು ಇಂದು ಪ್ರಬಲವಾಗಿ ವಿರೋಧಿಸುತ್ತಿರುವವರಲ್ಲಿ ಬಹುತೇಕರು ಒಂದು ಕಾಲದಲ್ಲಿ ಲಂಕೇಶ್ ಪತ್ರಿಕೆಯ ಓದುಗರಾಗಿದ್ದರು ಎಂಬುದು ನೈಜ ಸಂಗತಿಯಾಗಿದೆ. ದಶಕಗಳು ಉರುಳಿದರೂ ಲಂಕೇಶ್ ಪ್ರಜ್ಞೆ ನಮ್ಮಲ್ಲಿ ಇನ್ನೂ ಜೀವಂತವಾಗಿದೆ ಎಂದು ಅಭಿಪ್ರಾಯಪಟ್ಟರು.ಚಿಂತಕ ಅಗ್ರಹಾರ ಕೃಷ್ಣಮೂರ್ತಿ, ಲಂಕೇಶ್ ಅವರ ಪತ್ನಿ ಇಂದಿರಾ, ವಿಮರ್ಶಕಿ ಡಾ। ಎಂ.ಎಸ್.ಆಶಾದೇವಿ ಉಪಸ್ಥಿತರಿದ್ದರು.