ಜೀವನದಲ್ಲಿ ಯಶಸ್ಸಿಗೆ ಶಿಸ್ತು, ಸ್ಪಷ್ಟ ಗುರಿ ಅಗತ್ಯ

KannadaprabhaNewsNetwork |  
Published : Jul 06, 2024, 12:45 AM IST
 ಸುದ್ದಿಚಿತ್ರ 1    ನಗರದ ಪ್ರಥಮ ದರ್ಜೆ ಕಾಲೇಜಿನ ಆಡಿಟೋರಿಯಂ ನಲ್ಲಿ ಹಮ್ಮಿಕೊಂಡಿದ್ದ 2023-24 ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮವನ್ನುಗಣ್ಯರು  ಉದ್ಘಾಟಿಸಿದರು | Kannada Prabha

ಸಾರಾಂಶ

ಕೇವಲ ಪರೀಕ್ಷೆಗಳು ಸಮೀಪಿಸಿದಾಗ ಮಾತ್ರ ಓದಿದರೆ ಸಾಕಾಗುವುದಿಲ್ಲ. ವರ್ಷಪೂರ್ತಿ ಓದುವುದನ್ನು ಕಲಿಯಬೇಕು. ಜ್ಞಾನದ ಜೊತೆಗೆ ಸಂಸ್ಕಾರವನ್ನು ಕಲಿಯಬೇಕು. ನಾಗರಿಕತೆ ಹಾಗೂ ಮನರಂಜನೆಯ ಹೆಸರಿನಲ್ಲಿ ವಿದ್ಯಾರ್ಥಿಗಳು ತಪ್ಪು ದಾರಿ ಹಿಡಿಯಬಾರದು

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ದುಡ್ಡಿಗಿಂತ ಶಿಸ್ತುಬದ್ಧವಾದ ಜೀವನ ಹಾಗೂ ಸ್ಪಷ್ಟವಾದ ಗುರಿ ಅಗತ್ಯ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ಹೇಳಿದರು.

ನಗರದ ಪ್ರಥಮ ದರ್ಜೆ ಕಾಲೇಜಿನ 2023-24 ನೇ ಸಾಲಿನ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಮಾಣಿಕ ದುಡಿಮೆಯಿಂದ ಯಶಸ್ಸು ದೊರೆಯುತ್ತದೆ. ಹಣಬಲದಿಂದ, ವ್ಯಕ್ತಿಯ ಬಲದಿಂದ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಜ್ಞಾನದ ಜತೆ ಸಂಸ್ಕಾರ ಅಗತ್ಯ

ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ವಿ.ವೆಂಕಟೇಶ್ ಮಾತನಾಡಿ, ಯಾವುದೂ ಸುಲಭವಾಗಿ ದೊರೆಯುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದರ ಜೊತೆಗೆ ಒಮ್ಮೆ ಓದಿದ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕೇವಲ ಪರೀಕ್ಷೆಗಳು ಸಮೀಪಿಸಿದಾಗ ಮಾತ್ರ ಓದಿದರೆ ಸಾಕಾಗುವುದಿಲ್ಲ. ವರ್ಷಪೂರ್ತಿ ಓದುವುದನ್ನು ಕಲಿಯಬೇಕು. ಜ್ಞಾನದ ಜೊತೆಗೆ ಸಂಸ್ಕಾರವನ್ನು ಕಲಿಯಬೇಕು. ನಾಗರಿಕತೆ ಹಾಗೂ ಮನರಂಜನೆಯ ಹೆಸರಿನಲ್ಲಿ ವಿದ್ಯಾರ್ಥಿಗಳು ತಪ್ಪು ದಾರಿ ಹಿಡಿಯಬಾರದು ಎಂದು ಅಭಿಪ್ರಾಯಪಟ್ಟರು.

ತಹಸೀಲ್ದಾರ್‌ ಬಿ.ಎನ್‌.ಸ್ವಾಮಿ ಮಾತನಾಡಿ, ಪ್ರತಿನಿತ್ಯ ಪ್ರಯತ್ನ, ಪರಿಶ್ರಮ ಮತ್ತು ಛಲದಿಂದ ಮುನ್ನಡೆದಾಗ ಮಾತ್ರ ಉದ್ದೇಶಿತ ಸಾಧನೆಯನ್ನು ಮಾಡಲು ಸಾಧ್ಯ. ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳು ಕನಸು ಕಾಣಬೇಕು. ನಾನು ಮುಂದೆ ಏನಾಗಬೇಕು ಎಂಬುದರ ಬಗ್ಗೆ ದೊಡ್ಡ ಕನಸು ಕಾಣಬೇಕು. ಗುರಿಯಿಲ್ಲದ ಜೀವನದಿಂದ ಯಶಸ್ಸು ಕಾಣಲು ಸಾಧ್ಯವಿಲ್ಲ. ದುಡ್ಡಿದ್ದವರು ಮಾತ್ರ ಜೀವನದಲ್ಲಿ ಯಶಸ್ಸು ಕಾಣುತ್ತಾರೆ ಎಂಬ ಭ್ರಮೆಯಿಂದ ಹೊರ ಬರಬೇಕು ಎಂದರು.

ದಿನಪತ್ರಿಕೆಗಳನ್ನು ಓದಿ

ವಿದ್ಯಾರ್ಥಿಗಳು ಪ್ರತಿನಿತ್ಯ ಕನ್ನಡ, ಇಂಗ್ಲಿಷ್, ಹಿಂದಿ ದಿನಪತ್ರಿಕೆಗಳು, ಮಾಸಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಟ್ಟುನಿಟ್ಟಾದ ತರಬೇತಿ ಪಡೆದು, ನಾನು ಸಮಾಜದ ದೊಡ್ಡ ವ್ಯಕ್ತಿಯಾಗಬೇಕು ಎಂಬ ಉದ್ದೇಶದೊಂದಿಗೆ ಗುರಿಯನ್ನು ಸಾಧಿಸುವತ್ತ ಗಮನಹರಿಸಬೇಕು ಎಂದು ಅವರು ಹೇಳಿದರು.

ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸಾಂಸ್ಕೃತಿಕ, ಕ್ರೀಡೆ, ರೆಡ್‌ಕ್ರಾಸ್‌, ಎನ್‌ಎಸ್‌ಎಸ್‌, ಎನ್‌ಸಿಸಿ ಹಾಗೂ ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಐಆರ್‌ಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಂಸ ಶ್ರೀ, ಕಸಾಪ ತಾಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ, ಬಿಜಿಎಸ್ ಶಾಲೆಯ ಪ್ರಾಂಶುಪಾಲ ಕೆ.ಮಹದೇವ್, ಕ್ರೆಸೆಂಟ್ ಶಾಲೆಯ ಪ್ರಾಂಶುಪಾಲ ತಮೀಮ್‌ ಅನ್ಸಾರಿ, ಎಆರ್‌ಎಂ ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ಮೂರ್ತಿ ಸಾಮ್ರಾಟ್, ಅಕ್ಷರ ಪಿಯು ಕಾಲೇಜಿನ ಪ್ರಾಂಶುಪಾಲ ಬಿ.ವಿ ಪ್ರಕಾಶ್, ಪ್ರಾಧ್ಯಾಪಕರಾದ ಆದಿನಾರಾಯಣ, ಡಾ.ಶಫೀವುಲ್ಲಾ, ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ