ವಾಡಿಕೆಗಿಂತ ಈ ಬಾರಿ 1.5 ಪಟ್ಟು ಹೆಚ್ಚು ಬಿತ್ತನೆ

KannadaprabhaNewsNetwork |  
Published : Jul 09, 2024, 12:52 AM ISTUpdated : Jul 09, 2024, 07:24 AM IST
ಬಿತ್ತನೆ | Kannada Prabha

ಸಾರಾಂಶ

ರಾಜ್ಯದ ಹಲವೆಡೆ ನೈಋತ್ಯ ಮುಂಗಾರು ಚುರುಕಾಗಿದ್ದು ಬಿತ್ತನೆ ಬಿರುಸುಗೊಂಡಿದೆ. ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯು 82.48 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದು, ಈಗಾಗಲೇ 50.91 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.62 ರಷ್ಟು ಸಾಧನೆಯಾಗಿದೆ.

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು :  ರಾಜ್ಯದ ಹಲವೆಡೆ ನೈಋತ್ಯ ಮುಂಗಾರು ಚುರುಕಾಗಿದ್ದು ಬಿತ್ತನೆ ಬಿರುಸುಗೊಂಡಿದೆ. ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯು 82.48 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದು, ಈಗಾಗಲೇ 50.91 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.62 ರಷ್ಟು ಸಾಧನೆಯಾಗಿದೆ.

ಜೂ.1ರಿಂದ ಜು.5ರವರೆಗೂ ಸಾಮಾನ್ಯವಾಗಿ ಮುಂಗಾರಿನಲ್ಲಿ 241 ಮಿ.ಮೀ. ಮಳೆಯಾಗುತ್ತಿತ್ತು. ಆದರೆ ಈ ಬಾರಿ 253 ಮಿ.ಮೀ. ಮಳೆಯಾಗಿರುವುದು ಬಿತ್ತನೆ ಚುರುಕಾಗಲು ಕಾರಣವಾಗಿದೆ. ಮತ್ತೊಂದೆಡೆ, ಕಳೆದ ಐದು ವರ್ಷದ ವಾಡಿಕೆ ಬಿತ್ತನೆಗೆ ಹೋಲಿಸಿದರೆ ಒಂದೂವರೆ ಪಟ್ಟಿಗೂ ಅಧಿಕ ಬಿತ್ತನೆಯಾಗಿರುವುದು ಆಶಾಭಾವನೆ ಮೂಡಿಸಿದೆ.

2024-25ನೇ ಸಾಲಿನಲ್ಲಿ ಒಟ್ಟಾರೆ 114.49 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಇಲಾಖೆಯು ಬಿತ್ತನೆ ಗುರಿ ಹೊಂದಿದ್ದು, ಇದರಲ್ಲಿ ಮುಂಗಾರು ಹಂಗಾಮಿನಿನಲ್ಲಿ 82.48 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಬೇಕಿದೆ. ಈ ಪೈಕಿ ಜು.5 ರವರೆಗೂ 87 ಸಾವಿರ ಹೆಕ್ಟೇರ್‌ನಲ್ಲಿ ಉದ್ದು, 57 ಸಾವಿರ ಹೆಕ್ಟೇರ್‌ನಲ್ಲಿ ಅಲಸಂದೆ, 4.19 ಲಕ್ಷ ಹೆಕ್ಟೇರ್‌ನಲ್ಲಿ ಸೋಯಾ ಅವರೆ ಬಿತ್ತನೆಯಾಗಿದ್ದು ಕೃಷಿ ಇಲಾಖೆಯ ನಿರೀಕ್ಷೆಗಿಂತಲೂ ಅಧಿಕ ಸಾಧನೆಯಾಗಿದೆ. ಮೆಕ್ಕೆಜೋಳ(12.21 ಲಕ್ಷ ಹೆಕ್ಟೇರ್‌), ಕಬ್ಬು(5.42 ಲಕ್ಷ ಹೆಕ್ಟೇರ್‌), ತೊಗರಿ (12.50 ಲಕ್ಷ ಹೆಕ್ಟೇರ್‌) ಬಿತ್ತನೆ ಪ್ರಮಾಣವೂ ಪರವಾಗಿಲ್ಲ.

ಎರಡಂಕಿ ದಾಟದ ರಾಗಿ, ಹುರುಳಿ:

ರಾಗಿ, ಹುರುಳಿ, ಸಾಸಿವೆ ಬಿತ್ತನೆ ಪ್ರಮಾಣ ರಾಜ್ಯದಲ್ಲಿ ಎರಡಂಕಿ ದಾಟಿಲ್ಲ. ಭತ್ತ (ಶೇ.10), ಅವರೆ (ಶೇ.12), ಸೂರ್ಯಕಾಂತಿ (ಶೇ.31), ಶೇಂಗಾ (ಶೇ.36) ಬೆಳೆಗಳ ಬಿತ್ತನೆಯೂ ಕಡಿಮೆಯಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ, ಶೇ.99 (2.69 ಲಕ್ಷ ಹೆಕ್ಟೇರ್‌) ರಷ್ಟು ಬಿತ್ತನೆಯಾಗಿದೆ. ಬೀದರ್‌ನಲ್ಲಿ ಶೇ.98 (4.08 ಲಕ್ಷ ಹೆಕ್ಟೇರ್‌), ಗದಗದಲ್ಲಿ ಶೇ.95 (2.88 ಲಕ್ಷ ಹೆಕ್ಟೇರ್‌), ಬಾಗಲಕೋಟೆಯಲ್ಲಿ ಶೇ.94 (2.67 ಲಕ್ಷ ಹೆಕ್ಟೇರ್‌), ಬೆಳಗಾವಿ ಜಿಲ್ಲೆಯಲ್ಲಿ ಶೇ.87 ರಷ್ಟು ಅಂದರೆ 6.45 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಆದರೆ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಮಗಳೂರು, ಕೋಲಾರ, ಮಂಡ್ಯ, ತುಮಕೂರು ಮತ್ತಿತರ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಬಿತ್ತನೆ ಕುಂಠಿತವಾಗಿದೆ.ಬಾಕ್ಸ್‌......

ಮಳೆಯಿಲ್ಲದೇ ಸೊರಗುತ್ತಿವೆ ಪೈರು

ಪ್ರಸಕ್ತ ಕರಾವಳಿಯಲ್ಲಿ ಉತ್ತಮವಾಗಿ ಮಳೆ ಆಗುತ್ತಿರುವುದರಿಂದ ಆ ಭಾಗದಲ್ಲಿ ಬಿತ್ತನೆ ಬಿರುಸಾಗುವ ಸಾಧ್ಯತೆ ಹೆಚ್ಚಿದೆ. ಆದರೆ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ವಿಜಯಪುರ, ಬಾಗಲಕೋಟೆ, ಗದಗ ಮತ್ತಿತರ ಜಿಲ್ಲೆಗಳಲ್ಲಿ ಬಿತ್ತನೆಯಾಗಿರುವ ರಾಗಿ, ಶೇಂಗಾ, ತೊಗರಿ ಮತ್ತಿತರ ಪೈರುಗಳು ಮಳೆಯಿಲ್ಲದೇ ಸೊರಗುತ್ತಿವೆ. ಈ ಭಾಗದಲ್ಲಿ ಜೂನ್‌ ಮೊದಲ ಮತ್ತು ಎರಡನೇ ವಾರದಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದಿತ್ತು. ರೈತರು ಭೂಮಿ ಹಸನು ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯನ್ನೂ ಮಾಡಿದ್ದರು. ಪೈರು ಚೆನ್ನಾಗಿ ಮೊಳಕೆಯೂ ಬಂದಿದ್ದವು. ಆದರೆ ಕಳೆದ 20 ದಿನಗಳಿಂದ ಮಳೆಯ ಅಭಾವದಿಂದ ಪೈರುಗಳು ಸೊರಗುತ್ತಿವೆ.  

ಅಗತ್ಯ ಬಿತ್ತನೆ ಬೀಜ ದಾಸ್ತಾನು

ಮುಂಗಾರು ಹಂಗಾಮಿಗೆ 5.52 ಲಕ್ಷ ಕ್ವಿಂಟಲ್‌ ಪ್ರಮಾಣಿತ ಬಿತ್ತನೆ ಬೀಜಗಳ ಬೇಡಿಕೆ ಇದ್ದು ಈಗಾಗಲೇ 2.99 ಲಕ್ಷ ಕ್ವಿಂಟಲ್‌ ವಿತರಣೆ ಮಾಡಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ 80 ಸಾವಿರ ಕ್ವಿಂಟಲ್‌ ದಾಸ್ತಾನಿದೆ. ಇನ್ನುಳಿದ ದಾಸ್ತಾನು ಸಂಬಂಧಿಸಿದ ಸಂಸ್ಥೆಗಳಲ್ಲಿ ಲಭ್ಯವಿದ್ದು ಬಿತ್ತನೆ ಬೀಜಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಕೃಷಿ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.

ಸರಿಯಾದ ಸಮಯಕ್ಕೆ ಇದೀಗ ಮಳೆ ಬರುತ್ತಿದೆ. ರಾಜ್ಯದಲ್ಲಿ ಬಿತ್ತನೆಗೆ ಇನ್ನೂ ಕಾಲಾವಕಾಶವಿದ್ದು ನಿರೀಕ್ಷಿತ ಗುರಿಗಿಂತ ಅಧಿಕ ಪ್ರಮಾಣದ ಬಿತ್ತನೆಯಾಗಲಿದೆ. ಈ ಬಾರಿ ಉತ್ಪಾದನೆಯೂ ಅಧಿಕವಾಗುವ ಆಶಾಭಾವನೆ ಇದೆ.

-ಎನ್‌.ಚಲುವರಾಯಸ್ವಾಮಿ, ಕೃಷಿ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಪ್ತು ಸ್ಥಗಿತ, ಗಿಡದಲ್ಲಿಯೇ ಕೊಳೆಯುತ್ತಿರುವ ಪಪ್ಪಾಯಿ ಹಣ್ಣು!
ಸನಾತನ ಧರ್ಮ ಜಗತ್ತಿಗೆ ಬೆಳಕು ನೀಡುವ ಧರ್ಮ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ