ಟಿ.ವಿ. ಧಾರಾವಾಹಿಯಲ್ಲಿ ಸಂಚಾರಿ ನಿಯಮ ಉಲ್ಲಂಘನೆಗೆ ದಂಡ!

KannadaprabhaNewsNetwork | Updated : May 13 2024, 12:53 PM IST
Follow Us

ಸಾರಾಂಶ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸೀತಾರಾಮ‘ ಹೆಸರಿನ ಧಾರಾವಾಹಿಯ 14ನೇ ಸಂಚಿಕೆಯ ದೃಶ್ಯದಲ್ಲಿ  ಹಿಂಬದಿ ಕುಳಿತವರು ಹೆಲ್ಮೆಟ್‌ ಧರಿಸಿಲ್ಲದ ದೃಶ್ಯ ಪ್ರಸಾರವಾಗಿತ್ತು.  ಇದಕ್ಕೆ ಪೊಲೀಸರು ದಂಡ ವಿಧಿಸಿದ್ದಾರೆ.

 ಮಂಗಳೂರು :  ಧಾರಾವಾಹಿ ಕಾಲ್ಪನಿಕವಾದರೂ ಅದರ ಪ್ರಭಾವ ನೇರವಾಗಿ ಜನರ ಮೇಲಾಗುತ್ತದೆ ಎಂಬ ಪರಿಜ್ಞಾನ ಹಿನ್ನೆಲೆಯಲ್ಲಿ ಧಾರಾವಾಹಿಯಲ್ಲಿ ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನ ಸವಾರಿ ನಡೆಸುತ್ತಿದ್ದ ಹಿಂಬದಿ ಸವಾರಗೆ ಸಂಚಾರಿ ಪೊಲೀಸರು ದಂಡ ವಿಧಿಸಿದ ಅಪರೂಪದ ಪ್ರಕರಣ ನಡೆದಿದೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸೀತಾರಾಮ‘ ಹೆಸರಿನ ಧಾರಾವಾಹಿಯ 14ನೇ ಸಂಚಿಕೆಯ ದೃಶ್ಯದಲ್ಲಿ ಸ್ಕೂಟರ್‌ನಲ್ಲಿ ಇಬ್ಬರು ಸಂಚರಿಸುವ ದೃಶ್ಯವಿತ್ತು. ಅದರಲ್ಲಿ ಸವಾರೆ ಹೆಲ್ಮೆಟ್‌ ಧರಿಸಿದ್ದರೆ ಹಿಂಬದಿ ಕುಳಿತವರು ಹೆಲ್ಮೆಟ್‌ ಧರಿಸಿಲ್ಲದ ದೃಶ್ಯ ಪ್ರಸಾರವಾಗಿತ್ತು.ಟಿವಿಯಲ್ಲಿ ಪ್ರಸಾರವಾದ ಈ ದೃಶ್ಯವನ್ನು ಮಂಗಳೂರಿನಲ್ಲಿ ವೀಕ್ಷಿಸಿದ ಜಯಪ್ರಕಾಶ್‌ ಎಕ್ಕೂರು ಎಂಬವರು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ಗೆ ದೂರು ನೀಡಿದ್ದರು.

ಧಾರಾವಾಹಿಯಲ್ಲಿ ಸಂಚಾರ ನಿಯಮದ ಉಲ್ಲಂಘನೆಯಾಗಿದೆ. ನಟ-ನಟಿಯರು ಸಂಚಾರ ನಿಯಮ ಉಲ್ಲಂಘಿಸುವುದು ಕೂಡ ಪ್ರೇಕ್ಷಕರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದ ನಟಿ, ಅದಕ್ಕೆ ಕಾರಣರಾದ ಧಾರಾವಾಹಿಯ ನಿರ್ದೇಶಕ ಮತ್ತು ಪ್ರಸಾರ ಮಾಡಿದ ವಾಹಿನಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಆಗ್ರಹಿಸಿದ್ದರು.ಪೊಲೀಸ್‌ ಕಮಿಷನರ್‌ ಪ್ರಕರಣವನ್ನು ಮಂಗಳೂರು ಸಂಚಾರ ಪೂರ್ವ ಠಾಣೆಗೆ ವಹಿಸಿದ್ದರು. ಜಯಪ್ರಕಾಶ್‌ ಅವರಿಗೆ ಠಾಣೆಯಿಂದ ಹಿಂಬರಹ ನೀಡಿ, ದ್ವಿಚಕ್ರ ವಾಹನದ ಮಾಲೀಕರಿಗೆ ಮತ್ತು ಧಾರಾವಾಹಿಯ ನಿರ್ದೇಶಕರಿಗೆ ಮಾಹಿತಿ ಕೇಳಿ ನೋಟಿಸ್‌ ಜಾರಿಗೊಳಿಸಲಾಗಿತ್ತು.

 ಧಾರಾವಾಹಿಯ ದೃಶ್ಯವನ್ನು ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಚಿತ್ರೀಕರಣ ಮಾಡಿರುವುದರಿಂದ ಮುಂದಿನ ವಿಚಾರಣೆಗೆ ಅಲ್ಲಿನ ಪೊಲೀಸ್‌ ಠಾಣೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಲಾಗಿತ್ತು.ಅರ್ಜಿಯ ಕುರಿತು ಪರಿಶೀಲನೆ ನಡೆಸಿದ ರಾಜಾಜಿನಗರ ಠಾಣಾ ಪೊಲೀಸರು ಹೆಲ್ಮೆಟ್‌ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸಿದ ನಟಿಗೆ ಮತ್ತು ವಾಹನ ಮಾಲೀಕಗೆ ಮೇ 10ರಂದು 500 ರು. ದಂಡ ವಿಧಿಸಿದ್ದಾರೆ. ಮಾತ್ರವಲ್ಲದೆ ಇನ್ನು ಮುಂದೆ ತಮ್ಮ ಧಾರಾವಾಹಿಯಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸಿಸುವುದಿಲ್ಲ.

 ಸಂಚಾರ ನಿಯಮ ಪಾಲಿಸುತ್ತೇವೆ ಎಂದು ಧಾರಾವಾಹಿಯ ಪ್ರೊಡಕ್ಷನ್‌ ಮೆನೇಜರ್‌ರಿಂದ ಹಿಂಬರಹ ಬರೆಸಿಕೊಂಡಿದ್ದಾರೆ. ನಾನು ನೀಡಿದ ದೂರಿಗೆ ಪೊಲೀಸರಿಂದ ಸ್ಪಂದನ ದೊರಕಿರುವುದಕ್ಕೆ ಖುಷಿಯಾಗಿದೆ. ಧಾರಾವಾಹಿಯಲ್ಲಿ ಹೆಲ್ಮೆಟ್‌ ಇಲ್ಲದೆ ಸಂಚರಿಸುವ ದೃಶ್ಯವನ್ನು ನೋಡಿದೆ. ಇದರ ಪರಿಣಾಮದ ಕುರಿತು ಪೊಲೀಸ್‌ ಕಮಿಷನರ್‌ಗೆ ದೂರು ನೀಡಿ ವಿವರಿಸಿದ್ದೆ. ಪೊಲೀಸರು ದಂಡ ವಿಧಿಸಿರುವುದು ಇತರರಿಗೂ ಪಾಠವಾಗಿದ್ದು, ಜಾಗೃತಿಯೂ ಉಂಟಾಗಲಿದೆ ಎಂದು ದೂರುದಾರ ಜಯಪ್ರಕಾಶ್‌ ಎಕ್ಕೂರು ಪ್ರತಿಕ್ರಿಯಿಸಿದ್ದಾರೆ.