ಶ್ರೀ ಗುರು ಬೆಟ್ಟದ ಸಿದ್ದೇಶ್ವರ ಸ್ವಾಮಿಯ ನೂತನ ಮಹಾದ್ವಾರ ಲೋಕಾರ್ಪಣೆ

KannadaprabhaNewsNetwork | Published : Nov 9, 2024 1:14 AM

ಸಾರಾಂಶ

ಶ್ರೀ ಗುರು ಬೆಟ್ಟದ ಸಿದ್ದೇಶ್ವರ ಸ್ವಾಮಿಯವರ ನೂತನ ಮಹಾದ್ವಾರ ಲೋಕಾರ್ಪಣಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಶ್ರೀ ಹಿರೇಕಲ್ಲು ಸಿದ್ದರಬೆಟ್ಟದ ಸಿದ್ದೇಶ್ವರ ಸ್ವಾಮಿಗೆ ನಾನು ಭಕ್ತನಾಗಿದ್ದು, ಆ ದೇವಸ್ಥಾನ ಭಾಗಕ್ಕೆ ಹೋದರೆ ಗವಿಯ ಒಳಗೆ ಹೋದರೆ ಕೈಲಾಸವೇ ಧರೆಗಿಳಿದಂತಿದೆ. ಆ ಪರಮಾತ್ಮ ನೆಲಸಿರುವಂತಹ ಜಾಗವೇ ಕೈಲಾಸ ರೂಪದಲ್ಲಿದೆ. ಒಂದು ಸುಂದರವಾದ ಜಾಗದಲ್ಲಿ ಶ್ರೀ ಸಿದ್ದರು ನೆಲೆಸಿ ಭಕ್ತರ ಕಣ್ಮನ ಸೆಳೆದಿರುವುದಕ್ಕೆ ಪ್ರತಿ ಹುಣ್ಣಿಮೆಯಲ್ಲಿ ಭಕ್ತರು ಸಾಲು ಸಾಲಾಗಿ ಹೋಗುವುದೇ ಸಾಕ್ಷಿ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಕಣಕಟ್ಟೆ ಹೋ ರಾಮನಹಳ್ಳಿ ಸ್ಟೇಟ್ ಫಾರೆಸ್ಟಿನಲ್ಲಿ ನೆಲೆಸಿರುವ ಶ್ರೀ ಗುರು ಬೆಟ್ಟದ ಸಿದ್ದೇಶ್ವರ ಸ್ವಾಮಿಯವರ ನೂತನ ಮಹಾದ್ವಾರ ಲೋಕಾರ್ಪಣಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆಎಂ ಶಿವಲಿಂಗೇಗೌಡ ಮಾತನಾಡಿ ಶ್ರೀ ಹಿರೇಕಲ್ಲು ಸಿದ್ದರಬೆಟ್ಟದ ಸಿದ್ದೇಶ್ವರ ಸ್ವಾಮಿಗೆ ನಾನು ಭಕ್ತನಾಗಿದ್ದು, ಆ ದೇವಸ್ಥಾನ ಭಾಗಕ್ಕೆ ಹೋದರೆ ಗವಿಯ ಒಳಗೆ ಹೋದರೆ ಕೈಲಾಸವೇ ಧರೆಗಿಳಿದಂತಿದೆ. ಆ ಪರಮಾತ್ಮ ನೆಲಸಿರುವಂತಹ ಜಾಗವೇ ಕೈಲಾಸ ರೂಪದಲ್ಲಿದೆ. ಆ ಬೃಹದಕಾರವಾದ ಬಂಡೆಯ ಒಳಗಡೆ ಎಂಟು ಕಂಬಗಳನ್ನೊಳಗೊಂಡು ವಿಶಾಲವಾದ ಜಾಗದಲ್ಲಿ ಸಾವಿರಾರು ಭಕ್ತರು ಬಂದರೂ ಸಹ ಗವಿಯ ಒಳಗೆ ಒಂದು ರಾತ್ರಿ ತಂಗಿ ಹೋಗುವಂತಹ ಜಾಗ ಮತ್ತು ಅದರ ಆಕಾರ ಒಳಭಾಗದಲ್ಲಿ ಶ್ರೀ ಚನ್ನಬಸವೇಶ್ವರ ಗದ್ದಿಗೆ ಇರುವಂತಹ ಜಾಗ, ಶ್ರೀ ಬೆಟ್ಟದ ಸಿದ್ದೇಶ್ವರ ತ್ರಿಮೂರ್ತಿಗಳು ಇರುವಂತಹ ಜಾಗ ಮತ್ತು ಎಂಟು ಕಂಬಗಳ ಮಧ್ಯ 101 ಎಡೆ ಸೇವೆ ನಡೆಸುವಂತಹ ಜಾಗ, ಹೋಮ ನಡೆಸುವಂತಹ ಜಾಗ ಇವೆಲ್ಲವನ್ನೂ ನೋಡುತ್ತಿದ್ದರೆ ಬೆಟ್ಟದಿಂದ ಕೆಳಗೆ ಇಳಿಯಲು ಮನಸೇ ಬರುವುದಿಲ್ಲ ಅಂತಹ ಒಂದು ಸುಂದರವಾದ ಜಾಗದಲ್ಲಿ ಶ್ರೀ ಸಿದ್ದರು ನೆಲೆಸಿ ಭಕ್ತರ ಕಣ್ಮನ ಸೆಳೆದಿರುವುದಕ್ಕೆ ಪ್ರತಿ ಹುಣ್ಣಿಮೆಯಲ್ಲಿ ಭಕ್ತರು ಸಾಲು ಸಾಲಾಗಿ ಹೋಗುವುದೇ ಸಾಕ್ಷಿ ಎಂದರು.

ಈ ಭೂಲೋಕದಲ್ಲಿ ಆಗಿಂದಾಗೆ ಪರಮಾತ್ಮನು ಆವರಿಸಿದ ನಿದರ್ಶನ ನಾವು ಕಥಾ ಭಾಗದಲ್ಲಿ ಓದಿದ್ದೇವೆ ಅಥವಾ ಭಾಗದ ನಡೆಯನ್ನ ನುಡಿಯನ್ನು ನಾವುಗಳು ಇನ್ನೂ ಅನುಕರಣೆ ಮಾಡಬೇಕಾಗಿದೆ. ಈ ರೀತಿ ಪರಮಾತ್ಮನು ದಶಾವತಾರಗಳನ್ನು ಎತ್ತಿ ಭೂಲೋಕಕ್ಕೆ ಬಂದು ಆಗಿಂದಾಗ್ಗೆ ಆಚಾರ ವಿಚಾರಗಳನ್ನು ಮಾನವ ಕುಲ ಯಾವ ರೀತಿ ಬದುಕಬೇಕು ಎಂಬುದನ್ನು ಕಥಾರೋಪದಲ್ಲಿ ಹೇಳಿ ಹೋಗಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಅವತರಿಸಿ ದರೆಗೆ ಬಂದು ಮಾನವ ಕುಲ ಎಲ್ಲೋ ಒಂದು ಕಡೆ ಸಂಕಷ್ಟಕ್ಕೆ ಸಿಲುಕಿ ನಲಗುತ್ತಿದೆ. ಆದರೆ ಬಸವಣ್ಣನವರು ಅವತರಿಸಿ ಬಂದ ಮೇಲೆ ಅವರು ಹಾಕಿದಂತಹ ನಡೆ ಅವರ ಹಾಕಿಕೊಟ್ಟಿರುವಂತಹ ಸಿದ್ದಾಂತಗಳು ಇವತ್ತಿನ ಆಧುನಿಕ ಪ್ರಪಂಚಕ್ಕೆ ದಾರಿ ದೀಪವಾಯಿತು. ಅವರ ತತ್ವಗಳು ಎಂದಿಗೂ ಸುಳ್ಳಾಗುವುದಿಲ್ಲ ಎಂದರು. ಸಾನಿಧ್ಯ ವಹಿಸಿ ಮಾತನಾಡಿದ ಹೊಸದುರ್ಗ ತಾಲೂಕಿನ ಕುಂಚಗಿರಿ ಮಠದ ಪೀಠಾಧ್ಯಕ್ಷರಾದ ಕಾಯಕಯೋಗಿ ಶ್ರೀ ಶಾಂತವೀರ ಸ್ವಾಮೀಜಿ, ಗುಡಿ ಗೋಪುರಗಳನ್ನು ಕಟ್ಟುವುದು ಕೆಲಸವಲ್ಲ , ಜಾತ್ರೆ ಮಾಡುವುದು ಕಾಯಕವಲ್ಲ, ಸಮಾಜದ ಅಭಿವೃದ್ಧಿಗೆ ಕುಟುಂಬದ ಸಮೃದ್ಧಿಗೆ ಸಂಸ್ಕಾರದ ಶಿಕ್ಷಣ ಬೇಕು. ಸಾಮಾಜಿಕ ನ್ಯಾಯದ ಒಳ್ಳೆಯ ವ್ಯವಸ್ಥೆಯನ್ನು ಬಿತ್ತದೇ ಹೋದರೆ ನಮ್ಮ ಮಕ್ಕಳಿಂದ ಒಳ್ಳೆಯ ಸಂಸ್ಕಾರ ನೀರಿಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ನಾವು ನಮ್ಮ ಮಕ್ಕಳ ಉದಯದಲ್ಲಿ ಸಂಸ್ಕಾರವನ್ನು ಶಿಕ್ಷಣವನ್ನು ಸನ್ನಡತೆಯನ್ನು ಸಹಬಾಳ್ವೆಯನ್ನು ಕಲಿಸದೆ ಹೋದರೆ ಸಮಾಜ ಎಲ್ಲೋ ದಾರಿ ತಪ್ಪುತ್ತಿದೆ ಎನ್ನುವುದನ್ನು ನಾವು ಕಾಣಬೇಕಾಗುತ್ತದೆ ಎಂದು ನುಡಿದರು.

ಶ್ರೀ ಹಿರೇಕಲ್ಲು ಬೆಟ್ಟದ ಸಿದ್ದೇಶ್ವರ ಸ್ವಾಮಿಯ ಬೆಟ್ಟದ ದಾರಿಗೆ ದ್ವಾರಬಾಗಿಲು ನಿರ್ಮಿಸಲೇಬೇಕು ಎಂಬ ಒಂದು ಕನಸು ಕಂಡು ಮಾರ್ಗದರ್ಶನ ನೀಡಿದಂತಹ ಶ್ರೀಕರಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಕೊನೆಯ ಹಂತದಲ್ಲಿ ಮಾತನಾಡಿ, ನಮ್ಮ ನಾಡು ಧಾರ್ಮಿಕ ಪರಂಪರೆಯಲ್ಲಿ ಮನುಷ್ಯನಿಗೆ ಒಂದು ಸಂಸ್ಕಾರವನ್ನು ಕೊಟ್ಟಂತಹ ನಾಡು ಮನುಷ್ಯ ಜೀವಾಣು ಮನುಷ್ಯತ್ವದಿಂದ ಬಾಳುವುದನ್ನು ಕಲಿಯಬೇಕು. ಮನುಷ್ಯತ್ವದಿಂದ ಬಾಳಲು ಮನುಷ್ಯನು ಮಠಮಾನ್ಯಗಳನ್ನು ಸೃಷ್ಟಿಸಿ ಅಲ್ಲಿ ಒಂದು ದೈವಶಕ್ತಿಯನ್ನು ಹೆಚ್ಚಿಸಿ ಆ ದೈವ ಶಕ್ತಿಯಿಂದ ಉಂಟಾಗುವಂತಹ ಶಕ್ತಿಯೇ ಮನುಷ್ಯನಿಗೆ ಜ್ಞಾನೋದಯ ಶಕ್ತಿಯನ್ನು ನೀಡುತ್ತದೆ ಶ್ರೀ ಹಿರೇಕಲ್ ಸಿದ್ದೇಶ್ವರ ಸ್ವಾಮಿಯವರು ಸರ್ವ ಜನಾಂಗದ ಆರಾಧ್ಯ ದೈವ ಈ ಕ್ಷೇತ್ರದಲ್ಲಿ ಜಾತಿ ಮತ ಪಂಥ ಎನ್ನುವಂತ ಭೇದಗಳಿಲ್ಲ ಎಲ್ಲಾ ಜನಾಂಗದ ಭಕ್ತರಿಗೂ ಪ್ರಿಯವಾದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಗುರುಪರದೇಶಿಕೇಂದ್ರ ಸ್ವಾಮಿಗಳು ರಂಗಾಪುರ ಮಠ, ಶ್ರೀ ಕರಿ ವೃಷಭ ದೇಶೀ ಕೇಂದ್ರ ಶಿವಯೋಗಿಸ್ವರ ಸ್ವಾಮೀಜಿ ಕಾಡು ಸಿದ್ದೇಶ್ವರ ಮಠ ನೊಣವಿನಕೆರೆ, ರುದ್ರಮುನಿ ಸ್ವಾಮೀಜಿ ನಿರಂಜನ ಪೀಠ ಮಾಡಾಳು, ಶಶಿಶೇಖರ ಸಿದ್ದ ಬಸವ ಸ್ವಾಮೀಜಿ ಬೂದಾಳ್ ವಿರಕ್ತಮಠ, ಡಿ ಎಂ ಕುರ್ಕೆ, ಮಾಜಿ ಶಾಸಕ ಜಿಎಸ್ ಪರಮೇಶ್ವರಪ್ಪ, ಶ್ರೀ ಬೆಟ್ಟದ ಸಿದ್ದೇಶ್ವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೈ ಬಿ ಜಯಣ್ಣ, ತಾ. ಪಂ.ಮಾಜಿ ಉಪಾಧ್ಯಕ್ಷ ಸಿಸಿ ಮಹೇಶ್ವರಪ್ಪ ಮಾಜಿ ಸದಸ್ಯರಾದ ಡಿಎಂ ಹೊಳಿಯಪ್ಪ, ನಾಗವೇದಿ ಸಿದ್ದರಾಮೇಗೌಡ, ಎನ್ ಎಸ್ ಶಂಕರ ಲಿಂಗಪ್ಪ, ಜೆಸಿಪುರ ಸಿದ್ದರಾಮಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Share this article