ಕೆಎಂಎಫ್‌ನಿಂದ 1ಕೋಟಿ ಲೀ.ಹಾಲು ಸಂಗ್ರಹ

KannadaprabhaNewsNetwork | Published : Jul 3, 2024 12:24 AM

ಸಾರಾಂಶ

ಕೆಎಂಎಫ್‌ ವತಿಯಿಂದ ಒಂದು ಕೋಟಿ ಲೀಟರ್ ಹಾಲಿನ ಸಂಗ್ರಹದ ಸಂಭ್ರಮಾಚರಣೆಯ ಅಂಗವಾಗಿ ಗೋ ಪೂಜೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳ (ಕೆಎಂಎಫ್‌) ಮೊಟ್ಟ ಮೊದಲ ಬಾರಿಗೆ ಒಂದು ಕೋಟಿ ಲೀಟರ್‌ ಹಾಲನ್ನು ಸಂಗ್ರಹಿಸಿ ನಾಡಿನ ಹೈನುಗಾರಿಕೆಯಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದ್ದು, ಇದೊಂದು ಮೈಲಿಗಲ್ಲು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಕೆಎಂಎಫ್‌ ವತಿಯಿಂದ ಒಂದು ಕೋಟಿ ಲೀಟರ್ ಹಾಲಿನ ಸಂಗ್ರಹದ ಸಂಭ್ರಮಾಚರಣೆಯ ಅಂಗವಾಗಿ ಗೋ ಪೂಜೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಕಳೆದ ವರ್ಷ ಜೂನ್ ತಿಂಗಳಲ್ಲಿ ದಿನಕ್ಕೆ 90 ಲಕ್ಷ ಲೀಟರ್‌ ಇತ್ತು. ಪ್ರಸ್ತುತ ಒಂದು ಕೋಟಿ ಲೀಟರ್‌ಗೆ ತಲುಪಿರುವುದು ಸಾಧನೆಯೇ ಸರಿ. ಈ ಸಾಧನೆಯ ಹಿಂದಿರುವ ಶಕ್ತಿಯಾದ ರೈತಾಪಿ ವರ್ಗಕ್ಕೆ ಧನ್ಯವಾದಗಳು ಎಂದು ಹೇಳಿದರು.

ರಾಜ್ಯದಲ್ಲಿ ಸುಮಾರು 16 ಸಾವಿರ ಸೊಸೈಟಿ, 15 ಹಾಲು ಒಕ್ಕೂಟಗಳಿವೆ. ಕೆಲವೆಡೆ ಎರಡು ಮೂರು ಜಿಲ್ಲೆ ಸೇರಿ ಒಕ್ಕೂಟ ಮಾಡಿಕೊಂಡಿದ್ದಾರೆ. 15 ಮದರ್ ಡೈರಿಗಳಿವೆ. ಒಂದು ಕೋಟಿ ಹಾಲು ಉತ್ಪಾದನೆಯಾಗುತ್ತಿದೆ. ಹೀಗಾಗಿ ರೈತರಿಗೆ ಹಾಗೂ ಸೊಸೈಟಿಗಳಿಗೆ ಹಾಲು ಬೇಡ ಎನ್ನಲಾಗುವುದಿಲ್ಲ. ಹೆಚ್ಚಿನ ಹಾಲು ಸಂಗ್ರಹಣೆಯಿಂದಾಗಿ ಅರ್ಧ ಲೀಟರ್‌ ಮತ್ತು ಒಂದು ಲೀಟರ್‌ ಹಾಲಿನ ಪ್ಯಾಕೆಟ್ ನಲ್ಲಿ 50 ಮೀ.ಲೀ ಹಾಲು ಹೆಚ್ಚು ಮಾಡಲಾಗಿದೆ. ಸಂಗ್ರಹವಾದಷ್ಟು ಹಾಲನ್ನು ಮಾರಾಟ ಮಾಡಬೇಕಿದೆ ಎಂದರು. ಹೆಚ್ಚಾಗಿರುವ ಪ್ರಮಾಣಕ್ಕೆ 2 ರೂಪಾಯಿ ಹೆಚ್ಚಿಸಲಾಗಿದೆ, ವಿರೋಧ ಪಕ್ಷದವರು ಇದನ್ನು ಅರ್ಥ ಮಾಡಿಕೊಳ್ಳದೆ ಹಾಲಿನ ಬೆಲೆ ಜಾಸ್ತಿ ಮಾಡಿದ್ದಾರೆ ಎಂದು ಹೇಳಿ ಅಪಪ್ರಚಾರ ಮಾಡುತ್ತಿದ್ದಾರೆ. 2ರು.ಇದ್ದ ಪ್ರೋತ್ಸಾಹಧನವನ್ನು 5 ರೂ. ಮಾಡಿದವನು ನಾನು. ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಈ ಬಗ್ಗೆ ತಿಳಿಯದೆ ಮಾತನಾಡುತ್ತಾರೆ. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಒಂದು ಕೋಟಿ ಲೀ. ಹಾಲು ಉತ್ಪಾದನೆಯಾದರೆ ಒಂದು ದಿನಕ್ಕೆ 5 ಕೋಟಿ ರು. ಪ್ರೋತ್ಸಾಹ ಧನವನ್ನು ಸರ್ಕಾರ ಕೊಡುತ್ತದೆ. ಒಂದು ತಿಂಗಳಿಗೆ 150 ಕೋಟಿ, ವರ್ಷಕ್ಕೆ 1800 ಕೋಟಿ ರು.ಗಳನ್ನು ನೀಡಿ ರೈತರಿಗೆ ಸಹಾಯ ಮಾಡಲಾಗುತ್ತಿದೆ ಎಂದರು. ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ವಸತಿ ಸಚಿವ ಜಮೀರ್‌ ಅಹ್ಮದ್‌ಖಾನ್‌, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share this article