ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ಪಟ್ಟಣದಲ್ಲಿನ ಮೂರು ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಶಿಸ್ತಿನಿಂದ ನಡೆದಿವೆ. ಗುರುವಾರ ನಡೆದ ಪರೀಕ್ಷೆಗೆ ಮೂರು ಕೇಂದ್ರಗಳು ಸೇರಿದಂತೆ ಒಟ್ಟು 14 ವಿದ್ಯಾರ್ಥಿಗಳು ಗೈರಾಗಿದ್ದರು. ಒಟ್ಟು ೯೯೫ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆ. ಬಸಣ್ಣವರ ಹೇಳಿದರು.ಪಟ್ಟಣದ ಸಿದ್ದೇಶ್ವರ, ಎಸ್‌ಪಿ ಪಿಯು ಹಾಗೂ ಎಸ್‌ಎಂ ಪ್ರೌಢಶಾಲೆಯ ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಸಿದ್ದೇಶ್ವರ ಶಾಲೆ ಪರೀಕ್ಷೆ ಕೇಂದ್ರದಲ್ಲಿ ೧೭ ಬ್ಲಾಕ್‌ಗಳ ತೆರೆಯಲಾಗಿದೆ. ಇಲ್ಲಿ ೩೯೨ ವಿದ್ಯಾರ್ಥಿಗಳ ಪೈಕಿ ೩೮೫ ಹಾಜರಾಗಿ, ೭ ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಕೇಂದ್ರ ಅಧೀಕ್ಷಕ ಬಿ.ಎಸ್. ಕಡಕೋಳ, ಉಪ ಅಧೀಕ್ಷಕ ಎಂ.ಆರ್. ನದಾಫ ತಿಳಿಸಿದ್ದಾರೆ. ಮಾರ್ಗಾಧಿಕಾರಿಯಾಗಿ ಎಚ್.ವೈ. ಆಲಮೇಲ ಕಾರ್ಯ ನಿರ್ವಹಿಸಿದರು ಎಂದು ತಿಳಿಸಿದರು.
ಎಸ್.ಎಂ. ಪ್ರೌಢಶಾಲೆ ಪರೀಕ್ಷೆ ಕೇಂದ್ರದಲ್ಲಿ ೧೩ ಬ್ಲಾಕ್‌ಗಳನ್ನು ಮಾಡಿದ್ದು, ೩೦೪ ವಿದ್ಯಾರ್ಥಿಗಳಲ್ಲಿ ಒಟ್ಟು ೩೦೧ ವಿದ್ಯಾರ್ಥಿಗಳು ಹಾಜರಾಗಿದ್ದರು. ೩ ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಮುಖ್ಯ ಅಧೀಕ್ಷಕ ಡಿ.ಬಿ. ಪಾಟೀಲ ತಿಳಿಸಿದ್ದಾರೆ. ಪ್ರಭುಲಿಂಗ ಪದವಿ ಪೂರ್ವ ಮಹಾವಿದ್ಯಾಲಯ ಕೇಂದ್ರದಲ್ಲಿ ೧೪ ಬ್ಲಾಕ್‌ಗಳ ೩೧೩ ವಿದ್ಯಾರ್ಥಿಗಳ ಪೈಕಿ ೩೦೯ ವಿದ್ಯಾರ್ಥಿಗಳು ಹಾಜರಾಗಿ ೪ ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಕೇಂದ್ರ ಮುಖ್ಯ ಅಧೀಕ್ಷಕ ಎಸ್.ಎನ್. ಹತ್ತಿ ಮಾಹಿತಿ ನೀಡಿದ್ದಾರೆ ಎಂದು ಬಸಣ್ಣವರ ಹೇಳಿದರು.ವೆಬ್‌ಕಾಸ್ಟಿಂಗ್ ವ್ಯವಸ್ಥೆಯನ್ನು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅಳವಡಿಸಲಾಗಿದೆ. ಜಮಖಂಡಿ ಬ್ಲಾಕ್‌ನ ಎಲ್ಲ ೨೪ ಕೇಂದ್ರಗಳಲ್ಲಿ ಈ ವರೆಗೆ ನಕಲು ರಹಿತ, ಪಾರದರ್ಶಕತೆಯಿಂದ ಪರೀಕ್ಷೆ ಜರುಗುವಂತೆ ಎಲ್ಲ ಅಧಿಕಾರಿಗಳ ತಂಡದವರು ಇಲಾಖೆಯೊಂದಿಗೆ ಸಹಕರಿಸಿದ್ದಾರೆ. ಕುಡಿಯುವ ನೀರು, ಬೆಳಕು, ಗಾಳಿ ಸೇರಿದಂತೆ ಮೂಲಭೂತ ವ್ಯವಸ್ಥೆ ಚೆನ್ನಾಗಿರುವುದು ಕಂಡುಬಂದಿತು ಎಂದು ತಿಳಿಸಿದರು.
ಸಿಆರ್‌ಪಿಗಳಾದ ಭರತೇಶ ಯಲ್ಲಟ್ಟಿ, ಅನಂತರಾಜು ಮುಧೋಳ, ಮಹೇಶ ಸೋರಗಾಂವಿ ಮೊಬೈಲ್ ಸ್ವಾಧಿನಾಧಿಕಾರಿಗಳಾಗಿ ಕರ್ತವ್ಯ ನಿಭಾಯಿಸಿದರು. ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಮೂರೂ ಕೇಂದ್ರಗಳಲ್ಲಿದ್ದರು. ಠಾಣಾಧಿಕಾರಿ ಅಪ್ಪಣ್ಣ ಐಗಳಿ ಸಿಬ್ಬಂದಿಯೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದರು.ಎಸ್ಸೆಸ್ಸೆಲ್ಸಿಯ ಗುರುವಾರದ ತೃತೀಯ ಭಾಷೆ ವಿಷಯದ ಪರೀಕ್ಷೆಯು ಜಮಖಂಡಿ ಬ್ಲಾಕ್‌ನಾದ್ಯಂತ ಎಲ್ಲ ೨೪ಕೇಂದ್ರಗಳಲ್ಲೂ ಸುವ್ಯವಸ್ಥಿತವಾಗಿ ಜರುಗಿದೆ. ಎಲ್ಲಿಯೂ ಯಾವುದೆ ಅಹಿತಕರ ಘಟನೆಗಳು ನಡೆದಿಲ್ಲ. ಇಂದಿನ ಪರೀಕ್ಷೆಗೆ ಎಲ್ಲ ಮಾಧ್ಯಮಗಳ ಪುನರಾವರ್ತಿತರು ಸೇರಿದಂತೆ ನಿಯೋಜಿತ ೭೯೮೬ವಿದ್ಯಾರ್ಥಿಗಳಲ್ಲಿ ೭೬ ವಿದ್ಯಾರ್ಥಿಗಳು ಗೈರಾಗಿದ್ದು, ಒಟ್ಟು ೭೯೧೦ವಿದ್ಯಾರ್ಥಿಗಳು ಹಾಜರಿದ್ದರು ಎಂದು ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಸಂತೋಷ ತಳಕೇರಿ ತಿಳಿಸಿದ್ದಾರೆ.