ಶ್ರೀನಿವಾಸ ಬಬಲಾದಿ
ಕನ್ನಡಪ್ರಭ ವಾರ್ತೆ ಲೋಕಾಪುರಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಕನಸು ಇನ್ನೂ ಪರಿಪೂರ್ಣವಾಗಿ ಈಡೇರುತ್ತಿಲ್ಲ. ಸುಶಿಕ್ಷಿತ ಜನರೇ ಎಲ್ಲೆಂದರಲ್ಲಿ ಕಸ ಎಸೆದು ನಮ್ಮ ಪರಿಸರ ಅಂದಗೆಡಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಪಟ್ಟಣದ ಜನ-ಜಾನುವಾರುಗಳಿಗೆ ಜಲ ಮೂಲವಾಗಿದ್ದ ಹಳ್ಳ ಇಂದು ತ್ಯಾಜ್ಯ ಎಸೆಯುವ, ಹಾಗೂ ಕೊಳಚೆ ನೀರು ಹರಿಸುವ ತಾಣವಾಗಿ ಮಾರ್ಪಟ್ಟಿದೆ.
ರಾಯಚೂರು - ಬೆಳಗಾವಿ ಹೆದ್ದಾರಿಯ ಪಟ್ಟಣಕ್ಕೆ ಹತ್ತಿರದ ಈ ಹಳ್ಳ ತ್ಯಾಜ್ಯ ಶೇಖರಣೆಯ ತಾಣವಾಗಿದೆ. ಸೂಕ್ತ ನಿರ್ವಹಣೆ ಇಲ್ಲದ್ದರಿಂದ ಜಾಲಿಗಿಡಗಳು, ಕಸಕಡ್ಡಿಗಳು ಬೆಳೆದಿವೆ. ಸುತ್ತಲಿನ ಬಡಾವಣೆಗಳ ಮಾಂಸದ ಅಂಗಡಿ, ಮನೆಗಳ ತ್ಯಾಜ್ಯ, ಕಸಕಡ್ಡಿ ತ್ಯಾಜ್ಯ ಈ ಹಳ್ಳದಲ್ಲಿ ಎಸೆಯಲಾಗುತ್ತಿದೆ. ಇದರಿಂದ ಸುತ್ತಲೂ ದುರ್ಗಂಧ ಹರಡಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸುತ್ತಲೂ ಮುಳ್ಳು ಕಂಟಿಗಳು ಬೆಳೆದ ಕಾರಣ ಹಳ್ಳವೇ ಮಾಯವಾದಂತೆ ಕಾಣುತ್ತದೆ.ಸುಮಾರು ವರ್ಷಗಳ ಹಿಂದೆ ಈ ಹಳ್ಳವೇ ಪಟ್ಟಣದ ಜಾನುವಾರುಗಳಿಗೆ ಹಾಗೂ ಜನತೆಗೆ ನೀರಿಗೆ ಮೂಲ ಸೆಲೆಯಾಗಿತ್ತು. ದನಕರುಗಳಿಗೆ ಕುಡಿಯಲು ನೀರು, ಬಟ್ಟೆ ತೊಳೆಯಲು ಬಳಸುತ್ತಿದ್ದರು. ರೈತರು ಈ ಹಳ್ಳದ ನೀರನ್ನೇ ಹೊಲಕ್ಕೆ ಹರಿಸಿ ಬೆಳೆ ಬೆಳೆಯುತ್ತಿದ್ದರು. ಆದರೆ, ಇಂದು ನೀರು ಬತ್ತಿದೆ. ಬರಿದಾದ ಹಳ್ಳ ತಿಪ್ಪೆಗುಂಡಿಯಾಗಿ ಬದಲಾಗಿದೆ. ಕಿಡಿಗೇಡಿಗಳು ಹಳ್ಳದಲ್ಲಿನ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಾರೆ. ಇದರಿಂದ ವಾಹನ ಸವಾರರಿಗೆ ಮತ್ತು ಸುತ್ತಮುತ್ತಲಿನ ಸಾರ್ವಜನಿಕರಿಗೆ ಕೆಟ್ಟ ವಾಸನೆ, ದಟ್ಟಹೊಗೆ ಆವರಿಸಿ ಬಹಳ ತೊಂದರೆಯಾಗುತ್ತಿದೆ.
ತ್ಯಾಜ್ಯ ಸಂಗ್ರಹ ತಾಣ:ಸ್ಥಳೀಯ ಹೋಟೆಲ್, ಖಾನಾವಳಿ, ಮಾಂಸದ ಅಂಗಡಿ, ಹಣ್ಣಿನ ಅಂಗಡಿಗಳು ಮತ್ತು ಮನೆಗಳಲ್ಲಿನ ಎಲ್ಲ ತರಹದ ತ್ಯಾಜ್ಯಗಳನ್ನು ಈ ಹಳ್ಳದಲ್ಲಿ ಹಾಕುತ್ತಾರೆ. ಸತ್ತ ಪ್ರಾಣಿಗಳನ್ನು ಎಸೆಯಲಾಗುತ್ತಿದೆ. ವಿವಿಧ ಬಡಾವಣೆಗಳ ಚರಂಡಿ ನೀರು ಹರಿಬಿಡಲಾಗಿದೆ. ಸುತ್ತಮುತ್ತಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಹಳ್ಳವೆಂದರೆ ಕಸ - ತ್ಯಾಜ್ಯ ಹಾಕುವ ಕೇಂದ್ರವಾಗಿ ಮಾರ್ಪಟ್ಟಿದೆ. ಹಳ್ಳದಲ್ಲಿ ಹಾಕಿರುವ ಕಸಕ್ಕೆ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚುವುದರಿಂದ ಹೊಗೆ ಮತ್ತು ದುರ್ನಾತ ಸುತ್ತಲೂ ಹರಡುತ್ತಿದೆ.
ವಾಹನ ಬಂದರೂ ಕಸ ಹಾಕಲ್ಲ: ಪಪಂ ವತಿಯಿಂದ ತ್ಯಾಜ್ಯ ಸಂಗ್ರಹ ವಾಹನದ ವ್ಯವಸ್ಥೆ ಇದೆ. ಪಟ್ಟಣದ ಎಲ್ಲ ಬಡಾವಣೆಗಳ ಮನೆಗಳು ಮತ್ತು ಅಂಗಡಿಗಳ ಬಾಗಿಲಿಗೆ ಹೋಗಿ ಕಸ ಸಂಗ್ರಹಿಸಲಾಗುತ್ತಿದೆ. ನಿತ್ಯ ವಾಹನಗಳು ಅಂಗಡಿಗಳ ಬಾಗಿಲಿಗೆ ಬಂದರೂ ತ್ಯಾಜ್ಯ ವಾಹನಗಳಿಗೆ ಹಾಕದೇ ತಂದು ಹಳ್ಳಕ್ಕೆ ಸುರಿಯುತ್ತಿದ್ದಾರೆ. ಒಂದೆಡೆ ಸ್ವಚ್ಛ ಭಾರತ ಕನಸಿನೊಂದಿಗೆ ಪ.ಪಂ ಸಾಕಷ್ಟು ಪರಿಶ್ರಮ ಪಡುತ್ತಿದ್ದರೂ, ಸಾರ್ವಜನಿಕರ ಬೇಜವಾಬ್ದಾರಿ ಪಟ್ಟನ ಮಲೀನವಾಗುತ್ತಿದೆ. ಹಳ್ಳದಲ್ಲಿ ತ್ಯಾಜ್ಯ ಸುರಿಯದಂತೆ ಪಪಂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ, ಇದರಿಂದ ಹಳ್ಳದಲ್ಲಿ ತ್ಯಾಜ್ಯ ಹಾಕುವುದಕ್ಕೆ ಕಡಿವಾಣ ಇಲ್ಲದಂತಾಗಿದೆ. ಹಳ್ಳದಲ್ಲಿ ಬೆಳೆದ ಜಾಲಿಗಿಡಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲು ಮುಂದಾಗಿಲ್ಲ, ಇದರಿಂದ ಇಡೀ ವಾತಾವರಣವೇ ಹದಗೆಡುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.---
ಕೋಟ್..ಪಟ್ಟಣ ಪಂಚಾಯತಿಯಿಂದ ತ್ಯಾಜ್ಯ ವಿಲೇವಾರಿ ವಾಹನ ಪ್ರತಿ ವಾರ್ಡಿಗೆ ಕಳುಹಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದು ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸಬೇಕು. ಪಟ್ಟಣದ ಎಲ್ಲೆಂದರಲ್ಲಿ ಕಸ ಎಸೆಯಬಾರದು. ಪಟ್ಟಣದ ಸ್ವಚ್ಛತೆಗೆ ಎಲ್ಲ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ.
ಭಾಗ್ಯಶ್ರೀ ಪಾಟೀಲ. ಪಪಂ ಆರೋಗ್ಯ ನಿರೀಕ್ಷಣಾಧಿಕಾರಿಗಳು---
ಸಾರ್ವಜನಿಕರು ಹಳ್ಳಕ್ಕೆ ತ್ಯಾಜ್ಯ ಎಸೆಯುವುದರಿಂದ ನಮಗೆ ತೊಂದರೆಯಾಗುತ್ತಿದೆ. ಕಿರಾಣಿ, ಮಾಂಸದಂಗಡಿಯವರು ತ್ಯಾಜ್ಯವನ್ನು ಹಳ್ಳಕ್ಕೆ ಸುರಿಯುವುದರಿಂದ ಬೀದಿ ನಾಯಿ, ಹಂದಿಗಳ ಹಾವಳಿ ಹೆಚ್ಚಿದೆ. ಕೂಡಲೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು.ಬಿ.ಎ.ಹುಣಶಿಕಟ್ಟಿ. ಲೋಕಾಪುರ ನಿವಾಸಿ