ಜೇನು ಕುರುಬರ ಸೋಮಣ್ಣರಿಗೆ ‘ಪದ್ಮಶ್ರೀ’ ಗರಿ...!

KannadaprabhaNewsNetwork | Published : Jan 26, 2024 1:47 AM

ಸಾರಾಂಶ

ಎಚ್.ಡಿ.ಕೋಟೆ ತಾಲೂಕು ಮೊತ್ತ ಹಾಡಿಯ ಜೇನುಕುರುಬ ಸೋಮಣ್ಣ ನಿಜವಾದ ಆದಿವಾಸಿ ನಾಯಕ. ನಾಗರಹೊಳೆ, ಕಾಕನಕೋಟೆ ಅಭಯಾರಣ್ಯದಿಂದ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸಿದಾಗ ಬುಡಕಟ್ಟು ಹಾಡಿಗಳಿಗೆ ಕಾಲ್ನಡಿಗೆಯಲ್ಲಿ ತಿರುಗಾಡಿ ಅವರ ಕಷ್ಟಸುಖಗಳಲ್ಲಿ ಭಾಗಿಯಾದವರು. ಮೈಸೂರು- ಚಾಮರಾಜನಗರ- ಕೊಡಗು ಜಿಲ್ಲೆಗಳಲ್ಲಿ ಆದಿವಾಸಿಗಳನ್ನು ಮುಖ್ಯ ವಾಹಿನಿಗೆ ತರಲು ಹಲವರು ಸ್ವಯಂ ಸೇವಾ ಸಂಘಟನೆಗಳೊಂದಿಗೆ ಕಳೆದ ಮೂರು ದಶಕಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು- ಚಾಮರಾಜನಗರ- ಕೊಡಗು ಜಿಲ್ಲೆಗಳಲ್ಲಿ ಆದಿವಾಸಿಗಳನ್ನು ಮುಖ್ಯ ವಾಹಿನಿಗೆ ತರಲು ಹಲವರು ಸ್ವಯಂ ಸೇವಾ ಸಂಘಟನೆಗಳೊಂದಿಗೆ ಕಳೆದ ಮೂರು ದಶಕಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ. ಆದರೆ ಎಚ್.ಡಿ.ಕೋಟೆ ತಾಲೂಕು ಮೊತ್ತ ಹಾಡಿಯ ಜೇನುಕುರುಬ ಸೋಮಣ್ಣ ನಿಜವಾದ ಆದಿವಾಸಿ ನಾಯಕ. ನಾಗರಹೊಳೆ, ಕಾಕನಕೋಟೆ ಅಭಯಾರಣ್ಯದಿಂದ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸಿದಾಗ ಬುಡಕಟ್ಟು ಹಾಡಿಗಳಿಗೆ ಕಾಲ್ನಡಿಗೆಯಲ್ಲಿ ತಿರುಗಾಡಿ ಅವರ ಕಷ್ಟಸುಖಗಳಲ್ಲಿ ಭಾಗಿಯಾದವರು. ಆದಿವಾಸಿಗಳಿಗೆ ಹಕ್ಕು ಕಲ್ಪಿಸಲು ನ್ಯಾಯಾಲಯದ ಮೆಟ್ಟಲೇರಿ ಹೋರಾಟ ನಡೆಸಿದವರು.

ಸೋಮಣ್ಣ ಶಾಲೆಯ ಸಾಂಪ್ರದಾಯಿಕ ಶಿಕ್ಷಣ ಪಡೆದವರಲ್ಲ. ತಂದೆ ಕುನ್ನಯ್ಯ ಅವರಿಗಿದ್ದ ತೀವ್ರ ಬಡನತದಿಂದ ಸೋಮಣ್ಣ ತನ್ನ ಹಾಡಿಗೆ ಸೀಮಿತವಾದರು. ಮೂರು ನಾಲ್ಕು ದಶಕಗಳಿಂದ ಸೋಮಣ್ಣ ಭೂರಹಿತ ಆದಿವಾಸಿಗಳನ್ನು ಸಂಘಟಿಸಿದ್ದಾರೆ. ಸ್ಥಳೀಯ ಪ್ರಗತಿಪರ ಹೋರಾಟಗರಾರ ಜತೆಗೂಡಿ ಕಟ್ಟಿದ ‘ರಾಜ್ಯ ಮೂಲ ನಿವಾಸಿ ವೇದಿಕೆ’ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಸಾಂಘಿಕ ಪ್ರಯತ್ನದಿಂದ ಆದಿವಾಸಿಗಳಿಗೆ ಅರಣ್ಯ ಪ್ರದೇಶದಿಂದ ೬ ಸಾವಿರ ಎಕರೆ ಕೃಷಿ ಭೂಮಿ ದೊರಕಿಸಿಕೊಟ್ಟಿದ್ದಾರೆ.

ಅರಣ್ಯ ಇಲಾಖೆಯ ಆದೇಶದಿಂದ ಒಕ್ಕಲೆದ್ದು, ದಿಕ್ಕೆಟ್ಟು ಹೋದ ಜೇನುಕುರುಬ, ಬೆಟ್ಟಕುರುಬ, ಎರವ ಮತ್ತು ಸೋಲಿಗರನ್ನು ಸಂಘಟಿಸಿ ಪುನರ್ವಸತಿಗಾಗಿ ಹೋರಾಡುತ್ತಲೇ ಬಂದಿದ್ದಾರೆ. ನಮ್ಮ ಪರಂಪರೆಯ ಮೂಲ ಬೇರುಗಳಿಂತಿರುವ ಆದಿವಾಸಿಗಳಿಗೆ ಮಾತ್ರ ಘನತೆಯುಳ್ಳ ಪುನರ್ವಸತಿ ಮಾತ್ರ ದೊರಕಿಲ್ಲ ಎಂಬ ನೋವು ಅವರಲ್ಲಿ ಇನ್ನೂ ಕಾಡುತ್ತಿದೆ.

ನಾಗರಹೊಳೆ ಅ‘ಯಾರಣ್ಯದೊಳಗೆ ತಾಜ್ ಹೋಟೆಲ್ ನಿರ್ಮಾಣಕ್ಕೆ ಮುಂದಾದ ಬಂಡವಾಳಶಾಹಿಗಳ ವಿರುದ್ಧ ಸೋಮಣ್ಣ ಹೋರಾಟಕ್ಕಿಳಿದಿದ್ದರು. ಹೋಟೆಲ್ ನಿರ್ಮಾಣದ ಚಿಂತನೆ ರದ್ದಾಗುವವರೆಗೂ ಸುಮ್ಮನೆ ಕೂರಲಿಲ್ಲ. ನರ್ಮದಾ ಬಚಾವೋ ಹೋರಾಟದಲ್ಲಿ ಸಕ್ರಿಯರಾಗಿದ್ದ ಮೇಧಾ ಪಾಟ್ಕರ್ ಜತೆಗೂ ಕಾಣಿಸಿಕೊಂಡ ಸೋಮಣ್ಣ ನರ್ಮದಾ ಹೋರಾಟದ ಭಾಗವಾಗಿ ದುಡಿದಿದ್ದಾರೆ. ೨೦೦೮ ರಿಂದ ಜಾರಿಗೆ ಬಂದ ಅರಣ್ಯವಾಸಿಗಳ ಪಾರಂಪರಿಕ ಹಕ್ಕುಗಳ ಸಮಿತಿಯಲ್ಲಿ ಸಕ್ರಿಯರಾದ ಸೋಮಣ್ಣ ಆದಿವಾಸಿಗಳ ಪರ ಹೋರಾಡುತ್ತಲೇ ಬಂದಿದ್ದಾರೆ. ೧೯೯೧ರಲ್ಲಿ ಫಿಲಿಫಿನ್ಸ್‌ ದೇಶದಲ್ಲಿ ನಡೆದ ಆದಿವಾಸಿಗಳ ಮೇಳದಲ್ಲಿ ಸೋಮಣ್ಣ ಅವರು ಕರ್ನಾಟಕದ ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸಿ ಭಾಗವಹಿಸಿದ್ದರು.

ಪತ್ನಿ ರಾಜಮ್ಮ, ಮಗ ಕಾಳಸ್ವಾಮಿ ಜೊತೆ ಸೋಮಣ್ಣ ಮತ್ತ ಹಾಡಿಯಲ್ಲಿಯೇ ವಾಸವಾಗಿದ್ದಾರೆ. ರಾಜ್ಯ ಸರ್ಕಾರ ೨೦೧೬ನೇ ಸಾಲಿನಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿತ್ತು. ಮರುದಿನ ಪಟ್ಟಿಯಿಂದ ಹೆಸರು ತೆಗೆದಿದ್ದನ್ನು ಖಂಡಿಸಿ ರಾಜ್ಯದ ಪ್ರಗತಿಪರರು ಸೇರಿಕೊಂಡು ದೇವನೂರ ಮಹಾದೇವ ಅವರ ಸಮ್ಮುಖದಲ್ಲಿ ಅವರಿಗೆ ಜನ ರಾಜ್ಯೋತ್ಸವ ಪ್ರಶಸ್ತಿಯನ್ನು ಒಂದು ಲಕ್ಷ ರೂ. ನಗದಿನೊಂದಿಗೆ ಪ್ರದಾನ ಮಾಡಿದ್ದರು.

ಆದರೆ ಅದೇ ಸರ್ಕಾರ ೨೦೨೩ನೇ ಸಾಲಿನಲ್ಲಿ ಸೋಮಣ್ಣ ಅವರಿಗೆ ಪ್ರತಿಷ್ಠಿತ ವಾಲ್ಮೀಕಿ ಪ್ರಶಸ್ತಿಯನ್ನು ನೀಡಿದೆ. ಇದು ಐದು ಲಕ್ಷ ರೂ. ನಗದು ಹಾಗೂ ೨೦ ಗ್ರಾಂ ಚಿನ್ನದ ಪದಕ ಒಳಗೊಂಡಿದೆ. ಸೋಮಣ್ಣ ಅವರ ಸಂಪರ್ಕ, ಮೊ.೯೯೦೧೮ ೨೦೯೭೨

Share this article