ಆಪರೇಷನ್‌ ಸಿಂದೂರ್‌ ಬೆಂಬಲಿಸಿ ತಿರಂಗಯಾತ್ರೆ

KannadaprabhaNewsNetwork |  
Published : May 18, 2025, 02:18 AM ISTUpdated : May 18, 2025, 12:41 PM IST
೧೭ಕೆಎಲ್‌ಆರ್-೧೨ಕೋಲಾರದಲ್ಲಿ ಆಪರೇಷನ್ ಸಿಂಧೂರ್ ಬೆಂಬಲಿಸಿ, ರಾಷ್ಟ್ರೀಯ ಭದ್ರತೆಗಾಗಿ ನಾಗರೀಕರು, ಕೋಲಾರ ವೇದಿಕೆಯಿಂದ  ಭಾರತೀಯ ಸೇನೆಯೊಂದಿಗೆ ರಾಷ್ಟ್ರ ರಕ್ಷಣೆಯ ಸಂಕಲ್ಪಕ್ಕಾಗಿ ಶನಿವಾರ ನಗರದಲ್ಲಿ ನಡೆಸಿದ ತಿರಂಗಾ ಯಾತ್ರೆಯಲ್ಲಿ ಗಮನ ಸೆಳೆದ ೧೫೦೦ ಅಡಿ ಉದ್ದದ ಬೃಹತ್ ರಾಷ್ಟ್ರಧ್ವಜ. | Kannada Prabha

ಸಾರಾಂಶ

ದೇಶದ 28 ಹಿಂದೂಗಳ ಸಿಂಧೂರ ಅಳಿಸಿದ ಉಗ್ರರಿಗೆ ಉತ್ತರವಾಗಿ ಸುಮಾರು 100 ಕ್ಕೂ ಹೆಚ್ಚು ಮಂದಿಯನ್ನು ಸದೆ ಬಡಿಯಲಾಗಿದ್ದು, ಅದಕ್ಕಾಗಿ ತಿರಂಗ ಧ್ವಜ ಹಿಡಿದು ಯಾತ್ರೆ ನಡೆಸಿದ್ದಾರೆ.  

  ಕೋಲಾರ ಆಪರೇಷನ್ ಸಿಂದೂರ್ ಹಾಗೂ ರಾಷ್ಟ್ರೀಯ ಭದ್ರತೆ ಬೆಂಬಲಿಸಿ ಕೋಲಾರ ವೇದಿಕೆ ಹಮ್ಮಿಕೊಂಡಿದ್ದ ತಿರಂಗ ಯಾತ್ರೆಯಲ್ಲಿ ಸಾವಿರಾರು ಜನರು 1500 ಅಡಿ ಉದ್ದದ ಬೃಹತ್ ರಾಷ್ಟ್ರಧ್ವಜ ಹಿಡಿದು ಸಾಗುವುದರೊಂದಿಗೆ ರಾಷ್ಟ್ರಪ್ರೇಮ ಮೆರೆದರು. ಆದರೆ ಕಾಂಗ್ರೆಸ್‌ ಮುಖಂಡರು ಮಾತ್ರ ತಿರಂಗ ಯಾತ್ರೆಯಿಂದ ದೂರ ಉಳಿದರು.

ರಾಜಕೀಯೇತರವಾಗಿ ಕಾಯಕ್ರಮ ನಡೆಸಿದ್ದರೂ ತಿರಂಗ ಯಾತ್ರೆಯಲ್ಲಿ ಬಿಜೆಪಿ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಗರದ ನಚಿಕೇತ ನಿಲಯದ ಆವರಣದಿಂದ ಆರಂಭಗೊಂಡ ಯಾತ್ರೆ ಮೆಕ್ಕೆ ವೃತ್ತ, ಅಮ್ಮವಾರಿಪೇಟೆ ವೃತ್ತ, ಬಸ್ ನಿಲ್ದಾಣ ವೃತ್ತ, ಕ್ಲಾಕ್ ಟವರ್, ಡೂಂ ಲೈಟ್ ವೃತ್ತದ ಮೂಲಕ ಹಾದು ಟೇಕಲ್ ರಸ್ತೆಯ ಅಂಬೇಡ್ಕರ್ ಉದ್ಯಾನವನದಲ್ಲಿನ ಸೈನಿಕರ ಸ್ಮಾರಕ ಬಳಿ ಮುಕ್ತಾಯಗೊಂಡಿತು.

ಸಂಘಟನೆಗಳು, ವಿದ್ಯಾರ್ಥಿಗಳು ಭಾಗಿ

ಯಾತ್ರೆಯಲ್ಲಿ ಪೊಲೀಸ್ ಇಲಾಖೆಯ ವಾದ್ಯವೃಂದ, ನಿವೃತ್ತ ಯೋಧರು, ಎಸ್‌ಡಿಸಿ, ಮಹಿಳಾ ಸಮಾಜ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು, ಎನ್‌ಸಿಸಿ ಘಟಕ ಸೇರಿದಂತೆ ನಾಗರಿಕರು, ಸಂಘಟನೆ, ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಎಲ್ಲರೂ ದೇಶದ ಪರ ಘೋಷಣೆಗಳನ್ನು ಕೂಗುತ್ತಾ ಬೃಹತ್ ರಾಷ್ಟ್ರಧ್ವಜವನ್ನು ಇಕ್ಕೆಲಗಳಲ್ಲಿ ಹಿಡಿದು ಸಾಗಿದರು. ತಿರಂಗರ್‍ಯಾಲಿಗೆ ಪುಷ್ಪವೃಷ್ಟಿ:ನಗರದ ವಿವಿಧೆಡೆ ತಿರಂಗ ಯಾತ್ರೆ ಸಾಗಿ ಬರುತ್ತಿದ್ದಂತೆ ನಾಗರಿಕರು ಪುಷ್ಪವೃಷ್ಟಿ ನಡೆಸುವ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದರು. ನಗರದ ಡೂಂಲೈಟ್ ವೃತ್ತಕ್ಕೆ ತಿರಂಗಯಾತ್ರೆ ಸಾಗಿ ಬಂದಾಗಿ ರಸ್ತೆಯ ಇಕ್ಕೆಲಗಳಲ್ಲಿ ನಿಂತ ವಿವಿಧ ಸಂಘಟನೆಗಳ ಮುಖಂಡರು, ಬಿಜೆಪಿ ನಾಯಕರು ರಾಷ್ಟ್ರಧ್ವಜಗಳನ್ನು ಬೀಸುತ್ತಾ, ಭಾರಿ ಪ್ರಮಾಣದಲ್ಲಿ ಪುಷ್ಪವೃಷ್ಟಿ ಸುರಿಸಿ ಸ್ವಾಗತಿಸಿದ್ದು ವಿಶೇಷವಾಗಿತ್ತು.

ಯಾತ್ರೆ ಸ್ವಾಗತಿಸಿದ ಮುಸಲ್ಮಾನರು

ಇದಲ್ಲದೇ ತಿರಂಗ ಯಾತ್ರೆ ನಗರದ ಕ್ಲಾಕ್‌ಟವರ್ ಬಳಿ ಹಾದು ಬಂದಾಗ ಅಲ್ಲಿ ಮುಸ್ಲೀಮರು ಸಹಾ ತಿರಂಗ ಯಾತ್ರೆಗೆ ರಾಷ್ಟ್ರಧ್ವಜವಿಡಿದು ಸ್ವಾಗತ ಕೋರಿದ್ದಲ್ಲದೆ ಯಾತ್ರೆಗೆ ಪುಷ್ಪಾರ್ಚನೆ ಮಾಡಿದ್ದು ವಿಶೇಷವಾಗಿತ್ತು. ತಿರಂಗ ಯಾತ್ರೆಯಲ್ಲಿ ಅತಿ ಮುತುವರ್ಜಿವಹಿಸಿ ಆಯೋಜಿಸಿದ್ದ ಬಿಜೆಪಿ ಮುಖಂಡರು ಅತಿ ಉತ್ಸಾಹದಿಂದ ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂತು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ತಮ್ಮ ಕಾರಿಗೆ ಆಪರೇಷನ್ ಸಿಂದೂರ್ ಸ್ಟಿಕ್ಕರ್‌ಗಳನ್ನು ಹಾಕಿಸಿ ಎಲ್ಲರ ಗಮನ ಸೆಳೆದರು.

ತಿರಂಗ ಯಾತ್ರೆ ಡೂಂಲೈಟ್ ವೃತ್ತವನ್ನು ಬಳಸಿಕೊಂಡು ನಗರದ ಟೇಕಲ್ ರಸ್ತೆಯ ಯೋಗಿನಾರೇಯಣ ವೃತ್ತದ ಮೂಲಕ ಜಯನಗರದ ಅಂಬೇಡ್ಕರ್ ಉದ್ಯಾನವನದಲ್ಲಿನ ಯೋಧರ ಸ್ಮಾರಕದ ಬಳಿ ಪೂಜೆ ಸಲ್ಲಿಸುವುದರೊಂದಿಗೆ ಕೊನೆಗೊಂಡಿತು. ಪಾಕ್‌ಗೆ ಸೇನೆ ತಕ್ಕ ಉತ್ತರ:ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ನಮ್ಮ ದೇಶದ 28 ಹಿಂದೂಗಳ ಸಿಂಧೂರ ಅಳಿಸಿದ ಉಗ್ರರಿಗೆ ಉತ್ತರವಾಗಿ ಸುಮಾರು 100 ಕ್ಕೂ ಹೆಚ್ಚು ಮಂದಿಯನ್ನು ಸದೆ ಬಡಿಯಲಾಗಿದ್ದು, ಅದಕ್ಕಾಗಿ ತಿರಂಗ ಧ್ವಜ ಹಿಡಿದು ಯಾತ್ರೆ ನಡೆಸಿದ್ದೇವೆ. ಎಲ್ಲರೂ ಪಕ್ಷಾತೀತವಾಗಿ ಬೆಂಬಲ ನೀಡಿರುವುದು ಶ್ಲಾಘನೀಯ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು. ವೀರನಾರಿಯರನ್ನು ಸನ್ಮಾನಿಸಲಾಯಿತು. ಯಾತ್ರೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ತಿರಂಗಯಾತ್ರೆಯಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕರಾದ ವೈ.ಸಂಪಂಗಿ, ಮಂಜುನಾಥಗೌಡ, ಮಾಜಿ ಯೋಧರ ಸಂಘದ ಅಧ್ಯಕ್ಷ ಜಗನ್ನಾಥ್, ನಗರಸಭೆ ಸದಸ್ಯರಾದ ಪ್ರವೀಣ್‌ಗೌಡ, ವಡಗೂರು ರಾಕೇಶ್, ಬಿಜೆಪಿ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಮಾಗೇರಿ ನಾರಾಯಣಸ್ವಾಮಿ, ಪ್ರಮೀಳಾ ಮಲ್ಲಿಕಾರ್ಜುನ್, ಬೆಳಮಾರನಹಳ್ಳಿ ಆನಂದ್, ವರದೇನಹಳ್ಳಿ ವೆಂಕಟೇಶ್ ಇದ್ದರು.

PREV
Read more Articles on

Recommended Stories

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ