ದೆಹಲಿ ಗಡಿಯಲ್ಲಿ ಧರಣಿನಿರತ ರೈತರೊಂದಿಗೆ ಮಾತುಕತೆ ಆರಂಭಿಸಿ: ಕೇಂದ್ರ ಸರ್ಕಾರಕ್ಕೆ ಆಗ್ರಹ

KannadaprabhaNewsNetwork | Published : Jan 14, 2025 1:00 AM

ಸಾರಾಂಶ

ರೈತರ ಬೇಡಿಕೆ ಈಡೇರಿಸದಿದ್ದರೆ ಜ. 14ರಿಂದ 16ರವರೆಗೆ ಹಳ್ಳಿ ಹಳ್ಳಿಗಳು, ತಾಲೂಕು ಮಟ್ಟದಲ್ಲಿ ಪಂಜಿನ ಪ್ರತಿಭಟನೆ ಮೂಲಕ ಪ್ರಧಾನಿ ಪ್ರತಿಕೃತಿ ಸುಡಲಾಗುವುದು. ದೇಶಾದ್ಯಂತ ಕರೆ ನೀಡಲಾಗಿರುವ ಹಿನ್ನೆಲೆಯಲ್ಲಿ ಈ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ದೆಹಲಿ ಗಡಿಗಳಲ್ಲಿ ಅಮರಣಾಂತ ಉಪವಾಸ ನಿರತ ಹಿರಿಯ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಪ್ರಾಣ ಉಳಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಸಂಯುಕ್ತ ಹೋರಾಟ ಕಾರ್‍ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಸರ್. ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಕಾರ್‍ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ, ಕೂಡಲೇ ಸಂಯುಕ್ತ ಕಿಸಾನ್ ಮೋರ್ಚಾ (ಎಸ್.ಕೆ.ಎಂ.) ನಾಯಕತ್ವದೊಂದಿಗೆ ಹಾಗೂ ದೆಹಲಿ ಗಡಿಗಳಲ್ಲಿ ಹೋರಾಟ ನಿರತರ ಜೊತೆ ಮಾತುಕತೆ ಆರಂಭಿಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಜಾರಿ, ಸಾಲಮನ್ನಾ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ನ.26ರಿಂದ ಪಂಜಾಬ್- ಹರಿಯಾಣ ಗಡಿಯಲ್ಲಿ ಹಿರಿಯ ರೈತ ನಾಯಕ 70 ವರ್ಷ ವಯಸ್ಸಿನ ಜಗತ್ ಸಿಂಗ್ ದಲ್ಲೆವಾಲ್ ಅವರು ಆಮರಣಾಂತ ಉಪವಾಸ ನಡೆಸುತ್ತಿದ್ದಾರೆ. ಈ ಸತ್ಯಾಗ್ರಹ 48ನೇ ದಿನಕ್ಕೆ ಕಾಲಿಟ್ಟಿದೆ ಎಂದರು.

ಉಪವಾಸ ನಿರತ ದಲ್ಲೆವಾಲ್ ಅವರ ದೇಹ ನಿತ್ರಾಣಗೊಂಡು, ಮಾಂಸಖಂಡಗಳು ತಮ್ಮ ತೂಕವನ್ನು ಕಳೆದುಕೊಂಡಿವೆ. ರಕ್ತದೊತ್ತಡ ಕೂಡ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಯಾವಾಗ ಬೇಕಾದರೂ ಪ್ರಾಣ ಹೋಗುವಂತಹ ಸನ್ನಿವೇಶ ಉಂಟಾಗಿದೆ. ರೈತ ನಾಯಕರ ಈ ಪರಿಸ್ಥಿತಿಗೆ ಕೇಂದ್ರ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿದರು.

ರೈತಸಂಘವು ಕರಾಳ ಕೃಷಿ ಕಾಯ್ದೆಗಳ ರದ್ದತಿ, ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಮುಂದಿಟ್ಟಿತ್ತು. 385 ದಿನಗಳ ಅನಿರ್ದಿಷ್ಟ ಹೋರಾಟದ ನಂತರ ರೈತ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ, ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ ಉಳಿದ ಹಕ್ಕೊತ್ತಾಯಗಳನ್ನು ಈಡೇರಿಸಲು ಲಿಖಿತ ಭರವಸೆಯನ್ನು ನೀಡಿತ್ತು. ಆದರೆ, ಈ ಭರವಸೆಗೆ ವಿರುದ್ಧವಾಗಿ ನಡೆದುಕೊಂಡ ಕಾರಣ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕಳೆದ ವರ್ಷ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಕಳೆದುಕೊಂಡಿದ್ದರೂ ಈಗ ಮತ್ತೆ ಅದೇ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ರೈತರ ಬೇಡಿಕೆ ಈಡೇರಿಸದಿದ್ದರೆ ಜ. 14ರಿಂದ 16ರವರೆಗೆ ಹಳ್ಳಿ ಹಳ್ಳಿಗಳು, ತಾಲೂಕು ಮಟ್ಟದಲ್ಲಿ ಪಂಜಿನ ಪ್ರತಿಭಟನೆ ಮೂಲಕ ಪ್ರಧಾನಿ ಪ್ರತಿಕೃತಿ ಸುಡಲಾಗುವುದು. ದೇಶಾದ್ಯಂತ ಕರೆ ನೀಡಲಾಗಿರುವ ಹಿನ್ನೆಲೆಯಲ್ಲಿ ಈ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜ.26ರಂದು ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಎಂ.ಎಸ್.ಪಿ ಗ್ಯಾರಂಟಿ ಕಾನೂನು ಜಾರಿ, ರೈತರ ಸಂಪೂರ್ಣ ಸಾಲ ಮನ್ನಾ, ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿ ಒತ್ತಾಯಿಸಿ ತಾಲೂಕು, ಜಿಲ್ಲಾ, ಗ್ರಾಮೀಣ ಕೇಂದ್ರಗಳಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ವಿದ್ಯುತ್ ಖಾಸಗೀಕರಣ ಮಾಡಬಾರದು. ವಿವಿಧ ಕಡೆ ನಡೆಯುತ್ತಿರುವ ಖಾಸಗೀಕರಣ ಹಾಗೂ ಪಂಪ್ ಸೆಟ್ ಮೀಟರೀಕರಣದ ಪ್ರಯತ್ನ ಕೂಡ ನಿಲ್ಲಿಸಬೇಕು. 60 ವರ್ಷ ದಾಟಿರುವ ಎಲ್ಲಾ ಕೃಷಿಕರಿಗೂ 5 ಸಾವಿರ ರು.ಗಳಂತೆ ಮಾಸಿಕ ಪಿಂಚಣಿ ನೀಡಬೇಕು. ಐತಿಹಾಸಿಕ ದೆಹಲಿ ರೈತ ಹೋರಾಟ ಮುಂದಿಟ್ಟಿದ್ದ ಎಲ್ಲ ಹಕ್ಕೊತ್ತಾಯಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ರೈತ ವಿರೋಧಿ, ಕರಾಳ ಕೃಷಿ ಕಾಯ್ದೆಯ ತದ್ರೂಪವಾಗಿರುವ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ಧೋರಣೆ ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಶಂಭೂನಹಳ್ಳಿ ಸುರೇಶ್, ವೆಂಕಟೇಶ್, ಸೂ.ಸಿ. ಪ್ರಕಾಶ್, ಮುದ್ದೇಗೌಡ, ನಾಗರಾಜು, ಕೀಳಘಟ್ಟ ನಂಜುಂಡಯ್ಯ, ಶಿವಲಿಂಗಯ್ಯ, ಎನ್.ಎಲ್. ಭರತ್‌ರಾಜ್, ಸಿ. ಕುಮಾರಿ, ದೇವಿ, ಮರುವನಹಳ್ಳಿ ಶಂಕರ್, ಕೋಣನಹಳ್ಳಿ ಮಂಜು, ಕೃಷ್ಣೇಗೌಡ ಟಿ.ಎಲ್., ಬಿ.ಎಂ. ಶಿವಣ್ಣ, ಹನುಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Share this article