ಮಹಾಲಿಂಗಪುರ : ಈಗ ನಡೆಯುತ್ತಿರುವುದು ಎಂಪಿ ಬದಲಾಗಿ ಪಿಎಂ (ಪ್ರಧಾನಿ ಮೋದಿ) ಚುನಾವಣೆ ಎಂದು ಭಾವಿಸೋಣ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಲು ಹಾಗೂ ಅವರ ಕನಸಿನಂತೆ 400ಕ್ಕೂ ಅಧಿಕ ಸ್ಥಾನ ಗಳಿಸಲು ಪ್ರತಿಯೊಬ್ಬರೂ ಕಂಕಣಬದ್ಧರಾಗಿ ದುಡಿಯುವ ಅವಶ್ಯಕತೆಯಿದೆ ಎಂದು ಖ್ಯಾತ ವಾಗ್ಮಿ, ಬಾಗಲಕೋಟೆ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ನಂದು ಗಾಯಕವಾಡ ಹೇಳಿದರು.
ಯುವನಾಯಕ ಹಾಗೂ ಪುರಸಭಾ ಸದಸ್ಯ ರವಿ ಜವಳಗಿ ನೇತೃತ್ವದಲ್ಲಿ ಆಯೋಜಿಸಿದ್ದ ನಮೋ ಬ್ರಿಗೇಡ್ 2.0 ಮಹಾಲಿಂಗಪುರ ನೂತನ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಭಾರತೀಯ ಸಂಸ್ಕೃತಿ, ಸಂಸ್ಕಾರದ ಪ್ರತೀಕ ಎಂದು ನುಡಿದರು.
ಮೋದಿ ಕೇವಲ 10 ವರ್ಷದಲ್ಲಿ ಸಾಕಷ್ಟು ಜನಮೆಚ್ಚುವ ಕಾರ್ಯ ಮಾಡಿದ್ದಾರೆ. ಆರ್ಥಿಕ ಸ್ವಾವಲಂಬನೆ ಸೇರಿ ನೂರಾರು ಯೋಜನೆಗಳ ಮೂಲಕ ಜಗತ್ತು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದಾರೆ. ಆದರೆ, ಇದು ಟ್ರೈಲರ್ ಮಾತ್ರ. ಸಂಪೂರ್ಣ ಪಿಕ್ಚರ್ ಬಾಕಿ ಎಂದು ಮೋದಿ ಅವರೇ ಹೇಳಿದ್ದಾರೆ. ಈ ಮಾತಿನ ಹಿಂದಿನ ಉದ್ದೇಶವನ್ನು ಪ್ರತಿ ಭಾರತೀಯ ಅರ್ಥ ಮಾಡಿಕೊಳ್ಳಬೇಕು. ಈ ಅದ್ಭುತ ಮುಂದುವರಿಯಲು ಹಾಗೂ ಸಶಕ್ತ, ಸುಭದ್ರ ಭಾರತಕ್ಕಾಗಿ ಮೋದಿಜಿಯವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕು. ಹೀಗಾಗಿ ಪ್ರತಿ ಮನೆಯ ಮತಗಳನ್ನು ಗಟ್ಟಿಗೊಳಿಸಿ ಗದ್ದಿಗೌಡರನ್ನು ಚುನಾಯಿಸುವ ಮೂಲಕ ಮೋದಿಜಿಯವರ ಕೈ ಬಲಪಡಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಎಸ್.ಗೊಂಬಿ, ಹಿಂದೂಗಳಿಗೆ ಇರುವುದು ಒಂದೇ ದೇಶ ಅದುವೇ ಭಾರತ. ಅದರ ಉಳಿವು ಹಾಗೂ ನಮ್ಮ ಬದುಕಿಗಾಗಿ ಮೋದಿ ಮತ್ತೊಮ್ಮೆ ಗೆಲ್ಲಿಸುವ ಅನಿವಾರ್ಯತೆ ಇದೆ ಎಂದರು.
ಮುಖಂಡ ಶೇಖರ ಅಂಗಡಿ, ಮನೋಹರ ಶಿರೋಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮೋ ಬ್ರಿಗೇಡ್ ಮಹಾಲಿಂಗಪುರ ನೂತನ ಘಟಕದ ಪದಾಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ಮುಖಂಡರಾದ ಶಿವಾನಂದ ಅಂಗಡಿ, ಹನಮಂತ ಜಮಾದಾರ, ಪುಂಡಲೀಕ ಗಡೇಕಾರ, ಚನ್ನಪ್ಪ ರಾಮೋಜಿ, ವಿಜಯ ಸಬಕಾಳೆ, ಅಪ್ಪು ಹಿಟ್ಟಿನಮಠ ಇತರರಿದ್ದರು.
ನೂತನ ಘಟಕದ ಗೌರವಾಧ್ಯಕ್ಷರಾಗಿ ಮಹಾಲಿಂಗ ಶಿವಣಗಿ, ಅಧ್ಯಕ್ಷರಾಗಿ, ರಾಘವೇಂದ್ರ ಗರಗಟ್ಟಿ, ಉಪಾಧ್ಯಕ್ಷರಾಗಿ ಚನ್ನು ಆರೇಗಾರ, ಸಂಗಮೇಶ ಅಂಬಲ್ಯಾಳ, ಮಹಾಲಿಂಗ ಜಮಖಂಡಿ, ರಾಕೇಶ ಕೆಸರಗೊಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ ಭೈರೇಶ ಆದೆಪ್ಪನವರ, ಶ್ರೀನಿಧಿ ಕುಲಕರ್ಣಿ, ಅಕ್ಷಯ ಜಳ್ಳಿ, ಸಂಘಟನಾ ಕಾರ್ಯದರ್ಶಿಯಾಗಿ ಮಹಾಲಿಂಗ ದೇಸಾಯಿ, ಕಾರ್ಯದರ್ಶಿಗಳಾಗಿ ಬಸು ಮುರಾರಿ, ಶಿವಾನಂದ ಕಲ್ಮಡಿ, ಈರಣ್ಣ ಹುಣಶ್ಯಾಳ, ವಿನೋದ ಹುಣಶ್ಯಾಳ, ಸೋಷಿಯಲ್ ಮೀಡಿಯಾ ಸದಸ್ಯರಾಗಿ ಕಿರಣ ದಲಾಲ, ಅನಿಲ ಖವಾಶಿ, ಅಭಿಷೇಕ ಗುಮಟೆ, ಸಾಗರ ಪರೀಟ, ಸಂದೀಪ ಸೂರಗೊಂಡ, ರಾಜೇಂದ್ರ ನಾವಿ, ನಾಗಲಿಂಗ ಸುತಾರ, ಶಿವಾನಂದ ಸಣ್ಣಕ್ಕಿ, ಅಭೀಷೇಕ ಸೊನ್ನದ, ಜಗದೀಶ ಜಕ್ಕನ್ನವರ ಇವರಿಗೆ ಜವಾಬ್ದಾರಿ ನೀಡಲಾಯಿತು. ರಾಘವೇಂದ್ರ ಶಿರೋಳ ಪ್ರಾರ್ಥಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಸಿ, ತಾಲೂಕು ಸಹ ಸಂಚಾಲಕ ಅಭಿಷೇಕ ಲಮಾಣಿ ವಂದಿಸಿದರು.