ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಿ

KannadaprabhaNewsNetwork | Published : May 17, 2025 1:42 AM
Follow Us

ಸಾರಾಂಶ

ಹಸಿ ಕಸವನ್ನು ಶೇಖರಣೆ ಮಾಡುವ ಸ್ಥಳದಿಂದ ಕೊಳಕು ನೀರು ಹರಿದು ಹೋಗಲು ಚರಂಡಿ ಮಾಡಬೇಕು. ಅದಕ್ಕೆ ಮೇಲೊದಿಕೆ ಇರಬೇಕು. ಚರಂಡಿ ಸ್ವಚ್ಛತೆಗಾಗಿ ಒಂದೆರಡು ಕಡೆ ಮುಚ್ಚಳ ತೆಗೆದು ಸ್ವಚ್ಛತೆ ಮಾಡುವಂತೆ ನಿರ್ಮಾಣ ಮಾಡಬೇಕು ಎಂದು ತಿಳಿಸಿದರಲ್ಲದೆ, ಕೊಳಕು ನೀರು ಹರಿದು ಒಂದು ಕಡೆ ಶೇಖರಣೆ ಆಗುವಂತೆ ಒಂದು ದೊಡ್ಡ ಹೊಂಡ ನಿರ್ಮಾಣ ಮಾಡಬೇಕು. ಈ ಕೊಳಚೆ ನೀರು ಸಂಸ್ಕರಣೆ ಮಾಡಿ ಕೃಷಿ ಚಟುವಟಿಕೆಗೆ ಬಳಕೆ ಆಗುವಂತೆ ನೋಡಿಕೊಳ್ಳಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಅವರು ಶುಕ್ರವಾರ ಅಗಿಲೆಯಲ್ಲಿರುವ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿ ಹಸಿಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಣೆ ಮಾಡಿ ಶೇಖರಣೆ ಮಾಡುವುದರ ಜೊತೆಗೆ ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಹಸಿ ಕಸವನ್ನು ಶೇಖರಣೆ ಮಾಡುವ ಸ್ಥಳದಿಂದ ಕೊಳಕು ನೀರು ಹರಿದು ಹೋಗಲು ಚರಂಡಿ ಮಾಡಬೇಕು. ಅದಕ್ಕೆ ಮೇಲೊದಿಕೆ ಇರಬೇಕು. ಚರಂಡಿ ಸ್ವಚ್ಛತೆಗಾಗಿ ಒಂದೆರಡು ಕಡೆ ಮುಚ್ಚಳ ತೆಗೆದು ಸ್ವಚ್ಛತೆ ಮಾಡುವಂತೆ ನಿರ್ಮಾಣ ಮಾಡಬೇಕು ಎಂದು ತಿಳಿಸಿದರಲ್ಲದೆ, ಕೊಳಕು ನೀರು ಹರಿದು ಒಂದು ಕಡೆ ಶೇಖರಣೆ ಆಗುವಂತೆ ಒಂದು ದೊಡ್ಡ ಹೊಂಡ ನಿರ್ಮಾಣ ಮಾಡಬೇಕು. ಈ ಕೊಳಚೆ ನೀರು ಸಂಸ್ಕರಣೆ ಮಾಡಿ ಕೃಷಿ ಚಟುವಟಿಕೆಗೆ ಬಳಕೆ ಆಗುವಂತೆ ನೋಡಿಕೊಳ್ಳಬೇಕು ಎಂದರು.

ವಿದ್ಯುತ್‌ ಉತ್ಪಾದನೆ ಮಾಡಬಹುದು:ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಸಂಶೋಧಕರು ಮತ್ತು ಪರಿಣಿತ ಎಂಜಿನಿಯರ್ ಅವರಿಂದ ಒಂದು ಯೋಜನೆ ತಯಾರಿಸಿ ವೈಜ್ಞಾನಿಕ ಹಾಗೂ ವ್ಯವಸ್ಥಿತವಾಗಿ ಕಸ ವಿಲೇವಾರಿ ಮಾಡುವುದರ ಜೊತೆಗೆ ಗೊಬ್ಬರ ತಯಾರಿಕೆ ಹಾಗೂ ವಿದ್ಯುತ್ ಉತ್ಪಾದನೆ ಮಾಡಬಹುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಚಿಂತನೆ ಮಾಡಿ ಕ್ರಮ ವಹಿಸುವಂತೆ ತಿಳಿಸಿದರು. ಈ ಘಟಕದಲ್ಲಿ ಉತ್ಪಾದನೆ ಆಗುವ ಗೊಬ್ಬರವನ್ನು ಸ್ಥಳೀಯ ರೈತರು ಬಳಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ರೈತರು ಸಂಪರ್ಕ ಮಾಡುವ ಸ್ಥಳಗಳಲ್ಲಿ ದರ ಮತ್ತು ಗೊಬ್ಬರದ ದಾಸ್ತಾನು ಬಗ್ಗೆ ಫಲಕಗಳಲ್ಲಿ ಅಳವಡಿಸುವಂತೆ ಸೂಚಿಸಿದರು. ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದಿರುವುದರಿಂದ ಸುತ್ತಮುತ್ತಲಿನ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಪರಿಸರ ಇಲಾಖೆ ಅಧಿಕಾರಿಗಳು ಸರ್ವೇ ಮಾಡಿ ವರದಿ ನೀಡುವಂತೆ ಸೂಚಿಸಿದ ಉಪ ಲೋಕಾಯುಕ್ತರು ನಗರಸಭೆ ಆರೋಗ್ಯ ಅಧಿಕಾರಿಗಳು ಸ್ಥಳೀಯರಿಂದ ಮಾಹಿತಿ ಪಡೆಯಲು ನಿರ್ದೇಶನ ನೀಡಿದರು. ಈ ಸ್ಥಳದಲ್ಲಿ ಉತ್ಪತ್ತಿ ಆಗುವ ಸೊಳ್ಳೆ, ನೊಣಗಳಿಂದ ಅಕ್ಕಪಕ್ಕದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು. ಸುಮಾರು ವರ್ಷಗಳಿಂದ ಈ ಸ್ಥಳದಲ್ಲಿರುವ ಒಣ ಕಸವನ್ನು ವಿಲೇವಾರಿ ಮಾಡಿರುವುದಿಲ್ಲ ಮೊದಲು ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಘಟಕದಿಂದ ಕೊಳಚೆ ನೀರು ಹರಿದುಹೋಗಿ ಕೆರೆಕಟ್ಟೆಗಳಿಗೆ ಸೇರ್ಪಡೆ ಆಗುವುದರಿಂದ ಜಾನುವಾರುಗಳಿಗೆ ಕುಡಿಯಲು ಯೋಗ್ಯವಾಗಿರುವುದಿಲ್ಲ ಎಂದು ಸ್ಥಳೀಯರು ಉಪ ಲೋಕಾಯುಕ್ತರ ಗಮನಕ್ಕೆ ತಂದರು. ಇಲ್ಲಿ ನಾಯಿಗಳ ಕಾಟ ಜಾಸ್ತಿಯಾಗಿದೆ ಎಂದು ತಿಳಿಸಿದರು. ಕೊಳಚೆ ನೀರು ಕೆರೆಕಟ್ಟೆಗಳಿಗೆ ಸೇರ್ಪಡೆ ಆಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಘಟಕದಲ್ಲಿ ಕರ್ತವ್ಯ ನಿರ್ವಹಿಸುವವರ ಯೋಗಕ್ಷೇಮ ಹಾಗೂ ಆರೋಗ್ಯದ ದೃಷ್ಟಿಯಿಂದ ಸುರಕ್ಷತಾ ಪರಿಕರಗಳನ್ನು ಬಳಕೆಗೆ ಒದಗಿಸುವಂತೆ ಸೂಚನೆ ನೀಡಿದರು. ಬೆಂಗಳೂರು, ದಕ್ಷಿಣ ಕನ್ನಡದಲ್ಲಿ ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡಲು ಕ್ರಮವಹಿಸಿದ್ದಾರೆ. ಒಮ್ಮೆ ಅಧಿಕಾರಿಗಳು ಭೇಟಿ ನೀಡಿ ಅದೇ ರೀತಿ ಈ ಘಟಕದಲ್ಲಿಯೂ ಕ್ರಮವಹಿಸಲು ನೆರವಾಗುತ್ತದೆ ಎಂದು ತಿಳಿಸಿದರು. ಈ ಘಟಕದಲ್ಲಿ ಉತ್ಪಾದನೆ ಮಾಡುವ ಗೊಬ್ಬರದಲ್ಲಿ ಪ್ಲಾಸ್ಟಿಕ್ ಸೇರ್ಪಡೆ ಆಗದಂತೆ ನಿಗಾ ವಹಿಸಲು ಸೂಚನೆ ನೀಡಿದರು. ಪರಿಸರ ಇಲಾಖೆ ಅಧಿಕಾರಿಗಳು ಈ ಘಟಕದಲ್ಲಿ ಏನೇನು ಆಗಬೇಕು ಎಂಬುದರ ಬಗ್ಗೆ ಗಮನಹರಿಸಿ ಪರಿಶೀಲನೆ ಮಾಡಿ ಒಂದು ವರದಿ ನೀಡುವಂತೆ ನಿರ್ದೇಶನ ನೀಡಿದರು.

ಈ ಘಟಕದಲ್ಲಿ ವಿದ್ಯುತ್ ಉತ್ಪಾದನೆಗೆ ನಿಗಾವಹಿಸಿದರೆ ಜಿಲ್ಲೆಯ ರೈತರಿಗೆ ಕೃಷಿ ಚಟುವಟಿಕೆಗೆ ನಿರಂತರ ವಿದ್ಯುತ್ ಒದಗಿಸಲು ಅನುಕೂಲವಾಗುತ್ತದೆ ಸರ್ಕಾರಕ್ಕೂ ಆದಾಯ ಬರುತ್ತದೆ ಎಂದು ತಿಳಿಸಿದರು. ಆಸ್ಪತ್ರೆಗಳ ತ್ಯಾಜ್ಯವನ್ನು ಈ ಘಟಕದಲ್ಲಿ ಶೇಖರಣೆ ಮಾಡಲು ಅವಕಾಶವಿರುವುದಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರವಹಿಸಿ ಎಂದು ಹೇಳಿದರು.ಕರ್ನಾಟಕ ಲೋಕಾಯುಕ್ತದ ವಿಚಾರಣೆಗಳು ೭ ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೇಕರ್, ಕರ್ನಾಟಕ ಲೋಕಾಯುಕ್ತದ ಕಾನೂನು ಅಭಿಪ್ರಾಯ ೨ ಸಹಾಯಕ ನಿಬಂಧಕರು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಶುಭವೀರ ಬಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಬಿ.ಕೆ. ಸಿವಿಲ್ ನ್ಯಾಯಾಧೀಶರು ಹಾಗೂ ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ ಪಾಟೀಲ್, ಲೋಕಾಯುಕ್ತ ಪೊಲೀಸ್ ಅಧಿಕ್ಷಕರಾದ ಸ್ನೇಹ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲ, ನಗರಸಭೆ ಆಯುಕ್ತರಾದ ರಮೇಶ್ ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.