ಕನ್ನಡಪ್ರಭ ವಾರ್ತೆ ಆಲೂರು
ತಲಕಾಡಿನಲ್ಲಿ ಪಂಚಲಿಂಗ ದರ್ಶನ ನಡೆಯುವ ದಿನದಂದೇ ತಾಲೂಕಿನ ಕಿರಗಡಲು ಗ್ರಾಮದಲ್ಲಿಯೂ ಪಂಚಲಿಂಗ ದರ್ಶನ ನಡೆಯಲಿದೆ. ಗ್ರಾಮದಲ್ಲಿ ಕಾರ್ತಿಕ ಶುದ್ಧ ನ.೩೦ ಮತ್ತು ಡಿ. ೧ರಂದು ನಡೆಯಲಿರುವ ಪಂಚಲಿಂಗ ದರ್ಶನ ಮತ್ತು ಜಾತ್ರೆಗೆ ಅದ್ಧೂರಿ ಸಿದ್ಧತೆ ನಡೆದಿದೆ.ಚೋಳರ ಕಾಲದ ದೇವಾಲಯ:
ಹಾಸನದಿಂದ ಆಲೂರು ಕಡೆಗೆ ಹತ್ತು ಕಿ.ಮೀ. ಅಥವಾ ಆಲೂರು ಪಟ್ಟಣದಿಂದ ೬ ಕಿ. ಮೀ. ದೂರದಲ್ಲಿರುವ ಕಿರಗಡಲು ಗ್ರಾಮ ಯಗಚಿ ನದಿ ದಡದಲ್ಲಿದೆ. ಈ ಗ್ರಾಮದ ಪಂಚಲಿಂಗಗಳು ಚೋಳರ ಕಾಲದ್ದವೆಂದು ಹಿರಿಯರು ಹೇಳುತ್ತಾರೆ. ಗ್ರಾಮದಲ್ಲಿರುವ ನಾಲ್ಕು ನೂರಕ್ಕೂ ಹೆಚ್ಚು ಕುಟುಂಬಗಳಿರುವ ಗ್ರಾಮಸ್ಥರಿಗೆ ಪಂಚಲಿಂಗಗಳೆ ಆರಾಧ್ಯ ದೈವ. ಹಿನ್ನೆಲೆ:ಇತಿಹಾಸದಂತೆ ಈಗಿರುವ ದೇವಾಲಯದ ಜಾಗದಲ್ಲಿ ದಟ್ಟ ಬಿದಿರು ಮೆಳೆ ಇತ್ತು. ಇಲ್ಲಿಗೆ ದನ ಕಾಯಲು ಬರುತ್ತಿದ್ದ ವ್ಯಕ್ತಿಯೊಬ್ಬ ಬಿದಿರು ಕಡಿಯುವ ಸಂದರ್ಭ ತಳಭಾಗದಲಿದ್ದ ಪಂಚಲಿಂಗದ ಪೈಕಿ ಒಂದು ಲಿಂಗಕ್ಕೆ ಬಡಿಯಿತು. ಏಟಿಗೆ ಲಿಂಗದ ಅರ್ಧ ಭಾಗ ತುಂಡಾಯಿತು. ಕಡಿದ ವ್ಯಕ್ತಿ ಅಲ್ಲೇ ಮೃತಪಟ್ಟ. ಆತನ ರಕ್ತ ಸ್ವಲ್ಪ ದೂರದವರೆಗೆ ಹರಿಯಿತು. ಸೋಜಿಗವೆಂದರೆ ರಕ್ತದ ಹರಿವು ಕೊನೆಯಾದ ಸ್ಥಳದಲ್ಲಿ ಕತ್ತರಿಸಲ್ಪಟ್ಟ ಲಿಂಗದ ಭಾಗ ಮತ್ತೆ ಉದ್ಭವವಾಯಿತು. ಅರ್ಧ ಲಿಂಗದ ಒಡಮೂಡಿದ ಭಾಗ ಇಂದಿಗೂ ಇದ್ದು, ಪೂಜಿಸಲಾಗುತ್ತಿದೆ. ಏಕ ಸ್ಥಳದಲ್ಲಿರುವ ಪಂಚ ಲಿಂಗಗಳಿಗೆ ಸೂಜಿಗಯ್ಯ, ದೊಡ್ಡಯ್ಯ, ರುದ್ರೇಶ್ವರ, ಸರ್‍ವೇಶ್ವರ ಮತ್ತು ಗಂಡಸಿಯಯ್ಯ ಎಂಬ ಹೆಸರು ಇದೆ. ಸದ್ಯೋಜಾತ, ವಾಸುದೇವ, ಅಘೋರ, ತತ್ಪುರುಷ, ಈಶಾನ ಎಂಬ ಶಿವನ ಪಂಚಮುಖಗಳಿವೆ. ಈ ಐದು ರೂಪಗಳಿಂದ ಆತ ಸೃಷ್ಠಿ, ಸ್ಥಿತಿ, ಲಯ, ತಿರೋಧಾನ, ಮತ್ತು ಅನುಗ್ರಹ ಎಂಬ ಪಂಚ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾನೆ ಎಂಬ ವಾಡಿಕೆ ಇದೆ.ಕಾರ್ತಿಕ ಮಾಸದ ಅಂಗವಾಗಿ ನ. ೩೦ ರಾತ್ರಿ ಜಂಪೋತ್ಸವ, ಸುಗ್ಗಿ ಕುಣಿತ, ನಂದಿಧ್ವಜ ಕುಣಿತ, ಯುವಕರು ದೇವರ ವಿಗ್ರಹಗಳನ್ನು ಧರಿಸಿ ಸುಗ್ಗಿ ಕುಣಿತ ಮಾಡುತ್ತಾರೆ. ದೇವಸ್ಥಾನದ ಎದುರು ಇಡಿ ರಾತ್ರಿ ಹೆಣ್ಣು ಮಕ್ಕಳಿಗೆ ಕಾಳಮ್ಮನ ಕಳಸ ಹೊರಿಸಿ ದೀಪಗಳೊಂದಿಗೆ ದಿನರಾತ್ರಿ ದೂಡುತ್ತಾರೆ. ಡಿ. ೧ರಂದು ಮಧ್ಯಾಹ್ನ ನಡೆಯುವ ಕೆಂಡೋತ್ಸವದ ಮೊದಲು, ಬೆಳಗ್ಗೆ ಯಗಚಿ ನದಿಯಲ್ಲಿ ಗಂಗಾಪೂಜೆ, ತೀರ್ಥಸ್ನಾನ ಸಮೇತ, ನಂದಿಧ್ವಜ ಕುಣಿತ, ಭದ್ರಕಾಳಮ್ಮನ ಕಳಸ, ವೀರಭದ್ರೇಶ್ವರ ಮತ್ತು ದಕ್ಷಬ್ರಹ್ಮದೇವರ ಅಡ್ಡೆಯೊಂದಿಗೆ ತೆರಳುತ್ತಾರೆ. ಇಷ್ಟೆಲ್ಲ ವಿಶೇಷ ಹೊಂದಿರುವ ದೇವಸ್ಥಾನ ಇದೀಗ ಹೊಸ ರೂಪ ಪಡೆದುಕೊಂಡಿದ್ದು ಸಾವಿರಾರು ಭಕ್ತಾಧಿಗಳನ್ನು ಆಕರ್ಷಿಸುತ್ತಿದೆ. ಈ ಮೂಲಕ ತಲಕಾಡಿನ ಪಂಚಲಿಂಗ ದರ್ಶನ ವೈಭವವನ್ನು ಜಿಲ್ಲೆಯಲ್ಲೇ ನೋಡುವ ದರ್ಶನ ಅವಕಾಶವಿದೆ. ಈ ಅಪರೂಪದ ಸ್ಥಳಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಪ್ರವಾಸಿಗರ ತಾಣವನ್ನಾಗಿ ಮಾಡಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.