ಕನ್ನಡಪ್ರಭ ವಾರ್ತೆ ಮಾಲೂರು
ಗಿಡ ನಡೆವುದು ಮುಖ್ಯವಲ್ಲ. ಅದನ್ನೂ ಪೋಷಿಸಿದಾಗ ಮಾತ್ರ ಇಂತಹ ವನ ಮಹೋತ್ಸವಕ್ಕೆ ಸಾರ್ಥಕತೆ ಸಿಗಲಿದೆ ಎಂದು ಶಾಸಕ ನಂಜೇಗೌಡ ಹೇಳಿದರು. ತಾಲೂಕಿನ ಕುಡಿಯನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ಸ್ವಾಮಿ ದೇವಾಲಯದ ಬಳಿ ಇರುವ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಕೋಲಾರ ವಿಭಾಗ, ಮಾಲೂರು ವಲಯ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ವನಮಹೋತ್ಸವ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪ್ರತಿಯೊಬ್ಬ ವಿದ್ಯಾರ್ಥಿಯು ತಲಾ ಎರಡು ಗಿಡಗಳನ್ನು ನೆಟ್ಟು ಪೋಷಣೆ ಮಾಡಿ ಪರಿಸರವನ್ನು ಸಂರಕ್ಷಣೆ ಮಾಡಿ ಶುದ್ದಗಾಳಿಯಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಗಿಡಗಳ ಪೋಷಣೆಯಲ್ಲಿ ಶಿಕ್ಷಕರ ಜವಾಬ್ದಾರಿ ಸಹ ಇದೆ. ನೀವು ನೆಟ್ಟ ಗಿಡ ಮುಂದೆ ನೀವು ಶಾಲೆ ನೋಡಲು ಬಂದಾಗ ನೀವು ನೆಟ್ಟ ಮರಗಳು ನಿಮ್ಮನ್ನು ಸ್ವಾಗತಿಸುತ್ತದೆ ಎಂದರು.ಮರಗಿಡಗಳ ಸಂಖ್ಯೆ ಕುಸಿತ
ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿ ಮರಗಿಡಗಳ ಸಂಖ್ಯೆ ಕಡಿಮೆಯಾಗುತ್ತಿದೆ ಇದರಿಂದ ಪರಿಸರದಲ್ಲಿ ಹಾಗೂ ಹವಾಮಾನದಲ್ಲಿ ವೈಪರೀತ್ಯ ಕಾಣುತ್ತಿದ್ದೇವೆ. ಅರಣ್ಯ ಇಲಾಖೆಯು ರಸ್ತೆಯ ಬದಿಗಳಲ್ಲಿ, ಗೋಮಾಳ, ಅರಣ್ಯ ಇಲಾಖೆಯ ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಕೆಲಸ ಆಂದೋಲನ ರೀತಿಯಲ್ಲಿ ಮಾಡಬೇಕು, ಹೆಚ್ಚು ಗಿಡಗಳನ್ನು ನೆಟ್ಟು ಪೋಷಣೆ ಮಾಡುವುದರಿಂದ ಸಕಾಲಕ್ಕೆ ಮಳೆ ಬೀಳುತ್ತದೆ, ಪ್ರಾಣಿ, ಪಕ್ಷಿಗಳಿಗೆ, ಹಣ್ಣು ಹಂಪಲು ಸಿಗುತ್ತದೆ. ಮನುಷ್ಯರಿಗೆ ಶುದ್ಧವಾದ ಗಾಳಿ ಸಿಗುತ್ತದೆ ಎಂದರು.ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಕೆಲಸ ಮಾಡಬೇಕು ಹಾಗೂ ಮರ ಗಿಡ ಬೆಳೆಸುವುದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವಂತೆ ಹೇಳಿದವರು, ಮರ ಗಿಡ ಕಡಿಯುವುದನ್ನು ನಿಯಂತ್ರಿಸಬೇಕು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ನೀಡುವ ಗಿಡಗಳನ್ನು ಪಡೆದು ಆಂದೋಲನದ ರೀತಿಯಲ್ಲಿ ಗ್ರಾಮ ಪಂಚಾಯಿತಿಗಳು ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಕೆಲಸ ಮಾಡಿದರೆ ಪರಿಸರ ಅಸಮತೋಲನ ಕಾಪಾಡಬಹುದಾಗಿದೆ ಎಂದರು. ಸಸಿಗಳನ್ನು ಪೋಷಣೆ ಮಾಡಿ
ಅರಣ್ಯ ಇಲಾಖೆಯು ಶಾಲಾ ಆವರಣದಲ್ಲಿ ನೆಟ್ಟಿರುವ ಗಿಡಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಪೋಷಣೆ ಮಾಡುವ ಮೂಲಕ ಗೀಡಗಳನ್ನು ಉಳಿಸಿ ಬೆಳಸುವಂತೆ ಹೇಳಿದರು.ಈ ಸಂದರ್ಭದಲ್ಲಿ ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ ವಿಜಯನರಸಿಂಹ, ವಲಯ ಅರಣ್ಯ ಅಧಿಕಾರಿ ಧನಲಕ್ಷ್ಮಿ, ಸಾಮಾಜಿಕ ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ವಾಸುದೇವಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಲಾ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಬಿ.ವಿ.ಗಾಯಿತ್ರಿ, ಗ್ರಾಮ ಪಂಚಾಯಿತಿ ಸದಸ್ಯ ರವಿ, ಮುಖಂಡರಾದ ನಾಗರಾಜ್, ಶ್ರೀನಿವಾಸ್, ಕರಿಯಪ್ಪ, ನಾರಾಯಣಸ್ವಾಮಿ, ನಂಜುಂಡೇಶ್ವರ, ಪಿಡಿಒ ಅಂಬರೀಶ್, ಉಪವಲಯ ಅರಣ್ಯ ಅಧಿಕಾರಿ ಹರೀಶ್, ಇನ್ನಿತರರು ಹಾಜರಿದ್ದರು.