ಸತೀಶ ಶುಗರ್ಸ್‌ ಸಂಸ್ಥೆಯಿಂದ ಶಿಕ್ಷಣಕ್ಕೆ ಉತ್ತೇಜನ

KannadaprabhaNewsNetwork | Published : Feb 14, 2024 2:16 AM

ಸಾರಾಂಶ

ಮೂಡಲಗಿ ವಿವಿಧ ಸರ್ಕಾರಿ ಶಾಲೆಗಳಿಗೆ ಅಗತ್ಯ ಪರಿಕರಗಳನ್ನು ಹಾಗೂ ಕಲಿಕಾ ಉಪಕರಣಗಳನ್ನು ನೀಡುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ

ಕನ್ನಡಪ್ರಭ ವಾರ್ತೆ ಮೂಡಲಗಿ ಸತೀಶ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸತೀಶ ಜಾರಕಿಹೊಳಿಯ ಆಶಯದಂತೆ, ಸತೀಶ ಶುಗರ್ಸ್‌ ಕಾರ್ಖಾನೆಯು ಪ್ರಾರಂಭದಿಂದಲೂ ಗ್ರಾಮೀಣ ಭಾಗದ ರೈತರು, ಯುವ ಜನತೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದು ಸತೀಶ ಸಮೂಹ ಸಂಸ್ಥೆಯ ಚೇರಮನ್ ಮತ್ತು ಸಿ.ಎಫ್.ಒ ಪ್ರದೀಪಕುಮಾರ ಇಂಡಿ ಹೇಳಿದರು.ಅವರು ಮೂಡಲಗಿ ಶೈಕ್ಷಣಿಕ ವಲಯದ 20 ಸರ್ಕಾರಿ ಶಾಲೆಗಳಿಗಳಿಗೆ 400 ಡೆಸ್ಕ್‌ ಹಾಗೂ 20 ಗ್ರೀನ ಬೋರ್ಡ್‌ಗಳನ್ನು ಸತೀಶ ಶುಗರ್ಸ್‌ ಪ್ರಸಕ್ತ ಸಾಲಿನ ಸಿ.ಎಸ್.ಆರ್‌ ನಿಧಿ ಅಡಿಯಲ್ಲಿ ಬಿಇಒ ಅಜೀತ ಮನ್ನಿಕೇರಿ ಅವರಿಗೆ ಹಸ್ತಾಂತರಿಸಿ ಮಾತನಾಡಿ, ಮೂಡಲಗಿ ವಿವಿಧ ಸರ್ಕಾರಿ ಶಾಲೆಗಳಿಗೆ ಅಗತ್ಯ ಪರಿಕರಗಳನ್ನು ಹಾಗೂ ಕಲಿಕಾ ಉಪಕರಣಗಳನ್ನು ನೀಡುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ ಎಂದರು. ಸತೀಶ ಸಮೂಹ ಸಂಸ್ಥೆಯ ವತಿಯಿಂದ ನಾಯಕ ಸ್ಟುಡೆಂಟ್ ಫೆಡರೇಶನ್ ಶಿಕ್ಷಣ ಸಂಸ್ಥೆಯ 16 ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಹಾಗೂ ಸತೀಶ ಶುಗರ್ಸ್‌ ಅಕೆಡಮಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮತ್ತು ಪದವಿ ಕಾಲೇಜಗಳನ್ನು ಮನ್ನುಡೆಸುವ ಮೂಲಕ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದೆ. ಪ್ರತಿವರ್ಷ ಸರ್ಕಾರಿ ಶಾಲೆಗಳಿಗೆ ಕಟ್ಟಡ, ಉದ್ಯಾನ ಹಾಗೂ ಕಲಿಕಾ ಪರಿಕರಗಳನ್ನು ಪೂರೈಸುತ್ತಿದೆ. ಪ್ರಸ್ತುತ ಸಾಲಿನಲ್ಲಿ ಮಳೆಯ ಅಭಾವವನ್ನು ಗಮನಿಸಿ ಸಮೂಹದ ಅಂಗ ಸಂಸ್ಥೆಯಾದ ಹುದಲಿಯ ಬೆಳಗಾಂ ಶುಗರ್ಸ್‌ ಕಾರ್ಖಾನೆಯ ವತಿಯಿಂದ ಮೋಡ ಬಿತ್ತನೆ ಕಾರ್ಯ ಮಾಡಲಾಗಿದೆ. ಹೀಗೆ ಇನ್ನೂ ಹಲವಾರು ಸಮಾಜಮುಖಿ ಕಾರ್ಯಗಳ ಮೂಲಕ ಸಂಸ್ಥೆಯು ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಸತೀಶ ಶುಗರ್ಸ್‌ ಸಂಸ್ಥೆಯು ಹಲವು ವರ್ಷಗಳಿಂದ ಶೈಕ್ಷಣಿಕ ವಲಯಕ್ಕೆ ಸಹಾಯ - ಸಹಕಾರ ನೀಡುತ್ತಿದ್ದು, ಶಿಕ್ಷಣಕ್ಕೆ ಬೇಕಾಗುವ ಅವಶ್ಯಕ ಕಲಿಕಾ ಪರಿಕರಗಳನ್ನು ಪೂರೈಸುತ್ತಿದೆ. ಕಾರ್ಖಾನೆಯ ಹಂಗಾಮು ಅವಧಿಯಲ್ಲಿ ಹೊರಗಿನ ಪ್ರದೇಶಗಳಿಂದ ಬರುವ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಟೆಂಟ್ ಶಾಲೆಗಳನ್ನು ತೆರೆದು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸಹಕಾರ ನೀಡುತ್ತಿರುವುದನ್ನು ಶಿಕ್ಷಣ ಇಲಾಖೆ ಯಾವಾಗಲೂ ಸ್ಮರಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮೂಡಲಗಿ ವಲಯದ ಬಿಇಒ ಮತ್ತು ವಿವಿಧ ಶಾಲೆಯ ಮುಖ್ಯೋಪಾಧ್ಯಯರು, ಸತೀಶ ಸಮೂಹ ಸಂಸ್ಥೆಯ ಚೇರಮನ್ ಮತ್ತು ಸಿ.ಎಫ್.ಒ ಪ್ರದೀಪಕುಮಾರ ಇಂಡಿ, ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಪಿ.ಡಿ. ಹಿರೇಮಠ, ಉಪಾಧ್ಯಕ್ಷರುಗಳಾದ ವೀರು ತಳವಾರ, ದಿಲೀಪ ಪವಾರ ಹಾಗೂ ಆಸನ ಮತ್ತು ಬೋರ್ಡ ತಯಾರಕ ಮೌನೇಶ ಕಂಬಾರ, ಚಂದ್ರಕಾಂತ ಸುತಾರ ಅವರನ್ನು ಸತ್ಕರಿಸಿದರು.

ಈ ವೇಳೆ ಕಾರ್ಖಾನೆಯ ಆಡಳಿತ ವಿಭಾಗದ ವ್ಯವಸ್ಥಾಪಕ ಗಿರೀಶ ಸೋನವಾಲ್ಕರ, ಮಾನವ ಸಂಪನ್ಮೂಲ ವಿಭಾಗದ ಉಪ ವ್ಯವಸ್ಥಾಪಕ ಸದಾಶಿವ ಮಾಲಗಾರ ಮತ್ತು ವಲಯದ ಸಂಬಂಧಿತ ಶಾಲಾ ಮುಖ್ಯೋಪಾಧ್ಯಾಯರುಗಳು ಇದ್ದರು.

Share this article